Advertisement

SA vs Ind ಇಂದು ಸರಣಿ ನಿರ್ಣಾಯಕ ಪಂದ್ಯ: ಭಾರತಕ್ಕೆ ಅಗ್ರ ಕ್ರಮಾಂಕದ ಸಮಸ್ಯೆ

12:18 AM Dec 21, 2023 | Team Udayavani |

ಪಾರ್ಲ್: ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಪಂದ್ಯದಲ್ಲಿ ಸಾಮಾನ್ಯ ಮಟ್ಟದ ಬ್ಯಾಟಿಂಗ್‌ ಪ್ರದರ್ಶಿಸಿ ಎಡವಿದ ಭಾರತ ತಂಡ, ಗುರುವಾರ ಪಾರ್ಲ್ನಲ್ಲಿ ಎದ್ದು ನಿಂತು ಸರಣಿ ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಿದೆ. ಇದಕ್ಕೆ ಅಗ್ರ ಕ್ರಮಾಂಕದ ಬ್ಯಾಟಿಂಗ್‌ ಸಮಸ್ಯೆಯನ್ನು ಮೊದಲು ನಿವಾರಿಸಿಕೊಳ್ಳಬೇಕಿದೆ.

Advertisement

ಗಾಯಕ್ವಾಡ್‌ ಎರಡೂ ಪಂದ್ಯಗಳಲ್ಲಿ ಮುಗ್ಗರಿಸಿರುವುದು ಚಿಂತೆಯ ಸಂಗತಿಯಾಗಿದೆ. ಇವರ ಗಳಿಕೆ 5 ಮತ್ತು 4 ರನ್‌ ಮಾತ್ರ. ಹೀಗಾಗಿ ಮೊದಲ ವಿಕೆಟಿಗೆ ಭಾರತದಿಂದ ಗಳಿಸಲು ಸಾಧ್ಯವಾದದ್ದು ಕೇವಲ 23 ಮತ್ತು 4 ರನ್‌. ಇದರಿಂದ ಮಧ್ಯಮ ಕ್ರಮಾಂಕದ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಆದರೆ ಇದೇ ಸರಣಿಯಲ್ಲಿ ಪದಾರ್ಪಣೆ ಮಾಡಿದ ಸಾಯಿ ಸುದರ್ಶನ್‌ ಸತತ 2 ಅರ್ಧಶತಕಗಳೊಂದಿಗೆ ಮೆರೆದದ್ದು ಶುಭಸಮಾಚಾರ. ಕ್ರಮವಾಗಿ 55 ಹಾಗೂ 62 ರನ್‌ ಬಾರಿಸಿ ಲಭಿಸಿದ ಅವಕಾಶ ವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ.

ಭಾರತಕ್ಕೆ ಹೋಲಿಸಿದರೆ ದಕ್ಷಿಣ ಆಫ್ರಿಕಾದ ಓಪನಿಂಗ್‌ ಬಹಳ ಮೇಲ್ಮಟ್ಟ ದಲ್ಲಿದೆ. ದ್ವಿತೀಯ ಪಂದ್ಯದ ಚೇಸಿಂಗ್‌ ವೇಳೆ ಟೋನಿ ಡಿ ಝೋರ್ಜಿ ಚೊಚ್ಚಲ ಶತಕ (ಅಜೇಯ 119) ಮತ್ತು ರೀಝ ಹೆಂಡ್ರಿಕ್ಸ್‌ ಅರ್ಧ ಶತಕ (52) ಬಾರಿಸುವಲ್ಲಿ ಯಶಸ್ವಿಯಾಗಿದ್ದರು. ಈ ಜೋಡಿಯಿಂದ ಮೊದಲ ವಿಕೆಟಿಗೆ 27.5 ಓವರ್‌ಗಳಿಂದ 130 ರನ್‌ ಒಟ್ಟುಗೂಡಿತ್ತು.

ಇದು ಭಾರತದ ಬೌಲಿಂಗ್‌ ವೈಫ‌ಲ್ಯ ದತ್ತಲೂ ಬೆಟ್ಟು ಮಾಡಿದೆ. ಮೊದಲ ಏಕದಿನದಲ್ಲಿ ದಕ್ಷಿಣ ಆಫ್ರಿಕಾವನ್ನು ಅಲ್ಪ ಮೊತ್ತಕ್ಕೆ ಕೆಡವಿದ ಭಾರತ, ಮಂಗಳವಾರ ಇದೇ ಲಯವನ್ನು ಉಳಿಸಿಕೊಳ್ಳಲು ವಿಫ‌ಲವಾಯಿತು. ಅರ್ಷದೀಪ್‌ ಮತ್ತು ಆವೇಶ್‌ ಖಾನ್‌ ರನ್‌ ನಿಯಂತ್ರಿಸಿದರೂ ಹರಿಣಗಳನ್ನು ಪೆವಿಲಿಯನ್ನಿಗೆ ಅಟ್ಟುವ ಪ್ರಯತ್ನದಲ್ಲಿ ಯಶಸ್ಸು ಕಾಣಲಿಲ್ಲ. 42.3 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 215 ರನ್‌ ಬಾರಿಸಿದ ದಕ್ಷಿಣ ಆಫ್ರಿಕಾ ಸರಣಿಗೆ ಮರಳಿದ್ದು ಯಂಗ್‌ ಇಂಡಿಯಾ ಪಾಲಿಗೊಂದು ಎಚ್ಚರಿಕೆಯ ಗಂಟೆ.

 ಆರಂಭ: ಸಂಜೆ 4.30
 ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

Advertisement
Advertisement

Udayavani is now on Telegram. Click here to join our channel and stay updated with the latest news.

Next