ಬೆಂಗಳೂರು: ಆನೇಕಲ್ ತಾಲೂಕಿನ ಚಂದಾಪುರದಲ್ಲಿ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಸಮೇಳನದ ಅಧ್ಯಕ್ಷರಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು ಆಯ್ಕೆಯಾಗಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಮಾಯಣ್ಣ, ತಮಿಳುನಾಡು ಗಡಿ ಭಾಗದಲ್ಲಿರುವ ಚಂದಾಪುರದಲ್ಲಿ ಡಿ.24ರಿಂದ ಎರಡು ದಿನ ಸಮ್ಮೇಳನ ನಡೆಯಲಿದೆ. ಸಾ.ರಾ.ಗೋವಿಂದು ಅವರ 40 ವರ್ಷಗಳ ಕನ್ನಡಪರ ಹೋರಾಟ ಪರಿಗಣಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಡಿ.24ರ ಬೆಳಗ್ಗೆ 7 ಗಂಟೆಗೆ ಕಂಠೀರವ ಸ್ಟುಡಿಯೋ ಆವರಣದ ಡಾ.ರಾಜ್‌ಕುಮಾರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಜಯ ಕರ್ನಾಟಕ ವೇದಿಕೆಯ ರಾಜ್ಯಾಧ್ಯಕ್ಷ ಮುತ್ತಪ್ಪ ರೈ ಮತ್ತು ಚಿತ್ರ ನಟ ದರ್ಶನ್ ಸಮೇಳನಾಧ್ಯಕ್ಷರ ತೆರೆದ ವಾಹನ ಮೆರವಣಿಗೆಗೆ ಚಾಲನೆ ನೀಡುವರು. ಈ ಮೆರವಣಿಗೆ ವರ್ತುಲ ರಸ್ತೆಯ ಮೂಲಕ ಚಂದಾಪುರ ಪ್ರವೇಶಿಸಲಿದೆ ಎಂದು ಹೇಳಿದರು.
ಚಂದಾಪುರದ ಸ್ವಾಮಿ ವಿವೇಕಾನಂದ ಗ್ರಾಮಾಂತರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಬೊಮ್ಮಸಂದ್ರದ ಬಿ.ಟಿ.ಎಲ್ ಕಾಲೇಜು ಬಳಿಯ ನಂತರ ಸಾರೋಟಿಯಲ್ಲಿ ಸಮ್ಮೇಳ ಅಧ್ಯಕ್ಷ ಮೆರವಣಿಗೆ ಸಾಗಲಿದೆ. ವಿವಿಧ ಜಾನಪದ ಕಲಾ ತಂಡಗಳು ಮತ್ತು ಪೂರ್ಣಕುಂಭ ಹೊತ್ತ ಮಹಿಳೆಯರು ಹಾಗೂ ಚಂದಾಪುರ ಸುತ್ತಮುತ್ತಲಿನ ಶಾಲಾ ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮೇಳವನ್ನು ಉದ್ಘಾಟಿಸಲಿದ್ದು, ಸಂಸದ ಡಿ.ಕೆ. ರವಿ, ಸಚಿವ ಡಿ.ಕೆ.ಶಿವಕುಮಾರ್,ಜರಗನಹಳ್ಳಿ ಶಿವಶಂಕರ್,ಸೇರಿದಂತೆ ಹಲವು ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಎರಡು ವಿಚಾರಗೋಷ್ಠಿಗಳು ನಡೆಯಲಿದ್ದು, ವಿದ್ಯಾರ್ಥಿ,ಯುವ ಮತ್ತು ಹಿರಿಯರ ಕವಿಗೋಷ್ಠಿಗೂ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ನಾಟಕ, ಯಕ್ಷಗಾನ ಕಾರ್ಯಕ್ರಮಗಳು ಕೂಡ ನಡೆಯಲಿವೆ ಎಂದು ತಿಳಿಸಿದರು.