Advertisement

ಆರ್‌ಟಿಇನಲ್ಲೂ ನಡೆದಿದೆ ಲೂಟಿ!

11:59 AM Dec 17, 2018 | |

ಕಲಬುರಗಿ: ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಬಡ ಹಾಗೂ ಹಿಂದುಳಿದ ಮಕ್ಕಳಿಗೆ ಪ್ರವೇಶಾತಿ ಕಲ್ಪಿಸುವ ಶಿಕ್ಷಣ ಕಾಯ್ದೆ ಹಕ್ಕು (ಆರ್‌ಟಿಇ) ಅಡಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಕ್ಕಳ ಸಂಖ್ಯೆ ಅಪರಾ ತಪರಾ ತೋರಿಸಿ ಶುಲ್ಕ ಎತ್ತಿ ಹಾಕಿ ಸರ್ಕಾರದ ಬೊಕ್ಕಸಕ್ಕೆ ಹಾನಿ ಮಾಡಿರುವುದು ಬಹಿರಂಗಗೊಂಡಿದ್ದು, ಹಣ ವಸೂಲಾತಿಗೆ ಆದೇಶಿಸಲಾಗಿದೆ.

Advertisement

ಲೆಕ್ಕ ಮಹಾಪರಿಶೋಧಕ (ಎಜಿ) ತನಿಖಾ ವರದಿಯಲ್ಲಿ ಆರ್‌ಟಿಇ ಶುಲ್ಕದಲ್ಲಿ ಗೋಲ್‌ಮಾಲ್‌ ನಡೆದಿರುವುದು ಪತ್ತೆಯಾಗಿದೆ. 2012-13, 2013-14 ಹಾಗೂ 2014-15ರ ಅವಧಿಯಲ್ಲಿ ಜಿಲ್ಲೆಯಲ್ಲಿ 2 ಕೋಟಿ ರೂ.ಗೂ ಅಧಿಕ ಹಣ
ಅಪರಾತಪರಾ ನಡೆದಿದೆ. ಅಂದರೆ ಆರ್‌ಟಿಇ ಅಡಿ ಮಕ್ಕಳ ಪ್ರವೇಶಾತಿ ಕಡಿಮೆಯಿದ್ದರೂ ಹೆಚ್ಚಿಗೆ ತೋರಿಸಿ ಹೆಚ್ಚುವರಿಯಾಗಿ ಹಣ ಎತ್ತಿ ಹಾಕಲಾಗಿದೆ. 

ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ, ಒಂದನೇ ತರಗತಿಗಳಿಗೆ ಬಡ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಉಚಿತವಾಗಿ ಪ್ರವೇಶಾತಿ ನೀಡಿ ಶುಲ್ಕವನ್ನು ಸರ್ಕಾರವೇ ಭರಿಸುವ ಆರ್‌ಟಿಇ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಆರಂಭದ ವರ್ಷದಲ್ಲಿ ಒಂದು ಸೀಟಿಗೆ ಎಲ್‌ಕೆಜಿ ಹಾಗೂ ಒಂದನೇ ತರಗತಿಗೆ ಶುಲ್ಕ ಬೇರೆ ಬೇರೆ ಇದ್ದರೂ ಕನಿಷ್ಟ 6ರಿಂದ 11,800 ಸಾವಿರ ರೂ. ವರೆಗೆ ಭರಿಸಲಾಗಿದೆ.  ಆರಂಭದ 2012-15ರ ಈ ಮೂರು ವರ್ಷಗಳಲ್ಲಿ ಆರ್‌ಟಿಇ ಅಡಿ ಪ್ರವೇಶಾತಿ ಪ್ರಕ್ರಿಯೆ ಮ್ಯಾನುವಲ್‌ ಇತ್ತು. ಅಂದರೆ ಪುಸ್ತಕಗಳಲ್ಲಿ ಮಾತ್ರ ಬರೆದು ದಾಖಲಿಸುವ ಪ್ರಕ್ರಿಯೆ ಜಾರಿಯಲ್ಲಿತ್ತು. ಈ ಸಂದರ್ಭದಲ್ಲೇ ಗೋಲ್‌ಮಾಲ್‌ ನಡೆದಿದೆ.

ಅಂದರೆ ಅರ್ಜಿ ಸಲ್ಲಿಸುವುದು ಹಾಗೂ ತದನಂತರ ಪಟ್ಟಿ ಪ್ರಕಟಿಸುವುದು ಹೆಚ್ಚಿನ ಅರ್ಜಿಗಳು ಬಂದ ಪಕ್ಷದಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಲಾಗಿತ್ತು. ಆದರೆ ಇಲ್ಲಿ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಖಾಸಗಿ ಶಾಲೆಗಳ ಮುಖ್ಯಸ್ಥರು ಮಕ್ಕಳ ಸಂಖ್ಯೆ ಪ್ರವೇಶಾತಿಯಾಗದಿದ್ದರೂ ಹೆಚ್ಚಿಗೆ ತೋರಿಸಿ ಗೋಲ್‌ಮಾಲ್‌ ಮಾಡಿದ್ದಾರೆ. ಬಹು ಮುಖ್ಯವಾಗಿ ಇದರಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕೆಲ ಖಾಸಗಿ ಶಾಲೆಗಳ ಮುಖ್ಯಸ್ಥರು ಭಾಗಿಯಾಗಿದ್ದಾರೆ ಎನ್ನಲಾಗಿದೆ. ಆದರೆ ಈಗ ಆರ್‌ಟಿಇ ಪ್ರವೇಶಾತಿ ಪ್ರಕ್ರಿಯೆ ಆನ್‌ಲೈನ್‌ ವ್ಯವಸ್ಥೆ ಜಾರಿ ತರಲಾಗಿದೆ.

ಹಣ ಎತ್ತಿ ಹಾಕಿರುವುದು ತನಿಖೆಯಿಂದ ಬಹಿರಂಗವಾದ ನಂತರ ಹಣ ವಸೂಲಾತಿಗೆ ಆದೇಶ ನೀಡಲಾಗಿದ್ದು, ತದನಂತರ ಕೆಲವು ತಾಲೂಕುಗಳಲ್ಲಿ ಸರ್ಕಾರಕ್ಕೆ ಮರಳಿ ಹಣ ಜಮೆ ಮಾಡಲಾಗಿದೆ. ಆದರೆ ಇನ್ನು ಬಹುತೇಕ ತಾಲೂಕುಗಳಲ್ಲಿ ಹಣ ವಾಪಸಾತಿಯಾಗಿಲ್ಲ. ಈಗ ನೀಡಿರುವ ನೋಟಿಸ್‌ ಆಧಾರದ ಮೇಲೆ ಆಗಿರುವ ವ್ಯತ್ಯಾಸದ ಹಣ
ಸರ್ಕಾರಕ್ಕೆ ಕಳುಹಿಸದಿದ್ದಲ್ಲಿ ಸರ್ಕಾರ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತುಗೊಳಿಸುವುದು, ಸಾಧ್ಯವಾದಲ್ಲಿ ಸಂಬಳದಲ್ಲಿ ಕಡಿತಗೊಳಿಸುವಂತಹ ದೃಢ ನಿರ್ಧಾರಕ್ಕೆ ಹಾಗೂ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಅವಕಾಶ ನೀಡದಿರುವಂತಹ ಕಠಿಣ ಕ್ರಮಕ್ಕೆ ಮುಂದಾಗಲಾಗುತ್ತಿದೆ ಎನ್ನಲಾಗಿದೆ.

Advertisement

ಸರ್ಕಾರದ ಆದೇಶದಂತೆ ಆಯಾ ಶಾಲೆ ವ್ಯಾಪ್ತಿಯಲ್ಲಿ ಬರುವ ಮಕ್ಕಳನ್ನು ಆರ್‌ಟಿಇ ನಿಯಮದಂತೆ ಶೇ.25 ವಿದ್ಯಾರ್ಥಿಗಳನ್ನು ಆಯಾ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಪ್ರವೇಶಾತಿ ಮಾಡಿಕೊಳ್ಳಬೇಕು. ವ್ಯಾಪ್ತಿಗೆ ಬಾರದ ಮಕ್ಕಳನ್ನು ಜತೆಗೆ ಎಲ್‌ಕೆಜಿಗೆ ವಯಸ್ಸು ಮೀರಿದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿರುವ ಘಟನೆಗಳು ಈ ಸಂದರ್ಭದಲ್ಲಿ ನಡೆದಿವೆ. 

ಶಿಕ್ಷಣಾಧಿಕಾರಿಗಳಿಂದ ನೋಟಿಸ್‌: ನಿಗದಿತ ಸೀಟುಗಳಿಗಿಂತ ಹೆಚ್ಚಿನ ಸೀಟುಗಳ ಶುಲ್ಕ ಪಡೆದು ಸರ್ಕಾರದ ಬೊಕ್ಕಸಕ್ಕೆ ಹಾನಿ ಮಾಡಿದ್ದಿರಿ, ಆದ್ದರಿಂದ ಹೆಚ್ಚಿನ ಶುಲ್ಕ ಪಡೆದಿದ್ದನ್ನು ವಾಪಸ್‌ ನೀಡಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ನೋಟಿಸ್‌ ಜಾರಿ ಮಾಡಿದ್ದಾರೆ. ಆದರೆ ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರು ತಮಗೆ ಹಣವೇ ನೀಡಿಲ್ಲ. ತಮ್ಮ ಹೆಸರಿನ ಮೇಲೆ ಅಧಿಕಾರಿಗಳೇ ಎತ್ತಿ ಹಾಕಿರಬಹುದು ಎಂದು ಆರೋಪಿಸಿದ್ದಾರೆ.

ಅಫಜಲಪುರದಲ್ಲೇ ಅತಿ ಹೆಚ್ಚು
ಆರ್‌ಟಿಇ ಶುಲ್ಕದ ಹೆಸರಿನಲ್ಲಿ ಅತಿ ಹೆಚ್ಚು ಹಣ ಎತ್ತಿ ಹಾಕಿರುವುದು ಅಫಜಲಪುರ ತಾಲೂಕಿನಲ್ಲೇ. ಇಲ್ಲಿ ಒಂದು ಕೋಟಿ ರೂ.ಗೂ ಹೆಚ್ಚು ಗೋಲ್‌ ಮಾಲ್‌ ಆಗಿದೆ ಎನ್ನಲಾಗಿದೆ. ಸ್ವಲ್ಪ ಪ್ರಮಾಣದಲ್ಲಿ ವಸೂಲಾತಿಯಾಗಿದ್ದರೂ ಇನ್ನೂ 64 ಲಕ್ಷ ರೂ. ಸರ್ಕಾರಕ್ಕೆ ಮರಳಿ ಪಾವತಿಸಬೇಕಿದೆ. ಉಳಿದಂತೆ ಆಳಂದ ತಾಲೂಕಿನಲ್ಲಿ 46 ಲಕ್ಷ ರೂ., ಕಲಬುರಗಿ ದಕ್ಷಿಣದಲ್ಲಿ 18 ಲಕ್ಷ ರೂ., ಜೇವರ್ಗಿಯಲ್ಲಿ 1.50 ಲಕ್ಷ ರೂ. ಹಾಗೂ ಕಲಬುರಗಿ ಉತ್ತರದಲ್ಲಿ 7ಲಕ್ಷ ರೂ., ಚಿತ್ತಾಪುರ ತಾಲೂಕಿನಲ್ಲಿ 32 ಸಾವಿರ ರೂ. ವಸೂಲಾತಿ ಆಗಬೇಕಿದೆ. ಆದರೆ ಚಿಂಚೋಳಿ ಹಾಗೂ ಸೇಡಂ ತಾಲೂಕಿನಲ್ಲಿ ನಯಾಪೈಸೆ ಗೋಲ್‌ಮಾಲ್‌ ಆಗಿಲ್ಲ.

ಹಣ ವಸೂಲಾತಿ ಮಾಡಿ ಶಿಕ್ಷಣ ಇಲಾಖೆಗೆ ತುಂಬಲು ಇಲಾಖೆ ಆಯುಕ್ತರು ಹೆಡ್‌ ಆಪ್‌ ಅಕೌಂಟ್‌ ನೀಡಿದ್ದು ಅದಕ್ಕೆ ಜಮಾ ಮಾಡಲು ಕ್ರಮ ಕೈಗೊಳ್ಳುವಂತೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೋಟಿಸ್‌ ನೀಡಲಾಗಿದೆ. ಅಫಜಲಪುರ ತಾಲೂಕಿನಿಂದಲೇ ಹೆಚ್ಚಿನ ಹಣ ಬರಬೇಕಿದೆ. 
 ಸಾದತ್‌ ಹುಸೇನ್‌, ಆರ್‌ಟಿಇ ನೋಡಲ್‌ ಅಧಿಕಾರಿ, ಶಿಕ್ಷಣ ಇಲಾಖೆ, ಕಲಬುರಗಿ

„ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next