Advertisement

ಬಿಜೆಪಿ ಅಧಿಕಾರಕ್ಕೇರಿಸಲು ಆರೆಸ್ಸೆಸ್‌ ಕಾರ್ಯತಂತ್ರ

12:39 PM Apr 12, 2018 | Harsha Rao |

ಕುಂದಾಪುರ: “ಬಿಜೆಪಿಗೆ ನಮ್ಮದೇನಿದ್ದರೂ ಮಾರ್ಗದರ್ಶನ ಮಾತ್ರ. ನೇರ ರಾಜಕೀಯಕ್ಕಿಳಿಯುವುದಿಲ್ಲ’ ಎಂದು ಈ ಹಿಂದೆ ಹೇಳಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಈ ಬಾರಿಯ ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಪರ ನೇರವಾಗಿ ಅಖಾಡಕ್ಕಿಳಿದ ಲಕ್ಷಣಗಳು ಗೋಚರಿಸಿವೆ.

Advertisement

ಈ ಮೊದಲು ಚುನಾವಣೆಗೆ ಸ್ಪರ್ಧಿಸುವವರನ್ನು ಸಂಘವು ಜವಾಬ್ದಾರಿ ಮುಕ್ತಗೊಳಿಸಿ ಬಿಜೆಪಿಗೆ ಕಳುಹಿಸುತ್ತಿತ್ತು. ಪರಿವಾರ‌ದವರನ್ನು ಹೊರತುಪಡಿಸಿ ಉಳಿದವರಾರೂ ಪ್ರಚಾರದಲ್ಲಿ ನೇರವಾಗಿ ಭಾಗಿಯಾಗುತ್ತಿರಲಿಲ್ಲ. ಆದರೆ ಈ ಬಾರಿ 6 ತಿಂಗಳಿನಿಂದ ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಪ್ರತಿನಿಧಿಗಳ ಮೂಲಕ ಚುನಾವಣೆ ತಯಾರಿ ನಡೆಸಿದೆ. ತ್ರಿಪುರಾದಲ್ಲಿ ಮಾಣಿಕ್‌ ಶಾ ಸರಕಾರವನ್ನು ಕೆಳಗಿಳಿಸುವ ಪ್ರಯೋಗದಲ್ಲಿ ಯಶಸ್ವಿಯಾಗಿತ್ತು.

ಹೀಗಿದೆ ಸಿದ್ಧತೆ 
ಸಂಘದಿಂದ ವಿಸ್ತಾರಕ್‌, ಪರಿವಾರ ಸಂಘಟನೆ (ವಿಹಿಂಪ, ಬಜರಂಗ ದಳ, ಹಿಂಜಾವೇ, ಬಿಎಂಎಸ್‌, ಕಿಸಾನ್‌ ಸಂಘ, ಸಹಕಾರ ಭಾರತಿ)ಯಿಂದ ಒಬ್ಬ ಉಸ್ತುವಾರಿ ಹಾಗೂ ಬಿಜೆಪಿಯಿಂದ ಒಬ್ಬ ಪ್ರತಿನಿಧಿಯುಳ್ಳ ತಂಡ ರಚಿಸಲಾಗಿದೆ. ವಿಧಾನಸಭಾ ಕ್ಷೇತ್ರದಲ್ಲಿ, ಮಹಾಶಕ್ತಿ ಕೇಂದ್ರಗಳೆಂದು ಪ್ರತೀ ಜಿ.ಪಂ. ಕ್ಷೇತ್ರ, ಮೂರ್ನಾಲ್ಕು ಮತಗಟ್ಟೆ (ಬೂತ್‌)ಗಳಿಗೆ ಒಂದು ಶಕ್ತಿಕೇಂದ್ರ ಹೀಗೆ ಪ್ರತೀ ಮತಗಟ್ಟೆಗೂ ಇಂಥ ತಂಡ ನಿಯೋಜಿಸಲಾಗಿದೆ. ಅಂದರೆ ಒಂದು ವಿಧಾನಸಭಾ ಕ್ಷೇತ್ರದಲ್ಲಿ 7-8 ಮಹಾಶಕ್ತಿ ಕೇಂದ್ರಗಳು, 50-70 ಶಕ್ತಿ ಕೇಂದ್ರಗಳಿರುತ್ತವೆ. ಪಕ್ಷ, ಪರಿವಾರ ಸಂಘಟನೆಗಳನ್ನು ಜತೆಗೊಯ್ದು ಆಂತರಿಕ ಭಿನ್ನಮತ ಹೋಗಲಾಡಿಸಿ ಪ್ರತಿ ಮತದಾರರನ್ನು ಕಾರ್ಯಕರ್ತರು ತಲುಪುವಂತೆ ಸಮನ್ವಯ ಸಾಧಿಸುವುದು ಅವರ ಕರ್ತವ್ಯ.

ಪೇಜ್‌ ಪ್ರಮುಖ್‌
ಮತದಾರರ ಪಟ್ಟಿಯ ಪ್ರತಿ ಪುಟಕ್ಕೊಬ್ಬ ಪೇಜ್‌ ಪ್ರಮುಖ್‌ರನ್ನು ನಿಯೋಜಿಸಿದ್ದು, ಅವರು ನೇಮಿಸಲ್ಪಟ್ಟವ ಆ ಪುಟದ ಅಷ್ಟೂ ಮನೆಗಳಿಗೆ ಭೇಟಿ ನೀಡಿ ಅವುಗಳನ್ನು ಬಿಜೆಪಿ ಮತಗಳಾಗಿ ಪರಿವರ್ತಿಸಲು ಪ್ರಯತ್ನಿಸಬೇಕು. ಇದಲ್ಲದೇ ವಾಟ್ಸಪ್‌ ಗ್ರೂಪ್‌, ಫೇಸ್‌ಬುಕ್‌ ಪೇಜ್‌ಗಳ ಪ್ರಚಾರ ತಂತ್ರ ಪ್ರತ್ಯೇಕ. 

ದಕ್ಷಿಣ ಕನ್ನಡ ಹಾಗೂ ಉಡುಪಿ ಸಹಿತ ರಾಜ್ಯದಲ್ಲಿ ಬಿಜೆಪಿ ಅಥವಾ ಆರ್‌ಎಸ್‌ಎಸ್‌ ಬಲಿಷ್ಠವಾಗಿರುವಲ್ಲಿ 3 ತಿಂಗಳಿನಿಂದ ಹಾಗೂ ಉಳಿದೆಡೆ 6 ತಿಂಗಳಿನಿಂದ ತಂಡ ಕಾರ್ಯ ಪ್ರವೃತ್ತವಾಗಿದೆ. ದ.ಕ., ಉಡುಪಿ, ಕೊಡಗಿಗೆ ಆರ್‌ಎಸ್‌ಎಸ್‌ನ ವಿಭಾಗ ಕಾರ್ಯವಾಹ ನಾ. ಸೀತಾರಾಮ್‌ ಅವರು ಮುಖ್ಯಸ್ಥರಾಗಿದ್ದಾರೆ. ಸಂಘದ ವಿಸ್ತಾರಕ್‌ರನ್ನು ತವರು ಪ್ರದೇಶ ಬಿಟ್ಟು ಬೇರೆಡೆಗೆ ನಿಯೋಜಿಸಲಾಗಿದೆ. ಅಗತ್ಯವಿದ್ದಲ್ಲಿ ಒದಗಿ ಸಲು ಉತ್ತರಪ್ರದೇಶ ಚುನಾವಣೆಗೆ ಬಳಸಿದ ಬೈಕ್‌ಗಳನ್ನು ಕಳೆದ ಜುಲೈನಲ್ಲಿ ರಾಜ್ಯಕ್ಕೆ ತರಿಸಲಾಗಿತ್ತು. ಆದರೆ ಅವುಗಳನ್ನು ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಬಳಸುತ್ತಿಲ್ಲ.

Advertisement

ಸಂಘದಿಂದ ನಿಯೋಜಿತರಾದವರು ಪಕ್ಷದ ಹಣ ಅಪೇಕ್ಷಿಸುವಂತಿಲ್ಲ. ಪಕ್ಷದ ಕಾರ್ಯಕ್ರಮ, ಸಮಾ ವೇಶ ದಲ್ಲಿ ಭಾಗಿಯಾಗುವಂತಿಲ್ಲ. ಎಲ್ಲಿಯೂ ಪಕ್ಷದ ಧ್ವಜ, ಚಿಹ್ನೆ ಬಳಸು ವಂತಿಲ್ಲ. ಜತೆಗಿರುವ ಪರಿವಾರ ಸಂಘಟನೆಗಳ ಕಾರ್ಯ ಕರ್ತರ ಅಥವಾ ಬಿಜೆಪಿ ಕಾರ್ಯಕರ್ತರ ಕೆಲಸ ಮತ ಯಾಚನೆ. ಮತದಾನದಲ್ಲಿ ಭಾಗವಹಿಸು ವಂತೆ ವಿನಂತಿ, ದೇಶಭಕ್ತಿ ಇತ್ಯಾದಿ ಕುರಿತುಷ್ಟೇ ಸ್ವಯಂ ಸೇವಕರು ಮಾತನಾಡಬಹುದು. ಈ ಮೊದಲು ಸಂಸತ್‌ ಚುನಾವಣೆ ಸಂದರ್ಭ ಸಂಘ ಪರಿವಾರದ ಕಾರ್ಯಕರ್ತರು “ಸ್ವಯಂ’ ಆಗಿ ನೇರ ಮತಯಾಚನೆಗೆ ಇಳಿಯುತ್ತಿದ್ದರು. ರಾಜ್ಯ ಚುನಾವಣೆಯಲ್ಲಿ ಈ ರೀತಿ ಇದೇ ಮೊದಲು ಎನ್ನುತ್ತಾರೆ ಸಂಘದ ಮುಖಂಡರೊಬ್ಬರು. 

ವಿಸ್ತಾರಕರು ಸಂಘದ ವತಿ ಯಿಂದ ನೇರ ನೇಮಿಸಲ್ಪಟ್ಟವ ರಲ್ಲ . ಪಕ್ಷದಿಂದ ಮಾರ್ಗದರ್ಶನ ಹಾಗೂ ಸಹಕಾರ ಬಯಸಿದಾಗ ಆಸಕ್ತ ಸ್ವಯಂಸೇವಕರು ಅವರಾಗಿಯೇ ಮಾಡಿಕೊಂಡ ವ್ಯವಸ್ಥೆ ಇದು. 
– ಡಾ| ಪ್ರಭಾಕರ್‌ ಭಟ್‌ ರಾ.ಸ್ವ.ಸೇ. ಸಂಘದ ಆಂಧ್ರ ಹಾಗೂ ಕರ್ನಾಟಕ ರಾಜ್ಯವನ್ನೊಳಗೊಂಡ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯರು

–  ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next