ಮಸ್ಕಿ: ಕಳೆದ ಮೂರು ದಶಕಗಳ ಬೇಡಿಕೆಯಾದ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಯತವತ್ತಾಗಿ ಜಾರಿಗೊಳಿಸುವಂತೆ ಆಗ್ರಹಿಸಿ ಮಾದಿಗ, ಮೋಚಿ, ಸಮಗಾರ ಸೇರಿದಂತೆ ದಲಿತ ಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಸೋಮವಾರ ಪಟ್ಟಣದಲ್ಲಿ ಬೃಹತ್ ರ್ಯಾಲಿ ನಡೆಸಲಾಯಿತು.
ಪಟ್ಟಣದ ಗಾಂಧಿ ನಗರದಿಂದ ಆರಂಭವಾದ ರ್ಯಾಲಿ ಅಶೋಕ ವೃತ್ತ, ಡಾ| ಖಲೀಲ್ ವೃತ್ತ, ದೈವದಕಟ್ಟೆ, ಕನಕವೃತ್ತದ ಮೂಲಕ ಸಾಗಿ ಹಳೆಯ ಬಸ್ ನಿಲ್ದಾಣದ ಬಳಿಯ ಡಾ| ಬಿ.ಆರ್. ಅಂಬೇಡ್ಕರ್ ಪ್ರತಿಮೆ ಸ್ಥಳಕ್ಕೆ ಆಗಮಿಸಿತು. ರ್ಯಾಲಿಯುದ್ದಕ್ಕೂ ಸದಾಶಿವ ಆಯೋಗದ ವರದಿಗೆ ಜಾರಿಗೆ ವಿಳಂಬ ಮಾಡುತ್ತಿರುವ ರಾಜಕೀಯ ಪಕ್ಷಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟ ಸಮಿತಿ ಮುಖಂಡರು ಮಾತನಾಡಿ, ಸಂವಿಧಾನ ಬದ್ಧವಾಗಿ ಸಿಗಬೇಕಾದ ಸೌಲಭ್ಯವನ್ನು ಕೇಳಲು ಕಳೆದ 30 ವರ್ಷಗಳಿಂದ ಬೀದಿಯಲ್ಲಿ ಹೋರಾಟ ಮಾಡುತ್ತಿದ್ದೇವೆ. ಆದರೆ ಅಂದಿನಿಂದ ಈವರೆಗೆ ನಮ್ಮನ್ನಾಳಿರುವ ಸರ್ಕಾರಗಳು ಹೋರಾಟವನ್ನು ಕಡೆಗಣಿಸಿವೆ. ಆದ್ದರಿಂದ ನಮ್ಮ ಹೋರಾಟದ ರೋಪರೇಷೆಗಳನ್ನು ಬದಲಿಸಿಕೊಂಡು ವಿಧಾನಸೌಧದ ಮೂರನೇ ಮಹಡಿಗೆ ಹೋರಾಟ ಮಾಡೋಣ ಎಂದು ಕರೆ ನೀಡಿ ಚುನಾಯಿತ ಜನಪ್ರತಿನಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ನ್ಯಾ| ಸದಾಶಿವ ಆಯೋಗದ ವರದಿ ಸಂವಿಧಾನ ಬದ್ಧವಾಗಿದೆ. ವರದಿಯನ್ನು ವಿರೋಧಿಸುವವರು ಸಂವಿಧಾನದ ವಿರೋಧಿಗಳು. ರಾಜ್ಯದಲ್ಲಿ ಪ್ರತಿನಿತ್ಯ ದಲಿತರ ಮೇಲೆ ನಿರಂತರ ದೌರ್ಜನ್ಯಗಳು ನಡೆಯತ್ತಿವೆ. ಆದರೆ ಸರ್ಕಾರಗಳು ಮಾತ್ರ ಇದನ್ನು ನೋಡಿಕೊಂಡು ಸುಮ್ಮನೆ ಕುಳಿತಿವೆ. ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಎಲ್ಲ ರಾಜಕೀಯ ಪಕ್ಷಗಳು ವರದಿ ಜಾರಿ ಬಗ್ಗೆ ಹೇಳುತ್ತಿವೆ ಹೊರತು ಜಾರಿ ಮಾಡಲು ಮುಂದೆ ಬರುತ್ತಿಲ್ಲ. ಕೂಡಲೇ ವರದಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಲಿಂಗಸಗೂರಿನ ಸಹಾಯಕ ಆಯುಕ್ತ ರಾಹುಲ್ ಸಂಕನೂರು ಆಗಮಿಸಿ ಮನವಿ ಸ್ವೀಕರಿಸಿದರು. ದಲಿತ ಸಾಹಿತಿ ದಾನಪ್ಪ ನಿಲೋಗಲ್, ಮುಖಂಡರಾದ ದೊಡ್ಡಪ್ಪ ಮುರಾರಿ, ಎಚ್.ಬಿ.ಮುರಾರಿ, ಪಾಮಯ್ಯ ಮುರಾರಿ, ದುರಗಪ್ಪ ಗುಡಗಲದಿನ್ನಿ, ದೊಡ್ಡ ಕರಿಯಪ್ಪ, ಹನುಮಂತಪ್ಪ ಮೋಚಿ, ಹನುಮಂತಪ್ಪ ಮುದ್ದಾಪೂರ, ಹನುಮಂತಪ್ಪ ಪರಾಪೂರ, ಮಲ್ಲಯ್ಯ ಬಳ್ಳಾ, ಹನುಮಂತಪ್ಪ ವೆಂಕಟಾಪೂರ, ತಿಕ್ಕಯ್ಯ ಬಿ. ಮಲ್ಲಪ್ಪ ಗೋನಾಳ, ಹನುಮಂತಪ್ಪ ಮೋಚಿ, ಮೌನೇಶ ಮುರಾರಿ, ಅಶೋಕ ಮುರಾರಿ, ದುರ್ಗರಾಜ ವಟಗಲ್, ಬಸವರಾಜ ಉದ್ಬಾಳ್, ಸಂತೋಷ ಹಿರೇದಿನ್ನಿ ಸೇರಿದಂತೆ ಮಾದಿಗ, ಛಲುವಾದಿ, ಸಮಗಾರ, ಮೀಸಲಾತಿ ಒಳಪಡುವ ಸಮುದಾಯಗಳು, ಮಹಿಳೆಯರು ಹಾಗೂ ಯುವಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.