ಉಡುಪಿ: ಝೀ ಕನ್ನಡ ಚಾನೆಲ್ ವತಿಯಿಂದ ನಡೆದ ಸರಿಗಮಪ ರಿಯಾಲಿಟಿ ಶೋ ಸೀಸನ್-20ನಲ್ಲಿ ಕುಂದಾಪುರ ಕುಂಭಾಶಿಯ ಡಾ| ಶ್ರಾವ್ಯಾ ಎಸ್. ರಾವ್ ಸೆಕೆಂಡ್ ರನ್ನರ್‌ಅಪ್ ಆಗಿ ಹೊರಹೊಮ್ಮಿದ್ದಾರೆ.
ಪ್ರಸ್ತುತ ತುಮಕೂರು ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಮಕ್ಕಳ ವೈದ್ಯೆ/ಸಹ ಪ್ರಾಧ್ಯಾಪಕಿಯಾಗಿರುವ ಅವರು ಸಂಗೀತ-ಗಾಯನ ಕ್ಷೇತ್ರದಲ್ಲಿಯೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
2006ರಲ್ಲಿ ಈ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ “ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನ ಪಡೆದಿದ್ದರು. 2009ರಲ್ಲಿ ಸುವರ್ಣ ಚಾನೆಲ್‌ನ ಐಡಿಯ ಸ್ಟಾರ್ ಸಿಂಗರ್ ಸೀಸನ್-2ನಲ್ಲಿ ಪ್ರಥಮ ರನ್ನರ್‌ಅಪ್ ಆಗಿದ್ದರು. 100ಕ್ಕೂ ಹೆಚ್ಚು ರಾಜ್ಯಮಟ್ಟದ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮದೇ ಛಾಪು ಮೂಡಿಸಿ ಸಾಧನೆಗೈದಿದ್ದಾರೆ.
ತಾಯಿ ಗಾಯಕಿಯಾಗಿದ್ದು, ಶಾಸ್ತ್ರೀಯ ಸಂಗೀತ, ಕರ್ಣಾಟಕ ಸಂಗೀತವನ್ನು ತಾಯಿಯಿಂದಲೇ ಅಭ್ಯಾಸ ಮಾಡಿದ್ದೇನೆ. ಹಿಂದೂಸ್ತಾನಿ ಸಂಗೀತವನ್ನು ವಿ| ಮಹಾಬಲೇಶ್ವರ್ ಭಾಗವತ್ ಅವರಿಂದ ಕಲಿತು ವೈದ್ಯಕೀಯ ಶಿಕ್ಷಣ, ವೃತ್ತಿ ಜತೆಗೆ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ಪತಿ ಡಾ| ಕಾರ್ತಿಕ್ ಸಂಪೂರ್ಣ ಸಹಕಾರದೊಂದಿಗೆ ಮತ್ತು ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯ ಆಡಳಿತ ಮಂಡಳಿ ಸಹಕಾರದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಪ್ರಸಿದ್ಧ ಗಾಯಕರಾದ ಎಸ್. ಜಾನಕಿ, ವಾಣಿ ಜೈರಾಮ್, ಗುರುಕಿರಣ್, ರಾಜೇಶ್ ಕೃಷ್ಣನ್ ಅವರೊಂದಿಗೂ ಹಾಡಿರುವುದು ಸ್ಮರಣೀಯ ಸಂಗತಿಯಾಗಿದೆ ಎನ್ನುತ್ತಾರೆ ಡಾ| ಶ್ರಾವ್ಯಾ.
ಇವರು ಮಂಗಳೂರಿನ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ ಎಂಬಿಬಿಎಸ್ ಹಾಗೂ ಮಂಡ್ಯದ ಆದಿಚುಂಚನಗಿರಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ ಎಂಡಿ ಪದವಿ ಪಡೆದಿದ್ದಾರೆ.
ಡಾ| ಶ್ರಾವ್ಯಾ ಅವರು ಮಣಿಪಾಲ ಟೆಕ್ನಾಲಿಜೀಸ್ ಲಿ.ನ ಕ್ವಾಲಿಟಿ ಆ್ಯಂಡ್ ಪ್ರೋಸೆಸ್ ವಿಭಾಗದ ಮುಖ್ಯಸ್ಥರಾದ ಕೆ. ಶ್ರೀನಿವಾಸ್ ರಾವ್ ಹಾಗೂ ಕೋಟೇಶ್ವರ ಕರ್ನಾಟಕ ಪ್ರೌಢಶಾಲೆಯ ಶಿಕ್ಷಕಿ ಸಂಧ್ಯಾ ಯು. ದಂಪತಿಯ ಪುತ್ರಿ.