ಸಾಗರ: ಹಲವು ವರ್ಷಗಳ ನಂತರ ಸಾಗರ ನಗರಸಭೆಯ ಅಧ್ಯಕ್ಷ ಸ್ಥಾನದ ಮೀಸಲಾತಿ ನಿಗದಿಪಡಿಸುವ ಸಂದರ್ಭದಲ್ಲಿ ಸಾಮಾನ್ಯ ವರ್ಗಕ್ಕೆ ಈ ಬಾರಿ ಅವಕಾಶ ಲಭಿಸುತ್ತದೆ ಎಂಬ ನಂಬಿಕೆ ಸಂಪೂರ್ಣವಾಗಿ ಹುಸಿ ಹೋಗಿದ್ದು, ರಾಜ್ಯ ಸರ್ಕಾರ ತಮ್ಮದಿದ್ದರೂ ಅನುಕೂಲಕರ ಮೀಸಲಾತಿ ಪಡೆಯದ ಬಗ್ಗೆ ಸಾಗರದ ಭಾರತೀಯ ಜನತಾ ಪಕ್ಷದ ನಗರಸಭೆಯ ಪ್ರಮುಖ ಸದಸ್ಯರಲ್ಲಿ ತೀವ್ರ ನಿರಾಶೆ ಉಂಟುಮಾಡಿದೆ.
ನಗರಸಭೆಯಲ್ಲಿ ನಿಚ್ಚಳ ಬಹುಮತ ಹೊಂದಿರುವ ಹಿನ್ನೆಲೆಯಲ್ಲಿ ಪಕ್ಷದಲ್ಲಿದ್ದ ಹಲವು ಪ್ರಮುಖರ ಅಧ್ಯಕ್ಷ ಗಾದಿಯ ಕನಸು ಗರಿಗೆದರಿತ್ತು. ಇತ್ತೀಚೆಗಷ್ಟೇ ಬಿಜೆಪಿ ಜಿಲ್ಲಾಧ್ಯಕ್ಷರ ಹುದ್ದೆ ಪಡೆದ ಟಿ.ಡಿ.ಮೇಘರಾಜ್, ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮ ಈ ಅವಕಾಶಗಳಿಗೆ ಅನ್ವಯಿಸುವುದಿಲ್ಲ ಎಂದು ತಮ್ಮ ಉಮೇದುವಾರಿಕೆಯನ್ನು ಸ್ಪಷ್ಟಪಡಿಸಿದ್ದರು. ಬಿಜೆಪಿ ನಗರಾಧ್ಯಕ್ಷರಾಗಿ, ಹಿಂದಿನ ಅವಧಿಯ ಸದಸ್ಯರೂ ಆಗಿದ್ದ ಶ್ರೀನಿವಾಸ್ ಮೇಸ್ತ್ರಿ ಈ ಹುದ್ದೆಗೆ ಭಾರೀ ನಿರೀಕ್ಷೆ ಇರಿಸಿಕೊಂಡಿದ್ದರು. ಮೇಘರಾಜ್ ಅಲ್ಲದಿದ್ದರೆ ನಾವೇ ಎಂಬ ನಂಬಿಕೆಯಲ್ಲಿ ನಗರ ಬಿಜೆಪಿ ಅಧ್ಯಕ್ಷ ಗಣೇಶ್ ಪ್ರಸಾದ್, ವಿ. ಮಹೇಶ್ ಮೊದಲಾದವರಿದ್ದರು ಎಂದು ನಂಬಲಾಗಿತ್ತು. ಅವರೆಲ್ಲ ಈ ಮೀಸಲಾತಿ ಪ್ರಕಟಣೆಯಿಂದ ತೀವ್ರ ನಿರಾಶೆ ಹೊಂದಿದ್ದಾರೆ.
ಬಿಜೆಪಿಯಿಂದ ಏಳು ಜನ ಮಹಿಳೆಯರು ಆಯ್ಕೆಯಾಗಿದ್ದು, ಇವರೆಲ್ಲರೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳೇ ಎಂದು ಭಾವಿಸಬೇಕಾಗಿದೆ. ಮೀಸಲಾತಿ ಸಾಮಾನ್ಯ ಮಹಿಳೆ ಬಂದಿದ್ದರೂ, ಸಾಮಾನ್ಯ ಮಹಿಳೆಯ ಮೀಸಲಾತಿ ವಾರ್ಡ್‌ಗಳಲ್ಲಿಯೂ ವಿವಿಧ ಮೀಸಲಾತಿ ಹೊಂದಿದ ಮಹಿಳೆಯರೇ ಬಿಜೆಪಿಯಿಂದ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಸಾಮಾನ್ಯ ಮಹಿಳೆಯ ಮೀಸಲಾತಿ ನಿಜ ಅರ್ಥದಲ್ಲಿ ವ್ಯರ್ಥವಾದಂತಾಗಿದೆ. ಈ ಏಳು ಮಹಿಳಾ ಸದಸ್ಯರಲ್ಲಿ ಭಾವನಾ ಸಂತೋಷ್, ಮಧುರಾ ಶಿವಾನಂದ್, ಮೈತ್ರಿ ಪಾಟೀಲ್ ಹಾಗೂ ಸವಿತಾ ವಾಸು ಅಧ್ಯಕ್ಷ ಸ್ಥಾನದ ಪ್ರಬಲ ಸ್ಪರ್ಧಿಗಳಾಗಬಹುದು ಎಂಬ ಅನಿಸಿಕೆ ಬಿಜೆಪಿ ವಲಯದಲ್ಲಿಯೇ ಇದೆ. ಈ ನಡುವೆ ಅಧ್ಯಕ್ಷ ಮೀಸಲಾತಿಯ ಬೇಸರವನ್ನು ಬಿಸಿಎಂ “ಎ’ ಮೀಸಲಾತಿಯುಳ್ಳ ಉಪಾಧ್ಯಕ್ಷ ಸ್ಥಾನ ಪಡೆಯುವ ಮೂಲಕ ವಿ. ಮಹೇಶ್ ಕಳೆದುಕೊಳ್ಳುತ್ತಾರೆಯೇ ಎಂಬ ಕುತೂಹಲವಿದೆ.
ಇವರಿಗೆ ಸತತ ಎರಡನೇ ಬಾರಿ ನಗರಸಭೆ ಸದಸ್ಯರಾಗಿರುವ ಅರವಿಂದ ರಾಯ್ಕರ್ ಸ್ಪರ್ಧಿಯಾಗಬಹುದು. ಮೀಸಲಾತಿಯನ್ನು ನಿರ್ಧರಿಸುವ ಸಂದರ್ಭದಲ್ಲಿ ಸರ್ಕಾರದ ಮೇಲೆ ತಮ್ಮ ಆಶಯವನ್ನು ಪ್ರತಿಪಾದಿಸದೆ ಶಾಸಕ ಹಾಲಪ್ಪ ಸುಮ್ಮನುಳಿಯುವ ಮೂಲಕ ಮುಂದೆ ಕಾಡಬಹುದಾದ ಭಿನ್ನಮತ, ಅಸಮಾಧಾನಕ್ಕೆ ಉತ್ತರ ಕಂಡುಕೊಂಡರೆ ಎಂಬ ಪ್ರಶ್ನೆ ಬಿಜೆಪಿ ಕಾರ್ಯಕರ್ತರನ್ನು ಕಾಡುತ್ತಿದೆ. ಸಾಮಾನ್ಯ ವರ್ಗದ ಮೀಸಲಾತಿಯಲ್ಲದೆ ಬಿಸಿಎಂ “ಬಿ’ ಬದಲು “ಎ’ಗೆ ಉಪಾಧ್ಯಕ್ಷ ಅವಕಾಶ ಕಲ್ಪಿಸಿರುವುದರಲ್ಲಿ ಹಾಲಪ್ಪ ಅವರ ನಡೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಹಿಂದೆ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಜೊತೆ ಗುರುತಿಸಿಕೊಂಡಿದ್ದ ಆರ್. ಶ್ರೀನಿವಾಸ್ ಅವರಿಗೆ ಎಲ್ಲ ರೀತಿಯ ಅವಕಾಶ ಸಿಕ್ಕಬಾರದು ಎಂದು ಅವರು ತರ್ಕಿಸಿರುವ ಸಾಧ್ಯತೆಯಂತೂ ಇದೆ. ಈ ನಡುವೆ ಶಾಸಕ ಹಾಲಪ್ಪ ಅವರ ಅನುಯಾಯಿ ಕಾರ್ಗಲ್- ಜೋಗ ಪಪಂನ ನಾಗರಾಜ್ ವಾಟೆಮಕ್ಕಿ ಅವರಿಗೆ ಸುಲಭವಾಗಿ ಎಸ್‌ಟಿ ಮೀಸಲಾತಿ ಮೂಲಕ ಅಧ್ಯಕ್ಷ ಪಟ್ಟ ತಂದುಕೊಡಬಹುದಾಗಿದ್ದ ಸನ್ನಿವೇಶದಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಲ್ಲಿ ಸಾಮಾನ್ಯ ವರ್ಗವನ್ನೇ ಸೂಚಿಸಿರುವುದು ಒಂದು ಮಟ್ಟಿನ ಆಶ್ಚರ್ಯವನ್ನು ತಂದಿದೆ. ಇಲ್ಲಿ ಈಗಲೂ ವಾಟೆಮಕ್ಕಿ ಅವರ ಜೊತೆ ಎರಡನೇ ವಾರ್ಡ್‌ನ ಮಂಜುನಾಥ್ ಹಾಗೂ ಮಹಿಳಾ ಸದಸ್ಯೆ ಲಕ್ಷ್ಮೀ ರಾಜು ಕೂಡ ಅಧ್ಯಕ್ಷ ಪದವಿಯ ಆಕಾಂಕ್ಷಿಯಾಗಿ ತಮ್ಮ ಲಾಬಿ ಆರಂಭಿಸಬಹುದು.