Advertisement

ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

11:10 AM May 05, 2019 | Team Udayavani |

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಆಶ್ರಯದಲ್ಲಿ ಸಂಘದ ಸದಸ್ಯರಿಗಾಗಿ ಆಯೋಜಿಸಲಾದ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಗೆ ಇಲ್ಲಿನ ದೇಶಪಾಂಡೆ ನಗರದ ಜಿಮಖಾನಾ ಮೈದಾನದಲ್ಲಿ ಶನಿವಾರ ಚಾಲನೆ ನೀಡಲಾಯಿತು.

Advertisement

ನಗರದ ಶ್ರೀಯಾ ಪ್ರಾಪರ್ಟೀಸ್‌ ವ್ಯವಸ್ಥಾಪಕ ನಿರ್ದೇಶಕ ಸೂರಜ ಅಳವಂಡಿ ಬ್ಯಾಟ್ ಬೀಸುವ ಮೂಲಕ ಪಂದ್ಯಾವಳಿ ಉದ್ಘಾಟಿಸಿದರು. ಸ್ವರ್ಣ ಸಮೂಹ ಸಂಸ್ಥೆ ಚೇರ್ಮನ್‌ ಡಾ|ಚಿಗುರುಪಾಟಿ ವಿ.ಎಸ್‌.ವಿ. ಪ್ರಸಾದ, ಕೆಎಸ್‌ಸಿಎ ಧಾರವಾಡ ವಲಯ ಚೇರ್ಮನ್‌ ವೀರಣ್ಣ ಸವಡಿ ಹಾಗೂ ಸಂಯುಕ್ತ ಕರ್ನಾಟಕ ಸಿಇಒ ಎ.ಸಿ. ಗೋಪಾಲ ಅವರು ಅಥಿತಿಗಳಾಗಿ ಪಾಲ್ಗೊಂಡರು. ಸಂಘದ ಅಧ್ಯಕ್ಷ ಗಣಪತಿ ಗಂಗೊಳ್ಳಿ ಅಧ್ಯಕ್ಷತೆ ವಹಿಸಿದ್ದರು.

ಉದಯವಾಣಿ ಸಂಪಾದಕ ವೆಂಕಟೇಶ ಪ್ರಭು, ಸಂಯುಕ್ತ ಕರ್ನಾಟಕ ಸ್ಥಾನಿಕ ಸಂಪಾದಕ ವಾಸುದೇವ ಹೆರಕಲ್, ಪ್ರಜಾವಾಣಿ ಬ್ಯುರೋ ಮುಖ್ಯಸ್ಥ ಬಿ.ಎನ್‌.ಶ್ರೀಧರ, ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ಡಾ| ಬಂಡು ಕುಲಕರ್ಣಿ, ಹೊಸ ದಿಗಂತದ ಸ್ಥಾನಿಕ ಸಂಪಾದಕ ರಘುಪತಿ ಯಾಜಿ, ಸಂಘದ ಪದಾಧಿಕಾರಿಗಳಾದ ಸುಶಿಲೇಂದ್ರ ಕುಂದರಗಿ, ಜಗದೀಶ ಬುರ್ಲಬಡ್ಡಿ, ಗಿರೀಶ ಪಟ್ಟಣಶೆಟ್ಟಿ, ಗುರುರಾಜ ಹೂಗಾರ, ಪರಶುರಾಮ ತಹಶೀಲ್ದಾರ, ವಿರೇಶ ಹಂಡಗಿ, ಕೃಷ್ಣ ದಿವಾಕರ, ಗುರು ಭಾಂಡಗೆ, ರಾಜ್ಯ ಸಮಿತಿ ಸದಸ್ಯ ಲೋಚನೇಶ ಹೂಗಾರ ಮೊದಲಾದವರು ಉಪಸ್ಥಿತರಿದ್ದರು.

ಮೊದಲ ದಿನದ ಫಲಿತಾಂಶ
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯ ದಲ್ಲಿ ನಡೆಯುತ್ತಿರುವ ಎರಡನೇ ವರ್ಷದ ಈ ಪಂದ್ಯಾವಳಿಯಲ್ಲಿ ವಿವಿಧ ಮುದ್ರಣ ಹಾಗೂ ಎಲೆಕ್ಟ್ರಾನಿಕ್‌ ಮಾಧ್ಯಮದ ಸುಮಾರು 13 ತಂಡಗಳು ಪಾಲ್ಗೊಂಡಿವೆ.

ಮೊದಲ ಪಂದ್ಯದಲ್ಲಿ ಲೀಡ್‌ ಸ್ಟೋರಿ ಇಲೆವೆನ್‌ ತಂಡ ನ್ಯೂಸ್‌ ಇಲೆವೆನ್‌ ತಂಡವನ್ನು 9ವಿಕೆಟ್‌ಗಳಿಂದ ಸೋಲಿಸಿತು. ಮೊದಲು ಬ್ಯಾಟ್ ಮಾಡಿದ ನ್ಯೂಸ್‌ ಇಲೆವೆನ್‌ ತಂಡ 6 ಓವರ್‌ಗಳಲ್ಲಿ 22 ರನ್‌ ಗಳಿಸಿದರೆ, 2.3 ಓವರ್‌ಗಳಲ್ಲಿ ಒಂದು ವಿಕೆಟ್ ಮಾತ್ರ ಕಳೆದುಕೊಂಡು ಗುರಿ ತಲುಪಿದ ಲೀಡ್‌ ಸ್ಟೋರಿ ಇಲೆವೆನ್‌ ತಂಡ ಜಯ ಗಳಿಸಿತು.

ಪೇಜ್‌ 3 ಇಲೆವೆನ್‌ ತಂಡ ನೀಡಿದ 35 ರನ್‌ಗಳ ಗುರಿಯನ್ನು ಕ್ಲಿಕ್‌ ಕ್ಲಿಕ್‌ ಇಲೆವೆನ್‌ ತಂಡ ಒಂದು ವಿಕೆಟ್ ಕಳೆದುಕೊಂಡು 3.4 ಓವರ್‌ಗಳಲ್ಲಿ ತಲುಪಿ ಎರಡನೇ ಸುತ್ತಿಗೆ ಮುನ್ನಡೆಯಿತು.

Advertisement

ಸ್ಟಿಂಗ್‌ ಇಲೆವೆನ್‌ ತಂಡ ನೀಡಿದ 29 ರನ್‌ಗಳ ಗುರಿಯನ್ನು ಆ್ಯಂಕರ್‌ ಇಲೆವೆನ್‌ ತಂಡ 4.1 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು ತಲುಪಿ ಜಯ ದಾಖಲಿಸಿತು.

ಸ್ಪೇಶಲ್ ಸ್ಟೋರಿ ಇಲೆವೆನ್‌ ತಂಡ 72 ರನ್‌ ಗಳಿಸಿದರೆ, ಫ್ಲೈಯರ್‌ ಇಲೆವೆನ್‌ ತಂಡ 6 ವಿಕೆಟ್ ಕಳೆದುಕೊಂಡು 30 ರನ್‌ಗಳನ್ನು ಗಳಿಸಿ ಸೋಲನುಭವಿಸಿತು.

ಎಕ್ಸ್‌ಕ್ಲ್ಯೂಸಿವ್‌ ಇಲೆವೆನ್‌ ತಂಡ ಎಡಿಟೋರಿಯಲ್ ಇಲೆವೆನ್‌ ವಿರುದ್ಧ ಒಂದು ರನ್‌ನ ರೋಚಕ ಜಯ ಗಳಿಸಿತು. ಮೊದಲು ಆಡಿದ ಎಕ್ಸ್‌ಕ್ಲ್ಯೂಸಿವ್‌ ಇಲೆವೆನ್‌ ತಂಡ 39 ರನ್‌ ಗಳಿಸಿದರೆ ಎಡಿಟೋರಿಯಲ್ ಇಲೆವೆನ್‌ ತಂಡ 38 ರನ್‌ ಮಾತ್ರ ಗಳಿಸಿತು.

ಹೆಡ್‌ಲೈನ್‌ ಇಲೆವೆನ್‌ ತಂಡ ನೀಡಿದ 55 ರನ್‌ಗುರಿ ಬೆನ್ನತ್ತಿದ ಬೈಲೈನ್‌ ತಂಡ 6 ವಿಕೆಟ್ ಕಳೆದುಕೊಂಡು 21 ರನ್‌ ಗಳಿಸಿ ಸೋಲು ಕಂಡಿತು.

ಭಾನುವಾರ ಬೆಳಗ್ಗೆ ಕ್ವಾರ್ಟರ್‌ಫೈನಲ್, ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ಜರುಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next