Advertisement

ರಷ್ಯಾ-ಉಕ್ರೇನ್‌ ಯುದ್ಧ ಸನ್ನದ್ಧ

01:56 AM Feb 20, 2022 | Team Udayavani |

ಮಾಸ್ಕೋ: ಉಕ್ರೇನ್‌ನಲ್ಲಿ ಯುದ್ಧದ ಕರಿಛಾಯೆ ಮೂಡತೊಡಗಿದೆ. ರಷ್ಯಾ ಮತ್ತು ಉಕ್ರೇನ್‌ ಪರಸ್ಪರ ಯುದ್ಧ ಸನ್ನದ್ಧವಾಗಿ ನಿಂತಿವೆ.

Advertisement

ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ರಷ್ಯಾ ಬೆಂಬಲಿತ ಪ್ರತ್ಯೇಕತವಾದಿಗಳು ರಷ್ಯಾ ಗಡಿಯಲ್ಲಿ ಉಕ್ರೇನ್‌ನ ಸೈನಿಕನೊಬ್ಬನನ್ನು ಹತ್ಯೆಗೈದಿದ್ದಾರೆ. ಪರಿಸ್ಥಿತಿ ಉದ್ವಿಗ್ನಗೊಂಡಿದೆ.

ಕದನ ವಿರಾಮ ಒಪ್ಪಂದದ ವೇಳೆ ನಿರ್ಬಂಧಿಸಲಾಗಿದ್ದ 82 ಮತ್ತು 120 ಮಿ.ಮೀ. ಕ್ಯಾಲಿಬರ್‌ ಮೋರ್ಟಾರ್‌ ಶೆಲ್‌ಗ‌ಳನ್ನು ಬಳಸಿ ಬಂಡುಕೋರರು ತಮ್ಮ ಸೈನಿಕನನ್ನು ಕೊಂದಿದ್ದಾರೆ ಎಂದು ಉಕ್ರೇನ್‌ ಆರೋಪಿಸಿದೆ. ಇದರ ನಡುವೆ ರಷ್ಯಾವು ಉಕ್ರೇನ್‌ ಗಡಿಭಾಗದಲ್ಲಿ ಮತ್ತಷ್ಟು ಜೆಟ್‌ಗಳನ್ನು ತಂದಿಳಿಸಿದೆ. ಅಲ್ಲದೆ ಶನಿವಾರ ಉಕ್ರೇನ್‌ ಗಡಿಯ ಸಮೀಪ ವ್ಯೂಹಾತ್ಮಕ ಅಣ್ವಸ್ತ್ರ ಕ್ಷಿಪಣಿಗಳ ಪರೀಕ್ಷೆ ನಡೆಸಿದೆ. ಅಧ್ಯಕ್ಷ ಪುಟಿನ್‌ ಸಮ್ಮುಖದಲ್ಲೇ ಈ ಪರೀಕ್ಷೆಗಳು ನಡೆದಿವೆ. ಇನ್ನೊಂದೆಡೆ ಬಂಡುಕೋರರ ಹಿಡಿತದಲ್ಲಿರುವ ಪ್ರಾಂತ್ಯದ ಮೂಲಕ ಸಾಗಿರುವ ಅಂತಾರಾಷ್ಟ್ರೀಯ ತೈಲ ಪೈಪ್‌ಲೈನ್‌ ಶನಿವಾರ ಸ್ಫೋಟಗೊಂಡಿದೆ. ಈ ಎಲ್ಲ ಬೆಳವಣಿಗೆಗಳು ಯುದ್ಧ ಭೀತಿಯನ್ನು ಉಲ್ಬಣ ಗೊಳಿಸಿದ್ದು, ಯಾವುದೇ ಕ್ಷಣದಲ್ಲಿ ಸಮರ ಆರಂಭವಾಗುವ ಸುಳಿವನ್ನು ನೀಡಿವೆ.

ಶನಿವಾರ ಪೂರ್ವ ಉಕ್ರೇನ್‌ನ ಬಂಡುಕೋರರು ತಮ್ಮ ಪಡೆಗಳನ್ನು ಒಗ್ಗೂಡಿಸಲು ಆರಂ ಭಿಸಿದ್ದಾರೆ. ಡೋನೆಸ್ಕ್ ಪ್ರದೇಶದಲ್ಲಿರುವ ರಷ್ಯಾ ಪರ ಪ್ರತ್ಯೇಕತವಾದಿ ಸರಕಾರದ ಮುಖ್ಯಸ್ಥ ಡೆನಿಸ್‌ ಪುಶಿಲಿನ್‌, ಎಲ್ಲ ಸೇನಾಪಡೆಗಳು ಸಜ್ಜಾಗುವಂತೆ ಸೂಚಿಸಿದ್ದಾರೆ.

ಲುಹಾನ್ಸ್‌ಕ್‌ ಪ್ರದೇಶದ ಪ್ರತ್ಯೇಕತವಾದಿ ನಾಯಕ ಲಿಯೋನಿಡ್‌ ಪ್ಯಾಸೆನಿಕ್‌ರಿಂದಲೂ ಇದೇ ಮಾದರಿಯ ಆದೇಶ ಹೊರಬಿದ್ದಿದೆ. ಶಸ್ತ್ರಾಸ್ತ್ರಗಳನ್ನು ಬಳಸಲು ಬರುವ ಎಲ್ಲರೂ ತಮ್ಮ ತಮ್ಮ ಕುಟುಂಬಗಳು, ಪತ್ನಿ-ಮಕ್ಕಳನ್ನು ರಕ್ಷಿಸಲು ಸಜ್ಜಾಗಿ. ಒಗ್ಗಟ್ಟಾಗಿ ವಿಜಯ ಯಾತ್ರೆ ಮಾಡೋಣ ಎಂದು ಅವರು ಕರೆ ನೀಡಿದ್ದಾರೆ. ಈ ಪ್ರತ್ಯೇಕತವಾದಿಗಳು ಮತ್ತು ಉಕ್ರೇನ್‌ ಪಡೆಗಳ ನಡುವೆ 8 ವರ್ಷಗಳಿಂದ ಸಂಘರ್ಷ ನಡೆಯುತ್ತಲೇ ಇದೆ. ಆದರೆ ಇತ್ತೀಚೆಗೆ ಶೆಲ್‌ ದಾಳಿಗಳು, ಕಾರ್‌ ಬಾಂಬ್‌ ಸ್ಫೋಟ ಹೆಚ್ಚಾಗಿರುವುದು ಮತ್ತು ರಷ್ಯಾ ಕೂಡ ಉಕ್ರೇನ್‌ನ ಅತಿಕ್ರಮಣಕ್ಕೆ ಮುಂದಾಗಿರುವುದು ಈ ಸಂಘರ್ಷದ ಜ್ವಾಲೆಯನ್ನು ಹೆಚ್ಚಿಸಿದೆ.

Advertisement

ಅಮೆರಿಕದಿಂದ ದಿಗ್ಬಂಧನದ ಎಚ್ಚರಿಕೆ: ಉಕ್ರೇನ್‌ ಮೇಲೆ ರಷ್ಯಾ ದಾಳಿ ಮಾಡಿದ್ದೇ ಆದಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ. ಅದರ ವಿರುದ್ಧ ಆರ್ಥಿಕ ದಿಗ್ಬಂಧನ ಹೇರುವುದು ಖಚಿತ ಎಂದು ಅಮೆರಿಕ ಎಚ್ಚರಿಸಿದೆ. ಜರ್ಮನಿಯಲ್ಲಿ ನಡೆದ ಮ್ಯೂನಿಚ್‌ ಭದ್ರತ ಸಮಾವೇಶದಲ್ಲಿ ಮಾತನಾಡಿದ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌, ಈ ವಿಚಾರದಲ್ಲಿ ನಾವು ಸ್ಪಷ್ಟವಾಗಿದ್ದೇವೆ. ಉಕ್ರೇನ್‌ ಮೇಲೆ ರಷ್ಯಾ ದಾಳಿ ನಡೆಸಿದರೆ ಅಮೆರಿಕವು ತನ್ನ ಮಿತ್ರರಾಷ್ಟ್ರಗಳೊಂದಿಗೆ ಸೇರಿ ಹಿಂದೆಂದೂ ಕಂಡರಿಯದಂತಹ ಆರ್ಥಿಕ ದಿಗ್ಬಂಧನವನ್ನು ಹೇರಲಿವೆ ಎಂದಿದ್ದಾರೆ.

ಎರಡು ಸ್ಫೋಟ: ಪೂರ್ವ ಉಕ್ರೇನ್‌ನಲ್ಲಿ ಪ್ರತ್ಯೇಕತವಾದಿಗಳ ಬಾಹುಳ್ಯವಿರುವ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ತೈಲ ಪೈಪ್‌ಲೈನ್‌ ಶನಿವಾರ ಏಕಾಏಕಿ ಸ್ಫೋಟಗೊಂಡಿದೆ. ಡ್ರಜ್‌ಬಾ ಪೈಪ್‌ಲೈನ್‌ ರಷ್ಯಾದಿಂದ ಪೂರ್ವ ಮತ್ತು ಕೇಂದ್ರ ಯುರೋಪ್‌ನ ವಿವಿಧ ಭಾಗಗಳಿಗೆ ಸಂಪರ್ಕ ಹೊಂದಿದೆ. ಸ್ಫೋಟದ ತೀವ್ರತೆಗೆ ಆಗಸದಲ್ಲಿ ಬೆಂಕಿಯುಂಡೆ ಪಸರಿಸಿದ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಇದಾದ ಒಂದೇ ತಾಸಿನಲ್ಲಿ ಮತ್ತೊಂದು ಸ್ಫೋಟ ಸಂಭವಿಸಿದೆ. ಸಾವುನೋವಿನ ಮಾಹಿತಿ ಲಭ್ಯವಾಗಿಲ್ಲ ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ.

Advertisement

Udayavani is now on Telegram. Click here to join our channel and stay updated with the latest news.

Next