Advertisement

ಸಿಗಂದೂರು ಲಾಂಚ್ ಸಿಬ್ಬಂದಿಗೆ 9 ತಿಂಗಳಿನಿಂದ ವೇತನ ಇಲ್ಲ!

07:11 PM Sep 03, 2021 | Team Udayavani |

ಸಾಗರ: ತಾಲೂಕಿನ ಹಿನ್ನೀರಿನ ವ್ಯಾಪ್ತಿಯ ಲಾಂಚ್ ಸೇವೆಯಲ್ಲಿ  ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ 19 ಸಿಬ್ಬಂದಿಗೆ ಕಳೆದ 9 ತಿಂಗಳಿನಿಂದ ಸಂಬಳ ನೀಡಿಲ್ಲ. ಲಾಕ್ ಡೌನ್ ಸಂದರ್ಭದ ಸಂಕಟ ಸೇರಿದಂತೆ ಸಂಬಳ ಇಲ್ಲದೆ ಕುಟುಂಬ ನಿರ್ವಹಣೆಗೆ ಸಿಬ್ಬಂದಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

Advertisement

ಈ ಸಿಬ್ಬಂದಿಗಳಿಂದಾಗಿ ಹಿನ್ನೀರಿನ ಗ್ರಾಮವಾಸಿಗಳಿಗೆ, ಪ್ರವಾಸಿಗರಿಗೆ ಲಾಂಚ್ ಸೇವೆ ಸಹಕಾರಿಯಾಗಿದೆ. ಸಿಗಂದೂರು ಲಾಂಚ್ ವಿಚಾರದಲ್ಲಿ ಆಗಾಗ ಮಾತಿನ ಚಕಮಕಿ, ಹಲ್ಲೆ ಪ್ರಕರಣಗಳನ್ನು ಸಹ ಸಿಬ್ಬಂದಿ ಅನುಭವಿಸುವ ಸ್ಥಿತಿ ಇದೆ. ಆಗಾಗ ಪ್ರಭಾವಿ ವ್ಯಕ್ತಿಗಳ ಕೋರಿಕೆ ಕಾರಣದಿಂದ ಹೆಚ್ಚುವರಿ ಸೇವೆಯನ್ನು ಸಹ ಲಾಂಚ್ ಸಿಬ್ಬಂದಿ ಮಾಡುವ ಸ್ಥಿತಿ ಇದೆ.

ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಬಹುತೇಕ ಸಿಬ್ಬಂದಿ ಸ್ಥಳೀಯರಾಗಿದ್ದ ಕಾರಣವೂ ಸೇರಿದಂತೆ, ಸ್ಥಳೀಯರ ತುರ್ತು ಸಂದರ್ಭಗಳಲ್ಲಿ ಸಹ ಮಾನವೀಯ ನೆಲೆಯಲ್ಲಿ ಸಿಬ್ಬಂದಿ ಲಾಂಚ್ ಸೇವೆ ಕಲ್ಪಿಸುವ ಸ್ಥಿತಿ ನಿರ್ಮಾಣವಾಗುತ್ತದೆ. ನಿರಂತರವಾಗಿ ಜನವರಿಯಿಂದ ಸೇವೆ ಮಾಡಿದ್ದರೂ ೧೯ ಜನ ಸಿಬ್ಬಂದಿ ಸಂಬಳವಿಲ್ಲದೆ ಕೆಲಸ ಮಾಡುತ್ತಿರುವುದು ವಿಪರ್ಯಾಸ ಎಂದೇ ಇಲ್ಲಿನ ಜನ ಹೇಳುತ್ತಾರೆ.

ಲಾಂಚ್ ಸಿಬ್ಬಂದಿ ವೇತನ ಪಾವತಿ ಸೇರಿದಂತೆ ಸ್ಥಳೀಯ ಜವಾಬ್ದಾರಿ ನಿರ್ವಹಿಸುವ ಕಡವು ಇಲಾಖೆ  ಅಧಿಕಾರಿಗಳು ವೇತನದ ಕುರಿತು ಕಳೆದ 1 ತಿಂಗಳಿನಿಂದ ಸಂಬಳದ ಸಂಬಂಧ ಪತ್ರ ವ್ಯವಹಾರ ಮಾಡುತ್ತಿದ್ದಾರೆ. ವೇತನದ ಒಟ್ಟು ಮೊತ್ತ 2 ಲಕ್ಷ ರೂ.ಕ್ಕಿಂತ ಕಡಿಮೆ ಇದ್ದ ಸಂದರ್ಭದಲ್ಲಿ ಜಿಎಸ್‌ಟಿ ಕಡಿತ ಅಗತ್ಯ ಇಲ್ಲ ಎಂದು ಭಾವಿಸಿದ ಅಧಿಕಾರಿಗಳು ತೆರಿಗೆ ಹಣ ಪರಿಗಣಿಸದೆ ಬಿಲ್ ಮಾಡಿದ್ದಾರೆ. ಆದರೆ ಖಜಾನೆ ಇಲಾಖೆಯ ಅಧಿಕಾರಿಗಳು ರೂ 2 ಲಕ್ಷಕ್ಕಿಂತಲೂ ಕಡಿಮೆ ಇದ್ದರೂ ಜಿಎಸ್‌ಟಿ ಕಡಿತ ಅಗತ್ಯ ಎಂಬ ಕಾನೂನು ನಿಯಮ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಅಧಿಕಾರಿಗಳು ಕಾರವಾರ ಮತ್ತು ಮಂಗಳೂರು ಮಟ್ಟದ ಉನ್ನತ ಅಧಿಕಾರಿಗಳಿಗೆ ಹೊಸದಾಗಿ ಸಂಬಳದ ಕುರಿತಾದ ಬಿಲ್ ಮಾಡಿ ಕಳಿಸಿದ್ದಾರೆ.

ಇದನ್ನೂ ಓದಿ:ಕೋವಿಡ್: ರಾಜ್ಯದಲ್ಲಿಂದು 1220 ಜನರಿಗೆ ಪಾಸಿಟಿವ್ ಸೋಂಕು | 1175 ಸೋಂಕಿತರು ಗುಣಮುಖ  

Advertisement

ಜಿಎಸ್‌ಟಿ ಕಡಿತದ ಗೊಂದಲದ ಕಾರಣದಿಂದ ಸಿಬ್ಬಂದಿ ವೇತನ ವಿಳಂಬವಾಗಿದ್ದು, ಈ ಬಗ್ಗೆ ಶೀಘ್ರವಾಗಿ ಕಚೇರಿ ಕಾರ್ಯ ಆಗುವಂತೆ ಸ್ಥಳೀಯ ಅಧಿಕಾರಿಗಳು ಕಾಳಜಿ ವಹಿಸಬೇಕಾಗಿದೆ.

ಹಿನ್ನೀರಿನ ಲಾಂಚ್ ಸೇವೆಯ ಚಾಲಕ ಮತ್ತಿತರ ಸಿಬ್ಬಂದಿಗೆ ವಸತಿ ಸಂಬಂಧ ವಸತಿಗೃಹಗಳ ನಿರ್ಮಾಣದ ಅಗತ್ಯತೆ ಬಗ್ಗೆ ಬಹುಕಾಲದಿಂದ ಬೇಡಿಕೆ ಸಲ್ಲಿಸಲಾಗಿದೆ. ಈ ಬಗ್ಗೆ ಹಲವಾರು ಸಂದರ್ಭಗಳಲ್ಲಿ ಜನಪ್ರತಿನಿಧಿಗಳು ಸಹ ಪ್ರಸ್ತಾಪಿಸಿದ್ದಾರೆ. ಆದರೆ ಈಗ ಅಂಬಾರಗೋಡ್ಲು ಮತ್ತು ಕಳಸವಳ್ಳಿ ಸಂಪರ್ಕ  ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಸೇತುವೆ ಸೌಲಭ್ಯದ ಹಿನ್ನೆಲೆಯಲ್ಲಿ ಲಾಂಚ್ ಸಿಬ್ಬಂದಿಗೆ ವಸತಿಗೃಹ ನಿರ್ಮಿಸಿ ಕೊಡುವ ಅಗತ್ಯವಿಲ್ಲ ಎಂದು ಇಲಾಖೆ ಯೋಚಿಸಿದಂತಿದೆ. ಆದ್ದರಿಂದ ಸಿಬ್ಬಂದಿ ವಸತಿಗೃಹದ ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆ ಇದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಡವು ಇಲಾಖೆಯ ಸಾಗರದ ಸಹಾಯಕ ಕಡವು ನಿರೀಕ್ಷಕ ದಾಮೋದರ ನಾಯ್ಕ, 2021ರ ಜನವರಿ ತಿಂಗಳಿನಿಂದ ಲಾಂಚ್ ಸೇವೆಯಲ್ಲಿನ 19 ಸಿಬ್ಬಂದಿಗೆ ವೇತನ ಪಾವತಿಯಾಗಿಲ್ಲ. 2 ಲಕ್ಷದ ಮಿತಿಯೊಳಗಿನ ವೇತನಗಳ ಸಂದರ್ಭ ಜಿಎಸ್‌ಟಿ ಕಡಿತ ಅಗತ್ಯವಿಲ್ಲ ಎಂದು ಬಿಲ್ ಮಾಡಲಾಗಿತ್ತು. ಆದರೆ ಈ ಬಿಲ್ ಸಂದರ್ಭದಲ್ಲಿಯೂ ಜಿಎಸ್‌ಟಿ ಕಡಿತ ಅಗತ್ಯ ಎಂದು ಖಜಾನೆ ಅಧಿಕಾರಿಗಳು ಸೂಚಿಸಿದ್ದಾರೆ. ವೇತನ ಪಾವತಿಗೆ ವಾರದೊಳಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next