Advertisement

ತ್ಯಾಜ್ಯ ವಿಲೇವಾರಿ ವಾಹನಕ್ಕೆ  ಹಿಡಿಯುತ್ತಿದೆ ತುಕ್ಕು

04:32 PM Oct 07, 2018 | |

ಗದಗ: ಅವಳಿ ನಗರದಲ್ಲಿ ಕಸ ವಿಲೇವಾರಿಗಾಗಿ ನಗರಸಭೆ ಲಕ್ಷಾಂತರ ರೂ. ಮೌಲ್ಯದ ಕಂಪ್ಯಾಕ್ಟ್ ಗಾರ್ಬೇಜ್‌ ಡಿನ್ಪೋಸಲ್‌ ವಾಹನವನ್ನು ಖರೀದಿಸಿದೆ. ಆದರೆ ಇದು ಸಾರಿಗೆ ಇಲಾಖೆಯಿಂದ ಪರವಾನಗಿ ಪಡೆಯದ ಕಾರಣ ಸುಮಾರು ಆರು ತಿಂಗಳಿಂದ ನಗರಸಭೆ ಮೋಟರ್‌ ಶೆಡ್‌ನ‌ಲ್ಲೇ ತುಕ್ಕು ಹಿಡಿಯುತ್ತಿದೆ!

Advertisement

ಹೌದು. ಗದಗ-ಬೆಟಗೇರಿ ಅವಳಿ ನಗರದ ವಿವಿಧೆಡೆಯಿಂದ ತ್ಯಾಜ್ಯವನ್ನು ಡಂಪಿಂಗ್‌ ಯಾರ್ಡ್‌ಗೆ ಸಾಗಿಸಲು ಸುಮಾರು 31 ಲಕ್ಷ ರೂ. ಮೊತ್ತದಲ್ಲಿ ತ್ಯಾಜ್ಯ ವಿಲೇವಾರಿಗೆ ಅತ್ಯಾಧುನಿಕ ಶೈಲಿಯ ಕಂಪ್ಯಾಕ್ಟ್ ಗಾರ್ಬೇಜ್‌ ಡಿನ್ಪೋಸಲ್‌(ತ್ಯಾಜ್ಯ ವಿಲೇವಾರಿ ವಾಹನ)
ಖರೀದಿಸಿದೆ. ಆದರೆ, ನಗರಸಭೆ ವಾಹನ ಪೂರೈಸಿರುವ ಗುತ್ತಿಗೆ ಸಂಸ್ಥೆ ಕೆಲವೊಂದು ದಾಖಲೆಗಳನ್ನೇ ಒದಗಿಸಿಲ್ಲ. ಇದನ್ನರಿಯದ ನಗರಸಭೆ ಸಿಬ್ಬಂದಿ ವಾಹನದ ಪಾಸಿಂಗ್‌ಗಾಗಿ
ಆರ್‌ಟಿಒ ಕಚೇರಿಗೆ ಹೋದಾಗಲೇ ಗಮನಕ್ಕೆ ಬಂದಿದೆ. ಅಂದಿನಿಂದ ಈವರೆಗೆ ಸಮರ್ಪಕ
ದಾಖಲೆಗಳ ಕ್ರೋಢೀಕರಣವಾಗಿಲ್ಲ. ಹೀಗಾಗಿ ಅತ್ಯಾಧುನಿಕ ಹಾಗೂ ಹೊಸ ವಾಹನವಾಗಿದ್ದರೂ ರಸ್ತೆಗಿಳಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಮೂಲಗಳ ಹೇಳಿಕೆ. 

ತ್ಯಾಜ್ಯ ಸಾಗಿಸಲು ಕಂಪ್ಯಾಕ್ಟ್ ಅಗತ್ಯ:
ತ್ಯಾಜ್ಯ ಸಾಗಾಟದ ವೇಳೆ ಹರುಡುವ ದುವಾರ್ಸನೆ ಮತ್ತು ಒಣ ಕಸ ಗಾಳಿಗೆ ಹಾರುವುದನ್ನು ತಡೆಯಬೇಕು. ಅದಕ್ಕಾಗಿ ತ್ಯಾಜ್ಯವನ್ನು ಮುಚ್ಚಿದ ವಾಹನಗಳಲ್ಲೇ ಕಸ ಸಾಗಿಸಬೇಕು ಎಂಬ ನಿಯಮವಿದೆ. ಈ ಹಿನ್ನೆಲೆಯಲ್ಲಿ ಎರಡ್ಮೂರು ವರ್ಷಗಳ ಹಿಂದೆಯೇ ನಗರಸಭೆ ಕಂಪ್ಯಾಕ್ಟ್ ವಾಹನವೊಂದನ್ನು ಖರೀದಿಸಿತ್ತು. ಇದೀಗ ಮತ್ತೊಂದು ವಾಹನವನ್ನು ಖರೀದಿಸಿದೆ. ಆದರೆ, ದಾಖಲೆಗಳ ಕೊರತೆಯಿಂದ ನೂತನ ಕಂಪ್ಯಾಕ್ಟ್ ವಾಹನಕ್ಕೆ ಪಾಸಿಂಗ್‌ ಸಿಕ್ಕಿಲ್ಲ. ಒಂದೆರಡು ಬಾರಿ ಆರ್‌ಟಿಒ ಕಚೇರಿ ಹಾಗೂ ಪ್ರಾಯೋಗಿಕ ಚಾಲನೆ ಹೊರತಾಗಿ ನಿಂತ ಜಾಗದಿಂದ ಅಲುಗಾಡಿಲ್ಲ.

ಮತ್ತೊಂದೆಡೆ  ಅವಳಿ ನಗರದಲ್ಲಿ ಸಮರ್ಪಕವಾಗಿಟ್ರ್ಯಾಕ್ಟರ್‌ಗಳಿಲ್ಲ. ಬಡಾವಣೆಗಳಲ್ಲಿ ರಾಶಿ ರಾಶಿ ಕಸ ಬಿದ್ದರೂ ವಾಹನ ಕಳಿಸುವುದಿಲ್ಲ. ವಾಹನ ಕಳುಹಿಸಿದರೆ, ಅಗತ್ಯ ಸಿಬ್ಬಂದಿ ಇರುವುದಿಲ್ಲ ಎಂದು ನಗರಸಭೆಯ ಬಹುತೇಕ ಸಾಮಾನ್ಯ ಸಭೆಗಳಲ್ಲಿ ಪಕ್ಷಾತೀತವಾಗಿ ಸದಸ್ಯರು ಗೋಳು ತೋಡಿಕೊಂಡಿದ್ದಾರೆ.

ತ್ಯಾಜ್ಯ ವಿಲೇವಾರಿಗೆ ಆನೆ ಬಲ:
ತ್ಯಾಜ್ಯ ವಿಲೇವಾರಿಯಲ್ಲಿ ಕಂಪ್ಯಾಕ್ಟ್ ವಾಹನಗಳು ನಗರಸಭೆಗೆ ಆನೆ ಬಲ ತುಂಬುತ್ತವೆ. ಹೊಸ ವಾಹನ ಒಂದು ಟ್ರಿಪ್‌ಗೆ ಸುಮಾರು 8 ರಿಂದ 10 ಟನ್‌ ತ್ಯಾಜ್ಯವನ್ನು ಹೊತ್ತೂಯ್ಯುವ ಸಾಮರ್ಥ ಹೊಂದಿದೆ. 3-4 ಟ್ರ್ಯಾಕ್ಟರ್‌ಗೆ ಸಮವಾಗಿರುವ ಈ ಕಂಪ್ಯಾಕ್ಟ್ ವಾಹನ, ಹೈಡ್ರೋಲಿಕ್‌ ವ್ಯವಸ್ಥೆಯನ್ನೂ ಹೊಂದಿದೆ. ತನ್ನ ಹೈಡ್ರೋಲಿಕ್‌ ಬಾವುಗಳಿಂದ ಯಾಂತ್ರಿಕವಾಗಿ ಕಸದ ಡಬ್ಬಿಗಳಿಂದ ತನ್ನೊಳಗೆ ಕಸ ಸುರಿದುಕೊಳ್ಳುತ್ತದೆ. ಅದೇ ರೀತಿ ಡಂಪಿಂಗ್‌ ಯಾರ್ಡ್‌ಗಳಲ್ಲಿ ವಿಲೇವಾರಿ ಮಾಡುತ್ತದೆ. ಈ ಪ್ರಕ್ರಿಯೆಗೆ ವಾಹನ ಚಾಲಕ ಸೇರಿದಂತೆ ಮೂವರು ಸಿಬ್ಬಂದಿ ಸಾಕಾಗುತ್ತದೆ. ಆದರೆ, ಒಂದು ಟ್ರ್ಯಾಕ್ಟರ್‌ಗೆ ಕಸ ತುಂಬಲು 5-6 ಜನ ಪೌರ ಕಾರ್ಮಿಕರು ಬೇಕಾಗುತ್ತದೆ. ಹೀಗಾಗಿ ಪೌರ ಕಾರ್ಮಿಕರ ಶ್ರಮ ಹಾಗೂ ಇಂಧನವನ್ನು ಗಣನೀಯವಾಗಿ ಉಳಿಸುವುದರೊಂದಿಗೆ ತ್ವರಿತಗತಿಯಲ್ಲಿ ತ್ಯಾಜ್ಯ ವಿಲೇವಾರಿಯಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು. ನಗರಸಭೆ ಅಧಿಕಾರಿಗಳ ನಿಷ್ಕಾಜಿಯೋ ಅಥವಾ ವಾಹನ ಪೂರೈಕೆ ಮಾಡಿರುವ ಗುತ್ತಿಗೆ ಏಜೆನ್ಸಿಯ ಲೋಪವೋ ಗೊತ್ತಿಲ್ಲ. ಒಟ್ಟಾರೆ, ಸಾರ್ವಜನಿಕರ ತೆರಿಗೆ ಹಣದಲ್ಲಿ ಖರೀದಿಸಿರುವ ಲಕ್ಷಾಂತರ ರೂ. ಮೌಲ್ಯದ ವಾಹನದ ಸೇವೆ ಅವಳಿ ನಗರಕ್ಕೆ ಲಭಿಸುತ್ತಿಲ್ಲ ಎನ್ನುವುದರಲ್ಲಿ ಎರಡು ಮಾತಿಲ್ಲ.

Advertisement

ಇಲಿ ರಾಯನ ಕಾಟ!
ನಗರಸಭೆ ಮೋಟರ್‌ ಶೆಡ್‌ಗೆ ಹೊಂದಿಕೊಂಡಿರುವ ಮುನ್ಸಿಪಲ್‌ ಕಾಲೇಜು ಮೈದಾನದಲ್ಲಿರಿಸಿರುವ ಕಂಪ್ಯಾಕ್ಟ್ ವಾಹನಕ್ಕೆ ಇಲಿ ಕಾಟ ಶುರುವಾಗಿದೆ. ವಾಹನ ನಿಂತಲ್ಲೇ ನಿಂತಿರುವುದರಿಂದ ವಿವಿಧ ವೈಯರ್‌ಗಳನ್ನು ಕತ್ತರಿಸುತ್ತಿದ್ದು, ಈಗಾಗಲೇ ಎರಡು ಬಾರಿ ರಿಪೇರಿ ಕಂಡಿದೆ ಎಂಬುದು ಮೋಟರ್‌ ಶೆಡ್‌ ಸಿಬ್ಬಂದಿಯ ಅಂಬೋಣ.

ಈ ವಾಹನಕ್ಕೆ ವಿಮೆ ಹಣ ಪಾವತಿಸಿಲ್ಲ ಎಂದು ಕೇಳಿಬಂದಿತ್ತು. ದಾಖಲೆಗಳ ಕೊರತೆಯಿರುವ ಬಗ್ಗೆ ನನ್ನ ಗಮನಕ್ಕಿಲ್ಲ. ಆದರೆ, ಸಾರ್ವಜನಿಕರ ಹಣದಲ್ಲಿ ಖರೀದಿಸಿದ ವಾಹನವನ್ನು ಬಳಸಿಕೊಳ್ಳದೇ ಬೇಜವಾಬ್ದಾರಿ ತೋರಿದ ನಗರಸಭೆ ಪೌರಾಯುಕ್ತರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಬೇಕು. ಒಂದು ವಾರದಲ್ಲಿ ಎಲ್ಲವನ್ನೂ ಸರಿಪಡಿಸಿ, ವಾಹನವನ್ನು ಸೇವೆಗೆ ಬಳಸಿಕೊಳ್ಳುವಂತೆ ಮಾಡಬೇಕು.
ಸದಾನಂದ ಪಿಳ್ಳಿ, ನಗರಸಭೆ ವಿಪಕ್ಷ ನಾಯಕ

ಹೊಸ ವಾಹನದ ಪಾಸಿಂಗ್‌ ಆಗದಿರುವುದು ನನ್ನ ಗಮನಕ್ಕೂ ಬಂದಿದೆ. ಅಧಿಕಾರಿಗಳೊಂದಿಗೆ ಚರ್ಚಿಸಿ, ಶೀಘ್ರವೇ ಸಮಸ್ಯೆ ಬಗೆಹರಿಸುತ್ತೇನೆ.
. ಸುರೇಶ್‌ ಕಟ್ಟಿಮನಿ,
  ನಗರಸಭೆ ಅಧ್ಯಕ್ಷ 

ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next