Advertisement

ಸಾಯಿ ಧ್ಯಾನಮಂದಿರದ ಸಾರ್ಥಕ ಜನಸೇವೆ

08:41 PM Jun 14, 2021 | Team Udayavani |

ರಾಯಚೂರು: ಲಾಕ್‌ಡೌನ್‌ ವೇಳೆ ಎಷ್ಟೋ ಜನ ಹೊತ್ತಿನ ಊಟಕ್ಕೂ ಪರದಾಡಿದ್ದು ಸುಳ್ಳಲ್ಲ. ಇಂಥ ವೇಳೆ ಆಸರೆಗೆ ಬಂದ ಕೈಗಳಿಗೂ ಬರವಿಲ್ಲ. ಸತತ 25 ದಿನಗಳಿಂದ ಅಂಥ ನಿಸ್ವಾರ್ಥ ಸೇವೆಯನ್ನು ನಿಷ್ಠೆಯಿಂದ ಮಾಡುವ ಮೂಲಕ ಇಲ್ಲಿನ ಶ್ರೀ ಸಾಯಿ ಧ್ಯಾನ ಮಂದಿರ ಮೆಚ್ಚುಗೆಗೆ ಪಾತ್ರವಾಗಿದೆ.

Advertisement

ಆಸ್ಪತ್ರೆಗಳಲ್ಲಿದ್ದ ಸೋಂಕಿತರಿಗೆ, ಅವರ ಬಂಧುಗಳಿಗೆ, ಹಸಿದ ನಿರ್ಗತಿಕರಿಗೆ, ಕರ್ತವ್ಯನಿರತ ಸಿಬ್ಬಂದಿಗೆ, ಕೊರೊನಾ ವಾರಿಯರ್ಗಳಿಗೆ ನಿತ್ಯ ಮೂರು ಹೊತ್ತು ಊಟೋಪಚಾರ ಮಾಡಲಾಗಿದೆ. ಆರಂಭದಲ್ಲಿ ನಿತ್ಯ ಮೂರು ಸಾವಿರ ಊಟದ ಪ್ಯಾಕೆಟ್‌ಗಳನ್ನು ವಿತರಿಸಲಾಗಿದೆ. ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದ್ದಂತೆ ಈ ಸಂಖ್ಯೆ 2500ಕ್ಕೆ ಇಳಿಯಿತು. ಜೂ.14ರಿಂದ ಲಾಕ್‌ಡೌನ್‌ ವಿನಾಯಿತಿ ನೀಡುತ್ತಿರುವ ಕಾರಣ ಅಲ್ಲಿಗೆ ಈ ಅಮೂಲ್ಯ ಸೇವೆಗೆ ವಿರಾಮ ನೀಡಲಾಗಿದೆ.

ಬೆಳಗ್ಗೆ ಸಿರಾ, ಉಪ್ಪಿಟ್ಟು, ಶಾವಿಗೆ ಉಪ್ಪಿಟ್ಟು, ಇಡ್ಲಿ ವಡಾ, ಒಗ್ಗರಣೆ ಸೇರಿದಂತೆ ಇನ್ನಿತರ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿಗೆ ಚಿತ್ರಾನ್ನ, ಪಲಾವ್‌, ವಾಂಗಿಬಾತ್‌, ಟೊಮ್ಯಾಟೋ ರೈಸ್‌, ವೆಜ್‌ ಬಿರಿಯಾನಿ, ಮೊಸರನ್ನ ಸೇರಿದಂತೆ ಇನ್ನಿತರ ಬಗೆಯ ಊಟ ಇಲ್ಲಿಂದಲೇ ಹೋಗುತ್ತಿತ್ತು. ಅದು ಊಟವಲ್ಲ ಶಿರಡಿ ಸಾಯಿ ಬಾಬಾರ ಪ್ರಸಾದ ಎಂದು ಸೋಂಕಿತರು ಕಣ್ಣಿಗೊತ್ತಿಕೊಂಡು ಊಟ ಮಾಡುವಾಗ ನಮ್ಮ ಸೇವೆ ಸಾರ್ಥಕ ಎನಿಸಿತು ಎನ್ನುತ್ತಾರೆ ಆಯೋಜಕರು.

ಸಾಯಿ ಧ್ಯಾನ ಮಂದಿರದ ಉಸ್ತುವಾರಿ ಸಾಯಿಕಿರಣ್‌ ಆದೋನಿ, ಕಣ್ವ ಆಸ್ಪತ್ರೆಯ ಡಾ| ಬಸನಗೌಡ ಪಾಟೀಲ್‌ ಹಾಗೂ ಡಿಸಿಎಂ ಗೋವಿಂದ ಕಾರಜೋಳ ಅಭಿಮಾನಿ ಬಳಗದ ಉಸ್ತುವಾರಿ ಉಮೇಶ್‌ ಕಾರಜೋಳ ಈ ಸೇವೆಗೆ ಕೈ ಜೋಡಿಸಿದ್ದಾರೆ. ಊಟೋಪಚಾರಕ್ಕೆ ಬೇಕಾದ ನೆರವು ನೀಡಿದ್ದಾರೆ. ಅಲ್ಲದೇ, ಅನೇಕ ದಾನಿಗಳು ಕೈಲಾದ ಸೇವೆ ನೀಡುತ್ತಲೇ ಇದ್ದಾರೆ. ಇನ್ನೂ ಅನೇಕ ಆಸ್ಪತ್ರೆಗಳಿಂದ ನಮಗೆ ಇಂತಿಷ್ಟು ಊಟ ಕಳುಹಿಸಿ ಎಂದು ಬೇಡಿಕೆ ಸಲ್ಲಿಸುವಷ್ಟರ ಮಟ್ಟಿಗೆ ಅಚ್ಚುಕಟ್ಟಾಗಿ ಊಟದ ವ್ಯವಸ್ಥೆ ಮಾಡಲಾಗಿದೆ ಎನ್ನುತ್ತಾರೆ ಸಾಯಿಕಿರಣ್‌.

Advertisement

Udayavani is now on Telegram. Click here to join our channel and stay updated with the latest news.

Next