Advertisement

ವೈಯಕ್ತಿಕ ಸಂವೇದನೆ ಕಲೆಯಲ್ಲ : ಸುಂದರ

01:43 PM Oct 05, 2019 | Naveen |

ಸಾಗರ: ಕಲಾವಿದರ ಚಟುವಟಿಕೆಗಳ ಮೂಲಕ ಹುಟ್ಟುವುದನ್ನು ಕಲೆ ಎನ್ನಬಹುದೇ ವಿನಃ ತಾನೇ ತಾನಾಗಿ ಸಂಭವಿಸುವುದನ್ನು ಕಲೆ ಎನ್ನಲಾಗದು ಎಂದು ಚಿಂತಕ ಸುಂದರ ಸಾರುಕೈ ಪ್ರತಿಪಾದಿಸಿದರು.

Advertisement

ತಾಲೂಕಿನ ಹೆಗ್ಗೋಡಿನ ನೀನಾಸಂನಲ್ಲಿ ಶುಕ್ರವಾರದಿಂದ ಆರಂಭವಾಗಿರುವ “ಕಲೆಗಳ ಅನುಭವ’ ವಿಷಯ ಕೇಂದ್ರಿತ ಸಂಸ್ಕೃತಿ ಶಿಬಿರದ ಮೊದಲ ಗೋಷ್ಠಿಯಲ್ಲಿ ಅವರು ಕಲೆ, ಅನುಭವಗಳ ಅರ್ಥ ವಿಶ್ಲೇಷಣೆಯ ಸಂವಾದ ಚಟುವಟಿಕೆ ನಿರ್ವಹಿಸಿ ಆವರು ಮಾತನಾಡಿದರು.

ಒಬ್ಬನ ವೈಯಕ್ತಿಕ ಸಂವೇದನೆ ಕಲೆಯಾಗುವುದಿಲ್ಲ. ಕಲೆ ಎಂಬುದು ಸಮುದಾಯದ್ದು, ವೈಯಕ್ತಿಕವಾದುದಲ್ಲ. ಒಂದು ಕಡೆ ಅಡುಗೆ, ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳೆಲ್ಲವೂ ಕಲೆಗಳೇ. ನಾವು ಮಾಡುವುದನ್ನು ಕಲೆ ಎಂದು ಕರೆಯಬಹುದೇ, ಪ್ರಕೃತಿಯ ಸೃಷ್ಟಿಗಳನ್ನೂ ಕಲೆ ಎಂದು ಕರೆಯಬಹುದೇ ಎಂಬ ಜಿಜ್ಞಾಸೆ ಕಾಡುವಂತದು. ಈ ಬಾರಿಯ ಶಿಬಿರ ಸಂವಹನದ ಮೂಲಕ ಈ ಗೊಂದಲಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತದೆ ಎಂದರು.

ಕಲೆಯನ್ನು ಅನುಭವದ ಸರಳೀಕರಣಕ್ಕೆ ಇಳಿಯಲಾಗದು. ಒಂದು ನಾಟಕದ ವಿಚಾರದಲ್ಲಿಯೇ ನೋಡುಗನ ಹಾಗೂ ನಿರ್ದೇಶಕನ ಅನುಭವ ಭಿನ್ನವಾಗಿರುತ್ತದೆ. ಆದರೆ ನಾಟಕವನ್ನು ಕಲೆ ಎನ್ನುವ ಮಾತಿಗೆ ಬಂದರೆ ಕಾರಣಗಳು ಬೇಕು.

ಕಲೆಗೆ ಥಿಯರಿಗಳಿವೆ. ಅನುಭವಕ್ಕೂ ಸತ್ಯಕ್ಕೂ ಸಂಬಂಧ ಇರಬೇಕಿಲ್ಲ. ಅನುಭವ ಸಾರ್ವತ್ರಿಕ ಮನ್ನಣೆ ಪಡೆದಾಗ ಹೆಚ್ಚು ಮೌಲ್ಯ ಪಡೆಯುತ್ತದೆ ಎಂದು ವಿಶ್ಲೇಷಿಸಿದರು.

Advertisement

ಕವಿ ಜಯಂತ್‌ ಕಾಯ್ಕಿಣಿ ಪ್ರತಿಕ್ರಿಯಿಸಿ, ಮನುಷ್ಯನ ವಿಕಾಸ ಕಲೆಗಳ ಮೂಲಕ ಆಗಿದೆ. ಸಮಷ್ಟಿಯ ಅಂಶ ಒಳಗೊಂಡ ವೈಯುಕ್ತಿಕ ಚಟುವಟಿಕೆಯನ್ನೂ ಕಲೆಯ ವರ್ಗೀಕರಣಕ್ಕೆ ಸೇರಿಸಬಹುದು. ಗಾಂಧೀಜಿಯವರ ಚಿಂತನೆ ಭಿನ್ನವಾಗಿದ್ದು, ಅವರ ಕಲೆಯ ಕುರಿತ ಚಿಂತನೆ ತಾತ್ವಿಕ ನೆಲೆಗಟ್ಟಿನದಾಗಿತ್ತು ಎಂದರು.

ರಂಗಕರ್ಮಿ ಕೆ.ವಿ. ಅಕ್ಷರ ಮಾತನಾಡಿ, ಭಾಷೆ ಬರೆಯುವವನ ಸ್ವತ್ತಲ್ಲ. ಹಾಗಾಗಿಯೇ ಕವಿತೆ, ಕಥನ ಬರೆದವನ ಸರಕಲ್ಲ. ಕಲೆಯನ್ನು ಅನುಭವಿಸಲು ಸಾಂಪ್ರದಾಯಕವಾಗಿ ತರಬೇತಿಗೊಂಡಿರಬೇಕು ಎಂಬುದು ಮಿಥ್ಯೆ. ಜೀನ್‌ಗಳ ಮೂಲಕ, ಸಮಾಜದ ಮುಖಾಂತರವೂ ಕಲೆಯ ಶಿಕ್ಷಣ ಲಭಿಸುವಂತದು ಎಂದರು.

ಲೇಖಕ ವಿವೇಕ್‌ ಶ್ಯಾನಭಾಗ್‌ ಮಾತನಾಡಿ, ಕಲೆಯನ್ನು ನಾವು ಪ್ರತಿನಿ ಧಿಸಿದಾಗ ಮಾತ್ರ ಅದರ ಆಳಕ್ಕೆ ಹೊಕ್ಕಲು ಸಾಧ್ಯವಾಗುತ್ತದೆ. ಪರಿಚಿತವಾದದ್ದನ್ನು ಅಪರಿಚಿತಗೊಳಿಸಿದಾಗ ಮಾತ್ರ ಕಲೆ ವ್ಯಕ್ತವಾಗುವುದನ್ನು ನೋಡಬಹುದು ಎಂದರು.

ಚಿಂತಕ ಜಯಚಂದ್ರ, ಕಲೆ ವಂಶವಾಹಿಯಾಗಿಯೇ ಬರಬೇಕು ಎನ್ನುವುದು ಸರಿಯಲ್ಲ. ಕೆಲವು ದುರುದ್ದೇಶಪೂರಿತ ಚಿಂತನೆಗಳು ಸಹ ಕಲೆಯ ಮೇಲೆ ಬೆಳಕು ಚೆಲ್ಲಲು ಸಾಧ್ಯವಿದೆ. ಆದರೆ ಸದುದ್ದೇಶದಿಂದ ನೋಡುವ ವಿಶಾಲ ದೃಷ್ಟಿಕೋನ ನೋಡುವವರು ಹೊಂದಿರಬೇಕಾಗುತ್ತದೆ ಎಂದರು.

ಸಾಹಿತಿ ಡಾ| ಎಚ್‌.ಎಸ್‌. ವೆಂಕಟೇಶ್‌ಮೂರ್ತಿ ಮಾತನಾಡಿ, ಮಹಾತ್ಮಾ ಗಾಂಧೀಜಿಯವರಿಗೆ ಸೌಂದರ್ಯ ಪ್ರಜ್ಞೆ ಇಲ್ಲ ಎಂದು ವಿಶ್ಲೇಷಿಸಲಾಗುತ್ತದೆ. ಗಾಂಧೀಜಿಯವರು ಶಾಂತಿನಿಕೇತನಕ್ಕೆ ಹೋದಾಗ ಅಲ್ಲಿನ ತೈಲವರ್ಣದ ಚಿತ್ರಗಳನ್ನು ನೋಡುವುದಕ್ಕಿಂತ ನನಗೆ ಚರಕದ ಮೂಲಕ ನೂಲುವುದೇ ಹೆಚ್ಚು ಇಷ್ಟ ಎಂದು ಹೇಳಿದ್ದರು. ಗಾಂಧಿಧೀಜಿಯವರ ಮಟ್ಟಿಗೆ ಸಮುದಾಯವನ್ನು ಒಳಗೊಂಡ ಚಟುವಟಿಕೆ ಕಲಾಸ್ವಾದನೆಯನ್ನು ಮೀರಿದ್ದು ಎನ್ನಬಹುದು ಎಂದರು. ಸಂವಾದದಲ್ಲಿ ವಿದ್ಯಾ ಅಕ್ಷರ, ರುಸ್ತುಂ ಭರೂಚಾ, ಎಂ.ಎಸ್‌.ಶ್ರೀರಾಮ್‌, ರಾಘವೇಂದ್ರ ಪಾಟೀಲ್‌ ಇನ್ನಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next