Advertisement

ಸಿಗದ ತುರ್ತು ಆರೋಗ್ಯ ವಾಹನ ; ಉಸಿರಾಟದ ಸಮಸ್ಯೆಯಿಂದ 45 ದಿನದ ಮಗು ಸಾವು

08:49 PM Feb 09, 2022 | Team Udayavani |

ಸಾಗರ : ತಾಲೂಕಿನ ತುಮರಿ ಮಾನವ ನಿರ್ಮಿತ ದ್ವೀಪದಲ್ಲಿ 108 ಅವ್ಯವಸ್ಥೆ ಹೊಸ ಆಂಬುಲೆನ್ಸ್ ಬಂದರೂ ಸಕಾಲಕ್ಕೆ ತುರ್ತು ಆರೋಗ್ಯ ವಾಹನ ಸಿಗದೆ 45 ದಿನಗಳ ಮಗು ಉಸಿರಾಟ ಸಮಸ್ಯೆಯಿಂದ ಮೃತ ಪಟ್ಟ ಘಟನೆ ಮಂಗಳವಾರ ರಾತ್ರಿ ಬ್ಯಾಕೋಡು ಸಮೀಪದ ಸಸಿಗೊಳ್ಳಿಯಲ್ಲಿ ನಡೆದಿದೆ.

Advertisement

ಕಳೆದ ನಾಲ್ಕು ದಿನದಿಂದ ದ್ವೀಪದ ಹೊಸ ಆಂಬುಲೆನ್ಸ್ ಸೇವೆಯಲ್ಲಿ ಇಲ್ಲದ ಹಿನ್ನೆಲೆಯಲ್ಲಿ ಸಸಿಗೊಳ್ಳಿ ಸಮೀಪದ ಎಲ್ದಮಕ್ಕಿ ಹಳ್ಳಿಯ ಗೀತಾ ಮತ್ತು ಉಮೇಶ್ ದಂಪತಿಗಳ 45 ದಿನಗಳ ಹಸುಗೂಸಿಗೆ ಉಸಿರಾಟ ತೊಂದರೆಯಾಗಿ 108 ಅಲಭ್ಯತೆಯಿಂದ ತಡವಾಗಿ ಆಸ್ಪತ್ರೆ ಸೇರಿಸಿದ್ದು ಹೊಸನಗರ ಆಸ್ಪತ್ರೆಯಲ್ಲಿ ಮಗು ತಡರಾತ್ರಿ 2 ಘಂಟೆಗೆ ಸಾವನಪ್ಪಿದೆ.

ಈ ಪ್ರಕರಣದಿಂದ ದ್ವೀಪದಲ್ಲಿ 108 ಅವ್ಯವಸ್ಥೆಯಿಂದ ಪ್ರಾಣ ಬಿಟ್ಟಿರುವವರ ಸಂಖ್ಯೆ ಮೂರಕ್ಕೆ ಏರಿದ್ದು ಈ ಹಿಂದೆ ನವಜಾತ ಶಿಶು ಮತ್ತು ಕಾರ್ಮಿಕ ನಾರಾಯಣ್ ಅಫಘಾತದಿಂದ ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಸಿಗದೆ ಸಾವನಪ್ಪಿದ್ದರು. ಜೋಡಿ ಸಾವುಗಳ ನಂತರ ಜನಪರ ಹೋರಾಟ ವೇದಿಕೆ ನೇತೃತ್ವದಲ್ಲಿ ಹೊಸ ಆಂಬುಲೆನ್ಸ್ ಗೆ ಬೇಡಿಕೆ ಆಗ್ರಹಿಸಿ ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಪ್ರತಿಭಟನೆ ನಡೆಸಲಾಗಿತ್ತು. ಈಚೆಗೆ ವೆಂಟಿಲೇಟರ್ ಇರುವ ಹೊಸ 108 ಆಂಬುಲೆನ್ಸ್ ದ್ವೀಪಕ್ಕೆ ಲಭ್ಯವಾಗಿತ್ತು.

ಆದರೆ ಕಳೆದ ಮೂರು ದಿನಗಳಿಂದ 108 ಆಂಬುಲೆನ್ಸ್ ವಾಹನ ದ್ವೀಪದಲ್ಲಿ ಲಭ್ಯವಿಲ್ಲವಾಗಿದೆ. ಹೊಸ ವಾಹನ ಸರ್ವಿಸ್‌ಗೆ ಹೋಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ. ಆಂಬುಲೆನ್ಸ್ ಅವ್ಯವಸ್ಥೆಯಿಂದ ಈಗಾಗಲೇ ಪ್ರಾಣ ಹಾನಿ ಆಗಿದ್ದರೂ ಕೂಡ ದ್ವೀಪದಂತ ಪರಿಸ್ಥಿತಿಯಲ್ಲಿ ಬದಲಿ ವಾಹನ ಇಡದೆ ಎರಡು ಮೂರು ದಿನಗಳು 108 ಸೇವೆ ಸ್ಥಗಿತಗೊಳಿಸುವ ಬಗ್ಗೆ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತುಮರಿ ಗ್ರಾಪಂ ಮಾಜಿ ಅಧ್ಯಕ್ಷ, ಸಾಮಾಜಿಕ ಕಾರ್ಯಕರ್ತ ಜಿ.ಟಿ. ಸತ್ಯನಾರಾಯಣ ಕರೂರು, ದ್ವೀಪದ 108 ಸೇರಿ ಆರೋಗ್ಯ ಸೇವೆಯಲ್ಲಿ ವ್ಯಾಪಕ ವ್ಯತ್ಯಯವಾಗುತ್ತಾ ಇದ್ದು ಖಾಲಿ ಹುದ್ದೆಗಳನ್ನು ತುಂಬಿಲ್ಲ, ಆಂಬುಲೆನ್ಸ್ ಸೇವೆ ಅಸಮರ್ಪಕತೆಯಿಂದ ಜನರ ಜೀವದ ಜತೆ ಆರೋಗ್ಯ ಇಲಾಖೆ ಆಟ ಆಡುತ್ತಾ ಇದೆ. ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Advertisement

ಇದನ್ನೂ ಓದಿ : ಮಂಗಳೂರು ವೇಶ್ಯಾವಾಟಿಕೆ ದಂಧೆ ಪ್ರಕರಣ ಪೊಲೀಸರಿಂದ ಮತ್ತೆ 7 ಮಂದಿ ಬಂಧನ

ನಾವು ಸಂಜೆ 6 ರಿಂದ 8 ಘಂಟೆ ತನಕ 108 ಗೆ ನಿರಂತರ ಕರೆ ಮಾಡಿದೆವು. ತುಮರಿ ವಾಹನ ಲಭ್ಯ ಇಲ್ಲ ಎಂದು ಉತ್ತರಿಸಿದರು. ನಗರ ಹೊಸನಗರದಿಂದ 108 ಬರಲೇ ಇಲ್ಲ.
– ಉಮೇಶ್ ಯಲ್ಡಮಕ್ಕಿ, ಮೃತ ಮಗುವಿನ ತಂದೆ

ಈ ಪ್ರಕರಣ ನನ್ನ ಗಮನಕ್ಕೆ ಬಂದಿದೆ. 108 ವಾಹನ ಹೀಗೆ ಅವ್ಯವಸ್ಥೆ ಆಗಿರುವುದರ ಬಗ್ಗೆ ಸೂಕ್ತ ತನಿಖೆ ನಡೆಸುತ್ತೇವೆ. 108 ಏಜೆನ್ಸಿಗಳ ಮೇಲೆ ನೇರ ನಿಯಂತ್ರಣ ಇಲ್ಲದೆ ಇರುವ ಕಾರಣ ಕಾರ್ಯ ನಿರ್ವಹಣೆಯಲ್ಲಿ ತೊಡಕಾಗುತ್ತಾ ಇದೆ.
– ಡಾ. ರಾಜೇಶ್ ಸುರುಗಿಹಳ್ಳಿ, ಜಿಲ್ಲಾ ಆರೋಗ್ಯ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next