ಮಂಗಳೂರು: ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಅವರ ಕೊಲೆ ಪ್ರಕರಣವನ್ನು ಖಂಡಿಸಿ, ನ್ಯಾಯಕ್ಕಾಗಿ ಆಗ್ರಹಿಸಿ ಮಂಗಳವಾರದಂದು ದೇಶಪ್ರೇಮಿ ಸಂಘಟನೆಗಳ ಒಕ್ಕೂಟದಿಂದ ನಗರದ ರಥಬೀದಿಯ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ಅವರ ಮನೆಯವರೆಗೆ ಕಾಲ್ನಡಿಗೆ ಜಾಥಾ ನಡೆಯಿತು.
ದೇವಸ್ಥಾನದ ಮುಂದೆ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಮನೋವೈದ್ಯ ಡಾ| ಪಿ.ವಿ.ಭಂಡಾರಿ ಅವರು, ವಿನಾಯಕ ಬಾಳಿಗಾ ಅವರ ಕೊಲೆ ನಡೆದು ಏಳು ವರ್ಷಗಳು ಸಂದರೂ ರಾಜ್ಯ ಸರಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇದರ ವಿರುದ್ಧ ಹೋರಾಟ ತೀವ್ರಗೊಳಿಸಬೇಕಾಗಿದೆ ಎಂದು ಹೇಳಿದರು.
ವಿಚಾರವಾದಿ ಪ್ರೊ| ನರೇಂದ್ರ ನಾಯಕ್ ಅವರು ಮಾತನಾಡಿ, ಬಿಜೆಪಿ ಸರಕಾರದ ಒಬ್ಬನೇ ಪ್ರತಿನಿಧಿ ಕೂಡ ಇದುವರೆಗೆ ಬಾಳಿಗಾ ಅವರ ಮನೆಗೆ ಭೇಟಿ ನೀಡಿಲ್ಲ. ಬಾಳಿಗಾ ಸಹೋದರಿಯರಿಗೆ ಧೈರ್ಯ ತುಂಬಿಲ್ಲ. ಸರಕಾರದಿಂದ ಕನಿಷ್ಠ ಪರಿಹಾರವನ್ನೂ ಒದಗಿಸಿಕೊಟ್ಟಿಲ್ಲ. ಇತ್ತೀಚೆಗೆ ಹರ್ಷ ಮತ್ತು ಪ್ರವೀಣ್ ನೆಟ್ಟಾರು ಸಾವಿಗೆ ಸ್ಪಂದಿಸಿದ ಸರಕಾರ ಬಾಳಿಗಾ ಸಾವಿಗೆ ಸ್ಪಂದಿಸಿಲ್ಲ ಎಂದು ಹೇಳಿದರು.
ನಾಗರಿಕ ಸೇವಾ ಟ್ರಸ್ಟ್‌ನ ಸೋಮನಾಥ ನಾಯಕ್, ವಿನಾಯಕ ಬಾಳಿಗಾ ಅವರ ಸಹೋದರಿಯರಾದ ಹರ್ಷಾ ಬಾಳಿಗಾ, ಅನುರಾಧಾ ಬಾಳಿಗಾ, ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಪ್ರಮುಖರಾದ ಎಂ.ದೇವದಾಸ್, ವಾಸುದೇವ ಉಚ್ಚಿಲ್, ಸುನಿಲ್ ಬಜಿಲಕೇರಿ, ಸುನೀಲ್ ಕುಮಾರ್ ಬಜಾಲ್, ಬಿ.ಕೆ. ಇಮ್ತಿಯಾಝ್, ಮಂಜುಳಾ ನಾಯಕ್, ಪ್ರಕಾಶ್ ಸಾಲ್ಯಾನ್, ವಹಾಬ್ ಕುದ್ರೋಳಿ, ಸಂಜನಾ ಚಲವಾದಿ, ನಿತಿನ್ ಕುತ್ತಾರ್, ರಘು ಎಕ್ಕಾರ್, ರೇವಂತ್ ಕದ್ರಿ, ಕದ್ರಿ ಜೆರಾಲ್ಡ್ ಟವರ್ ಮೊದಲಾದವರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಡಿವೈಎಫ್ಐ ದ.ಕ.ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು.