Advertisement

ಮೀನುಗಾರರ ಸಹಾಯಕ್ಕೆ ಬರಲಿದ್ದಾರೆ ಸಾಗರ ಮಿತ್ರರು

12:42 PM Feb 12, 2022 | Team Udayavani |

ಮಹಾನಗರ : ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ “ಸಾಗರ ಮಿತ್ರ’ ಪರಿಕಲ್ಪನೆ ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಅನುಷ್ಠಾನ ಗೊಳ್ಳುತ್ತಿದೆ. ಮೀನುಗಾರರು ಮತ್ತು ಮೀನುಗಾರಿಕೆ ಇಲಾಖೆಯ ನಡುವೆ ಸಂಪರ್ಕ ಸೇತುವಾಗಿ “ಸಾಗರ ಮಿತ್ರ’ರು ಬರಲಿದ್ದಾರೆ.

Advertisement

ದ.ಕ., ಉಡುಪಿ ಮತ್ತು ಉತ್ತರ ಕನ್ನಡದ 320 ಕಿ.ಮೀ. ವ್ಯಾಪ್ತಿಯ 162 ಮೀನುಗಾರಿಕೆ ಗ್ರಾಮಗಳಿಗೆ ಸಂಬಂಧಿಸಿ 120 ಸಾಗರ ಮಿತ್ರರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭಗೊಂಡಿದೆ. ದ.ಕ.ಕ್ಕೆ 14, ಉಡುಪಿಗೆ 50, ಉತ್ತರ ಕನ್ನಡದ 54 ಸಾಗರಮಿತ್ರರು ಬರಲಿದ್ದಾರೆ. ಮೀನುಗಾರಿಕೆ ಮಹಾವಿದ್ಯಾ ಲಯದ ಸಹಯೋಗದಲ್ಲಿ ಮೀನು ಗಾರಿಕೆ ಇಲಾಖೆ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ.

ಏನಿದು ಸಾಗರ ಮಿತ್ರ?
ಗ್ರಾಮಗಳಲ್ಲಿ ಹಿಂದೆ ಗ್ರಾಮ ಸೇವಕರು ಕೃಷಿ ಇಲಾಖೆಯ ಕಾರ್ಯ ಕ್ರಮಗಳು, ಕೃಷಿಯ ಬಗ್ಗೆ ರೈತರಿಗೆ ಮಾಹಿತಿ, ನೆರವು ನೀಡುತ್ತಿದ್ದರು. “ಸಾಗರಮಿತ್ರ’ ಇದೇ ಪರಿಕಲ್ಪನೆಯಲ್ಲಿದೆ.

ಮೀನುಗಾರರಿಗೆ ಸುಸ್ಥಿರ ಮೀನುಗಾರಿಕೆ, ಸರಕಾರದ ಸೌಲಭ್ಯ,ಯೋಜನೆ ಗಳ ಬಗ್ಗೆ ಮಾಹಿತಿ ನೀಡುತ್ತಾರೆ.

ಮೀನುಗಾರರ ಬೇಡಿಕೆ ಮತ್ತು ಸೇವೆಗಳಿಗೆ ಸ್ಪಂದಿಸುವುದು ಸಾಗರ ಮಿತ್ರ ಪರಿಕಲ್ಪನೆಯ ಮೂಲ ಉದ್ದೇಶ. ಸ್ಥಳೀಯ ಮೀನುಗಾರರಿಗೆ ವಿವಿಧ ಯೋಜನೆಗಳ, ಕಾರ್ಯಕ್ರಮಗಳ ಬಗ್ಗೆ ತಿಳಿವಳಿಕೆ ಮೂಡಿಸುವುದು, ಸಂಪನ್ಮೂಲಗಳನ್ನು ಸಮರ್ಪಕವಾಗಿ ನಿರ್ವಹಿಸುವ ಬಗ್ಗೆ ಮಾಹಿತಿ ನೀಡು ವುದು, ಮೀನುಗಾರರಿಗೆ ಹವಾಮಾನ ಮುನ್ಸೂಚನೆ ಮತ್ತು ನೈಸ ರ್ಗಿಕ ವಿಪತ್ತುಗಳ ಬಗ್ಗೆ ಮಾಹಿತಿ, ತಾಜಾ ಮೀನುಗಳ ಸ್ವತ್ಛತೆ, ವೈಯಕ್ತಿಕ ಸ್ವತ್ಛತೆ, ಆರೋಗ್ಯಕರ ವಾತಾ ವರಣ ನಿರ್ವಹಣೆ ಬಗ್ಗೆ ತಿಳಿವಳಿಕೆ, ಮತ್ಸé ಸಂಪನ್ಮೂಲವನ್ನು ವ್ಯವಸ್ಥಿತ ವಾಗಿ ಸಂರಕ್ಷಿಸುವುದು, ಬಳಕೆ, ಕರಾವಳಿಯ ಪರಿಸರ ಸಂರಕ್ಷಣೆ, ಮೀನುಗಾರಿಕೆಯಲ್ಲಿ ನೀತಿ ಸಂಹಿತೆ, ಅಕ್ರಮ ಮೀನುಗಾರಿಕೆ ತಡೆಗೆ ಜಾಗೃತಿ, ಮೀನುಗಾರ ಮಹಿಳೆಯರ ಆರ್ಥಿಕತೆಯನ್ನು ಅಭಿವೃದ್ಧಿಪಡಿ ಸುವ ಬಗ್ಗೆ ಮಾಹಿತಿ, ತರಬೇತಿ, ಮೀನುಗಾರಿಕೆಗೆ ತೆರಳುವ ದೋಣಿ ಗಳು, ಮೀನಿನ ಉತ್ಪಾದನೆ, ಮೌಲ್ಯ, ಮಾರಾಟದ ವಿವರ ಸಂಗ್ರಹಿಸಿ ಪ್ರತೀ ದಿನ ಸರಕಾರಕ್ಕೆ ವರದಿ ನೀಡುವುದು ಮುಂತಾದ ಕರ್ತವ್ಯಗಳನ್ನು ಸಾಗರ ಮಿತ್ರರು ನಿರ್ವಹಿಸಲಿದ್ದಾರೆ.

Advertisement

ಒಂದು ಮೀನುಗಾರಿಕೆ ಗ್ರಾಮಕ್ಕೆ ಒಬ್ಬರಂತೆ ಸಾಗರ ಮಿತ್ರರನ್ನು ಗುತ್ತಿಗೆ ಆಧಾರದಲ್ಲಿ ಸೀಮಿತ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅವರಿಗೆ ಮಾಸಿಕ 15,000 ರೂ. ಸಂಭಾವನೆ ನೀಡಲಾಗುತ್ತದೆ. ವಿಜ್ಞಾನ ಪದವೀಧರ 35 ವರ್ಷದೊಳಗಿನ ವರನ್ನು ನೇಮಕಾತಿ ಮಾಡಿಕೊಳ್ಳ ಲಾಗುತ್ತಿದೆ. ಸ್ಥಳೀಯರಿಗೆ ಆದ್ಯತೆ ಇದ್ದು ಸ್ಥಳೀಯ ಭಾಷೆಯಲ್ಲಿ ಪರಿಣಾಮ ಕಾರಿಯಾಗಿ ವ್ಯವಹರಿಸುವ ಸಾಮರ್ಥ್ಯ ಹೊಂದಿರಬೇಕು.

“ಸಾಗರಮಿತ್ರ’ರ ನೇಮಕ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಸಂದರ್ಶನ ಪ್ರಕ್ರಿಯೆಗಳು ಸದ್ಯದಲ್ಲೇ ಮಂಗಳೂರು ಮೀನುಗಾರಿಕೆ ಕಾಲೇಜಿನಲ್ಲಿ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಮೀನುಗಾರಿಕೆ ಇಲಾಖೆಯಲ್ಲಿ ನಡೆಯಲಿರುವುದು ಎಂದು ದಕ್ಷಿಣ ಕನ್ನಡ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಹರೀಶ್‌ ಕುಮಾರ್‌ ತಿಳಿಸಿದ್ದಾರೆ.

ನೇಮಕಾತಿಗೆ ಅರ್ಜಿ ಆಹ್ವಾನ
ಮತ್ಸ್ಯ ಸಂಪದ ಯೋಜನೆಯಡಿಯಲ್ಲಿ ಮೀನುಗಾರಿಕೆಯ ಇಲಾಖೆಯಿಂದ “ಸಾಗರಮಿತ್ರ’ ಅನುಷ್ಠಾನಗೊಳ್ಳುತ್ತಿದ್ದು, ಮೀನುಗಾರಿಕೆ ಮಹಾವಿದ್ಯಾಲಯ ಇದಕ್ಕೆ ಜ್ಞಾನಸಹಯೋಗ ನೀಡುತ್ತಿದೆ. ಇಲಾಖೆಯನ್ನು ಮೀನುಗಾರರ ಬಳಿಗೆ ತರಲು “ಸಾಗರಮಿತ್ರ’ ಪರಿಕಲ್ಪನೆ ರೂಪುಗೊಂಡಿದೆ. ಸಾಗರಮಿತ್ರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, aaofishcol@gmail.com ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
– ಶಿವಕುಮಾರ್‌ ಮಗದ, ಮಂಗಳೂರು ಮೀನುಗಾರಿಕೆ ಮಹಾವಿದ್ಯಾಲಯದ ಡೀನ್‌

– ಕೇಶವ ಕುಂದರ್

Advertisement

Udayavani is now on Telegram. Click here to join our channel and stay updated with the latest news.

Next