Advertisement

ಕಾಮನ್‌ವೆಲ್ತ್ ಚೆಸ್‌ ಸ್ಪರ್ಧೆಗೆ ಅಣಿಯಾದ ಗ್ರಾಮೀಣ ಪ್ರತಿಭೆ

11:11 AM Jun 22, 2018 | |

ಪುತ್ತೂರು: ಗ್ರಾಮೀಣ ಪ್ರತಿಭೆಯೊಂದು ಅಂತಾರಾಷ್ಟ್ರೀಯ ಆಟಗಾರರಿಗೆ ಸವಾಲೊಡ್ಡಿ ನಿಲ್ಲುವುದು ಸಣ್ಣ ಮಾತೇನಲ್ಲ. ಇಂತಹ ಸವಾಲಿಗೆ ಸಿದ್ಧರಾಗಿ ನಿಂತಿರುವವರು ಪುತ್ತೂರು ಬುಳೇರಿಕಟ್ಟೆಯ ದೀಪ್ತಿಲಕ್ಷ್ಮೀ ಹಾಗೂ ಪುತ್ತೂರಿನ ಪಂಕಜ್‌ ಭಟ್‌. ಜೂನ್‌ 25ರಿಂದ ಜುಲೈ 4ರವರೆಗೆ ದಿಲ್ಲಿಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಕಾಮನ್‌ ವೆಲ್ತ್‌ ಚೆಸ್‌ ಗೇಮ್ಸ್‌ನಲ್ಲಿ ಇವರು ಭಾರತವನ್ನು ಪ್ರತಿನಿಧಿಸಲಿದ್ದಾರೆ.

Advertisement

ಚೆಸ್‌ ಪಂದ್ಯಕ್ಕೆ ಪ್ರತ್ಯೇಕವಾಗಿ ಕಾಮನ್‌ವೆಲ್ತ್‌ ಗೇಮ್ಸ್‌ ಏರ್ಪಡಿಸಲಾಗುತ್ತದೆ. ಕಾಮನ್‌ವೆಲ್ತ್‌ ಸದಸ್ಯತ್ವ ಹೊಂದಿರುವ 53 ದೇಶಗಳ ಆಟಗಾರರು ಇಲ್ಲಿ ತಮ್ಮ ಪ್ರತಿಭೆ ಪ್ರದರ್ಶನ ಮಾಡಲಿದ್ದಾರೆ. 2017ರಲ್ಲಿ 13 ವರ್ಷದೊಳಗಿನ ರಾಜ್ಯ ಮಟ್ಟದ ಚೆಸ್‌ ಸ್ಪರ್ಧೆಯಲ್ಲಿ ಭಾಗವಹಿಸಿ, ಪಂಜಾಬಿನಲ್ಲಿ ನಡೆದ ರಾಷ್ಟ್ರಮಟ್ಟದ ಪಂದ್ಯದಲ್ಲಿ ಭಾಗವಹಿಸಿದವರು ಮಾತ್ರ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಅರ್ಹತೆ ಪಡೆಯುತ್ತಾರೆ. ಇವರಿಬ್ಬರೂ ಪುತ್ತೂರು ಜೀನಿಯಸ್‌ ಚೆಸ್‌ ಸ್ಕೂಲ್‌ನ ನಿರ್ದೇಶಕ ಸತ್ಯಶಂಕರ್‌ ಕೋಟೆ ಅವರ ಬಳಿ ತರಬೇತಿ ಪಡೆದಿದ್ದಾರೆ.

ದೀಪ್ತಿಲಕ್ಷ್ಮೀ
ಬುಳೇರಿಕಟ್ಟೆಯ ಚಿಕ್ಕಮುಂಡೇಲು ನಿವಾಸಿ ಶಂಕರ ಪ್ರಸಾದ್‌ ಕನ್ನೆಪ್ಪಾಡಿ, ಉಷಾ ಪ್ರಸಾದ್‌ ದಂಪತಿ ಪುತ್ರಿ. ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ. ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಭಾಷಣ, ಪ್ರಬಂಧ, ರಸಪ್ರಶ್ನೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರಸ್ತುತ 1455 ಚೆಸ್‌ ಫಿಡೇ ರೇಟಿಂಗ್‌ ಹೊಂದಿರುತ್ತಾರೆ. ಕರ್ನಾಟಕ, ಕೇರಳ, ಗೋವಾ, ಚೆನ್ನೈ ಮೊದಲಾದ ಕಡೆಗಳಲ್ಲಿ ನಡೆದ ಅಂತಾರಾಷ್ಟ್ರೀಯ ಫಿಡೇ ಚೆಸ್‌ ಟೂರ್ನಮೆಂಟ್‌ಗಳಲ್ಲಿ ಭಾಗವಹಿಸಿ ಹಲವು ಬಹುಮಾನ ಪಡೆದಿದ್ದಾರೆ.

2016-17ರಲ್ಲಿ ಬಿಹಾರದ ಭಾಗಲ್ಪುರದಲ್ಲಿ ನಡೆದ ರಾಷ್ಟ್ರ ಮಟ್ಟದ ವಿದ್ಯಾಭಾರತೀ ಶಾಲೆಗಳ ಚೆಸ್‌ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು, ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದರು. ತೆಲಂಗಾಣದ ಸ್ಕೂಲ್‌ ಗೇಮ್ಸ್‌ ಫೆಡರೇಷನ್‌ ಆಫ್‌ ಇಂಡಿಯಾದಲ್ಲಿ ಸ್ಪರ್ಧಿಸಿದ್ದಾರೆ. 2017-18ರಲ್ಲಿ ರಾಜ್ಯ ಮಟ್ಟದಲ್ಲಿ ಚಾಂಪಿಯನ್‌. ತೆಲಂಗಾಣದಲ್ಲಿ ನಡೆದ ರಾಷ್ಟ್ರಮಟ್ಟದ 14 ವರ್ಷಗಳೊಳಗಿನ ಬಾಲಕಿಯರ ವಿಭಾಗದಲ್ಲಿ ನಾಯಕಿಯಾಗಿದ್ದರು. ರಾಷ್ಟ್ರಮಟ್ಟದ ಎಸ್‌ ಜಿಎಫ್‌ಐನಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಿದ್ದರು. ಇದರಲ್ಲಿ ಉತ್ತಮ ಆಟಗಾರ್ತಿ ಪ್ರಶಸ್ತಿ ಪಡೆದುಕೊಂಡಿದ್ದರು.

Advertisement

ಪಂಕಜ್‌ ಭಟ್‌
ಪುತ್ತೂರಿನಲ್ಲಿ ವಾಸ್ತವ್ಯವಿರುವ ಡಾ| ಮಹಾಲಿಂಗೇಶ್ವರ ಪ್ರಸಾದ್‌, ಪಾವನಾ ಪ್ರಸಾದ್‌ ದಂಪತಿ ಪುತ್ರ ಪಂಕಜ್‌ ಭಟ್‌. ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮದ 7ನೇ ತರಗತಿ ವಿದ್ಯಾರ್ಥಿ. 9ನೇ ವರ್ಷದೊಳಗಿನ ರಾಜ್ಯಮಟ್ಟದ ಸ್ಪರ್ಧೆಯಲ್ಲಿ 2ನೇ ಸ್ಥಾನ. 15 ವರ್ಷಗಳೊಳಗಿನ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ 3ನೇ ಸ್ಥಾನ. ಹಿಂದಿನ ವರ್ಷ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪಂಕಜ್‌ ಭಾಗವಹಿಸಿದ್ದರು. ವಿದ್ಯಾಭಾರತೀ ತಂಡದಿಂದ ಎಸ್‌ಜಿಎಫ್‌ಐ ಸ್ಪರ್ಧೆಗೆ ಹೋಗಿ, 4ನೇ ಸ್ಥಾನ ಪಡೆದಿದ್ದಾರೆ.

ಕರಾವಳಿಯ ಪ್ರತಿಭೆ 
ಕಾಮನ್‌ವೆಲ್ತ್‌ ಗೇಮ್ಸ್‌ ಅಲ್ಲದೆ, ಕೋಲ್ಕತಾದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ದೀಪ್ತಿಲಕ್ಷ್ಮೀ ಅಣಿಯಾಗುತ್ತಿದ್ದಾರೆ. ಇದು ಜು.17ರಿಂದ 25ರ ತನಕ ಕೋಲ್ಕತಾದಲ್ಲಿ ನಡೆಯಲಿದೆ. ಇತ್ತೀಚೆಗೆ ಮೈಸೂರಿನಲ್ಲಿ ನಡೆದ 15 ವರ್ಷಗಳೊಳಗಿನ ಬಾಲಕಿಯರ ರಾಜ್ಯಮಟ್ಟದ ಕ್ರೀಡಾಕೂಟ ದಲ್ಲಿ ತೃತೀಯ ಸ್ಥಾನ ಪಡೆದು, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು. ರಾಷ್ಟ್ರಮಟ್ಟದಲ್ಲಿ ಸ್ಪರ್ಧೆಗೆ ಆಯ್ಕೆಯಾದ ನಾಲ್ಕು ಮಂದಿಯಲ್ಲಿ ದೀಪ್ತಿಲಕ್ಷ್ಮೀ ಒಬ್ಬರು. ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಮೊದಲ ನಾಲ್ಕು ಸ್ಥಾನ ಪಡೆದವರನ್ನು ರಾಷ್ಟ್ರಮಟ್ಟಕ್ಕೆ ಆಯ್ಕೆ ಮಾಡಲಾಗಿದೆ. ಇದರಲ್ಲಿ ಇನ್ನು ಮೂವರು ಬೆಂಗಳೂರು, ಮೈಸೂರಿನವರು. ಕರಾವಳಿ ಭಾಗದ ಏಕೈಕ ಪ್ರತಿಭೆ ದೀಪ್ತಿಲಕ್ಷ್ಮೀ. ರಾಜ್ಯಮಟ್ಟದ ಸ್ಪರ್ಧೆಯ ಮೊದಲ ಮೂರು ಪ್ರತಿಭೆಗಳಿಗೆ ಒಂದೇ ತೆರನಾದ ಅಂಕ ಬಂದಿತ್ತು. ಅಂದರೆ 9ರಲ್ಲಿ 7.5 ಅಂಕ ಪಡೆದುಕೊಂಡಿದ್ದರು. ಆದ್ದರಿಂದ ಬುಕ್‌ಲಾಸ್‌ ((buchholz)) ಮೂಲಕ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ನೀಡಲಾಯಿತು. ಅದರಲ್ಲಿ ದೀಪ್ತಿಲಕ್ಷ್ಮೀ ಮೂರನೇ ಸ್ಥಾನ ಪಡೆದುಕೊಂಡರು.

ಅಣ್ಣನೇ ಸ್ಫೂರ್ತಿ
ದೀಪ್ತಿಲಕ್ಷ್ಮೀ ಗೆ ಚೆಸ್‌ನಲ್ಲೇ ಸಾಧನೆ ಮಾಡಬೇಕೆಂಬ ಆಸೆ ಇದೆ. ಈಕೆಗೆ ಅಣ್ಣ ಶ್ಯಾಮ್‌ ಪ್ರಸಾದ್‌ ಸ್ಫೂರ್ತಿ. ತುಂಬಾ ಆಸಕ್ತಿ ಇರುವ ಕಾರಣ ನಾವು ಪ್ರೋತ್ಸಾಹ ನೀಡುತ್ತಿದ್ದೇವೆ. ಆದರೆ ಇದು ದುಬಾರಿ ಆಟ. ಸರಕಾರದ ಮಟ್ಟದಿಂದಲೂ ಸಹಾಯ ಬೇಕು. ಇಲ್ಲದಿದ್ದರೆ ಇಂತಹ ಪ್ರತಿಭೆಗಳು ಮುಂದೆ ಬರುವುದೇ ಕಷ್ಟ.
– ಉಷಾ ಪ್ರಸಾದ್‌, ದೀಪ್ತಿಲಕ್ಷ್ಮೀ ತಾಯಿ 

 ಗಣೇಶ್‌ ಎನ್‌. ಕಲ್ಲರ್ಪೆ 

Advertisement

Udayavani is now on Telegram. Click here to join our channel and stay updated with the latest news.

Next