Advertisement

ಗಮನ ಸೆಳೆಯುತ್ತಿರುವ ಗ್ರಾಮೀಣ ಕರಕುಶಲ ಮೇಳ

09:16 PM Jan 16, 2021 | Team Udayavani |

ಉಡುಪಿ:  ಶ್ರೀಕೃಷ್ಣಮಠದ ದೈವಾರ್ಷಿಕ ಪರ್ಯಾಯ ಪೂಜಾ ಪದ್ಧತಿಗೆ 500ನೇ ವರ್ಷಕ್ಕೆ ಕಾಲಿಡುವ ಸಂದರ್ಭ ಆಯೋಜಿಸಲಾದ ಗ್ರಾಮೀಣ ಉತ್ಪನ್ನಗಳ ಮೇಳ ಜ. 16ರಂದು ಆರಂಭಗೊಂಡಿದ್ದು 23ರ ವರೆಗೆ ನಡೆಯಲಿದೆ.

Advertisement

ರಾಜಾಂಗಣ ಸಭಾಭವನದಲ್ಲಿ ಪಶ್ಚಿಮ ಬಂಗಾಲ, ಒಡಿಶಾ, ತೆಲಂಗಾಣ, ಛತ್ತೀಸ್‌ಗಢ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಬಿಹಾರದ ವಿವಿಧ ಕಲಾಪ್ರಕಾರಗಳು, ಮಧುಬನಿ, ಮಿಥಿಲಾ ಚಿತ್ರ, ಮಂಜುಷಾ ಚಿತ್ರ, ಗೋದ್ನ ಚಿತ್ರ, ಕಾಲಿಘಟ್‌ ಪೈಂಟಿಂಗ್‌, ಪಟಚಿತ್ರ, ಲೋಹಶಿಲ್ಪ, ಎರಕಶಿಲ್ಪ, ಗೋಂದು ಕಲಾಕೃತಿ, ಮಣ್ಣಿನ, ಹುಲ್ಲಿನ ಕಲಾಕೃತಿಗಳು, ಕರ್ನಾಟಕದ ಬೆಳಗಾವಿ, ಹುಬ್ಬಳ್ಳಿ, ಬಿಜಾಪುರ, ಧಾರವಾಡ, ಶಿರಸಿ, ಕುಂದಾಪುರ, ಬೆಂಗಳೂರು, ಉಡುಪಿ ಭಾಗದ ಗ್ರಾಮೀಣ ಉತ್ಪನ್ನಗಳಾದ ಸೀರೆ, ಹುಲ್ಲಿನ, ಮರದ ಕಲಾಕೃತಿಗಳು, ಸಾವಯವ ಉತ್ಪನ್ನಗಳು, ಚರ್ಮದ ಉತ್ಪನ್ನಗಳು, ವಿವಿಧ ಕಲಾ ಪ್ರಕಾರಗಳಾದ ಮಣ್ಣಿನ ಕಲಾಕೃತಿ ರಚನೆ, ಬುಟ್ಟಿ ರಚನೆ, ಸಹಜ ಬಣ್ಣದಲ್ಲಿ ಚಿತ್ರ ರಚನೆ ಮುಂತಾದ ಕಲಾ ಪ್ರಾತ್ಯಕ್ಷಿಕೆ ನಡೆಯುತ್ತಿವೆ.

ಲಂಬಾಣಿ ಕಸೂತಿ, ಹಿಡಿಕಡ್ಡಿ ಉತ್ಪನ್ನ :

ಇಳಕಲ್‌ ಸೀರೆ, ಪಟ್ಟದ ಸೀರೆಗಳಿಗೆ ಲಂಬಾಣಿ ಕಸೂತಿಯನ್ನು (ಎಂಬ್ರಾಯxರಿ) ಬಳ್ಳಾರಿ ಹೂವಿನಹಡಗಲಿಯ ರವಿಕಿರಣ್‌ ಪ್ರದರ್ಶಿಸುತ್ತಿದ್ದಾರೆ. ಗದಗ ಜಿಲ್ಲೆಯಿಂದ ಬಂದ ವಿವಿಧ ಬಗೆಯ ಲೆದರ್‌ ಬ್ಯಾಗ್‌, ಚಾ ಇಡುವ ಮ್ಯಾಟ್‌, ಬಟ್ಟೆಯ ಬುಟ್ಟಿಗಳು, ತೆಂಗಿನ ಗರಿಯಿಂದ (ಹಿಡಿಕಡ್ಡಿ) ತಯಾರಿಸಿದ ಬಾಸ್ಕೆಟ್‌, ಟ್ರೇ, ಜೊಂಡುಹುಲ್ಲಿನಿಂದ ತಯಾರಿಸಿದ ಬುಟ್ಟಿ, ಗುಳೇದಗುಡ್ಡ, ಇಳಕಲ್‌, ಉಡುಪಿ ಸೀರೆಗಳ ಮಳಿಗೆಗಳು ನೋಡುಗರ ಮನ ತಣಿಸುತ್ತಿವೆ. ಮಹಾರಾಷ್ಟ್ರದ ಕಸೂತಿ ಕೆಲಸಗಳು (ಬೆಡ್‌, ಸೋಫಾ ಕವರ್‌, ಮ್ಯಾಟ್‌ ಇತ್ಯಾದಿ), ಬೆಳಗಾವಿಯ ಅಗಸ್ತ್ಯ ಪ್ರತಿಷ್ಠಾನದವರ ಕಾಟನ್‌ ತ್ರೆಡ್‌, ಸೆಣಬಿನಿಂದ ತಯಾರಿಸಿದ ಅಲಂಕಾರಿಕ ಸಾಮಗ್ರಿಗಳು, ಟೇಬಲ್‌ ಮ್ಯಾಟ್‌, ಕುಂದಾಪುರ ಆಲೂರಿನ ರಘುರಾಮ ಕುಲಾಲರ ಮಣ್ಣಿನ ತರಹೇವಾರಿ ಸಾಮಗ್ರಿಗಳು ಪ್ರದರ್ಶನದಲ್ಲಿವೆ.

ಬೆಳಗಾವಿಯ ಸಿದ್ದವ್ವ ಜೊಂಡುಹುಲ್ಲಿನ ವಿವಿಧ ಆಕಾರದ ಬುಟ್ಟಿಗಳನ್ನು ಇರಿಸಿಕೊಂಡಿದ್ದಾರೆ. ಛತ್ತೀಸ್‌ಗಢದ ಕಬ್ಬಿಣದ ವಿವಿಧ ಅಲಂಕೃತ ಆಟಿಕೆಗಳು ಇವೆ. ಇವರು ವೆಲ್ಡಿಂಗ್‌ ಇಲ್ಲದೆ ಸಾಂಪ್ರದಾಯಿಕ ರೀತಿಯಲ್ಲಿ ಕಬ್ಬಿಣವನ್ನು ಕಾಯಿಸಿ ಆಟಿಕೆಗಳನ್ನು ತಯಾರಿಸುವುದು ವೈಶಿಷ್ಟ್ಯ. ಕೊಳಲು (ಬಾನ್ಸುರಿ), ಖಡ್ಗ, ಕೊಡಲಿ, ಬಿಲ್ಲುಬಾಣಗಳನ್ನು ಬಿದಿರಿನಿಂದ ತಯಾರಿಸುವವರು ಮಧ್ಯಪ್ರದೇಶದ ಕಲಾವಿದರು.

Advertisement

ಬಂಗಾಳದ ಚಿತ್ರಕಾರ, ಆಶುಕವಿ :

ಪಶ್ಚಿಮ ಬಂಗಾಲದ ಪ್ರವೀರ್‌ ಚಿತ್ರಕಾರ್‌ ಅವರು ಚಿತ್ರಕಲೆಗಳು ಆಕರ್ಷಕ. ಇವರು ಚಿತ್ರಗಳಿಗೆ ತಕ್ಕುದಾದ ಹಾಡುಗಳನ್ನು ಹಾಡುತ್ತಾರೆ. ಇದು ಕವಿ ರವೀಂದ್ರನಾಥ ಠಾಕೂರ್‌ ಅವರ ಪರಿಶ್ರಮದಿಂದ ಪಶ್ಚಿಮಬಂಗಾಲದಲ್ಲಿ ಉತ್ತೇಜನಗೊಂಡ ಕಲೆಯಾಗಿದೆ. ಪ್ರವೀರ್‌ ಅಂತಹವರು ಆಶುಕವಿಗಳು. ಇವರು ಕೋವಿಡ್ ಕುರಿತೂ ಹಾಡು ರಚಿಸಿ ಚಿತ್ರಕಲೆಯನ್ನು ನಿರ್ಮಿಸಿ ಪ್ರದರ್ಶಿಸುತ್ತಿದ್ದಾರೆ.

ಗ್ರಾಮೀಣ ಶ್ರಮಿಕ ಕುಶಲಕರ್ಮಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರಾಷ್ಟ್ರಮಟ್ಟದ ಗ್ರಾಮೀಣ ಉತ್ಪನ್ನಗಳ ಮೇಳ, ಪ್ರದರ್ಶನ ಮತ್ತು ಮಾರಾಟವನ್ನು ಆಯೋಜಿಸಲಾಗಿದೆ ಎಂದು ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಮತ್ತು ಸಂಘಟಕ ಪುರುಷೋತ್ತಮ ಅಡ್ವೆ ತಿಳಿಸಿದ್ದಾರೆ.

ಪುರಾತನ ಉಪಕರಣಗಳು :

ಹಿಂದಿನ ಕಾಲದ ಮನೆಗಳಲ್ಲಿ ಬಳಸುವ ಕೊಡಪಾನ, ಬ್ಯಾಟ್‌, ಗುಂಡುಕಲ್ಲು, ಲೋಟಗಳು, ಚೆನ್ನೆಮಣೆ, ಡೋಲು, ಶ್ಯಾವಿಗೆ ಮಾಡುವ ಮರದ ಯಂತ್ರ ಮೊದಲಾದ ತುಳುನಾಡ ಪಾರಂಪರಿಕ ಪರಿಕರಗಳ ಪ್ರದರ್ಶನಗಳೂ ಇಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next