Advertisement

ಕೃಷ್ಣ ಬೈರೇಗೌಡ ಸೋಲಿಸಿ ಸತತ 2ನೇ ಬಾರಿಗೆ ಗೆದ್ದ ಸದಾನಂದ ಗೌಡ

12:24 AM May 24, 2019 | Lakshmi GovindaRaj |

ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತೆ ಕೇಕೆ ಹಾಕಿದೆ. ಸತತ 2ನೇ ಬಾರಿಗೆ ಕಣಕ್ಕಿಳಿದಿದ್ದ ಹಾಲಿ ಸಂಸದ ಡಿ.ವಿ.ಸದಾನಂದಗೌಡ, ಕಾಂಗ್ರೆಸ್‌ನ ಅಭ್ಯರ್ಥಿ ಕೃಷ್ಣಬೈರೇಗೌಡ ಅವರನ್ನು 1,47,518 ಮತಗಳಿಂದ ಮಣಿಸಿ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ.

Advertisement

ತೀವ್ರ ಹಣಾಹಣಿಯಿಂದ ಕೂಡಿ ಸ್ಪರ್ಧೆಯಲ್ಲಿ ಸದಾನಂದಗೌಡ 8,24,500, ಕೃಷ್ಣಬೈರೇಗೌಡ 6,76,982 ಮತ ಗಳಿಸಿದ್ದಾರೆ. 2014ರಲ್ಲಿ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಡಿವಿಎಸ್‌ 7,18,326 (ಶೇ.52ರಷ್ಟು) ಮತ ಪಡೆದು, 4,88,562 (ಶೇ.35.99) ಮತ ಪಡೆದ ಕಾಂಗ್ರೆಸ್‌ನ ಎನ್‌.ಸಿ.ನಾರಾಯಣಸ್ವಾಮಿ ಅವರನ್ನು ಮಣಿಸಿದ್ದರು.

ಈ ಹಿಂದೆ ಈ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಕೇಂದ್ರ ಮಾಜಿ ರೈಲ್ವೆ ಸಚಿವ ಸಿ.ಕೆ.ಜಾಫ‌ರ್‌ ಷರೀಫ್ ಕಣಕ್ಕಿಳಿಯುತ್ತಿದ್ದರು. 2004ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಚ್‌.ಟಿ.ಸಾಂಗ್ಲಿಯಾನ, ಜಾಫ‌ರ್‌ ಶರೀಫ್ ಅವರನ್ನು ಸೋಲಿಸಿ ಬಿಜೆಪಿಗೆ ನೆಲೆ ತಂದುಕೊಟ್ಟಿದ್ದರು.

ಬಳಿಕ 2009ರ ಚುನಾವಣೆಯಲ್ಲಿ ಡಿ.ಬಿ.ಚಂದ್ರೇಗೌಡ ಜಯಭೇರಿ ಬಾರಿಸಿದ್ದರು. 2014ರಿಂದ ಡಿ.ವಿ.ಸದಾನಂದಗೌಡ ಈ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್‌ನ ಇಬ್ಬರು ಮತ್ತು ಕಾಂಗ್ರೆಸ್‌ನ ಐವರು ಶಾಸಕರಿದ್ದರೂ, ಬಿಜೆಪಿಯ ನಾಗಲೋಟಕ್ಕೆ ಕಡಿವಾಣ ಹಾಕಲಾಗಲಿಲ್ಲ.

ಈ ಕ್ಷೇತ್ರದಲ್ಲಿ ಬಿಜೆಪಿ ಓರ್ವ ಶಾಸಕನನ್ನು ಹೊಂದಿದೆ. ಸದಾನಂದಗೌಡ ಅವರ ಗೆಲುವು ಖಚಿತವಾಗುತ್ತಿದ್ದಂತೆ ಅಭಿಮಾನಿಗಳು ಮತ ಏಣಿಕೆ ನಡೆಯುತ್ತಿದ್ದ ವಿಠಲ್‌ವುಲ್ಯ ರಸ್ತೆಯಲ್ಲಿರುವ ಸೆಂಟ್‌ ಜೋಸೆಫ್ ಇಂಡಿಯನ್‌ ಕಾಲೇಜು ಎದುರು ಸಂಭ್ರಮಿಸಿದರು. ಗೌಡರ ಭೂಪಸಂದ್ರದ ನಿವಾಸದಲ್ಲೂ ಪಟಾಕಿ ಸಿಡಿಸಿ, ಸಿಹಿ ಹಂಚಿ ಖುಷಿಪಟ್ಟರು.

Advertisement

ಇದು ಕಾರ್ಯಕರ್ತರ ಪರಿಶ್ರಮದ ಗೆಲುವು. ಪ್ರಧಾನಿ ನರೇಂದ್ರ ಮೋದಿ ಅವರ ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಜನರು ಮತ್ತೆ ಆಶೀರ್ವಾದ ಮಾಡಿದ್ದಾರೆ. ನನ್ನ ಗೆಲುವಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.
-ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ, ಬಿಜೆಪಿ ವಿಜೇತ ಅಭ್ಯರ್ಥಿ

ನನ್ನ ಮೇಲೆ ನಂಬಿಕೆ ಇಟ್ಟು ಬೆಂಬಲಿಸಿದ ಪಕ್ಷದ ಕಾರ್ಯ ಕರ್ತರಿಗೆ ಮತ್ತು ನಾಯಕರಿಗೆ ಧನ್ಯವಾದ ಸಲ್ಲಿಸುತ್ತೇನೆ. ರಾಜಕೀಯ ದಲ್ಲಿ ಏಳು-ಬೀಳು ಸಾಮಾನ್ಯವಾಗಿದೆ. ಸದಾನಂದ ಗೌಡರಿಗೆ ಅಭಿನಂದನೆ ಹೇಳುತ್ತೇನೆ.
-ಕೃಷ್ಣಬೈರೇಗೌಡ, ಗ್ರಾಮೀಣಾಭಿವೃದ್ಧಿ ಸಚಿವ, ಕಾಂಗ್ರೆಸ್‌ ಪರಾಜಿತ ಅಭ್ಯರ್ಥಿ

ಬೆಂಗಳೂರು ಉತ್ತರ (ಬಿಜೆಪಿ)
-ವಿಜೇತರು ಡಿ.ವಿ.ಸದಾನಂದಗೌಡ
-ಪಡೆದ ಮತ 8,24,500
-ಎದುರಾಳಿ ಕೃಷ್ಣ ಬೈರೇಗೌಡ (ಕಾಂಗ್ರೆಸ್‌)
-ಪಡೆದ ಮತ 6,76,982
-ಗೆಲುವಿನ ಅಂತರ 1,47,518

ಗೆಲುವಿಗೆ 3 ಕಾರಣ
-ಪ್ರಧಾನಿ ನರೇಂದ್ರ ಮೋದಿ ಪರವಾದ ಅಲೆ, ಹಿಂದಿ ಭಾಷಿಕರೂ ಹೆಚ್ಚಿನ ಸಂಖ್ಯೆಯಲ್ಲಿದದ್ದು
-ನಗರ ಮತ್ತು ಗ್ರಾಮೀಣ ಪ್ರದೇಶಗಳ ಮತಗಳೂ ಸಿಕ್ಕಿದ್ದು
-ಉಪನಗರ ರೈಲು ಯೋಜನೆ ಸೇರಿದಂತೆ ಕೇಂದ್ರ ಸರ್ಕಾರದ ಹಲವು ಯೋಜನೆಗಳು

ಸೋಲಿಗೆ 3 ಕಾರಣ
-ಮೈತ್ರಿ ಕೂಟದ ಅಭ್ಯರ್ಥಿ ಆಯ್ಕೆ ಗೊಂದಲ.
-ದೇವೇಗೌಡರು ಈ ಕ್ಷೇತ್ರದಲ್ಲಿ ಸ್ಪರ್ಧಿಸದೇ ಇರುವುದು
-ಮೈತ್ರಿ ಕೂಟದ ಕಾರ್ಯಕರ್ತರ ಹೊಂದಾಣಿಕೆ ಕೊರತೆ

Advertisement

Udayavani is now on Telegram. Click here to join our channel and stay updated with the latest news.

Next