Advertisement

ತಾಸುಗಟ್ಟಲೆ ಕ್ಯೂ ನಿಂತರೂ ಆರ್‌ಟಿಸಿ ಸಿಗ್ತಿಲ್ಲ

12:43 PM Oct 13, 2017 | Team Udayavani |

ಪುತ್ತೂರು: ಜಿಪಿಎಸ್‌ ಓಪನ್‌ ಆಗುತ್ತಿಲ್ಲ, ಸರ್ವರ್‌ ಸರಿ ಇಲ್ಲ, ಸಾಫ್ಟ್‌ ವೇರ್‌ ಕೆಲಸ ಮಾಡುತ್ತಿಲ್ಲ. ಇದು ತಾಲೂಕು ಕಚೇರಿಯ ಪಡಸಾಲೆಯಲ್ಲಿ ಸರದಿಯಲ್ಲಿ ಕಾದು ಕುಳಿತ ಸಾರ್ವಜನಿಕರು ದಿನಂಪ್ರತಿ ಕೇಳಿಸಿಕೊಳ್ಳುತ್ತಿರುವ ಸಮಸ್ಯೆ.

Advertisement

ಹತ್ತು ರೂ.ನ ಆರ್‌ಟಿಸಿ ಪಡೆದು ಕೊಳ್ಳಲು ಒಂದು ದಿನ ಕೆಲಸಕ್ಕೆ ರಜೆ ಹಾಕಬೇಕು. ಬೆಳಗ್ಗೆ ಬಂದು ಸಾಲು ನಿಂತರೆ, ಮಧ್ಯಾಹ್ನದ ಹೊತ್ತಿಗೆ ಆರ್‌ಟಿಸಿ ಸಿಕ್ಕಿದರೆ ಪುಣ್ಯ. ಅಷ್ಟು ಉದ್ದದ ಸರತಿ ಸಾಲು ಬೆಳೆದಿರುತ್ತದೆ. ಇಷ್ಟು ಹೊತ್ತು ಕಾದು ಕುಳಿತು ಮಧ್ಯಾಹ್ನ 1.30ಕ್ಕೆ ಸೇವಾ ಕೇಂದ್ರ ಮುಚ್ಚುವುದನ್ನು ಪ್ರಶ್ನಿಸಲಾಗದೇ ಸುಮ್ಮನೆ ಕುಳಿತವರು ಅನೇಕರು. ಮತ್ತೆ 2.30ರವರೆಗೆ ಕಾದು ಕುಳಿತು, ಸರತಿ
ಸಾಲಿನಲ್ಲಿ ಸಾಗಬೇಕು.

ಪುತ್ತೂರು ತಾಲೂಕು ಕಚೇರಿಯಲ್ಲಿ ಎರಡು ವಿಭಾಗ ಮಾಡಿ ಆರ್‌ಟಿಸಿ ನೀಡಲಾಗುತ್ತಿದೆ. ಈ ಎರಡೂ ಕೇಂದ್ರಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಈ ಬಗ್ಗೆ ವಿಚಾರಿಸಿದಾಗ, ಕೈ ಮೀರಿದ ಸಮಸ್ಯೆ. ನಮ್ಮ ಕೈಯಲ್ಲೇನೂ ಇಲ್ಲ. ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಪರ್ಯಾಯ ದಾರಿಯೂ ಇಲ್ಲ ಎಂದು ಪುತ್ತೂರು ತಹಶೀಲ್ದಾರ್‌ ಅನಂತಶಂಕರ ತಿಳಿಸಿದ್ದಾರೆ. 

ಪ್ರತಿಯೊಂದು ಜಾಗದ ವ್ಯವಹಾರಗಳಿಗೂ ಕಡ್ಡಾಯವಾಗಿರುವ ಆರ್‌ಟಿಸಿ ಪಡೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಆವಶ್ಯಕತೆಗೆ ಪೂರಕವಾಗಿ ಆರ್‌ಟಿಸಿ ನೀಡುವಲ್ಲಿ ವ್ಯವಸ್ಥೆ ಸೋಲುತ್ತಿದೆ. ಕೆಲಸ-ಕಾರ್ಯಗಳು ವಿಳಂಬವಾಗುತ್ತಿದ್ದರೂ ಜನರು ಬೇರೆ ಮಾರ್ಗ ಕಾಣದೆ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಾ ತೆರಳುವುದು ಸಾಮಾನ್ಯವಾಗಿದೆ.

ಗ್ರಾ.ಪಂ.ಗಳಲ್ಲೂ ಸಿಗುತ್ತಿಲ್ಲ
ತಾಲೂಕು ಕಚೇರಿಯಿಂದ ಆರ್‌ಟಿಸಿ ಪಡೆದುಕೊಳ್ಳಲು ಜನದಟ್ಟಣೆ ಹೆಚ್ಚುತ್ತಿದ್ದಂತೆ, ಪ್ರತಿ ಗ್ರಾ.ಪಂ.ಗಳಲ್ಲಿ ಬಾಪೂಜಿ ಸೇವಾ ಕೇಂದ್ರ ತೆರೆಯಲಾಯಿತು. ಇದರ ಮೂಲಕ ಅಲ್ಲಿನ ನಿವಾಸಿಗಳಿಗೆ ಆರ್‌ಟಿಸಿ ನೀಡುವ ಕಾರ್ಯಕ್ಕೆ 2016ರ ಜುಲೈ 31ರಂದು ಉಸ್ತುವಾರಿ ಸಚಿವ ರಮಾನಾಥ ರೈ ಚಾಲನೆ ನೀಡಿದ್ದರು. ಇದೀಗ ವರ್ಷ ಸರಿಯುವುದರೊಳಗೆ ಬಾಪೂಜಿ ಸೇವಾ ಕೇಂದ್ರ ಕಾರ್ಯ ಸ್ಥಗಿತ ಮಾಡಿದೆ. ಗ್ರಾ.ಪಂ.ಗಳಲ್ಲೂ ಆರ್‌ಟಿಸಿ ಸಿಗದೆ ಗ್ರಾಮಾಂತರ ಪ್ರದೇಶಗಳ ಜನರೂ ತಾಲೂಕು ಕಚೇರಿಗೆ ದೌಡಾಯಿಸುತ್ತಿದ್ದಾರೆ.

Advertisement

ಗ್ರಾ.ಪಂ.ಗಳಿಗೆ ಆರ್‌ಟಿಸಿಯ ಪೇಪರ್‌ ಸಿಗುತ್ತಿಲ್ಲ ಎಂಬ ದೂರು ಕೇಳಿಬರುತ್ತಿದೆ. ಆರ್‌ಟಿಸಿ ಪ್ರಿಂಟ್‌ ತೆಗೆಯುವ ಕಾಗದ ಪೂರೈಸಲು ಆಡಳಿತ ವಿಫ‌ಲವಾಗಿದೆ. ಮಾತ್ರವಲ್ಲ, ಆರ್‌ಟಿಸಿ ನೀಡುವ ಸಾಫ್ಟ್ ವೇರ್‌ ಕೂಡ ಸರಿಯಾಗಿ ಅಪ್‌ಡೇಟ್‌ ಆಗಿಲ್ಲ. ಈ ವಿಚಾರವನ್ನು ಜಿಲ್ಲಾಡಳಿತದ ಕಿವಿಗೆ ಹಾಕಲಾಗಿದೆ.

ಜಿಲ್ಲಾಡಳಿತ ರಾಜ್ಯಕ್ಕೆ ವಿಚಾರ ತಿಳಿಸಿ, ಸರಿಪಡಿಸುವ ಕೆಲಸ ಮಾಡಬೇಕಿತ್ತು. ಆದರೆ ಇದರ ಗೋಜಿಗೇ ಯಾರೂ ಹೋದಂತಿಲ್ಲ.

500 ರೂ. ಸಿಬಂದಿಗೆ ಹೊರೆ
ಸಾಫ್ಟ್‌ವೇರ್‌ ಜಂಪ್‌ ಆಗುವ ಕಾರಣ, ಆರ್‌ಟಿಸಿ ವಿತರಿಸುವ ಸಿಬಂದಿ ತಮ್ಮ ಕೈಯಿಂದ ಹಣಕಳೆದುಕೊಳ್ಳುವಂತಾಗಿದೆ. ಒಬ್ಬ ವ್ಯಕ್ತಿ ಆರ್‌ಟಿಸಿ ಕೇಳಿದರೆ, ಒಮ್ಮೆಗೇ ಎರಡು ಆರ್‌ಟಿಸಿ ಮುದ್ರಣಗೊಳ್ಳುತ್ತವೆ. ಆರ್‌ಟಿಸಿ ತೆಗೆದುಕೊಳ್ಳುವ ವ್ಯಕ್ತಿ ಒಂದು ಆರ್‌ಟಿಸಿಯ ಶುಲ್ಕ ಮಾತ್ರ ಪಾವತಿಸುತ್ತಾನೆ.

ಇನ್ನೊಂದು ಆರ್‌ಟಿಸಿ ಹಣವನ್ನು ಸಿಬಂದಿಯೇ ಭರಿಸಬೇಕು. ಇದರಿಂದಾಗಿ ಒಂದು ದಿನದಲ್ಲಿ ಪುತ್ತೂರು ತಾಲೂಕು ಕಚೇರಿಯ ಸಿಬ್ಬಂದಿ 500 ರೂ. ಕಳೆದುಕೊಂಡಿದ್ದಾರೆ. ಇಂತಹ ಘಟನೆ ದಿನಂಪ್ರತಿ ನಡೆಯುತ್ತಿರುತ್ತವೆ ಎಂದು ಉಪತಹಶೀಲ್ದಾರ್‌ ಶಶಿಕಲಾ ತಿಳಿಸಿದ್ದಾರೆ.

ಸಮಸ್ಯೆ ಬಗೆಹರಿಸಲು ಕ್ರಮ
ಆರ್‌ಟಿಸಿ ಪೇಪರ್‌ ಸಿಗ್ತಾ ಇಲ್ಲ ಎಂಬ ಮಾಹಿತಿ ಸಿಕ್ಕಿದೆ. ಪೇಪರ್‌ ಪೂರೈಕೆ ಮಾಡಿದರೆ ಗ್ರಾಮ ಪಂಚಾಯತ್‌ನಲ್ಲೇ ಆರ್‌ಟಿಸಿ ವಿತರಿಸಲಾಗುವುದು. ಇದರಿಂದ ತಾಲೂಕು ಕಚೇರಿಯಲ್ಲಿ ಹೊರೆ ಆಗುವುದಿಲ್ಲ. ಸರ್ವರ್‌ ಸಮಸ್ಯೆಯೂ ಬರುವುದಿಲ್ಲ. ಒಂದು ವೇಳೆ ಸರ್ವರ್‌ ಸಮಸ್ಯೆಗೆ ಬೇರೆಯೇ ಕಾರಣ ಇದೆ ಎಂದಾದರೆ, ರಾಜ್ಯದ ಗಮನಕ್ಕೆ ತರಲಾಗುವುದು. ಆದಷ್ಟು ಶೀಘ್ರ ಸಮಸ್ಯೆ ಪರಿಹಾರದ ಕಡೆ ಗಮನ ಹರಿಸಲಾಗುವುದು. 
-ಶಶಿಕಾಂತ್‌ ಸೆಂಥಿಲ್‌,
ಜಿಲ್ಲಾಧಿಕಾರಿ, ದ.ಕ.

ಗಣೇಶ್‌ ಎನ್‌. ಕಲ್ಲರ್ಪೆ 

Advertisement

Udayavani is now on Telegram. Click here to join our channel and stay updated with the latest news.

Next