ನಟಿ ಪಾವನಾ ಈ ಹಿಂದೆ ಮಹಿಳಾ ಪ್ರಧಾನವಾಗಿರುವ “ರುದ್ರಿ’ ಚಿತ್ರದಲ್ಲಿ ನಟಿಸುವುದಾಗಿ ಹೇಳಿದ್ದರು. ಆ ಚಿತ್ರ ಅದಾಗಲೇ ಚಿತ್ರೀಕರಣ ಪೂರೈಸಿದ್ದು, ಚಿತ್ರದ ಫಸ್ಟ್‌ಲುಕ್ ಹೊರಬಂದಿದೆ. ಪುನೀತ್ ರಾಜಕುಮಾರ್ ಚಿತ್ರದ ಫಸ್ಟ್‌ಲುಕ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಬಡಿಗೇರ್ ದೇವೇಂದ್ರ ನಿರ್ದೇಶನದ ಈ ಚಿತ್ರದಲ್ಲಿ ಪಾವನಾ “ರುದ್ರಿ’ ಅವತಾರ ತಾಳಿದ್ದಾರೆ. ಚಿತ್ರದ ವಿಶೇಷವೆಂದರೆ, ಬಹುತೇಕ ಉತ್ತರ ಕರ್ನಾಟಕ ಹಿನ್ನೆಲೆಯಲ್ಲೇ ಸಾಗಲಿದೆ.
ಭಾಷೆ ಕೂಡ ಉತ್ತರ ಕರ್ನಾಟಕದಲ್ಲೇ ಇರಲಿದೆ. ಒಂದು ಹೆಣ್ಣಿನ ಸುತ್ತ ನಡೆಯುವ ಕಥೆ ಇದಾಗಿದ್ದು, ಒಬ್ಬ ಹುಡುಗಿಯ ಆಸೆ, ಕನಸು, ನೋವು, ನಲಿವುಗಳ ಸುತ್ತ ಚಿತ್ರ ಸಾಗಲಿದೆ. ಹಳ್ಳಿಯ ಹೆಣ್ಣುಮಕ್ಕಳು ಹೇಗೆ ಸಣ್ಣ ಸಣ್ಣ ಅಂಶಗಳಿಗೆ ಖುಷಿಪಡುತ್ತಾರೆ. ತಮಗೆ ಎದುರಾಗುವ ಸಮಸ್ಯೆಗಳಿಂದ ಹೇಗೆ ತೊಂದರೆಗೊಳಪಡುತ್ತಾರೆ. ಆ ಬಳಿಕ ಹೇಗೆ ಅದರಿಂದ ಹೊರಬರುತ್ತಾರೆ ಎಂಬ ಅಂಶಗಳು ಇಲ್ಲಿ ಹೈಲೈಟ್.
“ರುದ್ರಿ’ ಅಂದರೆ, ಅದೊಂದು ಪವರ್‌ಫುಲ್ ಹೆಸರು. ಪ್ರತಿಯೊಬ್ಬ ಹೆಣ್ಣು ಮಕ್ಕಳಲ್ಲೂ ಪಾರ್ವತಿಯೂ ಇರುತ್ತಾಳೆ. ಕಾಳಿಯೂ ಇರುತ್ತಾಳೆ. ಇಲ್ಲಿ ರುದ್ರಿ ಎಂಬ ಹುಡುಗಿಯ ಲೈಫಲ್ಲಿ ಒಂದು ಸಮಸ್ಯೆ ಎದುರಾಗುತ್ತೆ. ಆಗ ಅವಳು ಕಾಳಿ ಅವತಾರ ತಾಳುತ್ತಾಳೆ. ಅದೊಂದು ರೀತಿಯ ರುದ್ರಾವತಾರ. ನೊಂದು ಹುಡುಗಿಯೊಬ್ಬಳು ಸಿಡಿದೇಳುವ ಪಾತ್ರ ಇಲ್ಲಿ ಹೈಲೈಟ್’ ಎಂಬುದು ಪಾವನಾ ಮಾತು. ಇನ್ನು, ಚಿತ್ರದಲ್ಲಿ ಬಹುತೆಕ ರಂಗಭೂಮಿ ಕಲಾವಿದರು ತುಂಬಿದ್ದಾರೆ. ನೀನಾಸಂ, ರಂಗಶಂಕರ, ರಂಗಾಯಣ ಹಾಗು ಉತ್ತರ ಕರ್ನಾಟಕ ಭಾಗದ ಕಲಾವಿದರೂ ಇಲ್ಲಿದ್ದಾರೆ.
ಎಲ್ಲವೂ ಅಂದುಕೊಂಡಂತೆ ನಡೆದರೆ “ರುದ್ರಿ’ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಪಾವನಾ ಕೈಯಲ್ಲೀಗ ನಾಲ್ಕೈದು ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ. “ರುದ್ರಿ’, “ಮೈಸೂರು ಡೈರೀಸ್’,”ಫೈಟರ್’,”ತೂತು ಮಡಿಕೆ’ ಸೇರಿದಂತೆ ಇನ್ನೊಂದಷ್ಟು ಸಿನಿಮಾಗಳಿವೆ. ಇವೆಲ್ಲವೂ ಒಂದಕ್ಕಿಂತ ಒಂದು ವಿಭಿನ್ನ ಕಥೆ ಹೊಂದಿವೆ ಎಂಬುದು ಅವರ ಹೇಳಿಕೆ. “ರುದ್ರಿ’ ಚಿತ್ರಕ್ಕೆ ಸಿ.ಆರ್.ಮಂಜುನಾಥ್ ನಿರ್ಮಾಪಕರು. ಸಾಧುಕೋಕಿಲ ಅವರ ಸಂಗೀತವಿದೆ.