Advertisement

Medical ವಿದ್ಯಾರ್ಥಿಗಳಿಗೆ ಸರಕಾರಿ ಕೋಟಾ ಶಾಪ?

11:50 PM Jun 24, 2023 | Team Udayavani |

ಬೆಂಗಳೂರು: ವೈದ್ಯ ವೃತ್ತಿಯ ಕನಸು ಹೊತ್ತು ಸರಕಾರಿ ಕೋಟಾದಡಿ ವೈದ್ಯಕೀಯ ಶಿಕ್ಷಣ ಪೂರೈಸಿದವರು ಅದೇ “ಸರಕಾರಿ ಕೋಟಾ’ದಡಿ ವಿಧಿಸಿರುವ ನಿಬಂಧನೆಗಳಿಂದಾಗಿ ವೃತ್ತಿ ಆರಂಭಿಸಲಾಗದೆ ಪರದಾಡುವ ಸ್ಥಿತಿ ಸೃಷ್ಟಿ ಯಾಗಿದೆ!

Advertisement

ಸರಕಾರಿ ಕೋಟಾದಡಿ ವೈದ್ಯಕೀಯ ಪದವಿ ಪೂರ್ಣಗೊಳಿಸಿದವರು ಒಂದು ವರ್ಷ ಗ್ರಾಮೀಣ ಆಸ್ಪತ್ರೆಗಳಲ್ಲಿ ಸೇವೆ ಮಾಡುವುದು ಕಡ್ಡಾಯ. ಹಿಂದೆ ಸರಕಾರದಿಂದ ಸೇವೆ ಸಲ್ಲಿಸಲು ಕರೆ ಬರುವವರೆಗೆ ಕರ್ನಾಟಕ ವೈದ್ಯಕೀಯ ಮಂಡಳಿ (ಕೆಎಂಸಿ)ಯಲ್ಲಿ ಹೆಸರು ನೋಂದಾಯಿಸಿ ಖಾಸಗಿ ಅಥವಾ ಆಸ್ಪತ್ರೆಗಳಲ್ಲಿ ಕಿರಿಯ ವೈದ್ಯರಾಗಿಯೋ ಅಥವಾ ಸ್ನಾತಕೋತ್ತರ ವಿದ್ಯಾಭ್ಯಾಸವನ್ನೋ ಕೈಗೊಳ್ಳಲು ಅವಕಾಶ ಇತ್ತು. ಆದರೆ ಪ್ರಸಕ್ತ ಸಾಲಿನಿಂದ ಈ ಅವಕಾಶವನ್ನೂ ನಿರಾಕರಿಸಲಾಗಿದೆ.

ಅಂದರೆ ಗ್ರಾಮೀಣ ಸೇವೆ ಪೂರ್ಣಗೊಳ್ಳದವರಿಗೆ ಕೆಎಂಸಿಯಲ್ಲಿ ನೋಂದಾಯಿಸಿಕೊಳ್ಳುವ ಅವಕಾಶ ನಿರಾಕರಿಸಲಾಗಿದೆ. ಕಾನೂನು ಪ್ರಕಾರ ಪದವಿ ಪಡೆದಿದ್ದರೂ ಕರ್ನಾಟಕ ವೈದ್ಯಕೀಯ ಮಂಡಳಿ ನೋಂದಣಿಯಾಗದೆ ವೃತ್ತಿಜೀವನ ಪ್ರಾರಂಭಿಸಲು ಅವಕಾಶ ನೀಡುತ್ತಿಲ್ಲ. 2023ರ ಜುಲೈಗೆ ಅಂತಿಮ ವರ್ಷದ ಸರಕಾರಿ ಕೋಟಾದಡಿ ವೈದ್ಯಕೀಯ ಪದವಿ ಪೂರೈಸಿ, ಇಂಟರ್ನ್ಶಿಪ್‌ ಮುಗಿಸಿದ 2,500ರಿಂದ 3,000 ವಿದ್ಯಾರ್ಥಿಗಳು ಹಂತ ಹಂತವಾಗಿ ಹೊರಬರಲಿದ್ದಾರೆ. ಇವರಲ್ಲಿ ಅನೇಕರು ಈಗಾಗಲೇ ಇಂಟರ್ನ್ಶಿಪ್‌ ಮುಗಿಸಿ ಅನೇಕ ತಿಂಗಳಿನಿಂದ ಸೇವೆ ಸಲ್ಲಿಸಲು ಸಾಧ್ಯವಾಗದೆ ಮನೆಯಲ್ಲಿದ್ದಾರೆ.

ಸಾಲದ ನೋಟಿಸ್‌ ಮನೆಗೆ!
ವೈದ್ಯ ಪದವಿ ಪೂರ್ಣಗೊಂಡು 3 ತಿಂಗಳು ಕಳೆದರೂ ಗ್ರಾಮೀಣ ಸೇವೆಗೆ ಕರೆಬಂದಿಲ್ಲ. ಇನ್ನೊಂದೆಡೆ ಖಾಸಗಿಯಾಗಿ ವೃತ್ತಿ ಪ್ರಾರಂಭಿಸಲು ಕೆಎಂಸಿಯಲ್ಲಿ ನೋಂದಾಯಿಸಬೇಕು. ಪ್ರಸ್ತುತ ನೋಂದಣಿ ಸಾಧ್ಯವಾಗುತ್ತಿಲ್ಲ. ವಿದ್ಯಾಭ್ಯಾಸಕ್ಕಾಗಿ 12ರಿಂದ 15 ಲಕ್ಷ ರೂ. ಸಾಲ ಮಾಡಿರುತ್ತಾರೆ. ಇದರ ಮರುಪಾವತಿಗೆ ನೋಟಿಸ್‌ಗಳು ಮನೆ ತಲುಪುತ್ತಿವೆ. ಇದರಿಂದ ಹೊಸ ವೈದ್ಯರು ಕಂಗಾಲಾಗಿದ್ದಾರೆ.

ಸರಕಾರಿ ಕೋಟಾದಲ್ಲಿ ವೈದ್ಯಕೀಯ ಪದವಿ ಮುಗಿಸಿ ಐದು ತಿಂಗಳ ಮೇಲಾಗಿದೆ. ಗ್ರಾಮೀಣ ಸೇವೆಯ ಕರೆಬಂದಿಲ್ಲ. ಇತ್ತ ಕೆಎಂಸಿನಲ್ಲಿ ವೈದ್ಯಕೀಯ ನಿರ್ದೇಶಕರಿಂದ ನಿರಾಕ್ಷೇಪಣ ಪತ್ರ ಸಲ್ಲಿಸದ ವಿನಾ ನೋಂದಣಿಗೆ ಅವಕಾಶ ನೀಡುತ್ತಿಲ್ಲ. ಇದರಿಂದ ವೈದ್ಯ ಪದವಿ ಇದ್ದರೂ ಖಾಸಗಿಯಾಗಿಯೂ ಸೇವೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿನಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

Advertisement

ವೈದ್ಯಕೀಯ ನಿರ್ದೇಶಕರಿಂದ ನಿರಾಕ್ಷೇಪಣ ಪತ್ರ ನೀಡಿದರೆ ಮಾತ್ರ ಕೆಎಂಸಿಯಲ್ಲಿ ನೋಂದಣಿ ಮಾಡಿಕೊಳ್ಳುತ್ತೇವೆ. ಇದಕ್ಕೆ ಅಭ್ಯಂತರವಿಲ್ಲ. ಅವರು ಮೊದಲು ಎನ್‌ಒಸಿ ನೀಡಲಿ.
 - ಡಾ| ಶಾಮ್‌ರಾವ್‌ ಬಿ. ಪಾಟೀಲ್‌, ರಿಜಿಸ್ಟ್ರಾರ್‌, ಕರ್ನಾಟಕ ವೈದ್ಯಕೀಯ ಪರಿಷತ್ತು (ಕೆಎಂಸಿ)

ಸ್ನಾತಕೋತ್ತರ ವಿದ್ಯಾರ್ಥಿಗಳು ಪದವಿ ಪೂರ್ಣಗೊಂಡ ಬಳಿಕ ಸೇವೆ ಸಲ್ಲಿಸಬೇಕಾಗಿದೆ. ಈ ಬಗ್ಗೆ ಪ್ರವೇಶ ಪಡೆಯುವ ಮೊದಲೇ ಗ್ರಾಮೀಣ ಸೇವೆ ನೀಡುವ ಬಗ್ಗೆ ಸರಕಾರಕ್ಕೆ ಅಫಿದಾವಿತ್‌ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
-ಡಾ| ರಂದೀಪ್‌, ಆಯುಕ್ತರು, ಆರೋಗ್ಯ ಇಲಾಖೆ.

-ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next