Advertisement

ತಂತ್ರಾಂಶ ದಾಖಲಾತಿ : ಗ್ರಾಮೀಣ ಸರಕಾರಿ ವೈದ್ಯರಿಗೆ ಹೆಚ್ಚು’ವರಿ’

01:00 AM Oct 25, 2019 | Team Udayavani |

ಕುಂದಾಪುರ: ಸರಕಾರಿ ಆಸ್ಪತ್ರೆಗಳಲ್ಲಿ ಆಡಳಿತ ಸುಧಾರಣೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ಆರೋಗ್ಯ ಇಲಾಖೆ ಇ – ಆಡಳಿತವನ್ನು ಜಾರಿಗೊಳಿಸುತ್ತಿದೆ. ಆದರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಡಾಟಾ ಎಂಟ್ರಿ ಆಪರೇಟರ್‌ಗಳು ಇಲ್ಲದೆ ದಿನಂಪ್ರತಿ 22ಕ್ಕೂ ಹೆಚ್ಚು ತಂತ್ರಾಂಶಗಳಲ್ಲಿ ದಾಖಲಾತಿಗಳನ್ನು ಮಾಡುವುದೇ ವೈದ್ಯರಿಗೆ ದೊಡ್ಡ ಹೊರೆಯಾಗಿದ್ದು, ರೋಗಿಗಳಿಗೆ ಶುಶ್ರೂಷೆ ಒದಗಿಸಲು ಸಮಯ ಸಿಗುತ್ತಿಲ್ಲ.

Advertisement

ಇ – ಆಡಳಿತ ಅನುಷ್ಠಾನಗೊಂಡ ಬಳಿಕ ಖಜಾನೆ, ಸಕಾಲ, ಇ- ಜನ್ಮ, ನಿಕ್ಷಯ್‌, ಔಷಧಿ, ಡೈಲಿ ಡ್ರಗ್ಸ್‌ ಮತ್ತು ಸ್ಟಾಟಿಸ್ಟಿಕ್ಸ್‌, ಆಶಾ ಸ್ಟಾಪ್ಸ್, ಪೋಷಣೆ ಸೇರಿದಂತೆ ಒಟ್ಟು 22 ತಂತ್ರಾಂಶಗಳಲ್ಲಿ ದಿನವೂ ಮಾಹಿತಿ ಅಪ್‌ಲೋಡ್‌ ಮಾಡಬೇಕಿದೆ.

ಡಾಟಾ ಎಂಟ್ರಿ ಆಪರೇಟರ್‌ಗಳಿಲ್ಲ
ರಾಜ್ಯದಲ್ಲಿ ಈವರೆಗೆ ಯಾವುದೇ ಪ್ರಾ.ಆ. ಕೇಂದ್ರಗಳಿಗೆ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ನೇಮಿಸಿಲ್ಲ. ಉಡುಪಿಯಲ್ಲಿ 61 ಮತ್ತು ದ.ಕ. ಜಿಲ್ಲೆಯಲ್ಲಿ 79 ಪ್ರಾ.ಆ. ಕೇಂದ್ರಗಳಿವೆ. ಕ್ಲರ್ಕ್‌ ಸಹಿತ ಹಲವಾರು ಹುದ್ದೆಗಳೂ ಖಾಲಿ ಇವೆ. ಕೆಲವು ಕಡೆಗಳಲ್ಲಿ ವೈದ್ಯರಿಗೆ ಎರಡೆರಡು ಆಸ್ಪತ್ರೆಗಳನ್ನು ಪ್ರಭಾರ ನೆಲೆಯಲ್ಲಿ ನೀಡಲಾಗಿದೆ. ಸಿಬಂದಿ ಕೊರತೆ, ಇರುವ ಸಿಬಂದಿಗೆ ಕಂಪ್ಯೂಟರ್‌ ಜ್ಞಾನವಿಲ್ಲದಿದ್ದರೆ ವೈದ್ಯರೇ ಡಾಟಾ ಭರ್ತಿ ಮಾಡಬೇಕಾಗಿದೆ.

ಈ ಕೆಲಸಕ್ಕೇ ಹೆಚ್ಚು ಸಮಯ
ಕುಂದಾಪುರ, ಬೈಂದೂರು ಭಾಗದ ಗ್ರಾಮೀಣ ಪ್ರದೇಶದಲ್ಲಿರುವ ಪ್ರಾ.ಆ. ಕೇಂದ್ರ ಗಳಲ್ಲಿ ದಿನವೊಂದಕ್ಕೆ ಸೀಸನ್‌ನಲ್ಲಿ 100ಕ್ಕೂ ಮಿಕ್ಕಿ ರೋಗಿಗಳು ಬರುತ್ತಾರೆ. ವೈದ್ಯರು ಈ 22 ತಂತ್ರಾಂಶಗಳಲ್ಲಿ ನಿಗದಿತ ಸಮಯದೊಳಗೆ ಅಪ್‌ಲೋಡ್‌ ಮಾಡಬೇಕಿರುವುದರಿಂದ ಅನೇಕ ಬಾರಿ ರೋಗಿಗಳನ್ನು ಕಾಯಿಸುವ ಅನಿವಾರ್ಯತೆ. ವೈದ್ಯರಿಗೆ ಹೆಚ್ಚುವರಿಯಾಗಿ ಮತ್ತೂಂದು ಆಸ್ಪತ್ರೆಯ ಜವಾಬ್ದಾರಿಯನ್ನೂ ಕೊಟ್ಟಿರುವುದರಿಂದ ಅಲ್ಲಿಗೂ ತೆರಳಬೇಕಿರುತ್ತದೆ. ನಮ್ಮ ವೃತ್ತಿಗೆ ನ್ಯಾಯ ದೊರೆಯುತ್ತಿಲ್ಲ ಎನ್ನುವುದು ವೈದ್ಯ ರೊಬ್ಬರ ಅಳಲು.

ಎಲ್ಲ ಆರೋಗ್ಯ ಕೇಂದ್ರಗಳಲ್ಲೂ ಕಂಪ್ಯೂಟರ್‌ ಜ್ಞಾನ ಇರುವ ಸಿಬಂದಿ ಇಲ್ಲ. ಹಾಗಾಗಿ ದಾಖಲಾತಿ ಭರ್ತಿಯನ್ನು ಹೆಚ್ಚಿನ ಆಸ್ಪತ್ರೆಗಳಲ್ಲಿ ವೈದ್ಯರೇ ಮಾಡಬೇಕಿದೆ. ಇದರಿಂದ ರೋಗಿಗಳನ್ನು ನೋಡುವುದು ಬಿಟ್ಟು, ಇದೇ ಕೆಲಸವಾಗಿದೆ. ಈ ಬಗ್ಗೆ ಸಂಘದಿಂದ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಡಾಟಾ ಎಂಟ್ರಿ ಆಪರೇಟರ್‌ ಕೊಡಿ ಎಂದು ಮನವಿ ಮಾಡಿದ್ದೇವೆ.
– ಡಾ| ಎಚ್‌. ಪ್ರಕಾಶ್‌ ಕುಮಾರ್‌ ಶೆಟ್ಟಿ , ಅಧ್ಯಕ್ಷರು, ಸರಕಾರಿ ವೈದ್ಯಾಧಿಕಾರಿಗಳ ಸಂಘ ಉಡುಪಿ

Advertisement

ಡಾಟಾ ಎಂಟ್ರಿ ಆಪರೇಟರ್‌ ನೇಮಕ ಮಾಡಿಕೊಳ್ಳುವ ಮತ್ತು ಇತರ ಸಿಬಂದಿ ಕೊರತೆ ಬಗ್ಗೆ ಆರೋಗ್ಯ ಸಚಿವರಿಗೆ ಬೇಡಿಕೆಯನ್ನು ಸಲ್ಲಿಸಿದ್ದೇವೆ. ನೇಮಕಾತಿ ಆಗುವವರೆಗೆ ಇರುವಂತಹ ವೈದ್ಯರು, ಸಿಬಂದಿ ಹೆಚ್ಚುವರಿ ಕೆಲಸ ಮಾಡುವುದು ಅನಿವಾರ್ಯವಾಗಿದೆೆ.
– ಡಾ| ಅಶೋಕ್‌, ಡಾ| ರಾಮಕೃಷ್ಣ ರಾವ್‌, ಉಡುಪಿ ಮತ್ತು ದ.ಕ. ಜಿಲ್ಲಾ ಆರೋಗ್ಯಾಧಿಕಾರಿಗಳು

— ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next