Advertisement

ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೂಲ ಮಂತ್ರ : ಬಿಜೆಪಿ ಅಭ್ಯರ್ಥಿ ಎಸ್‌.ರಘು

11:32 AM May 09, 2023 | Team Udayavani |

ಬೆಂಗಳೂರು: “ಅಭಿವೃದ್ಧಿ ನನ್ನ ಮೂಲ ಮಂತ್ರ, ಕ್ಷೇತ್ರದ ಜನರ ಪ್ರೀತಿ-ವಿಶ್ವಾಸ-ನಂಬಿಕೆ ನನಗೆ ಶ್ರೀರಕ್ಷಣೆ. ರಾಜಕೀಯ ಎದುರಾಳಿಗಳಿಗೂ ಒಂದೇ ಒಂದು ಸಣ್ಣ ತೊಂದರೆ ಕೊಟ್ಟವನಲ್ಲ ನಾನು’ ಇದು ಸಿ.ವಿ.ರಾಮನ್‌ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್‌.ರಘು ಅವರ ಮಾತುಗಳು. ಮೂರು ಬಾರಿ ಹ್ಯಾಟ್ರಿಕ್‌ ಗೆಲುವು ಸಾಧಿಸಿರುವ ಎಸ್‌.ರಘು ಅವರು, ನನ್ನ ಕ್ಷೇತ್ರ ಶಾಂತಿಪ್ರಿಯ ಕ್ಷೇತ್ರ ಎಲ್ಲ ಜಾತಿ, ವರ್ಗ, ಸಮುದಾಯ ನನಗೆ ಮನೆ ಮಗನಂತೆ ಪ್ರೀತಿ ತೋರುತ್ತದೆ ಎಂದು ಉದಯವಾಣಿಗೆ ಸಂದರ್ಶನ ನೀಡಿದ್ದಾರೆ.

Advertisement

ಈ ಬಾರಿಯ ಚುನಾವಣೆ ಪ್ರಚಾರ ಹೇಗೆ ಸಾಗಿದೆ?

ಕ್ಷೇತ್ರದಲ್ಲಿ ಮತದಾರರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಪ್ರತಿ ವಾರ್ಡ್‌ನಲ್ಲೂ ಮತದಾರರ ಮನೆಬಾಗಿಲಿಗೆ ತಲುಪಿ ಮತಯಾಚಿಸುತ್ತಿದ್ದೇನೆ. ರೋಡ್‌ ಶೋ ಮೂಲಕವೂ ಜನರ ತಲುಪುತ್ತಿದ್ದೇನೆ. ಪ್ರಧಾನಿ ಮೋದಿ ಅವರು ನನ್ನ ಕ್ಷೇತ್ರದಲ್ಲಿ ರೋಡ್‌ ಶೋ ನಡೆಸಿದ್ದು, ಅದ್ಭುತವಾದ ಸ್ಪಂದನೆ ದೊರೆತಿದೆ. ಅಣ್ಣಾಮಲೈ ಸೇರಿ ಹಲವು ನಾಯಕರು ಪ್ರಚಾರ ನಡೆಸಿದ್ದಾರೆ.

ನೀವು ಕ್ಷೇತ್ರದ ಮತದಾರರಿಗೆ ನೀಡುವ ಭರವಸೆ ಏನು?

ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಲು ಆಶೀರ್ವಾದ ಮಾಡಿದ ಮತದಾರರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದ್ದೇನೆ. ಕ್ಷೇತ್ರವು ಅಭಿವೃದ್ಧಿಯಲ್ಲಿ ಮಾದರಿಯಾಗಿದೆ. ಮತ್ತಷ್ಟು ಅಭಿವೃದ್ಧಿಗೆ ಆಶೀರ್ವಾದ ಕೋರುತ್ತಿದ್ದೇನೆ. ಶಾಂತಿಪ್ರಿಯವಾದ ನನ್ನ ಕ್ಷೇತ್ರವನ್ನು ಗೂಂಡಾರಾಜ್ಯ ಮಾಡದೆ ಶಾಂತಿ-ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಿಸುವ ಭರವಸೆ ಸಹ ನೀಡುತ್ತಿದ್ದೇನೆ.

Advertisement

3 ಬಾರಿ ಶಾಸಕರಾಗಿರುವ ನಿಮ್ಮ ಗಮನಾರ್ಹ ಸಾಧನೆಗಳು ಯಾವುವು?

ಸಿ.ವಿ.ರಾಮನ್‌ನಗರ ಆಸ್ಪತ್ರೆ, ಐಸೋಲೇಷನ್‌ ಆಸ್ಪತ್ರೆ, ಡಯಾಬಿಟಿಸ್‌ ಆಸ್ಪತ್ರೆ, ಒಂಭತ್ತು ನಮ್ಮ ಕ್ಲಿನಿಕ್‌ಗಳು, ಸರ್ಕಾರಿ ಶಾಲೆಗಳ ಉನ್ನತೀಕರಣ, ರಸ್ತೆಗಳ ಅಭಿವೃದ್ಧಿ, ಸ್ವತ್ಛತೆಗೆ ಒತ್ತು, ಉದ್ಯಾನ, ಪಾರ್ಕ್‌ಗಳ ಅಭಿವೃದ್ಧಿ ಮಾಡಿದ್ದೇನೆ. ಬೀದಿ ವ್ಯಾಪಾರಿಗಳಿಗೆ ನೆರವು, ಹೆಣ್ಣು ಮಕ್ಕಳಿಗೆ ಹೊಲಿಗೆ ಯಂತ್ರ, ಹಿರಿಯ ನಾಗರಿಕರಿಗೆ ಗಾಲಿ ಕುರ್ಚಿ ಸೇರಿ ಬಡವರಿಗೆ ಸಹಾಯ ಮಾಡಿದ್ದೇನೆ. ನಿರಂತರ ಜನರ ಸಂಪರ್ಕ ದಲ್ಲಿದ್ದು ಕೆಲಸ ಮಾಡಿದ್ದೇನೆ. ಕೋವಿಡ್‌ ವೇಳೆ ಆಹಾರ ಮತ್ತು ಔಷಧ ಕಿಟ್‌, ಆಕ್ಸಿಜನ್‌ ವ್ಯವಸ್ಥೆ ಮಾಡಿದ್ದೇನೆ. ನನ್ನ ಕ್ಷೇತ್ರದ ಜನರ ಆರೋಗ್ಯ ಕಾಪಾಡಲು ಶಕ್ತಿ ಮೀರಿ ಪ್ರಯತ್ನಿಸಿದ್ದೇನೆ.

ಜನರ ಸ್ಪಂದನೆ ಹೇಗಿದೆ?

ತುಂಬಾ ಚೆನ್ನಾಗಿದೆ. ಬೆನ್ನಿಗಾನಹಳ್ಳಿಯ ಕೃಷ್ಣಯ್ಯ ಪಾಳ್ಯ, ಸಿವಿ ರಾಮನ್‌ನಗರದ ಕಗ್ಗದಾಸಪುರ, ನಾಗವಾರ ಪಾಳ್ಯ, ಜೀವನ್‌ಬಿಮಾ ನಗರ, ಆನಂದಪುರ, ಲಕ್ಷ್ಮೀಪುರ, ಸುಧಾಮನಗರ, ಸುದ್ದಗುಂಟೆಪಾಳ್ಯ, ಹೊಯ್ಸಳ ನಗರ, ಮರ್ಪಿ ಟೌನ್‌, ಕೋನೇನ ಅಗ್ರಹಾರ , ಹೊಸ ತಿಪ್ಪಸಂದ್ರ, ಹಳೇ ತಿಪ್ಪಸಂದ್ರ, ಇಂದಿರಾನಗರ ಹೀಗೆ ಹೋದ ಕಡೆಯಲ್ಲಾ ಮತದಾರರು ಸ್ವಯಂ ಪ್ರೇರಿತರಾಗಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಮೂರು ಅವಧಿ ಯಲ್ಲಿ ನಾನು ಮಾಡಿದ ಸೇವಾ ಕಾರ್ಯಗಳಿಗೆ ಮೆಚ್ಚುಗೆ ಸೂಚಿಸಿ ಬೇರೆ ಪಕ್ಷಗಳ ಮುಖಂಡರು, ಕಾರ್ಯಕರ್ತರು ನಿತ್ಯ ನೂರಾರು ಸಂಖ್ಯೆಯಲ್ಲಿ ಬಿಜೆಪಿ ಸೇರುತ್ತಿದ್ದಾರೆ.

ನಿಮ್ಮ ಪ್ರಕಾರ ಮತದಾರರು ಬಿಜೆಪಿಯನ್ನೇ ಏಕೆ ಬೆಂಬಲಿಸಬೇಕು?

ದೇಶ ಹಾಗೂ ರಾಜ್ಯಕ್ಕೆ ಇಂದು ಬಿಜೆಪಿಯೇ ಭರವಸೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ಇಡೀ ವಿಶ್ವದಲ್ಲೇ ಶಕ್ತಿಶಾಲಿ ರಾಷ್ಟ್ರವಾಗಿ ನಿರ್ಮಾಣ ವಾಗಿದೆ. ರಾಜ್ಯದಲ್ಲಿ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ಜನಪರ ಆಡಳಿತದಿಂದ ರಾಜ್ಯ ಪ್ರಗತಿ ಕಂಡಿದೆ. ಹೀಗಾಗಿ, ಬಿಜೆಪಿ ಅಭಿವೃದ್ಧಿಯ ಸಂಕೇತ. ಡಬಲ್‌ ಎಂಜಿನ್‌ ಸರ್ಕಾರದಿಂದ ನಮ್ಮ ಕ್ಷೇತ್ರದಲ್ಲೂ ಸಾಕಷ್ಟು ಅಭಿವೃದ್ಧಿ ಕೆಲಸ ಆಗಿವೆ. ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣ ವಿಶ್ವ ದರ್ಜೆಯ ಸವಲತ್ತುಗೊಳೊಂದಿಗೆ ಅಭಿವೃದ್ಧಿಗೊಂಡಿದೆ.

ಕ್ಷೇತ್ರದಲ್ಲಿ ಮಹನೀಯರ ಸ್ಮರಣೆ

ರಕ್ಷಣಾ ಇಲಾಖೆಯ ಡಿಆರ್‌ಡಿಓ, ಬೆಮೆಲ್‌, ಬಾಗ್‌ಮಾನೆ ಟೆಕ್‌ ಪಾರ್ಕ್‌ ಹೀಗೆ ಪ್ರತಿಷ್ಠಿತ ಸಂಸ್ಥೆಗಳು ನಮ್ಮ ಕ್ಷೇತ್ರದ ಹೆಮ್ಮೆ. ವರನಟ ಡಾ.ರಾಜ್‌ ಕುಮಾರ್‌, ಡಾ. ಅಂಬೇಡ್ಕರ್‌, ಸ್ವಾಮಿ ವಿವೇಕಾನಂದ, ಸರ್‌ ಎಂ.ವಿಶ್ವೇಶ್ವರಯ್ಯ, ಜಗಜ್ಯೋತಿ ಬಸವಣ್ಣ, ಕುವೆಂಪು, ಶಿವರಾಮ ಕಾರಂತ ಹೀಗೆ ಮಹನೀಯರ ಹೆಸರು ನಮ್ಮ ಕ್ಷೇತ್ರದ ಉದ್ಯಾನ, ಪಾರ್ಕ್‌ಗಳಿಗೆ ನಾಮಕರಣ ಮಾಡಲಾಗಿದೆ. ನಿತ್ಯ ಮಹನೀಯರ ಸ್ಮರಣೆಯೊಂದಿಗೆ ಬೆಳಗ್ಗೆ ಕೆಲಸ ಆರಂಭಿಸುತ್ತೇನೆ. ದಿನದ 24 ಗಂಟೆ ಜನರ ಸಂಪರ್ಕದಲ್ಲೇ ಇರುತ್ತೇನೆ.

Advertisement

Udayavani is now on Telegram. Click here to join our channel and stay updated with the latest news.

Next