ಕಡೂರು: ಕೋವಿಡ್ ಅವಧಿಯಲ್ಲಿ ನಡೆಯುತ್ತಿರುವ ಅಂತರ್ಜಾಲ ಶಿಕ್ಷಣಕ್ಕೊಂದು ಮಾದರಿಯಾಗಿ ಜ್ಞಾನತಾಣ ಯೋಜನೆಯಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ| ವೀರೆಂದ್ರ ಹೆಗ್ಗಡೆ ಅವರು ರಾಜ್ಯದ ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ನೀಡುತ್ತಿರುವ ಟ್ಯಾಬ್ ಮತ್ತು ಲ್ಯಾಪ್‌ಟಾಪ್ ಅತ್ಯಂತ ಉಪಯುಕ್ತವಾಗಿದೆ ಎಂದು ಶಾಸಕ ಬೆಳ್ಳಿಪ್ರಕಾಶ್ ತಿಳಿಸಿದರು.
ಪಟ್ಟಣದ ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಟ್ಯಾಬ್ ಮತ್ತು ಲ್ಯಾಪ್‌ಟಾಪ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಈ ಟ್ಯಾಬ್ ಮತ್ತು ಲ್ಯಾಪ್‌ಟಾಪ್ ಮಕ್ಕಳ ಆನ್ ಲೈನ್ ಕಲಿಕೆಗೆ ಉಪಯುಕ್ತವಾಗಲಿದೆ. ಶ್ರೀ ಕ್ಷೇತ್ರವು ಸುಮಾರು 20 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಉಪಕರಣಗಳನ್ನು ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಶ್ರೀ ಕ್ಷೇತ್ರವು ಇಂತಹ ಹತ್ತು ಹಲವಾರು ಸಾರ್ವಜನಿಕ ಯೋಜನೆಗಳನ್ನು ಮಾಡುತ್ತಿದ್ದು. ದೇಶದ ನಂ. 1 ಎನ್‌ಜಿಒ ಸಂಸ್ಥೆಯಾಗಿದೆ ಎಂದರೆ ತಪ್ಪಾಗಲಾರದು. ಕ್ಷೇತ್ರದಲ್ಲಿ ಶುದ್ಧಗಂಗಾ ಸ್ಥಾಪನೆಯಿಂದ ಆರಂಭಿಸಿಕೃಷಿ, ಹೈನುಗಾರಿಕೆ ಸೇರಿದಂತೆ ಅನೇಕ ಕೃಷಿ ಚಟುವಟಿಕೆಗೆ ಸಾಲ ನೀಡಿ ಅಷ್ಟೇ ಪ್ರಾಮಾಣಿಕವಾಗಿ ಸಾಲ ವಸೂಲಾತಿ ನಡೆಸಿ ಮಹಿಳೆಯರಲ್ಲಿ ಉತ್ತಮ ಹಣಕಾಸಿನ ನೆರವಿನಿಂದ ಕುಟುಂಬ ನಿರ್ವಹಣೆಗೆ ಸಹಕಾರವಾಗಿದ್ದಾರೆ.ಈ ಬಾರಿ 18 ಕೋಟಿ ಉಳಿತಾಯ ಮಾಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.
ಕಡೂರು ಪುರಸಭೆಯ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀ ಕ್ಷೇತ್ರವು ಸಾರ್ವಜನಿಕರಿಗೆ ಸರ್ಕಾರ ನೀಡುವಂತೆಅನೇಕ ಮೂಲ ಸೌಕರ್ಯಗಳನ್ನು ನೀಡಿದೆ. ಶ್ರೀಕ್ಷೇತ್ರವು ತನ್ನದೇ ಇತಿ ಮಿತಿಯಲ್ಲಿ ಆಯ-ವ್ಯಯ ತಯಾರಿಸಿಕೊಂಡು ಸಾಲ ಸೌಲಭ್ಯಗಳನ್ನು ನೀಡಿ ಬಂದಂತಹ ಲಾಭಾಂಶದಲ್ಲಿ ಸಾರ್ವಜನಿಕ ಸೇವೆಗೆ ಮುಂದಾಗಿರುವುದು ಸಂಕಷ್ಟದಲ್ಲಿರುವವರಿಗೆ ಸಹಾಯವಾಗಿದೆ. ಇದೀಗ ಗ್ರಾಮೀಣ ಮಕ್ಕಳಿಗೆ ಅಂತರ್ಜಾಲ ಶಿಕ್ಷಣಕ್ಕೆ ಟ್ಯಾಬ್ ನೀಡುತ್ತಿರುವುದು ಶೈಕ್ಷಣಿಕವಾಗಿ ಮಕ್ಕಳಿಗೆ ಉಪಯೋಗವಾಗಲಿದೆ ಎಂದರು.
ಶ್ರೀಕ್ಷೇತ್ರದ ತಾಲೂಕು ಯೋಜನಾಧಿಕಾರಿ ಕರುಣಾಕರ್ ಆಚಾರ್ ಪ್ರಾಸ್ತಾವಿಕವಾಗಿ
ಮಾತನಾಡಿ, ಶ್ರೀ ಕ್ಷೇತ್ರದ ಯೋಜನಾ ಕಚೇರಿಯು ಆರಂಭವಾಗಿ 13 ವರ್ಷ ಕಳೆದಿದೆ. ಇದುವರೆಗೂ ಉತ್ತಮ ಯೋಜನೆಗಳನ್ನು ಹಾಕಿಕೊಂಡು 86 ಕೋಟಿ ಸಾಲ ವ್ಯವಹಾರ ನಡೆಸಿದೆ. ಗ್ರಾಮೀಣ ಕನ್ನಡ ಮಾಧ್ಯಮ ಮಕ್ಕಳ ಕಲಿಕೆಗೆ ಪೂರಕವಾಗಿ ಟ್ಯಾಬ್ ಮತ್ತು ಲ್ಯಾಪ್‌ಟಾಪ್ ವಿತರಣೆ ಕಾರ್ಯವು ನಡೆಯುತ್ತಿದ್ದು ಮೊದಲ ಹಂತವಾಗಿ 130 ಮಕ್ಕಳಿಗೆ ನೀಡಲಾಗುವುದು. ಸಂಘದ ಸದಸ್ಯರ ಮಕ್ಕಳಿಗೆ ಮಾತ್ರ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ ಎಂದರು.
ಕ್ಷೇತ್ರ ಶಿಕ್ಷಾಣಾಧಿಕಾರಿ ಕಚೇರಿಯ ದಿನೇಶ್ ಮಾತನಾಡಿ, ಶ್ರೀ ಕ್ಷೇತ್ರವು ನೀಡುತ್ತಿರುವ ಟ್ಯಾಬ್ ಮತ್ತು ಲ್ಯಾಪ್‌ಟಾಪ್ ವಿತರಣೆಗೆ ಶಿಕ್ಷಣ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ ಎಂದರು.ಜಿಪಂ ಸದಸ್ಯ ಕೆ.ಆರ್. ಮಹೇಶ್‌ಒಡೆಯರ್ ಮತ್ತು ಪಟ್ಟಣದ ಬಾಹುಬಲಿದಂಡವತಿ ಇದ್ದರು.