ತಿರುವನಂತಪುರ/ಕೊಚ್ಚಿ: ಶಬರಿಮಲೆ ದೇಗುಲ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರಾಕರಿಸುವ ಕೇರಳ ಸರ್ಕಾರದ ನಿರ್ಧಾರ ಪ್ರಶ್ನಿಸಿ ಮುಜರಾಯಿ ಸಚಿವ ಕಡಕಂಪಲ್ಲಿ ಸುರೇಂದ್ರನ್ ನಿವಾಸದ ಎದುರು ಬಿಜೆಪಿ ಯುವ ಮೋರ್ಚಾ ನಡೆಸುತ್ತಿದ್ದ ಪ್ರತಿಭಟನೆ ಹಿಂಸೆಗೆ ತಿರುಗಿದೆ. ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಘೋಷಣೆ ಕೂಗುತ್ತಿದ್ದ ಯುವ ಮೋರ್ಚಾ ಕಾರ್ಯಕರ್ತರು ಸರ್ಕಾರದ ನಿರ್ಧಾರ ಖಂಡಿಸುವ ಘೋಷಣೆ ಹಾಕುತ್ತಿದ್ದರು. ಇದೇ ಸಂದರ್ಭದಲ್ಲಿ ಪತಿಭಟನಾಕಾರರನ್ನು ಚದುರಿಸಲು ಜಲಫಿರಂಗಿ, ಅಶ್ರುವಾಯು ಸೆಲ್ ಪ್ರಯೋಗಿಸಿದ್ದಾರೆ. ಮತ್ತೂಂದೆಡೆ ಆರ್‌ಎಸ್‌ಎಸ್ ನಾಯಕರು 2006ರಲ್ಲಿ ಶಬರಿಮಲೆ ದೇಗುಲಕ್ಕೆ ಎಲ್ಲಾ ವಯೋಮಿತಿಯ ಮಹಿಳೆಯರು ಪ್ರವೇಶಿಸಬೇಕು ಎಂಬ ಬಗ್ಗೆ ಆರ್‌ಎಸ್‌ಎಸ್ ನಾಯಕರು 2006ರಲ್ಲಿ ಅರ್ಜಿ ಸಲ್ಲಿಸಿದ್ದರು ಎಂದು ಮುಜರಾಯಿ ಸಚಿವ ಕಡಕಂಪಲ್ಲಿ ಸುರೇಂದ್ರನ್ ಕೊಚ್ಚಿಯಲ್ಲಿ ತಿಳಿಸಿದ್ದಾರೆ. ಇದೇ ವೇಳೆ ಕೇರಳದ ಅಲ್ಲಲ್ಲಿ ಸುಪ್ರೀಂಕೋರ್ಟ್ ಸೆ.28ರಂದು ನೀಡಿದ ತೀರ್ಪು ಖಂಡಿಸಿ ಪ್ರತಿಭಟನೆಗಳು ಮುಂದುವರಿದಿವೆ.