Advertisement

ಹಳೇ ಪದ್ಧತಿಯಂತೆಯೇ ಆರ್‌ಟಿಇ ಸೀಟು ಹಂಚಿಕೆ

06:10 AM Jan 16, 2018 | |

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ಬದಲಾವಣೆ ತರಲು ಮುಂದಾಗಿದ್ದ ರಾಜ್ಯ ಕಾಂಗ್ರೆಸ್‌ ಸರ್ಕಾರ ಇದೀಗ ಚುನಾವಣೆಯಲ್ಲಿ ಪಕ್ಷದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದೆಂಬ ಆತಂಕದಿಂದ ಈಗಿರುವ ಪದ್ಧತಿಯನ್ನೇ 
ಮುಂದುವರಿಸಲು ನಿರ್ಧರಿಸಿದೆ.

Advertisement

ಕೇರಳ ಮಾದರಿಯಂತೆ ರಾಜ್ಯದಲ್ಲೂ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಆರ್‌ಟಿಇ ಸೀಟು ಭರ್ತಿಯಾದ
ನಂತರ ಖಾಸಗಿ ಶಾಲೆಗೆ ಆರ್‌ಟಿಇ ಸೀಟು ಭರ್ತಿ ಮಾಡುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕೇಳಿತ್ತು. ಅದರಂತೆ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿತ್ತು.

ಆದರೆ, ಈಗ ನಿಯಮದ ತಿದ್ದುಪಡಿಗೆ ವಿಧಾನಸಭಾ ಚುನಾವಣೆ ಅಡ್ಡಿಯಾಗಿದೆ. ಚುನಾವಣೆ ಸಂದರ್ಭದಲ್ಲಿ ಆರ್‌ಟಿಇ ಬದಲಾವಣೆ ಮಾಡಿ ಬಡವರ ಕೆಂಗಣ್ಣಿಗೆ ಗುರಿಯಾಗುವುದು ಬೇಡವೆಂಬ ಕಾರಣಕ್ಕೆ ಮುಂದಿನ ಶೈಕ್ಷಣಿಕ ವರ್ಷದವರೆಗೂ ಯಾವುದೇ ಬದಲಾವಣೆ ಮಾಡದಿರಲು ತೀರ್ಮಾನಿಸಿದೆ. ಅಂದರೆ, ಖಾಸಗಿ ಶಾಲೆಗಳಲ್ಲಿ ಶೇ.25ರಷ್ಟು ಆರ್‌ಟಿಇ ಸೀಟು ಲಭ್ಯವಾಗಲಿದೆ.

ಯುಪಿಎ ಸರ್ಕಾರ ತನ್ನ ಎರಡನೇ ಅವಧಿಯಲ್ಲಿ ಆರ್‌ಟಿಇ ಕಾಯ್ದೆ ಜಾರಿಗೆ ತಂದಿತ್ತು. ದೇಶದಲ್ಲಿ ಇದನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿದ ಕೀರ್ತಿ ಸದ್ಯ ರಾಜ್ಯ ಸರ್ಕಾರಕ್ಕಿದೆ. ಬೇರೆ ರಾಜ್ಯಗಳಲ್ಲಿ ಇಷ್ಟೊಂದು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿಲ್ಲ. ಯುಪಿಎ ಸರ್ಕಾರದ ಕಾಯ್ದೆಯನ್ನೇ ರಾಜ್ಯ ಕಾಂಗ್ರೆಸ್‌ ಸರ್ಕಾರ ಬದಲಾವಣೆ ಮಾಡಿದೆ ಎಂಬ ಅಪಕೀರ್ತಿಗೆ ಬಲಿಯಾಗುವುದು ಬೇಡವೆಂಬ ಮುನ್ನೆಚ್ಚರಿಕೆಯಿಂದಲೂ ತಿದ್ದುಪಡಿ ಪ್ರಸ್ತಾವನೆಯನ್ನೇ ಕೈಬಿಟ್ಟಿದೆ.

2018-19ನೇ ಸಾಲಿಗೆ ಹಳೇ ಪದ್ಧತಿಯೇ ಮುಂದುವರಿಯುವುದರಿಂದ ರಾಜ್ಯದ ಅಲ್ಪಸಂಖ್ಯಾತ ಹಾಗೂ ಭಾಷಾ ಅಲ್ಪಸಂಖ್ಯಾತ ಶಾಲೆಗಳು ಹೊರತುಪಡಿಸಿ ಉಳಿದೆಲ್ಲ ಖಾಸಗಿ ಶಾಲಾಡಳಿತ ಮಂಡಳಿ ಶೇ.25ರಷ್ಟು ಆರ್‌ಟಿಇ ಸೀಟು ಮೀಸಲಿಡಲೇ ಬೇಕು. 2012-13ರಿಂದ ರಾಜ್ಯ ಸರ್ಕಾರ ಆರ್‌ಟಿಇ ಅನುಷ್ಠಾನ ಮಾಡಿದೆ. ಸುಮಾರು 4 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಆರ್‌ಟಿಇ ಅಡಿಯಲ್ಲಿ ರಾಜ್ಯದ ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಪ್ರತಿ ವರ್ಷ ಸರ್ಕಾರ ಕೋಟ್ಯಾಂತರ ರೂ.ಗಳನ್ನು ಇದಕ್ಕಾಗಿಯೇ ಮೀಸಲಿಡುತ್ತಿದೆ. ಕೇಂದ್ರದಿಂದಲೂ ಅನುದಾನ ಬರುತ್ತಿದೆ.

Advertisement

ಖಾಸಗಿ ಶಾಲೆಗಳಿಗೆ ಆರ್‌ಟಿಇ ಅಡಿಯಲ್ಲಿ ಸೇರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆ ಸಬಲೀಕರಣ ಮಾಡಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸೇರಿ ಶಿಕ್ಷಣ ತಜ್ಞರು, ಬುದ್ಧಿಜೀವಿಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಬಂದಿದ್ದಾರೆ. ಖಾಸಗಿ ಶಾಲೆಗಳ ಆರ್‌ಟಿಇ ಸೀಟು ರದ್ದು ಮಾಡಿ, ಆ ಹಣವನ್ನು ಸರ್ಕಾರಿ ಶಾಲೆಗೆ ವಿನಿಯೋಗ ಮಾಡಬೇಕೆಂಬ ಆಗ್ರಹವನ್ನು ಮಾಡಿದ್ದರು.

ಹೀಗಾಗಿಯೇ ಸರ್ಕಾರ ಆರ್‌ಟಿಇ ನಿಯಮ ತಿದ್ದುಪಡಿಗೆ ಮುಂದಾಗಿತ್ತು. ಚುನಾವಣೆ ಹೊಸ್ತಿಲಲ್ಲಿ ಕೈ ಸುಟ್ಟುಕೊಳ್ಳುವುದು
ಬೇಡ ಎಂದು ಸುಮ್ಮನಾಗಿದೆ.

ಮಾರ್ಗಸೂಚಿ ವಿಳಂಬ ಸಾದ್ಯತೆ: ಸಾರ್ವಜನಿಕ ಶಿಕ್ಷಣ ಇಲಾಖೆಯು ಆರ್‌ಟಿಇ ಮಾರ್ಗಸೂಚಿ ಪ್ರಕಟಿಸಿ,
ವೇಳಾಪಟ್ಟಿಯನ್ನು ಬಿಡುಗಡೆ ಮಾಡಿ, ಅರ್ಜಿ ಸ್ವೀಕಾರ ಮಾಡದೇ ಖಾಸಗಿ ಶಾಲಾಡಳಿತ ಮಂಡಳಿ ಪ್ರವೇಶ ಪ್ರಕ್ರಿಯೆ
ನಡೆಸುವಂತಿಲ್ಲ ಎಂದು ಶಿಕ್ಷಣ ನಿಯಮ ಸ್ಪಷ್ಟವಾಗಿ ಹೇಳುತ್ತದೆ. ಆದರೆ ಈಗ ಸರ್ಕಾರವೇ ಆರ್‌ಟಿಇ ಮಾರ್ಗಸೂಚಿ ಬಿಡುಗಡೆ ವಿಳಂಬ ಮಾಡುತ್ತಿದೆ. ಪ್ರತಿ ವರ್ಷ ಡಿಸೆಂಬರ್‌ ಅಂತ್ಯದಲ್ಲಿ ಆರ್‌ಟಿಇ ಪ್ರಕ್ರಿಯೆ ಆರಂಭವಾಗುತಿತ್ತು. 2018-19ನೇ ಸಾಲಿನ ಆರ್‌ಟಿಇ ಸೀಟಿಗೆ ಸಂಬಂಧಿಸಿದಂತೆ ಮಾರ್ಗಸೂಚಿ ಇನ್ನೂ ಪ್ರಕಟಗೊಂಡಿಲ್ಲ. ಈ ಮಧ್ಯೆ ಕಾನೂನು ಬಾಹಿರವಾಗಿ ಕೆಲವು ಖಾಸಗಿ ಶಾಲೆಗಳು ಪ್ರವೇಶ ಪ್ರಕ್ರಿಯೆ ಆರಂಭಿಸಿವೆ.

ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ದೆಹಲಿಯಲ್ಲಿ ನಡೆಯುತ್ತಿರುವ ಕೇಂದ್ರ ಸಲಹಾ ಮಂಡಳಿ ಸಭೆಯಲ್ಲಿ ಸಚಿವರು ಭಾಗವಹಿಸಿದ್ದಾರೆ. ಮುಂದಿನ ತೀರ್ಮಾನ ಕುರಿತು ಸಚಿವರೊಂದಿಗೆ ಚರ್ಚಿಸಿ ಶೀಘ್ರದಲ್ಲಿ ಮಾರ್ಗಸೂಚಿ ಬಿಡುಗಡೆ ಮಾಡಲಿದ್ದೇವೆ.
–  ಡಾ.ಶಾಲಿನಿ ರಜನೀಶ್‌,
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next