ಕೊಚ್ಚಿ : ಕಳೆದ ತಿಂಗಳಲ್ಲಿ ಕೇರಳದ ಶಬರಿಮಲೆ ದೇವಸ್ಥಾನವನ್ನು ಪ್ರವೇಶಿಸಲು ಯತ್ನಿಸಿದ್ದ ಮಾನವ ಹಕ್ಕು ಕಾರ್ಯಕರ್ತೆ ರೆಹಾನಾ ಫಾತಿಮಾ ಅವರು ತಮ್ಮ ಫೇಸ್ ಬುಕ್ ಪೋಸ್ಟ್‌ಗಳ ಮೂಲಕ ಜನರ ಧಾರ್ಮಿಕ ಭಾವನೆಗಳನ್ನು ನೋಯಿಸಿದ್ದಾರೆಂಬ ಆರೋಪದ ಮೇಲೆ ಇಂದು ಮಂಗಳವಾರ ಆಕೆಯನ್ನು ಬಂಧಿಸಲಾಯಿತೆಂದು ಪೊಲೀಸರು ತಿಳಿಸಿದ್ದಾರೆ.
32ರ ಹರೆಯದ ಫಾತಿಮಾ ಅವರನ್ನು ಕೊಚ್ಚಿಯ ಪಳರಿವಟ್ಟಂ ಕಚೇರಿಯಿಂದ ಬಂಧಿಸಲಾಯಿತೆಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸರ್ವೋಚ್ಚ ನ್ಯಾಯಾಲಯ ಕೇರಳದ ಪ್ರಸಿದ್ಧ ಶಬರಿಮಲೆ ದೇವಸ್ಥಾನವನ್ನು ಎಲ್ಲ ವಯೋವರ್ಗದ ಮಹಿಳೆಯರು ಪ್ರವೇಶಿಸಬಹುದಾಗಿದೆ ಎಂದು ಐತಿಹಾಸಿಕ ತೀರ್ಪು ನೀಡಿದ್ದ ಹಿನ್ನೆಲೆಯಲ್ಲಿ ರೆಹಾನಾ ಫಾತಿಮಾ ಸಹಿತ ಕೆಲವು ಮಾನವ ಹಕ್ಕು ಕಾರ್ಯಕರ್ತೆಯರು ದೇವಸ್ಥಾನ ಪ್ರವೇಶಿಸುವ ಯತ್ನ ನಡೆಸಿದ್ದರು.
ರೆಹಾನಾ ಫಾತಿಮಾ ಅವರ ಫೇಸ್ ಬುಕ್ ಪೋಸ್ಟ್‌ಗಳು ಜನರ ಧಾರ್ಮಿಕ ಭಾವನೆಗಳನ್ನು ನೋಯಿಸಿವೆ ಎಂದು ರಾಧಾಕೃಷ್ಣ ಮೆನನ್ ಎಂಬವರು ಈ ಹಿಂದೆ ದೂರು ನೀಡಿದ್ದರು.
ಆ ಪ್ರಕಾರ ಪತ್ತನಂತಿಟ್ಟ ಪೊಲೀಸರು ಫಾತಿಮಾ ಅವರನ್ನು ಅವರು ಉದ್ಯೋಗಸ್ಥರಾಗಿರುವ ಬಿಎಸ್‌ಎನ್‌ಎಲ್ ಕಚೇರಿಯಿಂದ ಬಂಧಿಸಿ ಐಪಿಸಿ ಸೆ.295ಎ ಪ್ರಕಾರ ಕೇಸು ದಾಖಲಿಸಿಕೊಂಡರು.