Advertisement

ಶಬರಿಮಲೆಯಲ್ಲಿ ರಾಜ್ಯದ ಅಯ್ಯಪ್ಪ ಭಕ್ತರ ಸಮಸ್ಯೆ ಕೇಳೋರಿಲ್ಲ

06:05 AM Dec 07, 2017 | Team Udayavani |

ಶಬರಿಮಲೆ (ಪಂಪಾ): ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಹೋಗುವ ಕರ್ನಾಟಕದ ಲಕ್ಷಾಂತರ ಭಕ್ತರ ಸಮಸ್ಯೆ ಕೇಳ್ಳೋರೇ ಇಲ್ಲ. ಭಕ್ತರ ಅನುಕೂಲಕ್ಕಾಗಿ ಕೇರಳ ಸರ್ಕಾರದೊಂದಿಗೆ ಸಮನ್ವಯತೆ ಸಾಧಿಸಿ “ಸಹಾಯವಾಣಿ’ ಕೇಂದ್ರ ಸ್ಥಾಪಿಸಿ ಮೊಬೈಲ್‌ ಕ್ಲಿನಿಕ್‌ ಹಾಗೂ ತಜ್ಞ ವೈದ್ಯರ ತಂಡ ಕಳುಹಿಸುತ್ತಿದ್ದ ಮುಜರಾಯಿ ಇಲಾಖೆ ಈ ವರ್ಷವೂ ಇತ್ತ
ಗಮನಹರಿಸಿಲ್ಲ, ಈ ಬಗ್ಗೆ ಮಾಹಿತಿಯೂ ಇಲ್ಲ.

Advertisement

ಕಾಲು¤ಳಿತ ಮತ್ತಿತರ ದುರ್ಘ‌ಟನೆಗಳು ನಡೆದಾಗ ಎಚ್ಚೆತ್ತುಕೊಳ್ಳುವ ರಾಜ್ಯ ಸರ್ಕಾರ ಆ ನಂತರ ತಮಗೂ ಅಯ್ಯಪ್ಪಸ್ವಾಮಿ ಭಕ್ತರಿಗೂ ಸಂಬಂಧವೇ ಇಲ್ಲ ಎಂಬಂತೆ ಮೌನ ವಹಿಸುವಂತಾಗಿದೆ. ಹೀಗಾಗಿ, ನಿತ್ಯ ಲಕ್ಷಾಂತರ ಸಂಖ್ಯೆಯಲ್ಲಿ ಕರ್ನಾಟಕದಿಂದ ಶಬರಿ ಮಲೆಗೆ ಹೋಗುವ ಭಕ್ತರು ಆರೋಗ್ಯ ಸೇವೆ ಸೇರಿದಂತೆ ಇತರೆ ಮಾಹಿತಿ ಇಲ್ಲದೆ ಪರದಾಡುವಂತಾಗಿದೆ.

ಕ್ಲಿನಿಕ್‌ನಲ್ಲಿ ಭಾಷೆ ಸಮಸ್ಯೆ: ಪಂಪಾದಿಂದ ಸನ್ನಿದಾನಕ್ಕೆ ಬೆಟ್ಟ ಹತ್ತಿ ಹೋಗುವ ಕರ್ನಾಟಕದ ಭಕ್ತರು ವೈದ್ಯಕೀಯ ಸೇವೆಗಾಗಿ ಕೇರಳ ಸರ್ಕಾರದ ಆರೋಗ್ಯ ಇಲಾಖೆ ಸ್ಥಾಪಿಸಿರುವ ಕ್ಲಿನಿಕ್‌ಗಳ ಮೊರೆ ಹೋಗು ವಂತಾಗಿದೆ. ಭಾಷೆ ಸಮಸ್ಯೆಯಿಂದ ತಮಗಾಗುವ ತೊಂದರೆ ಹೇಳಿಕೊಂಡು ಸೂಕ್ತ ಚಿಕಿತ್ಸೆ ಪಡೆಯುವಷ್ಟರಲ್ಲಿ ಸಾಕು ಸಾಕಾಗುತ್ತಿದೆ.

ಭಕ್ತರಿಗಿಲ್ಲ ವಾಸ್ತವಾಂಶದ ಮಾಹಿತಿ: ಇತ್ತೀಚೆಗೆ ಒಖೀ ಚಂಡಮಾರುತ ಹಿನ್ನೆಲೆಯಲ್ಲಿ ಅಯ್ಯಪ್ಪಸ್ವಾಮಿ ದೇಗುಲ ಮುಚ್ಚಲಾಗಿದೆ. ಪಂಪಾದ ವಾಹನ ನಿಲುಗಡೆ ಸ್ಥಳ ಮುಳುಗಿಹೋಗಿದೆ ಎಂದೆಲ್ಲಾ ಸುದ್ದಿಯಾಗಿತ್ತು. ಆದರೆ, ಆ ಕುರಿತು ಕರ್ನಾಟಕದ ಭಕ್ತರಿಗೆ ವಾಸ್ತವಾಂಶದ ಮಾಹಿತಿ ಕೊಡುವ ವ್ಯವಸ್ಥೆಯೇ ಇರಲಿಲ್ಲ.

ಹೀಗಾಗಿ, ಶಬರಿಮಲೆಗೆ ಹೋಗಬೇಕು ಎಂದು ರೈಲು, ಬಸ್‌ಗಳಲ್ಲಿ ಸೀಟು ಮುಂಗಡ ಕಾಯ್ದಿರಿಸಿಕೊಂಡ ವರು ರದ್ದು ಮಾಡಿಸಿದರು. ಟೆಂಪೋ ಟ್ರಾವೆಲ್ಸ್‌, ಕಾರು ಬಾಡಿಗೆಗೆ ಗೊತ್ತು ಮಾಡಿದ್ದವರು ರದ್ದು ಪಡಿಸಿದ್ದರು. ಜತೆಗೆ ಆ ಸಂದರ್ಭದಲ್ಲಿ ಕರ್ನಾಟಕದಿಂದ ಶಬರಿಮಲೆಗೆ ಹೋಗಿದ್ದ ಭಕ್ತರ ಬಗ್ಗೆ ಅವರ ಕುಟುಂಬಗಳು ಆತಂಕಗೊಂಡು ಯಾವುದೇ ಮಾಹಿತಿ ಇಲ್ಲದೆ ಪರದಾಡುವಂತಾಯಿತು.ಶಬರಿಮಲೆಯಲ್ಲಿ ನಿಜಕ್ಕೂ ವಾಸ್ತವದ ಸ್ಥಿತಿ ಏನು? ಸಮಸ್ಯೆ ಏನಾಗಿತ್ತು ಎಂಬುದರ ಬಗ್ಗೆ ತಿಳಿಸುವವರೇ ಇಲ್ಲದಂತಾಗಿತ್ತು.

Advertisement

ಸರ್ಕಾರದ ಸಹಾಯವಾಣಿ ಇತ್ತು: ಪ್ರತಿ ವರ್ಷ ಕರ್ನಾಟಕದಿಂದ 20 ಲಕ್ಷ ಅಯ್ಯಪ್ಪಸ್ವಾಮಿ ಭಕ್ತರು ಶಬರಿಮಲೆಗೆ ಭೇಟಿ ನೀಡುತ್ತಾರೆ. ಈ ಹಿಂದೆ, ಶಬರಿಮಲೆಯಲ್ಲಿ ಕಾಲು¤ಳಿತ ದುರ್ಘ‌ಟನೆ ಹಾಗೂ ಕರ್ನಾಟಕದಿಂದ ಹೋಗುವ ಭಕ್ತರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಘಟನೆಗಳ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಪ್ರತಿವರ್ಷ ಮಂಡಲ ಪೂಜೆ ಹಾಗೂ ಮಕರ ಜ್ಯೋತಿ ಸೇರಿ ಒಟ್ಟು ಮೂರು ತಿಂಗಳ ಕಾಲ ಸಹಾಯವಾಣಿ ಸ್ಥಾಪಿಸಿ, ವೈದ್ಯಕೀಯ ತಂಡ ಕಳುಹಿಸಿ ರಾಜ್ಯದ ಭಕ್ತರ ಸೇವೆಗೆ ಅನುಕೂಲ ಕಲ್ಪಿಸುತ್ತಿತ್ತು. ಈ ಬಗ್ಗೆ ಕನ್ನಡ ನಾಮಫ‌ಲಕಗಳನ್ನೂ ಕೊಟ್ಟಾಯಂ, ಎರ್ನಾಕುಲಂ, ಚೆಂಗನೂರು, ಪಂಪಾದಿಂದ ಸನ್ನಿದಾನದವರೆಗೆ ಹಾಕಲಾಗುತ್ತಿತ್ತು. ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿತ್ತು. ಪಂಪಾ ನದಿ ಬಳಿ ಕರ್ನಾಟಕದ ಪೊಲೀಸ್‌ ಪೇದೆಗಳು ಹಾಗೂ ಗೃಹ ರಕ್ಷಕ ದಳ ಸಿಬ್ಬಂದಿ ನಿಯೋಜಿಸಲಾಗುತ್ತಿತ್ತು. ಅಗತ್ಯ ಹಾಗೂ ಅನಿವಾರ್ಯ ಸಂದರ್ಭಗಳಲ್ಲಿ ಅಯ್ಯಪ್ಪ ಭಕ್ತರು ಸಹಾಯ ಪಡೆಯುತ್ತಿದ್ದರು.

ಆದರೆ, ಎರಡು ವರ್ಷಗಳಿಂದ ಮುಜರಾಯಿ ಇಲಾಖೆ ಆ ಬಗ್ಗೆ ಆಸಕ್ತಿ ವಹಿಸದಂತಿಲ್ಲ. ಕಳೆದ ಬಾರಿ ಈ ಕುರಿತು ಸಚಿವರ ಗಮನಕ್ಕೆ ತಂದ ನಂತರ ಜನವರಿ ತಿಂಗಳಲ್ಲಿ ನಾಮ್‌ಕಾವಾಸ್ತೆ ಕೆಲ ದಿನಗಳ ಮಟ್ಟಿಗೆ ತಂಡ ಕಳುಹಿಸಲಾಗಿತ್ತು. ಈ ಬಾರಿ ಮಂಡಲ ಪೂಜೆ ಪ್ರಾರಂಭಗೊಂಡು ತಿಂಗಳಾಗುತ್ತಾ ಬಂದಿದ್ದರೂ ಕರ್ನಾಟಕದ “ಸಹಾಯವಾಣಿ’ ಹಾಗೂ ವೈದ್ಯಕೀಯ ತಂಡದ ಮಾಹಿತಿಯೇ ಇಲ್ಲ.

ಆಯುಕ್ತರ ಬಳಿ ಮಾಹಿತಿ ಇಲ್ಲ: ಈ ಕುರಿತು ಮುಜರಾಯಿ ಇಲಾಖೆ ಆಯುಕ್ತರಾದ ಶೈಜಲಾ ಅವರನ್ನು ಸಂಪರ್ಕಿಸಿದಾಗ, ಮೊದಲಿಗೆ “ನನ್ನ ಬಳಿ ಮಾಹಿತಿ ಇಲ್ಲ. ನಾನು ಹೊರಗೆ ಇದ್ದೇನೆ’ ಎಂದು ಹೇಳಿದರಾದರೂ ನಂತರ ನಮ್ಮದೊಂದು ಕಚೇರಿ ಅಲ್ಲಿರಬೇಕಲ್ಲಾ ಗುರುವಾರ ಕಚೇರಿಗೆ ಬಂದು ಮಾಹಿತಿ ಕೊಡುತ್ತೇನೆ ಎಂದು ಹೇಳಿದರು.

ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಅವರನ್ನು ಸಂಪರ್ಕಿಸಲು ಯತ್ನಿಸಿದಾಗ ಮೊಬೈಲ್‌ ದೂರವಾಣಿ ಕರೆ ಸ್ವೀಕರಿಸಲಿಲ್ಲ. ಈ ಕುರಿತು ಮಾಹಿತಿ ಕೋರಿ ಸಂದೇಶ ರವಾನಿಸಿದರೂ ಉತ್ತರ ದೊರಕಲಿಲ್ಲ.

ಸಮುದಾಯ ಭವನವಿಲ್ಲ
ಶಬರಿಮಲೆಯಲ್ಲಿ ಪ್ರತಿವರ್ಷ ಕರ್ನಾಟಕದಿಂದ ಹೋಗುವ ಭಕ್ತರಿಗಾಗಿ ತಿರುಪತಿ, ಮಂತ್ರಾಲಯ ಮಾದರಿಯಲ್ಲಿ
ಕರ್ನಾಟಕ ಭವನ ನಿರ್ಮಾಣ ಮಾಡಬೇಕು ಎಂಬುದು ಅಯ್ಯಪ್ಪಸ್ವಾಮಿ ಭಕ್ತರ ದಶಕಗಳ ಹೋರಾಟ. ಹಿಂದೆ ಬಿಜೆಪಿ
ಸರ್ಕಾರ ಅಧಿಕಾರದಲ್ಲಿದ್ದಾಗ ನೀಲಕಲ್‌ ಎಂಬಲ್ಲಿ ಕೇರಳ ಸರ್ಕಾರ ಸಮುದಾನ ಭವನಕ್ಕಾಗಿ ಸ್ಥಳ ನೀಡಿತ್ತು. ಆದರೆ,
ಅದು ಪಂಪಾ ಹಾಗೂ ಶಬರಿಮಲೆಯಿಂದ 20 ಕಿ.ಮೀ. ದೂರ ಇರುವ ಕಾರಣ ಶಬರಿಮಲೆ ಆಸುಪಾಸು ನೀಡುವಂತೆ ಮನವಿ ಮಾಡಲಾಗಿತ್ತು. ಆದರೆ, ಇದುವರೆಗೂ ರಾಜ್ಯದ ಮನವಿಗೆ ಸ್ಪಂದನೆ ದೊರಕಿಲ್ಲ. ರಾಜ್ಯ ಸರ್ಕಾರವೂ ಆ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿಲ್ಲ.

ಶುಚಿತ್ವ ಕೊರತೆ
ಶಬರಿಮಲೆಯಲ್ಲಿ “ಗ್ರೀನ್‌ ಪಂಪಾ’ ಘೋಷ ವಾಕ್ಯದಡಿ ಶುಚಿತ್ವಕ್ಕೆ ಒತ್ತು ನೀಡಲಾಗುತ್ತಿದೆ ಎಂದು ಕೇರಳ ಸರ್ಕಾರ ಹೇಳಿದರೂ ಪಂಪಾ, ಶಬರಿಮಲೆ ಸುತ್ತಮುತ್ತ ಸ್ವತ್ಛತೆ ಕಾಪಾಡುತ್ತಿಲ್ಲ. ಪಂಪಾದಿಂದ ಶಬರಿಮಲೆ ಸನ್ನಿದಾನಕ್ಕೆ ತೆರಳುವ ಬೆಟ್ಟದ ಮಾರ್ಗದಲ್ಲೂ ಸಮರ್ಪಕ ಶೌಚಾಲಯ ಇಲ್ಲದ ಕಾರಣ ಭಕ್ತರು ಬೆಟ್ಟ-ಗುಡ್ಡದ ನಡುವೆ ದೇಹಬಾಧೆ ತೀರಿಸಿಕೊಳ್ಳುವ ಸ್ಥಿತಿಯಿದ್ದು ಇಡೀ ಮಾರ್ಗ ದುರ್ನಾತ ಬೀರುತ್ತಿದ್ದು ಇದರಿಂದಲೂ ಅಯ್ಯಪ್ಪ ಭಕ್ತರು ಆರೋಗ್ಯ ಸಮಸ್ಯೆ ಎದುರಿಸುವಂತಾಗಿದೆ.

– ಎಸ್‌.ಲಕ್ಷ್ಮಿ ನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next