ಮುಂಬಯಿ: ಮಾತೃಭೂಮಿ ಸೌಹಾರ್ದ ಸಹಕಾರಿ ನಿಯಮಿತ ಹಾಗೂ ದಿಲ್ಲಿಯ ಬಿಬಿಪಿಐ ಸಹಯೋಗದೊಂದಿಗೆ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಭಾರತೀಯ ಜನೌಷಧ ಪರಿಯೋಜನೆಯ ಮಾಹಿತಿ ಕಾರ್ಯಾಗಾರ ಹಾಗೂ ಜನೌಷಧ ಕೇಂದ್ರಗಳ ಲೋಕಾರ್ಪಣೆ ಕಾರ್ಯಕ್ರಮವು ಎ. 22ರಂದು ಮಂಗಳೂರಿನ ಕನ್ವೆಷನ್ ಸೆಂಟರ್‌ನಲ್ಲಿ ನಡೆಯಿತು.
ಇದೇ ಸಂದರ್ಭದಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಲು ವಿಶೇಷವಾಗಿ ಸಹಕರಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದ ಮುಂಬಯಿ ಉದ್ಯಮಿ, ಯುವ ಬಿಜೆಪಿ ನೇತಾರ, ಸಮಾಜ ಸೇವಕ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು ಅವರನ್ನು ಅತ್ಯುತ್ತಮ ಸ್ವಯಂ ಸೇವಕ ಪುರಸ್ಕಾರವನ್ನಿತ್ತು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತ್ ಕುಮಾರ್ ಮತ್ತು ಸಂಸದ ನಳಿನ್ ಕುಮಾರ್ ಕಟೀಲು ಅವರು ಗೌರವಿಸಿದರು.
ಸಮಾರಂಭದ ವೇದಿಕೆಯಲ್ಲಿ ಕುಡಿಯುವ ನೀರು ಹಾಗೂ ನೈರ್ಮಲ್ಯ ಖಾತೆ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ, ವಿಧಾನ ಪರಿಷತ್ ವಿಪಕ್ಷ ಸಚೇತಕ ಕ್ಯಾ| ಗಣೇಶ್ ಕಾರ್ಣಿಕ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಬಿಪಿಪಿಐ ಮಹಾನಿರ್ದೇಶಕ ರೋಹಿತ್ ಮೆಹ್ರಾ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಉಪಾಧ್ಯಕ್ಷ ಯು. ರಾಜೀವ್ ಅವರು ಉಪಸ್ಥಿತರಿದ್ದರು.
ಮಾತೃಭೂಮಿ ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷ ಭಾಸ್ಕರ್ ದೇವಸ್ಯ ಸ್ವಾಗತಿಸಿದರು. ಉಪಾಧ್ಯಕ್ಷ ಕೆ. ಟಿ. ಸುವರ್ಣ, ಕೃಷ್ಣ ಕೊಂಪದವು, ಸಂಘದ ನಿರ್ದೇಶಕರು ಉಪಸ್ಥಿತರಿದ್ದರು. ಕದ್ರಿ ನವನೀತ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 100 ಜನೌಷಧ ಕೇಂದ್ರಗಳನ್ನು ಆರಂಭಿಸಲು ದಿಲ್ಲಿಯ ಬಿಪಿಪಿಐಯೊಂದಿಗೆ ಮಾತೃಭೂಮಿ ಸೌಹಾರ್ದ ಸಹಕಾರಿ ಸಂಸ್ಥೆ ಒಡಂಬಡಿಕೆ ಮಾಡಿಕೊಂಡಿದೆ.
ಕೇಂದ್ರಗಳು ಈಗಾಗಲೇ ಆರಂಭಗೊಂಡಿವೆ. ಜನೌಷಧ ಕೇಂದ್ರಗಳ ಮೂಲಕ ಎಲ್ಲ ಕಾಯಿಲೆಗಳಿಗೆ ಅವಶ್ಯ ಔಷಧಗಳು ಅತ್ಯಂತ ಅಗ್ಗದ ದರದಲ್ಲಿ ಜನರಿಗೆ ದೊರೆಯುತ್ತವೆ. ರಕ್ತದೊತ್ತಡ, ಕರುಳು ಸಂಬಂಧಿ ರೋಗ, ಆ್ಯಂಟಿ ಬಯೋಟಿಕ್ಸ್ ಸೇರಿದಂತೆ 500ಕ್ಕೂ ಹೆಚ್ಚು ಔಷಧಗಳು ಇಲ್ಲಿ ಲಭ್ಯವಿವೆ ಎಂದು ಇದೇ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಅವರು ತಿಳಿಸಿದರು.