Advertisement

ಜನಸ್ನೇಹಿ ಜಾತ್ರೆಗೆ ಚಿಂತನೆ: ಹಾಲಪ್ಪ

05:17 PM Feb 16, 2020 | Naveen |

ಸಾಗರ: ಈ ಬಾರಿ ಜನಸ್ನೇಹಿ ಹಾಗೂ ಬರುವ ಸಾರ್ವಜನಿಕರಿಗೆ ಹೊರೆಯಾಗದಂತೆ ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಮ್ಯೂಸ್‌ಮೆಂಟ್‌ ಪಾರ್ಕ್‌ನವರು ಟಿಕೆಟ್‌ ಶುಲ್ಕವನ್ನು 50 ರೂ.ಗಿಂತ ಹೆಚ್ಚು ಪಡೆಯುವಂತಿಲ್ಲ. ನಾಟಕ ಸೇರಿದಂತೆ ಇತರ ಮನೋರಂಜನೆಗಳ ವ್ಯವಸ್ಥಾಪಕರು ಸಹ 50 ರೂ.ಗಿಂತ ಹೆಚ್ಚಿನ ದರ ವಿಧಿಸದಂತೆ ಸೂಚನೆ ನೀಡಲಾಗಿದೆ ಎಂದು ಶಾಸಕ ಎಚ್‌. ಹಾಲಪ್ಪ ತಿಳಿಸಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 18ರಿಂದ 26ರವರೆಗೆ 9 ದಿನಗಳ ಕಾಲ ನಡೆಯುವ ಮಾರಿಕಾಂಬಾ ಜಾತ್ರೆಯನ್ನು ಯಶಸ್ವಿಯಾಗಿ ನಡೆಸಲು ನಗರಸಭೆ ಹಾಗೂ ತಾಲೂಕು ಆಡಳಿತದಿಂದ ಎಲ್ಲ ಸಿದ್ದತೆಗಳನ್ನು ನಡೆಸಲಾಗಿದೆ. 50 ರೂ. ಗಿಂತ ಕಡಿಮೆ ಟಿಕೆಟ್‌ ದರ ಇರಿಸಿದರೆ ಕಷ್ಟ. 50 ಸಾವಿರ ರೂ. ಬಾಡಿಗೆ ಹಾಗೂ ಪ್ರತಿ ದಿನ 65 ಜನರಿಗೆ ಊಟ ಉಪಚಾರ ನೋಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ 50 ರೂ. ಷರತ್ತಿನಿಂದ ನಮಗೆ ರಿಯಾಯಿತಿ ನೀಡಬೇಕು ಎಂದು ಸರ್ಕಸ್‌ನವರು ಕೇಳಿದ್ದಾರೆ. ಈ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ಆದರೆ ಅವರ ಮಾತನ್ನು ಸಹಾನುಭೂತಿಯಿಂದ ನೋಡಬೇಕಾಗಿದೆ ಎಂದರು.

ಹಿಂದಿನ ಎಲ್ಲ ಮಾರಿಕಾಂಬಾ ಜಾತ್ರೆಗಿಂತ ಈ ಬಾರಿ ಅತ್ಯಂತ ವಿಶೇಷವಾಗಿ ಜಾತ್ರೆಯನ್ನು
ಆಚರಿಸಲಾಗುತ್ತಿದ್ದು, ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ. ಸುಮಾರು 12 ಕೋಟಿ ರೂ. ವೆಚ್ಚದಲ್ಲಿ 42 ರಸ್ತೆಗಳ ಡಾಂಬರೀಕರಣ ಕಾಮಗಾರಿ ಕೈಗೊಂಡಿದ್ದು, ಅದರಲ್ಲಿ 32 ರಸ್ತೆ ಕಾಮಗಾರಿಗಳು ಮುಗಿದಿದೆ. ದೇವಸ್ಥಾನ ಸಂಪರ್ಕಿಸುವ ರಸ್ತೆಗಳ ಕಾಮಗಾರಿ ಪೂರೈಸಲಾಗಿದೆ. ನಗರದ ಹೊರ ಬಡಾವಣೆಗಳ ಆರೇಳು ಕಾಮಗಾರಿ ಇದೀಗ ಚಾಲನೆಗೊಂಡಿದೆ. ಇದರ ಜೊತೆಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಶರಾವತಿ ಹಿನ್ನೀರಿನ ಪಂಪ್‌ಹೌಸ್‌ಗೆ ಹೆಚ್ಚುವರಿ
ಪಂಪ್‌ ಖರೀದಿ ಮಾಡಲಾಗಿದೆ. ನಗರದಲ್ಲಿ 500ಕ್ಕೂ ಹೆಚ್ಚು ಎಲ್‌ ಇಡಿ ಬೀದಿದೀಪ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ. ಹೆಚ್ಚುವರಿಯಾಗಿ ಅಗತ್ಯ ಇರುವ ಕಡೆಗಳಲ್ಲಿ ನೀರು ಸರಬರಾಜು ಮಾಡಲು 20 ಟ್ಯಾಂಕರ್‌ ತಂದಿರಿಸಲಾಗಿದೆ. ಸ್ವಚ್ಛತೆಗಾಗಿ 1 ತಿಂಗಳ ಅವಧಿಗೆ 30 ಹಂಗಾಮಿ ಪೌರ ಕಾರ್ಮಿಕರ ನೇಮಕ ಆಗಿದೆ. 20 ಮೊಬೈಲ್‌ ಟಾಯ್ಲೆಟ್‌ ವ್ಯವಸ್ಥೆ
ಮಾಡಲಾಗಿದ್ದು, ಈಗಾಗಲೇ 10 ನಗರಕ್ಕೆ ಆಗಮಿಸಿವೆ. 1 ಹೆಚ್ಚುವರಿ ಅಗ್ನಿಶಾಮಕ ವಾಹನವನ್ನು ನಗರಸಭೆ ಅಥವಾ ಲೋಕೋಪಯೋಗಿ ಕಚೇರಿ ಪಕ್ಕದಲ್ಲಿ 24 ಗಂಟೆ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗುತ್ತಿದೆ ಎಂದರು.

ಸುರಕ್ಷತೆ ದೃಷ್ಟಿಯಿಂದ ಹೆಚ್ಚುವರಿ ಪೊಲೀಸರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ. ನಗರದ ಎಸ್‌.ಎನ್‌. ನಗರ, ಶಾಂತಿನಗರ, ರಾಮನಗರ, ಇಕ್ಕೇರಿ ಸರ್ಕಲ್‌, ವರದಹಳ್ಳಿ ವೃತ್ತ, ಶ್ರೀಧರ ನಗರ, ಗೋಪಾಲಗೌಡ ನಗರ ಇನ್ನಿತರ ಕಡೆಗಳಿಂದ ಜಾತ್ರೆಗೆ ಬರುವ ಭಕ್ತರಿಗೆ ನಗರ ಸಾರಿಗೆ, ಆನಂದಪುರ, ತ್ಯಾಗರ್ತಿ, ಉಳವಿ, ಕೆಳದಿ, ಆವಿನಹಳ್ಳಿ, ಎಡಜಿಗಳೇಮನೆ, ಹೆಗ್ಗೋಡು, ಬಟ್ಟೆಮಲ್ಲಪ್ಪ ಇನ್ನಿತರ ಭಾಗಗಳಿಂದ ಬರುವವರಿಗೆ ಗ್ರಾಮೀಣ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಬೆಳಗೆ 8 ಗಂಟೆಯಿಂದ ರಾತ್ರಿಯವರೆಗೆ ಈ ಬಸ್‌ಗಳಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಇದರ ಜೊತೆಗೆ ಬೆಂಗಳೂರು ಸೇರಿದಂತೆ ದೂರದ ಊರಿನಿಂದ ಜಾತ್ರೆಗೆ ಬರುವವರಿಗಾಗಿ ವಿಶೇಷ ಬಸ್‌ ವ್ಯವಸ್ಥೆಯನ್ನು ಕಲ್ಪಿಸಲು ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರಿಗೆ ಮನವಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರ ಅಧ್ಯಕ್ಷ ಕೆ.ಆರ್‌. ಗಣೇಶಪ್ರಸಾದ್‌, ತಾಲೂಕು ಅಧ್ಯಕ್ಷ ಲೋಕನಾಥ್‌ ಬಿಳಿಸಿರಿ, ಪ್ರಮುಖರಾದ ದೇವೇಂದ್ರಪ್ಪ, ತುಕಾರಾಮ್‌, ಲಿಂಗರಾಜ್‌, ಮೈತ್ರಿ
ಪಾಟೀಲ್‌, ಸಂತೋಷ್‌ ಶೇಟ್‌, ರಾಮು, ಕೆ.ಎನ್‌. ನಾಗೇಂದ್ರ, ನಾಗೇಂದ್ರ ಕುಮಟಾ, ಶಂಕರ ಅಳವಿಕೋಡು, ಸತೀಶ್‌ ಮೊಗವೀರ, ಅರುಣ ಕುಗ್ವೆ, ಶ್ರೀರಾಮ್‌, ಸರೋಜ ಭಂಡಾರಿ, ಪೌರಾಯುಕ್ತ ಎಸ್‌. ರಾಜು, ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್‌ ರಾಜಪ್ಪ ಇನ್ನಿತರರು ಇದ್ದರು .

Advertisement
Advertisement

Udayavani is now on Telegram. Click here to join our channel and stay updated with the latest news.

Next