Advertisement

ಓಟದಲ್ಲಿ ಜಾರಿ ಬಿದ್ದರೆ ಸೋಲಲ್ಲ ; 

03:45 AM Feb 12, 2017 | Team Udayavani |

ಜಾರಿಬಿದ್ದವನು ಏಳುವ ಪ್ರಯತ್ನವನ್ನೇ ಮಾಡದಿದ್ದರೆ…
ಚಿಕ್ಕಂದಿನಿಂದಲೂ ನನ್ನಲ್ಲಿ ಓದುವ ಹವ್ಯಾಸವನ್ನು ಹುಟ್ಟು ಹಾಕಿದ್ದು ನನ್ನ ಅಪ್ಪ-ಅಮ್ಮ. ಬಣ್ಣ ಬಣ್ಣದ ಚಿತ್ರಗಳಿಂದ ತುಂಬಿರುವ ರಾಮಾಯಣ, ಮಹಾಭಾರತದ ಕಥೆ ಪುಸ್ತಕಗಳ‌ನ್ನು ಅಪ್ಪ ತಂದು ಕೊಡುತ್ತಿದ್ದರು. ರಾಮಾಯಣದ ಕಥೆಯÇÉೇ ನನಗೆ ಬಲು ಆಸಕ್ತಿ ಹುಟ್ಟಿಸಿದ್ದು ಅಳಿಲಿನ ಪ್ರಸಂಗ. ರಾಮ, ಸೀತೆಯನ್ನು ರಾವಣನಿಂದ ಬಿಡಿಸಿಕೊಂಡು ಬರಲು ಲಂಕೆಗೆ ತೆರಳುವಾಗ, ರಾಮ ಭಕ್ತರೆಲ್ಲ ಆತನ ನಾಮಜಪ ಮಾಡುತ್ತ ಬೃಹತ್‌ ಬಂಡೆಗಳನ್ನು ಹಾಕಿ ಸಾಗರಕ್ಕೆ ಸೇತುವೆ ಕಟ್ಟುತ್ತಿದ್ದರು. ಆಗ ಪುಟ್ಟ ಅಳಿಲೊಂದು ತಾನೂ ಸೇರಿಕೊಂಡು ತನಗಿಂತ ಸಣ್ಣ ಕಲ್ಲುಗಳನ್ನು ಕಷ್ಟಪಟ್ಟು ಹೊತ್ತೂಯ್ದು ಹಾಕುತ್ತಿರುತ್ತದೆ. ಇದನ್ನು ಕಂಡ ಕೆಲವು ಕಪಿಗಳು ಅದನ್ನು ಅಪಹಾಸ್ಯ ಮಾಡುತ್ತವೆ. ಆದರೆ ಅದು ಮಾತ್ರ ರಾಮನಾಮ ಜಪಿಸುತ್ತ ಶ್ರದ್ಧೆಯಿಂದ ತನ್ನ ಕರ್ತವ್ಯ ಮಾಡುತ್ತ ಹೋಗುತ್ತದೆ. ಇದರಿಂದ ಸಂಪ್ರೀತನಾದ ಶ್ರೀರಾಮ ಅದರ ಬೆನ್ನ ಮೇಲೆ ಮೂರು ಚಿನ್ನದ ಗೆರೆಗಳನ್ನೆಳೆದ ಎಂಬ ಕಥೆಯದು. ಮುಂದೆ ಇದೇ ನನಗೆ ಹೊಸ ಹೊಳಹನ್ನು ಕೊಟ್ಟಿದ್ದು. ಎಷ್ಟೇ ದೊಡ್ಡ, ಅಸಾಧ್ಯವೆಂಬಂಥ ಕೆಲಸವಿರಲಿ.. ನಮ್ಮ ಕೈಲಾದಷ್ಟು ಪ್ರಯತ್ನ ಮಾಡಬೇಕು. ಎದುರಾಗುವ ಅಪಹಾಸ್ಯ, ಟೀಕೆ, ವ್ಯಂಗ್ಯಗಳನ್ನು ಹಿಂದಿಕ್ಕಿ, ಪ್ರಾಮಾಣಿಕವಾಗಿ ಶ್ರಮಿಸಿದರೆ ನಮಗೆ ಸಿಗಬೇಕಾದ ಫ‌ಲ ಸಿಕ್ಕೇ ಸಿಗುವುದು ಎಂಬ ನೀತಿಯನ್ನು ರಾಮಾಯಣದ ಈ ಅಳಿಲು ಕಲಿಸಿದೆ. ಇದನ್ನೇ ನಾವು ನಮ್ಮ ಬದುಕಿಗೂ ಅಳವಡಿಸಿಕೊಂಡರೆ ಹಿರಿಯರು ಹೇಳಿದ “ಪ್ರಯತ್ನೆàನ ಫ‌ಲಂ ಅಸ್ತಿ’ ಎನ್ನುವ ಹಿತೋಪದೇಶ ನಿಜವಾಗುವುದರಲ್ಲಿ ಸಂಶಯವಿಲ್ಲ. 

Advertisement

ನಾನು ಹತ್ತನೆಯ ತರಗತಿಯವರೆಗೂ ಓದಿದ್ದು ಕನ್ನಡ ಮಾಧ್ಯಮದಲ್ಲಿ. ತದನಂತರ ಮಂಗಳೂರಿನ ಕೆನರಾ ಕಾಲೇಜಿಗೆ ಸೇರಿಕೊಂಡಿದ್ದು. ಆರಿಸಿಕೊಂಡಿದ್ದು ವಿಜ್ಞಾನದ ವಿಷಯ. ಕನಸು ವೈದ್ಯ ವೃತ್ತಿ ಅಥವಾ ಮನಃಶಾಸ್ತ್ರದಲ್ಲಿ ಉನ್ನತ ವ್ಯಾಸಂಗ. ಹತ್ತನೆಯ ತರಗತಿಯ ನಂತರ ಇದ್ದಕ್ಕಿದ್ದಂತೇ ಬದಲಾದ ಕ್ಯಾಂಪಸ್‌, ಮಾಧ್ಯಮ, ವಿಷಯ- ಇವೆಲ್ಲವುಗಳಿಂದ ಗಲಿಬಿಲಿಗೊಂಡು ಬಿಟ್ಟಿ¨ªೆ. ಇದ್ದಕ್ಕಿದ್ದಂತೆ ಎಲ್ಲವೂ ಸಂಪೂರ್ಣ ಇಂಗ್ಲಿಷ್‌ಮಯವಾಗಿ, ಎÇÉಾ ಪಠ್ಯಗಳೂ ಕಬ್ಬಿಣದ ಕಡಲೆಯಂತಾಗಿಬಿಟ್ಟವು. ಅದರಲ್ಲೂ ವಿಶೇಷವಾಗಿ ಕೆಮಿಸ್ಟ್ರಿ ವಿಷಯ ತುಂಬಾ ಹಿಂಸೆ ಕೊಡತೊಡಗಿತ್ತು. ಇದರ ಪರಿಣಾಮ ಮೊದಲ ಕ್ಲಾಸ್‌ಟೆಸ್ಟ್‌ನಲ್ಲಿ ನನಗೆ ಕೆಮಿಸ್ಟ್ರಿಯಲ್ಲಿ 50ಕ್ಕೆ ಕೇವಲ 8 ಅಂಕಗಳು ಸಿಕ್ಕಿದ್ದವು! ಇದನ್ನು ಕಂಡು ಇನ್ನಿಲ್ಲದಂತೇ ಹತಾಶೆಗೆ ಒಳಗಾಗಿ ಬಿಟ್ಟಿ¨ªೆ. ಸೈನ್ಸ್‌ ತೆಗೆದುಕೊಂಡು ತಪ್ಪು ಮಾಡಿದೆನೆ? ನನ್ನಿಂದ ಇದು ಸಾಧ್ಯವಿಲ್ಲವೆ? ಎಂದೆಲ್ಲ ಕೊರಗತೊಡಗಿ¨ªೆ. “ಇವಳಿಂದ ಸೈನ್ಸ್‌ ಆಗದು. ಪ್ರಾಕ್ಟಿಕಲ್‌ ಎಲ್ಲ ನಿಂತು ಮಾಡುವುದು ಕಷ್ಟ ಎಂದಿಲ್ಲವೇ ಮೊದಲೇ. ಇದು ಸುಲಭದ್ದಲ್ಲ. ಇನ್ನೂ ಸಮಯ ಮೀರಿಲ್ಲ. ಎರಡು ತಿಂಗಳಷ್ಟೇ ಆಗಿದೆ ಬೇರೆ ಕೋರ್ಸ್‌ಗೆ ಸೇರಿಸಿಬಿಡಿ’ ಎಂದು ಚುಚ್ಚಿ ಕೆಲವರು ಇನ್ನಷ್ಟು ಕುಗ್ಗಿಸಿಯೂ ಆಯಿತು. ಆದರೂ ನನ್ನೊಳಗಿನ ನನಗೆ ಪೂರ್ತಿ ಸೋಲೊಪ್ಪಲು ಮನಸಿಲ್ಲ. ನನ್ನ ಒಳ ಧ್ವನಿಗೆ ಮತ್ತೆ ಬಲವಾಗಿ ನಿಂತವರು ಹೆತ್ತವರು. ಅಪ್ಪ ತನ್ನ ಆಪ್ತ ಸ್ನೇಹಿತರು ಮತ್ತು ಕೆಮಿಸ್ಟ್ರಿ ಪ್ರೊಫೆಸರ್‌ ಆಗಿದ್ದ ಶ್ರೀಪತಿ ರಾವ್‌ ಅವರಿಗೆ ಮೊದಲ ವರ್ಷದ ಪಿಯುಸಿಯಲ್ಲಿ ವಾರದಲ್ಲಿ ಕೆಲವು ಗಂಟೆಗಳ ಕಾಲ ಮನೆಪಾಠವನ್ನು ಹೇಳಿಕೊಡಲು ವಿನಂತಿಸಿದರು. ಅವರ ಉತ್ತಮ ಪಾಠದಿಂದ ನಾನು ಕ್ರಮೇಣ ರಸಾಯನಶಾಸ್ತ್ರದ ಒಳ ಹೊರಗನ್ನು, ಸೂತ್ರಗಳನ್ನು, ಕನ್ನಡ-ಇಂಗ್ಲೀಷ್‌ ಎರಡೂ ಶಬ್ದಾರ್ಥಗಳನ್ನು ಕಲಿಯುತ್ತ¤ ಹೋದೆ. ಇದರ ಫ‌ಲಿತಾಂಶ, ಮೊದಲ ವರ್ಷದ ಪಿಯುಸಿಯ ಅಂತಿಮ ಪರೀಕ್ಷೆಯಲ್ಲಿ 100ಕ್ಕೆ 75 ಅಂಕಗಳು ಬಂದವು.

ಇದರಿಂದ ವಿಶ್ವಾಸ ಹೆಚ್ಚಾಯಿತು. ಎರಡನೆಯ ವರ್ಷದಲ್ಲಿ ಕೆಮಿಸ್ಟ್ರಿಯಿಂದ ಮಿಸ್ಟ್ರಿಯನ್ನೇ ಹೊರಗೋಡಿಸಿ, ಅದೇ ನನ್ನ ಅಚ್ಚುಮೆಚ್ಚಿನ ಪಠ್ಯವಾಗುವಂತೆ ಮಾಡಿದವರು ಕೆನರಾ ಡಿಗ್ರಿಯಲ್ಲೂ ನನಗೆ ಕಲಿಸಿದ್ದ, ಪ್ರೊಫೆಸರ್‌ ಬಾಲಸುಬ್ರಹ್ಮಣ್ಯ ಮೂಡಿತ್ತಾಯ ಅವರು. ಪರಿಣಾಮವಾಗಿ, ದ್ವಿತೀಯ ಪಿಯುಸಿಯ ಅಂತಿಮ ಪರೀಕ್ಷೆಯಲ್ಲಿ ನಾನು 100ಕ್ಕೆ 90 ಅಂಕಗಳನ್ನು ಪಡೆದುಕೊಂಡಿ¨ªೆ. ಡಿಗ್ರಿಗೆ ಬರುವಷ್ಟರಲ್ಲಿ ಕೆಮಿಸ್ಟ್ರಿ ಸರಾಗವಾಗಿ ನನ್ನ ಹಿಡಿತಕ್ಕೆ ಬಂದುಬಿಟ್ಟಿತ್ತು. ಇದರಿಂದಾಗಿ ಪ್ರತಿ ವರುಷ ಉತ್ತಮ ಅಂಕಗಳನ್ನು ಗಳಿಸಲು ಕಾರಣವಾಯಿತು. 

ನಾನೇನಾದರೂ ಮೊದಲ ವರ್ಷದ ಪ್ರಥಮ ಪರೀಕ್ಷೆಯÇÉೇ ಸೋಲನ್ನು ಒಪ್ಪಿಕೊಂಡು ಕೈಚೆಲ್ಲಿ ಬಿಟ್ಟಿದ್ದರೆ, ತದನಂತರ ನಾನು ಪಡೆದ ಯಶಸ್ಸಿನ ಸಿಹಿ ಅನುಭೂತಿಯಿಂದ ಸಂಪೂರ್ಣ ವಂಚಿತಳಾಗಿಬಿಡುತ್ತಿ¨ªೆ. ಅಂದು ನನ್ನ ಅಪ್ಪ-ಅಮ್ಮ, ಕೆಲವು ಆಪ್ತರು ಬೆಂಬಲ ಸೂಚಿಸಿದ್ದರಿಂದ, ನಾನು ನನ್ನ ಒಳ ಧ್ವನಿಗೆ ಕಿವಿಕೊಟ್ಟಿದ್ದರಿಂದ, ಹತಾಶೆಯೊಳಗೆ ಬೀಳುವುದರಿಂದ ಪಾರಾದೆ. ಇಂದು ಪ್ರçಮರಿ, ಹೈಸ್ಕೂಲು, ಕಾಲೇಜಿನ ವಿದ್ಯಾರ್ಥಿಗಳು ಕೇವಲ ಹತ್ತಿಪ್ಪತ್ತು ಅಂಕಗಳಿಗೋಸ್ಕರ, ರ್‍ಯಾಂಕ್‌ ಮಿಸ್ಸಾಗಿದ್ದನ್ನೇ ನೆಪ ಮಾಡಿಕೊಂಡು ಕೊರಗುವುದು, ಆತ್ಮಹತ್ಯೆಯಂಥ ದುರಂತಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿರುವುದನ್ನು ಕಾಣುವಾಗ ತುಂಬಾ ಬೇಸರವಾಗುತ್ತದೆ. ಬದುಕು ಯಕಃಶ್ಚಿತ್‌ ಅಂಕ, ರ್‍ಯಾಂಕುಗಳನ್ನೆÇÉಾ ಮೀರಿದ್ದು! ಒಂದೂ ಪರೀಕ್ಷೆಯಲ್ಲೂ ಉತ್ತಮ ಅಂಕ ಪಡೆಯದವನೂ ಬದುಕಲ್ಲಿ ಮುಂದೆ ಯಶಸ್ಸನ್ನು ಗಳಿಸಬಲ್ಲ. ಇದಕ್ಕೆ ಕಾರಣ ಆತನ ಸೋಲೊಪ್ಪಿಕೊಳ್ಳದಿರುವ ಮನೋಭಾವ. ಸೋಲು ಮತ್ತು ಗೆಲುವು ಎರಡೂ ನಿಜ ಎಂದೆನಿಸುವುದು ನಾವು ಅದಕ್ಕೆ ಮಾನ್ಯತೆ ಕೊಟ್ಟಾಗ, ಮನಃಪೂರ್ವಕ ಒಪ್ಪಿಕೊಂಡಾಗ.

ಸೋಲಿಗೆ ಹತಾಶರಾಗದೇ, ಅದನ್ನು ಒಂದು ಅನುಭವವೆಂದು ಸ್ವೀಕರಿಸಿದರೆ, ಅದು ಖಂಡಿತ ಗೆಲುವಿಗೆ ಮೆಟ್ಟಿಲಾಗುವುದು.

Advertisement

ಈಗಲೂ ಎಷ್ಟೋ ಸಲ ಎದುರಾಗುವ ಪರಿಸ್ಥಿತಿಯ ತೀವ್ರತೆಯಿಂದ ಕಂಗೆಡುತ್ತಿರುತ್ತೇನೆ. ಆದರೆ ಆಗೆಲ್ಲ ನನಗೆ ಧೈರ್ಯ ತುಂಬುವುದು ನನ್ನ ಓದು, ಬರಹ ಮತ್ತು ಗತದಿನಗಳನ್ನು ಧೈರ್ಯದಿಂದ ಎದುರಿಸಿದ ಬದುಕು. ಅಲ್ಲದೇ, ನನ್ನ ಪತಿ ರಾಮಕೃಷ್ಣ ಹೆಗಡೆಯವರು ಬದುಕನ್ನು ಧನಾತ್ಮಕವಾಗಿ ಸ್ವೀಕರಿಸುವ ಬಗೆಯನ್ನು ಹಲವು ವಿಧಾನಗಳಲ್ಲಿ ತೋರುತ್ತಿರುತ್ತಾರೆ. ನಮ್ಮ ಒಂಭತ್ತು ವರ್ಷದ ಮಗಳು ಅದಿತಿ “ಈ ಕೆಲಸ ನನ್ನಿಂದಾಗುವುದಿಲ್ಲ… ಅದು ಕಲಿಯಲು ಕಷ್ಟ…’ ಎಂದು ರಾಗವೆಳೆಯುವಾಗೆÇÉಾ ತಿಳಿ ಹೇಳುತ್ತಿರುತ್ತೇವೆ. ಹೀಗೇ ಒಮ್ಮೆ ಅವಳು ಯಾವುದೋ ವಿಷಯ ಕಷ್ಟವೆಂದು ಕೂತಿ¨ªಾಗ, ನನ್ನ ಪತಿ ತಮ್ಮದೇ ಉದಾಹರಣೆ ಕೊಟ್ಟಿದ್ದರು.

ಅವರಾಗ ಇಂಜಿನಿಯರಿಂಗ್‌ನ ಐದನೇ ಸೆಮಿಸ್ಟರಿನಲ್ಲಿದ್ದರಂತೆ. ಪರೀಕ್ಷೆಯ ಸಮಯದÇÉೇ ಅನಾರೋಗ್ಯ ಉಂಟಾಗಿ ಆ ವರ್ಷದ ಪರೀಕ್ಷೆಯನ್ನೇ ಬರೆಯಲಾಗಲಿಲ್ಲ. ಆದರೆ, ಮುಂದಿನ ಸೆಮಿಸ್ಟರಿನಲ್ಲಿ ಹಠ ತೊಟ್ಟು, ಹಿಂದಿನ ಬಾರಿಯ ಪಠ್ಯಗಳ ಜೊತೆಗೆ, ಆ ವರುಷದ ಪರೀಕ್ಷೆಗಳನ್ನೂ ಸೇರಿಸಿ, ಅಂದರೆ ಒಟ್ಟೂ 12 ಪಠ್ಯಗಳನ್ನು ಒಟ್ಟಿಗೇ ಅಭ್ಯಸಿಸಿ, ಡಿಸ್ಟಿಂಕ್ಷನ್ನಿನಲ್ಲಿ ಪಾಸು ಮಾಡಿದ್ದರಂತೆ.

ನಿಜ, ನಮ್ಮ ಮನಸೇ ಸಕಲ ಕಾರ್ಯ ಕಾರಣ. ಇದೀಗ ಪರೀಕ್ಷೆಗಳ ಸಮಯ. ಹೆತ್ತವರಿಂದ ಹಿಡಿದು ವಿದ್ಯಾರ್ಥಿಗಳೆಲ್ಲ ಕುಲುಮೆಯÇÉೇ ಅದ್ದಿರುತ್ತಾರೆ. ಫ‌ಲಿತಾಂಶ ಏನೇ ಆಗಲಿ, ಕ್ಷಣಿಕ ಅಂಕಗಳಿಗೆ ಬಲಿಯಾಗದೇ ಬದುಕಿನ ಪರೀಕ್ಷೆಯಲ್ಲಿ ಗೆಲ್ಲುವತ್ತ ಪ್ರಯತ್ನಶೀಲರಾಗಬೇಕು. 

ಒಂದು ವಾಕ್ಯವಿದೆ- ಯಾರು ಬರೆದಿದ್ದು ಎಂದು ನೆನಪಿಲ್ಲ :  ಓಟದಲ್ಲಿ ಜಾರಿ ಬೀಳುವುದು ಸೋಲಲ್ಲ , ಆದರೆ ಜಾರಿ ಬಿದ್ದವನು ಏಳದಿದ್ದರೆ, ಏಳಲು ಪ್ರಯತ್ನಿಸದಿದ್ದರೆ ಅದು ನಿಜವಾದ ಸೋಲು.

– ತೇಜಸ್ವಿನಿ ಹೆಗಡೆ

Advertisement

Udayavani is now on Telegram. Click here to join our channel and stay updated with the latest news.

Next