ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಆರೆಸ್ಸೆಸ್‌ನವರ್ಯಾರೂ ಆಕಾಂಕ್ಷಿಗಳಿಲ್ಲ ಎಂದು ಆರೆಸ್ಸೆಸ್‌ನ ಹಿರಿಯ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಬಿಜೆಪಿ ಅಧ್ಯಕ್ಷರು ಯಾರಾಗಬೇಕು ಎಂಬುದನ್ನು ಪಕ್ಷದ ನಾಯಕರು ತೀರ್ಮಾನ ಮಾಡುತ್ತಾರೆ.
ಚುನಾವಣಾ ರಾಜಕೀಯ ಪ್ರಕ್ರಿಯೆಯಲ್ಲಿ ಸಂಘದವರಿಲ್ಲ ಎಂದು ಸ್ಪಷ್ಟಪಡಿಸಿದರು. ಅಡ್ವಾಣಿ, ಮುರಳಿ ಮನೋಹರ ಜೋಶಿ ಅವರು ದೊಡ್ಡ ಪ್ರಮಾಣದಲ್ಲಿ ಸಂಘಟನೆ ಕಟ್ಟಿದ್ದರಿಂದಲೇ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವಲ್ಲೂ ಅವರಿಬ್ಬರ ಆಶೀರ್ವಾದವಿದೆ. ಅವರಿಬ್ಬರನ್ನು ಪಕ್ಷ ಮೂಲೆಗುಂಪು ಮಾಡಿಲ್ಲ. ಈ ಕುರಿತಾಗಿ ಅಡ್ವಾನಿ ಎಲ್ಲೂ ಹೇಳಿಕೆ ನೀಡಿಲ್ಲ. ಯಾವುದೇ ವಯಸ್ಸಿನ ನಂತರ ವಿರಾಮ ಬೇಕಾಗುತ್ತೆ. ಹೀಗಾಗಿ ಸಾಕು ಎನಿಸಿರಬಹುದು ಎಂದರು.
ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 22ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷರೇ ಹೇಳಿದ್ದಾರೆ. ಅದು ಸತ್ಯ ಆಗುತ್ತೆ. ಕರಾವಳಿಯಲ್ಲೂ ಬಿಜೆಪಿ ದೊಡ್ಡ ಅಂತರದಿಂದ ಗೆಲುವು ಸಾಧಿಸುತ್ತದೆ.
ಪುತ್ತೂರಿನ ಶ್ರೀರಾಮ ವಿದ್ಯಾಕೇಂದ್ರದ ಮಕ್ಕಳ ಅನ್ನ ಕಿತ್ತುಕೊಂಡು ಪಾಪದ ಕೆಲಸ ಮಾಡಿದವರ ನೇತೃತ್ವದಲ್ಲೇ ರಾಜ್ಯದ ಸಮ್ಮಿಶ್ರ ಸರ್ಕಾರ ನಡೆಯುತ್ತಿದೆ. ಇದು ಅದೇ ಕಂಪನಿಯ ಸರ್ಕಾರ. ಜನ ವಿರೋಧಿಯಾಗಿರುವ ಸಮ್ಮಿಶ್ರ ಸರ್ಕಾರ ಲೋಕಸಭಾ ಚುನಾವಣಾ ಫಲಿತಾಂಶದ ನಂತರವಾದರೂ ಬದಲಾಗಲಿ ಎಂದರು.