Advertisement

ಮಳೆಯಾದರೂ ಮರೆಯಾಗದ ಬರ

04:29 PM Mar 20, 2020 | Naveen |

ಸಾಗರ: 2019ರಲ್ಲಿ ತಾಲೂಕಿನಲ್ಲಿ ಅತ್ಯುತ್ತಮ ಮಳೆಗಾಲವಾಗಿದೆ. ಮಾರ್ಚ್ ನ ಮಧ್ಯಭಾಗದಲ್ಲಿಯೂ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಆದರೆ ಶಾಶ್ವತ ನೀರಿನ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತಾರದ ಹಿನ್ನೆಲೆಯಲ್ಲಿ ಈ ವರ್ಷದ ಏಪ್ರಿಲ್‌, ಮೇನಲ್ಲಿ ಮತ್ತೂಮ್ಮೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಎಲ್ಲ ಸಾಧ್ಯತೆಗಳಿವೆ.

Advertisement

ಮಲೆನಾಡಿನ ಭಾಗವಾಗಿದ್ದೂ 2016-17ರಲ್ಲಿ ಘೋಷಿತ ಬರ ಎದುರಿಸಿದ್ದ ಸಾಗರ ತಾಲೂಕು ಕಳೆದ ವರ್ಷದ ಜೂನ್‌ ಸಂದರ್ಭದಲ್ಲಿ ತೀವ್ರ ಆತಂಕಕ್ಕೊಳಗಾಗಿತ್ತು. ವಾಸ್ತವವಾಗಿ ಜೂನ್‌ ಮೊದಲ ವಾರ ಆರಂಭವಾಗಬೇಕಿದ್ದ ಮುಂಗಾರು ಕೈ ಕೊಟ್ಟಿದ್ದರಿಂದ ತಾಲೂಕು ಆಡಳಿತ ವ್ಯವಸ್ಥೆ ಕುಡಿಯುವ ನೀರಿನ ಅಗತ್ಯಕ್ಕೆ ಮಾಡಿಕೊಂಡ ಕಾಮಗಾರಿಗಳ ಅಪಯಶಸ್ಸನ್ನು ಅದು ಪ್ರತಿಫಲಿಸಿತ್ತು. ತಾಪಂ 16 ಗ್ರಾಪಂ ವ್ಯಾಪ್ತಿಯಲ್ಲಿ 2859 ಟ್ಯಾಂಕರ್‌ ನೀರಿಗೆ ಬರೋಬ್ಬರಿ 29.65 ಲಕ್ಷ ರೂ. ವೆಚ್ಚ ಮಾಡಿತ್ತು.

ಹಳ್ಳಿಗಳ ಜಲಮೂಲ ಆಯಾ ಭಾಗದ ಕೆರೆಗಳು. ಆದರೆ ಕುಡಿಯುವ ನೀರಿನ ಯೋಜನೆಗಳಲ್ಲಿ ಬೋರ್‌ವೆಲ್‌ ತೋಡಿಸಿ, ಪೈಪ್‌ಲೈನ್‌ ಮೂಲಕ ನೀರು ಹರಿಸಬಹುದೇ ವಿನಃ ಜಲಮೂಲಗಳ ಪುನರುತ್ಥಾನಕ್ಕೆ ಅವಕಾಶವಿಲ್ಲ. ಹಲವೆಡೆ ಎನ್‌ಆರ್‌ಇಜಿ ಅವಕಾಶ ಬಳಸಿ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಬಾವಿ ತೋಡಿಸಿ ಅದರಿಂದ ನೀರು ಹರಿಸುವ ಪ್ರಯತ್ನ ನಡೆಸಲಾಗಿದೆ.

ಎಡಜಿಗಳೇಮನೆ ಗ್ರಾಪಂ ವ್ಯಾಪ್ತಿಯ ಮಾವಿನಸರದಲ್ಲಿ ಇಂತಹ ಕಾಮಗಾರಿಯಿಂದ ನೀರು ಕೊಡಲಾಗಿದ್ದರೂ, ಒದಗಿಸುವ ನೀರು ಕುಡಿಯಲು ಯೋಗ್ಯವಲ್ಲದ ಹಿನ್ನೆಲೆಯಲ್ಲಿ ಅಲ್ಲಿನ ಪರಿಶಿಷ್ಟ ಜಾತಿಯವರ ಕಾಲೋನಿಯಲ್ಲಿ ಇದೀಗ ಇನ್ನೊಂದು ಬೋರ್‌ವೆಲ್‌ ತೆಗೆಯಲಾಗಿದೆ. ಕುಡಿಯುವ ನೀರಿನ ಯೋಜನೆಯಲ್ಲಿ ತಕ್ಷಣ ಕೈಗೆತ್ತಿಕೊಳ್ಳುವ ಕಾಮಗಾರಿಗಳ ಕಾರಣ ಹಣ ಗುತ್ತಿಗೆದಾರರು, ಗ್ರಾಪಂ ಸದಸ್ಯರ ಜೇಬಿಗೆ ಹರಿದುಹೋಗುತ್ತಿದೆಯೇ ವಿನಃ ಯೋಜನೆ ಯಶಸ್ಸು ಪಡೆಯದ ಹಲವು ಉದಾಹರಣೆಗಳಿವೆ.

ಹಳ್ಳಿಗಳಲ್ಲಿ ಹಳ್ಳಕೊಳ್ಳ ಬಾವಿಗಳಲ್ಲಿ ನೀರಿದ್ದು, ಅದರಿಂದ ನೀರಿನ ಸಮಸ್ಯೆ ಇಲ್ಲ ಎಂಬ ಸ್ಥಿತಿಯಲ್ಲಿ ನೆಮ್ಮದಿಯಿರಬೇಕಾದ ಸ್ಥಿತಿ ಇಲ್ಲ. ಇದೇ ವೇಳೆ ನೀರಿನ ಕೊರತೆಯಿಂದ ತತ್ತರಿಸಬೇಕಾದ ಸಾಗರ ನಗರ ವ್ಯತಿರಿಕ್ತವಾಗಿ ನೆಮ್ಮದಿಯಲ್ಲಿದೆ. ಶರಾವತಿ ಹಿನ್ನೀರಿನಿಂದ ಕಳೆದ ಮೂರು ವರ್ಷಗಳಿಂದ ಸಾಗರ ನಗರಕ್ಕೆ ನೀರು ಹರಿಸುತ್ತಿರುವುದರಿಂದ ನಗರದಲ್ಲಿ ನೀರಿನ ಹಾಹಾಕಾರ ಕೇಳುತ್ತಿಲ್ಲ. ಶಾಸಕ ಹಾಲಪ್ಪ ಅಲ್ಲಿ ಪದೇ ಪದೇ ಕೈ ಕೊಡುತ್ತಿದ್ದ ಪಂಪ್‌ಸೆಟ್‌ಗೆ ಬದಲಿ ವ್ಯವಸ್ಥೆಗಳನ್ನು ಕಲ್ಪಿಸಿಕೊಟ್ಟಿರುವುದರಿಂದ ನೀರು ಸರಬರಾಜಿನ ತಾಂತ್ರಿಕ ಸಮಸ್ಯೆಗಳಿಗೂ ಅಷ್ಟರಮಟ್ಟಿನ ತಡೆ ಬಿದ್ದಂತಾಗಿದೆ. ಆದರೆ ಶರಾವತಿ ಹಿನ್ನೀರಿನಿಂದ ಬರುವ ಪೈಪ್‌ ಮಾರ್ಗದಲ್ಲಿನ ಗ್ರಾಮಗಳಿಗೆ ನೀರು ಒದಗಿಸುವ ಸುಮಾರು 22 ಕೋಟಿ ರೂ. ವೆಚ್ಚದ ಯೋಜನೆ ಕಳೆದ ಎರಡು ವರ್ಷಗಳಿಂದ ಕುಂಟುತ್ತಿದೆ. ಈಗಿನ ಮಾಹಿತಿ ಪ್ರಕಾರ, ಪೈಪ್‌ಲೈನ್‌, ಸ್ಟೋರೇಜ್‌ ಟ್ಯಾಂಕ್‌ ಮೊದಲಾದ ಚಟುವಟಿಕೆಗಳು ನಡೆದಿದ್ದು, ಶೇ. 85ರಷ್ಟು ಕೆಲಸ ಮುಗಿದಿದೆ ಎಂದು ಅಧಿ ಕಾರಿಗಳು ಹೇಳುತ್ತಿದ್ದಾರೆ. ಆದರೆ ಗ್ರಾಪಂ ಹಳ್ಳಿಗಳಿಗೆ ನೀರು ಒದಗಿಸಲು ಹೊಸ ಪೈಪ್‌ಲೈನ್‌ ಹಾಕದೆ ಹಳೆಯ ವ್ಯವಸ್ಥೆಗೇ ಜೋಡಣೆ ಮಾಡುವ ಪ್ರಯತ್ನ ಮುಂದೆ ನೀರು ಸರಬರಾಜಿನಲ್ಲಿ ನಿರಂತರ ಸಮಸ್ಯೆ ಉಂಟುಮಾಡಬಹುದು ಎಂಬ ಆತಂಕ ಹಾಗೆಯೇ ಉಳಿದಿದೆ. ಈ ಯೋಜನೆ ತ್ವರಿತವಾಗಿ ಮುಗಿದಿದ್ದೇ ಆದರೆ ಎಡಜಿಗಳೇಮನೆ, ತೀವ್ರ ನೀರಿನ ಕೊರತೆ ಅನುಭವಿಸುತ್ತಿರುವ ಖಂಡಿಕಾ, ತಾಳಗುಪ್ಪ ಪಂಚಾಯತ್‌ಗಳ 22 ಗ್ರಾಮಗಳ ಸಮಸ್ಯೆಗೆ ಪರಿಹಾರ ದಕ್ಕುತ್ತದೆ.

Advertisement

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ವಯ ಶರಾವತಿ ನದಿಯ ನೀರನ್ನು ಹೆಗ್ಗೊàಡು, ಭೀಮನಕೋಣೆ, ಕಲ್ಮನೆ, ಪುರಪ್ಪೇಮನೆಯಿಂದ ಹರಿದ್ರಾವತಿ, ಬಟ್ಟೆಮಲ್ಲಪ್ಪ, ರಿಪ್ಪನ್‌ಪೇಟೆಯವರೆಗೆ ಒಟ್ಟು 14 ಗ್ರಾಪಂಗಳಿಗೆ ಹರಿಸುವ ಯೋಜನೆ ಕಳೆದೆರಡು ವರ್ಷಗಳಿಂದ ಪ್ರಸ್ತಾಪದ ಹಂತದಲ್ಲಿಯೇ ಇದೆ. ಇದಕ್ಕೆ ಮಂಜೂರಾತಿ ಸಿಕ್ಕಿದ್ದರೆ ನಿಟ್ಟುಸಿರುಬಿಡಬಹುದಿತ್ತು.

ಇದೇ ವೇಳೆ ಅಂಬ್ಲಿಗೊಳ ಜಲಾಶಯದಿಂದ ಆನಂದಪುರ ಹೋಬಳಿಗೆ ನೀರು ಒದಗಿಸುವ 68 ಕೋಟಿ ರೂ. ವೆಚ್ಚದ ಕುಡಿಯುವ ನೀರಿನ ಯೋಜನೆ ಮಂಜೂರಾಗಿ ಟೆಂಡರ್‌ ಘೋಷಣೆಯಾದುದು ತಾಂತ್ರಿಕ ಕಾರಣಗಳಿಂದ ರದ್ದಾಗಿದೆ. ಮತ್ತೊಮ್ಮೆ ಸಮರ್ಪಕ ಟೆಂಡರ್‌ ಕರೆಯುವ ಪ್ರಕ್ರಿಯೆ ನಡೆದಿಲ್ಲ.

2015-16ರಲ್ಲಿ ಧುತ್ತೆಂದು ಎದುರಾದ ನೀರಿನ ಅಭಾವಕ್ಕೆ ಟ್ಯಾಂಕರ್‌
ಮೊದಲಾದ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿ ನಡೆಯುವ ಹಣದ ಗೋಲ್‌ಮಾಲ್‌ಗ‌ಳನ್ನೂ ಗಮನಿಸಿದ ಜಿಲ್ಲಾಡಳಿತ ಮರು ವರ್ಷದಿಂದ ಸಿಆರ್‌ಎಫ್‌ ಹಾಗೂ ಇತರ ಅನುದಾನಗಳನ್ನು ಶಾಶ್ವತ ಪರಿಹಾರ ಯೋಜನೆಗಳಲ್ಲಿ ಮಾತ್ರ ತೊಡಗಿಸಲು ಅನುಮತಿ ಕೊಟ್ಟಿತ್ತು. ಬೇರೆಲ್ಲ ಯೋಜನೆಗಳಿಗಿಂತ ಕುಡಿಯುವ ನೀರಿನ ಯೋಜನೆಗಳಲ್ಲಿ ಮಾನವೀಯ ಅಂಶಗಳೇ ಮುಖ್ಯವಾಗುವುದರಿಂದ ಯೋಜನೆಗಳಲ್ಲಾಗುವ ಗೋಲ್‌ ಮಾಲ್‌ಗ‌ಳನ್ನು ಮೌನವಾಗಿಸಲಾಗುತ್ತದೆ. ಕಳೆದ ವರ್ಷ ಹೆಗ್ಗೋಡು ಹಾಗೂ ಭೀಮನಕೋಣೆ ಹೊರತುಪಡಿಸಿ ಇನ್ನಾವುದೇ ಗ್ರಾಪಂಗಳು ಏಪ್ರಿಲ್‌ನಲ್ಲಿ ಟ್ಯಾಂಕರ್‌ ಬಳಸಿರಲಿಲ್ಲ. 90 ದಿನಗಳಲ್ಲಿ ಹೆಗ್ಗೋಡು 611 ಟ್ಯಾಂಕರ್‌ ಹಾಗೂ ಮಾಸೂರು ಗ್ರಾಪಂನ ನಾಲ್ಕು ಗ್ರಾಮಗಳಿಗೆ 548 ಟ್ಯಾಂಕರ್‌ ನೀರು ಬಳಸಿತ್ತು. ಈಗಲೂ ಟ್ಯಾಂಕರ್‌ ನೀರು ಪೂರೈಕೆ ಎಂಬುದು ಒಳ್ಳೆಯ ಅವಕಾಶ ಎಂದೇ ತಾಪಂ ಮೂಲಗಳು ತಿಳಿಸುತ್ತವೆ.

ಮಾವೆಂಸ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next