ಲಕ್ನೋ: ಜಾತಿ ಆಧಾರದಲ್ಲಿ ಮತ ನೀಡಬೇಡಿ ಎಂದು ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಕೆಲ ಪಕ್ಷಗಳು ಕಪ್ಪುಹಣದ ಮೇಲೆಯೇ ಅವಲಂಬಿತವಾಗಿವೆ ಹಾಗೂ ಕುಟುಂಬ ಆಧರಿತ ಪಕ್ಷಗಳಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಟೀಕಿಸಿದ್ದಾರೆ. ಈ ಮೂಲಕ ಉತ್ತರ ಪ್ರದೇಶದ ಎರಡು ಪ್ರಮುಖ ಪಕ್ಷಗಳಾದ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷಗಳ ವಿರುದ್ಧ ತೀಕ್ಷ್ಣ ವಾಗ್ಧಾಳಿ ನಡೆಸಿದ್ದಾರೆ. ಅಲ್ಲದೆ, “ಜನರೇ ನಮ್ಮ ಹೈಕಮಾಂಡ್’ ಎನ್ನುವ ಮೂಲಕ “ಹೈಕ ಮಾಂಡ್ ಸಂಸ್ಕೃತಿ’ ಮೈದಳೆದಿರುವ ಕಾಂಗ್ರೆಸ್‌ಗೂ ಟಾಂಗ್ ನೀಡಿದ್ದಾರೆ.
ಚುನಾವಣೆ ಹೊಸ್ತಿಲಲ್ಲಿರುವ ಉತ್ತರ ಪ್ರದೇಶ ರಾಜಧಾನಿ ಲಕ್ನೋದಲ್ಲಿ ನಡೆದ ಭಾರಿ ಬಹಿರಂಗ “ಪರಿವರ್ತನ ರ್ಯಾಲಿ’ಯಲ್ಲಿ ಮಾತನಾಡಿದ ಮೋದಿ, “ರಾಜ್ಯದ ಎರಡು ಪಕ್ಷಗಳು (ಎಸ್‌ಪಿ ಮತ್ತು ಬಿಎಸ್‌ಪಿ) ಪರಸ್ಪರ ಕಣ್ಣಲ್ಲಿ ಕಣ್ಣಿಟ್ಟೂ ನೋಡದಷ್ಟು ವಿರೋಧಿಗಳು. ಆದರೆ ಕಪ್ಪುಹಣದ ವಿರುದ್ಧ ನಾನು ಸಮರ ಸಾರಿದ್ದಕ್ಕೆ ಎರಡೂ ಪಕ್ಷಗಳು ನನ್ನ ವಿರುದ್ಧ ಒಟ್ಟಾಗಿ ತಿರುಗಿಬಿದ್ದು “ಮೋದಿ ಹಟಾವೋ’, “ಮೋದಿ ಬದಲಿಸಿ’ ಎಂದು ಹೇಳುತ್ತಿವೆ’ ಎಂದು ಟೀಕಿಸಿದರು. “ಎಸ್‌ಪಿ, ಬಿಎಸ್‌ಪಿ ಆ ರೀತಿ ಹೇಳುತ್ತಿದ್ದರೆ ನಾನು ಗರೀಬಿ ಹಟಾವೋ, ಕಾಳಧನ ಹಟಾವೋ, ನೋಟು ಬದಲಿಸಿ. ಪರಿವರ್ತನೆ ತನ್ನಿ ಅಂತ ಹೇಳುತ್ತೇನೆ’ ಎಂದು ಕಿವಿಗಡಚಿಕ್ಕುವ ಕರತಾಡನದ ನಡುವೆ ಪ್ರಧಾನಿ ಹೇಳಿದರು.
“ಉತ್ತರ ಪ್ರದೇಶದ ಅಭಿವೃದ್ದಿಕ್ಕಾಗಿ ಕೇಂದ್ರ ಸರಕಾರ 2.50 ಲಕ್ಷ ಕೋಟಿ ರೂ. ಕೊಟ್ಟರೂ ಆಳುವ ಸಮಾಜವಾದಿ ಪಕ್ಷ$ಚಿಕ್ಕಾಸಿನ ಅಭಿವೃದ್ಧಿ ಮಾಡಿಲ್ಲ. ಜನರಿಗೆ ಯಾವುದೇ ಪ್ರಯೋಜನವನ್ನು ದೊರಕಿಸಿಕೊಟ್ಟಿಲ್ಲ. ಹೀಗಿರುವ ರಾಜ್ಯದಲ್ಲಿ ಬದಲಾವಣೆ ಆಗಬೇಕಾಗಿರುವುದು ಅಗತ್ಯ ಮತ್ತು ಅನಿವಾರ್ಯ. ಆದುದರಿಂದ ಜನರೇ ಆ ಬದಲಾವಣೆಯನ್ನು ತರಬೇಕು’ ಎಂದು ಮೋದಿ ಹೇಳಿದರು.
“ನಾನು ಈ ವರೆಗೆ ಭಾಗವಹಿಸಿರುವ ರಾಜಕೀಯ ರ್ಯಾಲಿಗಳಲ್ಲಿ ಇಷ್ಟೊಂದು ದೊಡ್ಡ ಜನಸಮೂಹ ಸೇರಿರುವುದನ್ನು ಎಲ್ಲಿಯೂ ಕಂಡಿಲ್ಲ. ಇಲ್ಲಿನ ಅಪಾರ ಜನರಾಶಿಯನ್ನು ಕಂಡು ನಾನು ಆನಂದ ತುಂದಿಲನಾಗಿದ್ದೇನೆ. ಇಷ್ಟು ಜನ ಸೇರಿರುವುದು ಮುಂದಿನ ಸರಕಾರ ಯಾರು ರಚಿಸುತ್ತಾರೆ ಎಂಬುದರ ಸಂಕೇತ ನೀಡುತ್ತಿದೆ. ಜನರು ಬದಲಾವಣೆ ಬಯಸುವುದನ್ನು ಕಾಣುತ್ತಿದ್ದೇನೆ. ಉತ್ತರ ಪ್ರದೇಶದ ಮತದಾರರು ಅಭಿವೃದ್ಧಿಗಾಗಿ ಬಿಜೆಪಿಗೆ ಮತ ಹಾಕುವರೆಂಬ ವಿಶ್ವಾಸ ನನಗಿದೆ’ ಎಂದು ಮೋದಿ ಹೇಳಿದರು.
ಎರಡು ದಿನಗಳ ಹಿಂದಷ್ಟೇ ಭೀಮರಾವ್ ಅಂಬೇಡ್ಕರ್ ಅವರ ಹೆಸರಿನಲ್ಲಿ ನಾವು ಭೀಮ್ ಆ್ಯಪ್ ಅನ್ನು ಬಿಡುಗಡೆ ಮಾಡಿದೆವು. ಆದರೆ, ಅದು ಕೆಲವು ವ್ಯಕ್ತಿಗಳನ್ನು ಏಕೆ ಚಿಂತೆಗೀಡು ಮಾಡಿದೆ ಎಂದು ಪ್ರಶ್ನಿಸಿದರು. ನಾವು ಪ್ರತಿ ಹಳ್ಳಿಗಳಿಗೂ ತೆರಳಿ, ಆ್ಯಪ್ ಅನ್ನು ಪ್ರಚಾರ ಮಾಡಲಿದ್ದೇವೆ. ಜನರು ಎಲ್ಲೆಡೆ ಭೀಮ್ ನೆನಪಿಸಿಕೊಳ್ಳಲಿದ್ದಾರೆ. ಭೀಮರಾವ್ ಅಂಬೇ ಡ್ಕರ್ ಅವರಿಗೆ ಇದಕ್ಕಿಂತ ಉನ್ನತ ಗೌರವ ಇನ್ನೊಂದಿಲ್ಲ ಎಂದು ಹೇಳಿದರು.
ಭ್ರಷ್ಟಾಚಾರ ಬುಡಮೇಲು ಮಾಡುವ ವರೆಗೂ ಹೋರಾಟ ಮುಂದುವರಿಯಲಿದೆ. ಇದಕ್ಕೆ ಉತ್ತರ ಪ್ರದೇಶದ ಜನರ ಆಶೀರ್ವಾದ ಕೋರಿದ ಮೋದಿ, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ತರುವಂತೆ ಮನವಿ ಮಾಡಿದರು.
ಮೂರು ಪಕ್ಷಗಳಿಗೂ ಟೀಕೆ: ಇದೇ ವೇಳೆ, ಉತ್ತರ ಪ್ರದೇಶದ ಮೂರು ಪಕ್ಷಗಳನ್ನು ಸಮಾನವಾಗಿ ಟೀಕಿಸಿರುವ ಮೋದಿ, ಕಾಂಗ್ರೆಸ್- ಪುತ್ರನನ್ನು ಉನ್ನತ ಹುದ್ದೆಯಲ್ಲಿ ಕೂರಿಸಲು ಸಾಧ್ಯವಾಗದ ಸ್ಥಿತಿಯಲ್ಲಿದೆ. ಮಾಯಾವತಿಯವರ ಬಿಎಸ್‌ಪಿ- ಕಪ್ಪು ಹಣವನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಇಡುವ ದಾವಂತದಲ್ಲಿದೆ. ಇನ್ನು ಆಡಳಿತಾರೂಢ ಸಮಾಜವಾದಿ ಪಕ್ಷ- ಕೌಟುಂಬಿಕ ಕಲಹದಲ್ಲೇ ಸಿಲುಕಿದೆ ಎಂದು ವ್ಯಂಗ್ಯವಾಡಿದರು.