Advertisement

ಮನುಕುಲಕ್ಕೆ ಸಾಲುಮರದ ತಿಮ್ಮಕ್ಕ ಮಾದರಿ

12:57 AM Jun 30, 2019 | Lakshmi GovindaRaj |

ಬೆಂಗಳೂರು: ಬಡ ಕುಟುಂಬದಲ್ಲಿ ಜನಿಸಿದ ಸಾಲುಮರದ ತಿಮ್ಮಕ್ಕ ಇಂದು ಇಡೀ ಮನುಕುಲಕ್ಕೆ ಮಾದರಿಯಾಗಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ ಜಿ.ಪರಮೇಶ್ವರ ಹೇಳಿದ್ದಾರೆ.

Advertisement

ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಹಾಗೂ ಸಾಲು ಮರದ ತಿಮ್ಮಕ್ಕ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಸಹೋಯೋಗದಲ್ಲಿ ಶನಿವಾರ ವಸಂತ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಆಯೋಜಿಸಿದ್ದ 2018-19ನೇ ಸಾಲಿನ “ಸಾಲಮರದ ತಿಮ್ಮಕ್ಕ ಗ್ರೀನರಿ ಅವಾರ್ಡ್‌’ ಪ್ರಶಸ್ತಿ ಪ್ರದಾನ ಹಾಗೂ ಡಾ ಜಿ.ಪರಮೇಶ್ವರ್‌ ದಂಪತಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾವಿರಾರು ಮರಗಳನ್ನು ಮಕ್ಕಳಂತೆ ಬೆಳೆಸಿದ ಸಾಲುಮರದ ತಿಮ್ಮಕ್ಕ, ಇಂದು ದೇಶದ ನೂರು ಮಂದಿ ಪ್ರಭಾವಿ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ. ಇದು ರಾಜ್ಯಕ್ಕೆ ಹೆಮ್ಮೆ ತರುವ ವಿಚಾರ ಎಂದು ಹೇಳಿದರು.

ಜನಸಮುದಾಯದಲ್ಲಿ ಪರಿಸರ ಪ್ರಜ್ಞೆ ಮೂಡಿಸುವಲ್ಲಿ ಇವರ ಪಾತ್ರ ದೊಡ್ಡದು. 19ನೇ ಶತಮಾನದಲ್ಲಿ ಕೈಗಾರಿಕಾ ಸಂಸ್ಥೆಗಳು ಹುಟ್ಟಿಕೊಳ್ಳಲು ಆರಂಭವಾದವು. ಪ್ರಸ್ತುತ ಇಡೀ ವಿಶ್ವದಲ್ಲಿ ಶೇ.31ರಷ್ಟು ಮಾತ್ರ ಅರಣ್ಯ ಭಾಗ ಇದೆ ಎಂದು ಗುರುತಿಸಲಾಗಿದೆ. ಎರಡು ಶತಕೋಟಿ ಹೆಕ್ಟೇರ್‌ ಅರಣ್ಯ ಪ್ರದೇಶವನ್ನು ನಾವು ನಾಶ ಮಾಡಿದ್ದೇವೆ ಎಂದು ಹೇಳಿದರು.

ರಾಜ್ಯದಲ್ಲಿ ಶೇ.22.6ರಷ್ಟು ಮಾತ್ರ ಹಸಿರು ಇದೆ. ಹೀಗಾಗಿ ಮಳೆಯ ಪ್ರಮಾಣ ಕೂಡ ಕಡಿಮೆ ಆಗುತ್ತಿದೆ. ಒಳ್ಳೆಯ ಗಾಳಿ ಸಿಗುತ್ತಿಲ್ಲ. ಈಗಾಗಲೇ ದೆಹಲಿಯ ಗಾಳಿ ಕಲುಷಿತಗೊಂಡಿದೆ. ಬೆಂಗಳೂರಿನಲ್ಲೂ ಹದಗೆಡುವ ಅಂತದಲ್ಲಿದೆ. ಈ ನಿಟ್ಟಿನಲ್ಲಿ ಮುಂದಿನ ಪೀಳಿಗೆಗೆ ಪರಿಸರ ಸಂರಕ್ಷಣೆ ಮಾಡುವ ಸಂದೇಶ ರವಾನಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಸಿರಾಡುವ ಗಾಳಿ ವಿಷಯುಕ್ತವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

Advertisement

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ತೆಲಂಗಾಣ, ತಮಿಳುನಾಡು ಸೇರಿ ರಾಜ್ಯದ 30ಕ್ಕೂ ಹೆಚ್ಚು ಸಾಧಕರಿಗೆ “ಸಾಲುಮರದ ತಿಮ್ಮಕ್ಕ ಗ್ರೀನರಿ ಅವಾರ್ಡ್‌’ ನೀಡಿ ಗೌರವಿಸಲಾಯಿತು. ಇದೇ ವೇಳೆ ಸಾಲುಮರದ ತಿಮ್ಮಕ್ಕ ಅವರ ಜೀವನಾಧಾರಿತ ನಾಟಕ ಪ್ರದರ್ಶನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಡಾ ಜಿ.ಪರಮೇಶ್ವರ್‌ ಅವರ ಪತ್ನಿ ಕನ್ನಿಕಾ , ಬೇಲೂರು ಶಾಸಕ ಲಿಂಗೇಶ್‌, ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು, ಬೇಲೂರಿನ ಸೋಮಶೇಖರ ಶಿವಚಾರ್ಯ ಸ್ವಾಮೀಜಿ, ತಿಮ್ಮಕ್ಕ ಅವರ ದತ್ತು ಪುತ್ರ ಉಮೇಶ್‌ ಉಪಸ್ಥಿತರಿದ್ದರು.

ಅನಧಿಕೃತ ಕೇಬಲ್‌ಗೆ ಕತ್ತರಿ: ನಗರದಲ್ಲಿ ಆಪ್ಟಿಕಲ್‌ ಫೈಬರ್‌ ಕೇಬಲ್‌ಗ‌ಳ ಹಾವಳಿ ಹೆಚ್ಚಾಗಿದೆ. ನಾನು ಬೆಂಗಳೂರು ಉಸ್ತುವಾರಿ ಸಚಿವನಾದ ಬಳಿಕ ಸುಮಾರು ಐದು ಸಾವಿರ ಕಿ.ಮೀ. ಉದ್ದದ ಕೇಬಲ್‌ ತೆರವುಗೊಳಿಸಲಾಗಿದೆ. ಕೇಬಲ್‌ಗ‌ಳನ್ನು ಅನಧಿಕೃತವಾಗಿ ಹಾಕುವುದಕ್ಕೆ ಕಡಿವಾಣ ಹಾಕಲಾಗಿದ್ದು, ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಧಿಕೃತವಾಗಿ ಹಾಕುವ ಕೇಬಲ್‌ಗ‌ಳಿಗೆ ಬಿಬಿಎಂಪಿಯಿಂದ ಪರವಾನಗಿ ಕೊಡಲಾಗುತ್ತದೆ ಎಂದು ಹೇಳಿದರು.

ತಿಮ್ಮಕ್ಕನ ಚಿತ್ರವಿರುವ ಅಂಚೆ ಲಕೋಟೆ: ಕಾರ್ಯಕ್ರಮದಲ್ಲಿ ಅಂಚೆ ಇಲಾಖೆಯಿಂದ ಸಾಲುಮರದ ತಿಮ್ಮಕ್ಕ ಅವರ ಭಾವಚಿತ್ರ ಇರುವ “ವಿಶೇಷ ಅಂಚೆ ಲಕೋಟೆ’ಯನ್ನು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಬಿಡುಗಡೆ ಮಾಡಿದರು. ಅಂಚೆ ಇಲಾಖೆಯ ಹಿರಿಯ ಅಧಿಕಾರಿ ಚಾರ್ಲ್ಸ್‌ ಲೋಬೋ ಮಾತನಾಡಿ, ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ ಸಾಧನೆಗೆ ಬೆಲೆ ಕಟ್ಟಲಾಗದು. ಹೀಗಾಗಿ ಅಂಚೆ ಇಲಾಖೆ ಅವರ ಹೆಸರಿನಲ್ಲಿ ವಿಶೇಷ ಲಕೋಟೆ ಬಿಡುಗಡೆ ಮಾಡಿದೆ ಎಂದು ಹರ್ಷವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next