ನವದೆಹಲಿ: ಮಸೀದಿ-ಮಂದಿರ ವಿವಾದ ಅನಗತ್ಯ. ನಾವು ಸಾಮರಸ್ಯದಿಂದ ಬದುಕಬೇಕೆಂಬ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಗೆ ಸಾಧು, ಸಂತರು ತಿರುಗಿಬಿದ್ದ ಬೆನ್ನಲ್ಲೇ, ಸಂಘಟನೆಯ ಸಹವರ್ತಿ ನಿಯತಕಾಲಿಕ “ಆರ್ಗನೈಸರ್’ ಆಕ್ಷೇಪಿಸಿದೆ.
ದೇಶದಲ್ಲಿನ ವಿವಾದಿತ ಸ್ಥಳಗಳು, ಅವುಗಳ ರಚನೆಗಳ ನೈಜ ಇತಿಹಾಸವನ್ನು ತಿಳಿದುಕೊಳ್ಳುವುದು ನಾಗರಿಕ ನ್ಯಾಯಕ್ಕೆ ಮುಖ್ಯ ಎಂದು ತನ್ನ ಸಂಪಾದಕೀಯದಲ್ಲಿ ಪ್ರತಿಪಾದಿಸಿದೆ. ಆದರೆ, ಭಾಗವತ್ ಹೇಳಿಕೆಯನ್ನು ಎಲ್ಲೂ ಉಲ್ಲೇಖಿಸಿಲ್ಲ. ಹೊಸ ಸಂಚಿಕೆಯಲ್ಲಿ ಸಂಭಲ್ ಮಸೀದಿ ಕುರಿತಾದ ಕವರ್ ಸ್ಟೋರಿ ಪ್ರಕಟಿಸಲಾಗಿದೆ.
ವಸಾಹತುಶಾಹಿಯನ್ನು ಬೆಂಬಲಿಸುವ ಕೆಲವರು, ಹುಸಿ ಬುದ್ಧಿಜೀವಿಗಳು ದೋಷಪೂರಿತ ಜಾತ್ಯತೀತತೆಯನ್ನು ಮುಂದುವರಿಸಲು ಬಯಸುತ್ತಾರೆ ಎಂಬ ಕಾರಣಕ್ಕಾಗಿ ವಿವಾದಿತ ಸ್ಥಳಗಳು ಮತ್ತು ಅದರ ಹಿಂದಿರುವ ಸತ್ಯವನ್ನು ತಿಳಿದುಕೊಳ್ಳುವ ಹಕ್ಕನ್ನು ನಿರಾಕರಿಸುವುದು ಮೂಲಭೂತವಾದ, ಪ್ರತ್ಯೇಕತಾವಾದ ಮತ್ತು ದ್ವೇಷವನ್ನು ಉತ್ತೇಜಿಸುತ್ತದೆ ಎಂದು ತಿಳಿಸಲಾಗಿದೆ.