ಕಿನ್ನಿಗೋಳಿ: ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ ಸುಮಾರು 100 ಕೋ.ರೂ. ವೆಚ್ಚದಲ್ಲಿ ನನ್ನ ಕ್ಷೇತ್ರದ ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ರಸ್ತೆ ರೂಪಿಸಲಾಗಿದೆ. ಮೂಲ್ಕಿ ನಗರದಲ್ಲಿ ರಾ. ಹೆ. ಪಕ್ಕ 3 ಕೋ. ರೂ. ವೆಚ್ಚದಲ್ಲಿ ಬಸ್ ನಿಲ್ದಾಣಗಳಿಗೆ ಅನುದಾನ ಒದಗಿಸಲಾಗಿದೆ. ನ.ಪಂ. ಬಿಜೆಪಿ ಪಾಲಾಗಿದ್ದರೂ ಪಕ್ಷಭೇದ ಮರೆತು ಇಷ್ಟು ಅನುದಾನ ಒದಗಿಸಲಾಗಿದೆ. ನಮ್ಮ ಪಕ್ಷ ಪಕ್ಷಭೇದ ಮರೆತು ಅಭಿವೃದ್ಧಿ ಕೈಗೊಳ್ಳುವುದಕ್ಕೆ ಇದೇ ಸಾಕ್ಷಿ ಎಂದು ಮೂಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ, ಹಾಲಿ ಶಾಸಕ ಅಭಯಚಂದ್ರ ಜೈನ್ ಹೇಳಿದ್ದಾರೆ.
ಅವರು ಶುಕ್ರವಾರ ಸಂಜೆ ಕಿನ್ನಿಗೋಳಿಯ ಎಳತ್ತೂರು ಎಂಬಲ್ಲಿ ಪ್ರಚಾರ ಕೈಗೊಂಡು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ಅಭಿವೃದ್ಧಿ ಯಲ್ಲಿ ರಾಜಕೀಯ ಮಾಡುವುದಿಲ್ಲ ಎನ್ನುವುದಕ್ಕೆ ಇಲ್ಲಿನ ರಸ್ತೆಗಳೇ ಸಾಕ್ಷಿ. ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಕ್ಷೇತ್ರಕ್ಕೆ ರಸ್ತೆಗಳಿಗೆ ವಿಶೇಷ ಅನುದಾನ ಒದಗಿಸುವಂತೆ ಮನವಿ ಸಲ್ಲಿಸಿದಾಗ ತತ್‌ಕ್ಷಣ ಸ್ಪಂದಿಸಿ ಎಲ್ಲ ನೆರವು ನೀಡಿದ್ದಾರೆ. ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ರಸ್ತೆಯನ್ನು ಮಾಡಲಾಗಿದೆ ಎಂದರು.
ಕ್ರೀಡಾ ಕ್ಷೇತ್ರದಲ್ಲಿ ಮೂಲ್ಕಿ- ಮೂಡಬಿದಿರೆಗೆ ವಿಶ್ವಮಟ್ಟದ ಸ್ಥಾನಮಾನವನ್ನು ಕಲ್ಪಿಸಲು ಸಾಕಷ್ಟು ಶ್ರಮ ವಹಿಸಿದ್ದೇನೆ. ಮೂಡಬಿದ್ರೆ ಸರಕಾರಿ ಶಾಲಾ ಕಾಲೇಜು ಅಭಿವೃದ್ಧಿಪಡಿಸಲಾಗುತ್ತಿದೆ. ತೆಂಕಮಿಜಾರಿನಲ್ಲಿ ಜ್ಯೂನಿಯರ್ ಕಾಲೇಜು, ನೀರ್ಕೆರೆಯಲ್ಲಿ ಹೈಸ್ಕೂಲ್, ಹಳೆಯಂಗಡಿ ಸರಕಾರಿ ಕಾಲೇಜು ಅಭಿವೃದ್ಧಿಗೊಳಿಸಲಾಗಿದೆ. ಕಾಲೇಜಿಗೆ ಪ್ರತಿಷ್ಠಿತ ನ್ಯಾಕ್ ನಿಂದ ಬಿ ಗ್ರೇಡ್ ಪ್ರಮಾಣ ಪತ್ರ ಸಿಕ್ಕಿದೆ. ಇಲ್ಲಿರುವ 2 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಅನೇಕ ಮಂದಿ ಶಿಕ್ಷಣ ಪಡೆಯುತ್ತಿದ್ದಾರೆ. ಮೂಲ್ಕಿ, ಐಕಳ, ಕಮ್ಮಾಜೆಯ ಮೊರಾರ್ಜಿ ದೇಸಾಯಿ ಶಾಲೆಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಕಡಲ್ಕೆರೆ ನಿಸರ್ಗಧಾಮ ಅಭಿವೃದ್ಧಿಗೆ 2 ಕೋಟಿ ರೂ. ವಿನಿಯೋಗಿಸಿದೆ. ಬಸದಿಗಳು, ದೇವಸ್ಥಾನ, ಚರ್ಚ್‌ಗಳಿಗೆ ಧರ್ಮ ನಿರಪೇಕ್ಷವಾಗಿ ಅನುದಾನ ಒದಗಿಸಲಾಗಿದೆ.
ಕಂಬಳಕ್ಕೆ ಪ್ರೋತ್ಸಾಹ
ಕಂಬಳಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿದ್ದೇನೆ. ಕಂಬಳ ಪೆವಿಲಿಯನ್ ನಿರ್ಮಾಣ ಕ್ಷೇತ್ರಕ್ಕೆ ಸಾಕಷ್ಟು ಹೆಸರು ತಂದುಕೊಟ್ಟಿದೆ ಎಂದರು. ಮೂಡಬಿದಿರೆ ಸಮುದಾಯ ಆರೋಗ್ಯ ಕೇಂದ್ರ ರಾಜ್ಯದ ನಂ. 1 ಎಂಬ ಹೆಸರು ಪಡೆದಿದೆ. ಮೀನುಗಾರಿಕೆಗೆ ಪ್ರೋತ್ಸಾಹ ನೀಡಲಾಗಿದೆ. ಮೂಲ್ಕಿ, ಮೂಡಬಿದ್ರೆ, ಬಜಪೆ, ಕಿನ್ನಿಗೋಳಿಯಲ್ಲಿ ಒಳಚರಂಡಿ ಯೋಜನೆ ನಿರ್ಮಿಸಲು ಆಸಕ್ತಿ ಹೊಂದಿದ್ದೇನೆ ಎಂದರು. ಚಲನಚಿತ್ರ ನಟಿ ಚಿರಶ್ರೀ ಅಂಚನ್ ಕಾಂಗ್ರೆಸ್ ಪರ ಮತಯಾಚನೆ ನಡೆಸಿದರು. ರಾಜಶೇಖರ ಕೋಟ್ಯಾನ್, ಶಾಲೆಟ್ ಪಿಂಟೋ, ಆಸಿಫ್, ಅಶೋಕ ಪೂಜಾರ್ ಮತ್ತಿತರರು ಉಪಸ್ಥಿತರಿದ್ದರು.