ಶಬರಿಮಲೆ/ತಿರುವನಂತಪುರ: ಶಬರಿಮಲೆ ಯಾತ್ರೆಯ ಎರಡನೇ ದಿನವಾದ ಭಾನುವಾರ ಹೆಚ್ಚಾ ಕಡಿಮೆ ಶಾಂತಿಯುತ ವಾತಾವರಣ ಇತ್ತು. ಆದರೆ ಅಯ್ಯಪ್ಪ ದೇಗುಲದತ್ತ ತೆರಳಿದ್ದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್ ಅವರ ಬಂಧನ ಖಂಡಿಸಿ ಕೇರಳದ ಇತರ ಭಾಗಗಳಲ್ಲಿ ಭಾರೀ ಪ್ರತಿಭಟನೆ ನಡೆದಿದೆ.
ಇತರ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಶಬರಿಮಲೆಗೆ ಭೇಟಿ ನೀಡಿದ್ದಾರೆ. ಮಲಯಾಳ ತಿಂಗಳ ವೃಶ್ಚಿಕ ದಿನದ 2ನೇ ದಿನ ಹೆಚ್ಚು ಸಮಯ ಭಕ್ತರಿಗೆ ಅಯ್ಯಪ್ಪನ ದರ್ಶಕ್ಕೆ ಅವಕಾಶ ಸಿಕ್ಕಿತು. ದೇಗುಲದ ಆವರಣದಲ್ಲಿ ರವಿವಾರ ಹೆಚ್ಚಿನ ಸಂಖ್ಯೆಯ ಭಕ್ತರು ಇಲ್ಲದ್ದರಿಂದ ಇದು ಸಾಧ್ಯವಾಯಿತು. ಪಂಪಾ ತೀರದ ನಿಳಕ್ಕಲ್‌ನಿಂದ ಸನ್ನಿಧಾನಂವರೆಗೆ 18 ಕಿಮೀ ದೂರ ಕ್ರಮಿಸಲು 2 ಗಂಟೆ ತಗುಲಿದ್ದಕ್ಕೆ ಕೆಲ ಭಕ್ತರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. “ನಿಳಕ್ಕಲ್‌ಗೆ ಬೆಳಗ್ಗೆ 4 ಗಂಟೆಗೆ ತಲುಪಿದ್ದೆವು. ಪಂಪಾಕ್ಕೆ ತೆರಳಲು ಬಸ್ 6 ಗಂಟೆಗೆ ಎಂದ ಕಾರಣ ನಾವು ಕಾಯಬೇಕಾಯಿತು. ಉಳಿದಂತೆ ಎಲ್ಲವೂ ಸುಸೂತ್ರವಾಗಿತ್ತು ‘ ಎಂದು ಕೊಯಮತ್ತೂರು ನಿವಾಸಿ ಪಳನಿಸ್ವಾಮಿ ಎಂಬವರು ಹೇಳಿದ್ದಾರೆ.
ಬಸ್ ಸೇವೆಯಲ್ಲಿ ವಿಳಂಬವಾಗಿತ್ತೇ ಎಂದು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪಂಪಾ ಕಚೇರಿಯಲ್ಲಿ ಪ್ರಶ್ನಿಸಿದಾಗ, ಅಧಿಕಾರಿಗಳು ಅದನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಹೆಚ್ಚಿನ ಬಸ್‌ಗಳು ಬೆಳಗ್ಗಿನ ಅವಧಿಯಲ್ಲಿ ಖಾಲಿ ಸೀಟ್‌ಗಳಲ್ಲಿ ಓಡಾಡುತ್ತಿದ್ದವು ಎಂದು ಹೇಳಿದ್ದಾರೆ.
14 ದಿನ ನ್ಯಾಯಾಂಗ ಬಂಧನ: ದೇಗುಲ ಪ್ರವೇಶಕ್ಕೆ ಮುಂದಾಗಿದ್ದ ಕೇರಳ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಿ ಪಟ್ಟಂತಿಟ್ಟ ಜಿಲ್ಲಾ ಮೊದಲ ದರ್ಜೆ ಮ್ಯಾಜಿಸ್ಟ್ರೇಟ್ ಕೋರ್ಟ್ ನ್ಯಾಯಾಧೀಶರು ಆದೇಶ ನೀಡಿದ್ದಾರೆ. ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಸುರೇಂದ್ರನ್, ಪೊಲೀಸರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಕುಡಿಯಲು ನೀರು, ಆಹಾರ ಮತ್ತು ತಮ್ಮ ಔಷ« ಗಳ ಸೇವೆಗೆ ಕೂಡ ಅವಕಾಶ ನೀಡಲಿಲ್ಲ’ ಎಂದಿದ್ದಾರೆ. ತಮ್ಮ ಬಂಧನ ರಾಜಕೀಯವಾಗಿ ಪ್ರೇರಿತ ಎಂದೂ ಆರೋಪಿಸಿದ್ದಾರೆ. ಬಳಿಕ ಅವರನ್ನು ಕೊಟ್ಟಾರಕರ ಉಪ ಜೈಲಿಗೆ ಕರೆದೊಯ್ಯಲಾಗಿದೆ.
ಕೇರಳಾದ್ಯಂತ ಪ್ರತಿಭಟನೆ: ಕೆ.ಸುರೇಂದ್ರನ್ ಬಂಧನದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಲವು ಭಾಗಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ಪ್ರಮುಖ ರಸ್ತೆಗಳು, ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಅಯ್ಯಪ್ಪ ಭಕ್ತರ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂದು ಕೇರಳ ಮಾನವ ಹಕ್ಕುಗಳ ಆಯೋಗ ಆರೋಪಿಸಿದ್ದು, ಭಕ್ತರಿಗೆ ಸೂಕ್ತ ಮೂಲಸೌಕರ್ಯ ಕಲ್ಪಿಸುವಂತೆ ಟಿಡಿಬಿ, ಡಿಜಿಪಿ ಹಾಗೂ ಸ್ಥಳೀಯಾಡಳಿತಕ್ಕೆ ಸೂಚನೆ ನೀಡಿದೆ.