Advertisement

ಸಾಗರ: ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ, ಶೂ ವಿತರಿಸದಿರುವುಕ್ಕೆ ಖಂಡನೆ

04:13 PM Sep 08, 2022 | Team Udayavani |

ಸಾಗರ: ಇಲ್ಲಿನ ತಾಲೂಕು ರೈತ ಸಂಘದ ಡಾ. ಎಚ್.ಗಣಪತಿಯಪ್ಪ ಬಣದ ಆಶ್ರಯದಲ್ಲಿ ಆಮ್ ಆದ್ಮಿ ಪಕ್ಷದ ಸಹಕಾರದೊಂದಿಗೆ ಸರ್ಕಾರಿ ಶಾಲೆಯ ಮಕ್ಕಳಿಗೆ ಶೂ ಸಾಕ್ಸ್ ವಿತರಣೆ ಮಾಡದಿರುವುದು, ಎಲ್ಲ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ಸಮವಸ್ತ್ರ ಕೊಡದಿರುವ ನೀತಿಯನ್ನು ಖಂಡಿಸಿ ಗುರುವಾರ ಸಾರ್ವಜನಿಕರ ಬಳಿ ಭಿಕ್ಷಾಟನೆ ಮಾಡುವ ಮೂಲಕ ದೇಣಿಗೆ ಸಂಗ್ರಹಿಸುವ ವಿನೂತನ ಪ್ರತಿಭಟನೆ ನಡೆಸಲಾಯಿತು.

Advertisement

ಗಣಪತಿ ದೇವಸ್ಥಾನದಿಂದ ಹೊರಟ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರು ಹಾಗೂ ಅಂಗಡಿ ಮಾಲೀಕರ ಬಳಿ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ. ಶೈಕ್ಷಣಿಕ ಚಟುವಟಿಕೆಗೆ ಮೂಲಭೂತ ಸೌಲಭ್ಯ ಒದಗಿಸಲು ಹಣದ ನೆರವು ನೀಡಿ ಎಂದು ಭಿಕ್ಷೆ ಬೇಡುವ ಜೊತೆಗೆ ಹಣ ಸಂಗ್ರಹಿಸಲಾಯಿತು. ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಉಪವಿಭಾಗಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಲಾಯಿತು.

ಕಳೆದ ಮೂರು ವರ್ಷಗಳಿಂದ ಸರ್ಕಾರಿ ಶಾಲೆ ಮಕ್ಕಳಿಗೆ ಶೂ ಸಾಕ್ಸ್ ವಿತರಣೆ ಮಾಡಿಲ್ಲ. ಶಾಲೆ ಪ್ರಾರಂಭವಾಗಿ ಅರ್ಧ ವರ್ಷ ಕಳೆದರೂ ಮಕ್ಕಳಿಗೆ ಪೂರ್ಣ ಪ್ರಮಾಣದಲ್ಲಿ ಸಮವಸ್ತ್ರವನ್ನು ವಿತರಣೆ ಮಾಡಿಲ್ಲ. ಸರ್ಕಾರ ಆರ್ಥಿಕ ಸಂಕಷ್ಟದಲ್ಲಿರುವುದನ್ನು ಮನಗಂಡ ರೈತ ಸಂಘ ಸಾಗರದ ನಾಗರೀಕರಲ್ಲಿ ಭಿಕ್ಷೆ ಎತ್ತುವ ಮೂಲಕ ಹಣ ಸಂಗ್ರಹಿಸಿ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ಸರ್ಕಾರಕ್ಕೆ ಸಲ್ಲಿಸುತ್ತಿದೆ. ಒಂದು ವಾರದಲ್ಲಿ ಮಕ್ಕಳಿಗೆ ಶೂ ಸಾಕ್ಸ್, ಸಮವಸ್ತ್ರ ಕೊಡದೆ ಹೋದಲ್ಲಿ ಭಿಕ್ಷೆ ಬೇಡಿದ ಹಣದಲ್ಲಿ ರಾಜ್ಯದ ಎಲ್ಲ ಸಚಿವರಿಗೆ, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸಮವಸ್ತ್ರವನ್ನು ಖರೀದಿಸಿ ಪೋಸ್ಟ್ ಮಾಡಲಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ರೈತ ಸಂಘದ ಪ್ರಮುಖರಾದ ಭದ್ರೇಶ್ ಬಾಳಗೋಡು, ಶಶಿಕುಮಾರ್, ಸೂರಜ್, ಚಂದ್ರಶೇಖರ್, ದೇವರಾಜ್, ಆಮ್‌ಆದ್ಮಿ ಪ್ರಮುಖರಾದ ವಿಜಯಕುಮಾರ್, ಎಲ್.ವಿ.ಸುಭಾಷ್, ರಮೇಶ್, ಪ್ರಮುಖರಾದ ಜಿ.ಟಿ.ಸತ್ಯನಾರಾಯಣ, ಡಿ.ದಿನೇಶ್, ಓಂಕಾರ್ ಎಸ್.ವಿ., ಯಶವಂತ ಪಣಿ, ಶ್ರೀಧರ ಮೂರ್ತಿ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next