ಸಾಗರ: ತಾಲೂಕಿನ ಎಲ್ಲೆಡೆ ಎಡೆಬಿಡದೆ ನಿರಂತರವಾಗಿ ಮಳೆ ಸುರಿಯುತ್ತಿದ್ದು, ತಡಗಳಲೆ ಸಮೀಪದ ಬೀಸನಗದ್ದೆ ಗ್ರಾಮ ಜಲಾವೃತಗೊಂಡು, ನಾಗರಿಕ ಜಗತ್ತಿನ ಸಂಪರ್ಕ ಕಡಿತಕೊಂಡಿದೆ.
ಇಲ್ಲಿನ ಭೌಗೋಳಿಕ ಸ್ಥಿತಿಯಿಂದ ಪ್ರತಿ ವರ್ಷ ವರದಾ ನದಿ ನೀರು ಆವರಿಸುವುದರಿಂದ ಈ ಗ್ರಾಮ ಜಲಾವೃತವಾಗುತ್ತಿದ್ದು, ಈವರೆಗೆ ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಸಾಧ್ಯವಾಗಿಲ್ಲ. ಮಂಗಳವಾರದಿಂದ ಈ ಭಾಗದ ಗ್ರಾಮಸ್ಥರ ಓಡಾಟಕ್ಕೆ ಫೈಬರ್ ದೋಣಿಯ ವ್ಯವಸ್ಥೆ ಮಾಡಲಾಗುವುದು ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ತಾಳಗುಪ್ಪ ಹೋಬಳಿಯ ತಾಳಗುಪ್ಪ, ಮಂಡಗಳಲೆ, ಕಾನ್ಲೆ, ಸೈದೂರು, ತಡಗಳಲೆ, ಹಿರೇನೆಲ್ಲೂರು ಹಾಗೂ ಸುತ್ತಮುತ್ತ ಗ್ರಾಮಗಳ ಭತ್ತದ ಗದ್ದೆಗಳು ನೀರಿನಲ್ಲಿ ಮುಳುಗಿವೆ. ಜುಲೈ 10ರ 24 ಗಂಟೆಗಳಲ್ಲಿ ವಾಡಿಕೆಯಂತೆ 26.7 ಮಿ.ಮೀ. ಮಳೆಯಾಗಬೇಕಿದ್ದು, 640 ಮಿ.ಮೀ.ನಷ್ಟು ಮಳೆ ಸುರಿದಿದೆ. ಈ ಅವಧಿಯಲ್ಲಿ ಶೇ. 140ರಷ್ಟು ಅಧಿಕ ಮಳೆಯಾಗಿದೆ.
ಕಳೆದ 7 ದಿನಗಳಲ್ಲಿ ವಾಡಿಕೆಯಂತೆ ತಾಲೂಕಿನಲ್ಲಿ 185.7 ಮಿ.ಮೀ. ಮಳೆಯಾಬೇಕಿದ್ದು, 543 ಮಿ.ಮೀ. ಅಂದರೆ ಶೇ. 192 ರಷ್ಟು ಅಧಿಕ ಮಳೆಯಾಗಿದೆ. ಇದರ ಪರಿಣಾಮ ವರದಾ ನದಿ ಉಕ್ಕಿ ಹರಿಯುತ್ತಿದ್ದು, ಈ ನದಿಯ ನೀರು ತಾಳಗುಪ್ಪ ಹೋಬಳಿಯ 1,200 ಎಕರೆ ಭತ್ತದ ಗದ್ದೆಯನ್ನು ಜಲಾವೃತಗೊಳಿಸಿದೆ.
ಬಿಟ್ಟೂ ಬಿಡದೆ ಮಳೆ ಸುರಿಯುತ್ತಿರುವುದರಿಂದ ಕೃಷಿ ಚಟುವಟಿಕೆಗಳಿಗೆ ತಾತ್ಕಾಲಿಕವಾಗಿ ಅಡ್ಡಿ ಉಂಟಾಗಿದೆ. ನಾಟಿ ಮಾಡಲು ಸಿದ್ಧಪಡಿಸಿದ ಸಸಿ ಮಡಿಗಳಿಗೆ ಹಾನಿ ಉಂಟಾಗುತ್ತಿರುವುದು ಭತ್ತದ ಬೆಳೆಗಾರರಿಗೆ ಆತಂಕ ಉಂಟು ಮಾಡಿದೆ. ವ್ಯಾಪಕವಾಗಿರುವ ಅಡಕೆ ಬೆಳೆ ಕೂಡ ಬೋಡೋ ಸಿಂಪಡನೆಗೆ ಅವಕಾಶ ಸಿಕ್ಕದಿರುವುದರಿಂದ ಅಡಕೆ ಕಾಯಿ ಕೊಳೆರೋಗಕ್ಕೆ ತುತ್ತಾಗುವ ಸಾಧ್ಯತೆ ಇದೆ.