Advertisement

ಆರ್‌.ವಿ.ದೇಶಪಾಂಡೆ ಸಿಎಂ ಆಕಾಂಕ್ಷಿಯಾ?

06:00 AM Aug 31, 2018 | |

ಬೆಂಗಳೂರು: ಲೋಕಸಭೆ ಚುನಾವಣೆ ನಂತರದ ವಿದ್ಯಮಾನಗಳಲ್ಲಿ ಸಮ್ಮಿಶ್ರ ಸರ್ಕಾರದ ನಾಯಕತ್ವ ಕಾಂಗ್ರೆಸ್‌ ಪಾಲಿಗೆ ಬರುವಂತ ಸ್ಥಿತಿ ನಿರ್ಮಾಣವಾದರೆ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಬಹುದು ಎಂಬ ಮಾತುಗಳು  ರಾಜಕೀಯ ವಲಯದಲ್ಲಿ  ಕೇಳಿಬರುತ್ತಿವೆ.

Advertisement

ಅದಕ್ಕೆ ಪೂರಕ ಎಂಬಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ದೆಹಲಿಯಲ್ಲಿ ಗುರುವಾರ , ದೇಶಪಾಂಡೆ ಹಿರಿಯರಿದ್ದಾರೆ. ಅವರೂ ಏಕೆ ಮುಖ್ಯಮಂತ್ರಿಯಾಗಬಾರದು ಎಂದು ಹೇಳಿದರೆ, ಅದಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಕೆಪಿಸಿಸಿ ದಿನೇಶ್‌ಗುಂಡೂರಾವ್‌, ದೇಶಪಾಂಡೆ ಮುಖ್ಯಮಂತ್ರಿಯಾಗುವ ಅರ್ಹತೆ ಹೊಂದಿದ್ದಾರೆ. ಆದರೆ, ಅದು ಮುಂದಿನ ವಿಧಾನಸಭೆ ಚುನಾವಣೆ ನಂತರವಷ್ಟೇ ಉದ್ಭವಿಸುವ ಮಾತು. ಆಗ ಯಾರಾದರೂ ಮುಖ್ಯಮಂತ್ರಿಯಾಗಬಹುದು ಎಂದು ಹೇಳಿದ್ದಾರೆ.ಮುಖ್ಯಮಂತ್ರಿ ಸ್ಥಾನಕ್ಕೆ ಇದ್ದಕ್ಕಿದ್ದಂತೆ ದೇಶಪಾಂಡೆ ಹೆಸರು ಪ್ರಸ್ತಾಪವಾಗಲು ಕಾರಣ ಏನಿರಬಹುದು ಎಂಬ ಚರ್ಚೆಯೂ  ಕಾಂಗ್ರೆಸ್‌-ಜೆಡಿಎಸ್‌ನಲ್ಲಿ ನಡೆಯುತ್ತಿದೆ.

ಮೂಲಗಳ ಪ್ರಕಾರ, ಮುಖ್ಯಮಂತ್ರಿ ಕುಮಾರಸ್ವಾಮಿ ಆಡಳಿತದ ಬಗ್ಗೆ ಕಾಂಗ್ರೆಸ್‌ನಲ್ಲಿ ಸಾಕಷ್ಟು ಅಸಮಾಧಾನ ಮನೆ ಮಾಡಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅನೇಕ ಬಾರಿ ಅದನ್ನು ಬಹಿರಂಗವಾಗಿಯೇ ಹೊರ ಹಾಕಿದ್ದಾರೆ. ಅಲ್ಲದೇ ಇತ್ತೀಚೆಗೆ ನಾನು ಮತ್ತೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಬಹಿರಂಗವಾಗಿ ಹೇಳುವ ಮೂಲಕ ಸಾಕಷ್ಟು ಕುತೂಹಲ ಮೂಡಿಸಿದ್ದರು.

ಅವರ ಈ ಹೇಳಿಕೆಯ ಹಿಂದೆ ಸಾಕಷ್ಟು ರಾಜಕೀಯ ಲೆಕ್ಕಾಚಾರ ಇದ್ದು ಲೋಕಸಭೆ ಚುನಾವಣೆ ನಂತರ ಸಮ್ಮಿಶ್ರ ಸರ್ಕಾರ ಪತನವಾಗುತ್ತದೆ. ಆಗ ಬಿಜೆಪಿಯು ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ 15 ಕ್ಕೂ ಹೆಚ್ಚು ಶಾಸಕರನ್ನು ಸೆಳೆದು ಸಮ್ಮಿಶ್ರ ಸರ್ಕಾರ ಪತನಗೊಳಿಸಿ ಹೊಸ ಸರ್ಕಾರ ರಚನೆಗೆ ಪ್ರಯತ್ನ ನಡೆಸಲಿದೆ.

ಅಂತಹ ಸಂದರ್ಭದಲ್ಲಿ ಕಾಂಗ್ರೆಸ್‌ ಶಾಸಕರನ್ನು ಉಳಿಸಿಕೊಂಡು ತಾವೇ ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯ ಆಲೋಚನೆ ಹೊಂದಿದ್ದಾರೆ. ಆದರೆ, ಅಂತಹ ಸಂದರ್ಭ  ಎದುರಾದರೆ ಮುಖ್ಯಮಂತ್ರಿಯಾಗಲು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ. ಪರಮೇಶ್ವರ್‌, ಡಿ.ಕೆ. ಶಿವಕುಮಾರ್‌ ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇದೆ.

Advertisement

ಜತೆಗೆ ಜೆಡಿಎಸ್‌ ಒಡೆಯುವುದು ತಪ್ಪಿಸಲು ದೇವೇಗೌಡರೂ ಕಾಂಗ್ರೆಸ್‌ನವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಮುಂದಾಗಿ  ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಒಪ್ಪಿಸಬಹುದು. ಆದರೆ,  ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗುವುದನ್ನು ದೇವೇಗೌಡರು ಒಪ್ಪಿಕೊಳ್ಳುವ ಸಾಧ್ಯತೆ ತೀರಾ ಕಡಿಮೆ.
ನಾಯಕತ್ವ ಬದಲಾವಣೆಯ ಅನಿವಾರ್ಯತೆ ಬಂದರೆ ತಮ್ಮೊಂದಿಗೆ ಉತ್ತಮ ಸಂಬಂಧ ಹೊಂದಿರುವ ಆರ್‌.ವಿ.ದೇಶಪಾಂಡೆ ಅವರನ್ನು  ಒಮ್ಮತದ ಅಭ್ಯರ್ಥಿಯಾಗಿ ಒಪ್ಪಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ, ಲೋಕಸಭೆ ಚುನಾವಣೆ ನಂತರ ಬದಲಿ ಸರ್ಕಾರ ರಚನೆ ಸ್ಥಿತಿ ನಿರ್ಮಾಣವಾದರೆ ದೇಶಪಾಂಡೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹೊರ ಹೊಮ್ಮುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.ಈ ಮಧ್ಯೆ, ಕಾಂಗ್ರೆಸ್‌ ಮತ್ತೆ ಮುಖ್ಯಮಂತ್ರಿಯಾಗುವ ಅವಕಾಶ ನಿಮಗೆ ತಪ್ಪಿದರೆ ಹೈಕಮಾಂಡ್‌ ಮಟ್ಟದಲ್ಲಿ ನನಗೆ ಬೆಂಬಲ ವ್ಯಕ್ತಪಡಿಸಿಬೇಕು ಎಂದು ದೇಶಪಾಂಡೆ ಸಿದ್ದರಾಮಯ್ಯ ಅವರ ಬಳಿಯೇ ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next