ಮುಂಬಯಿ: ರಾಷ್ಟ್ರಪತಿ ಸ್ಥಾನಕ್ಕೆ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರನ್ನು ನೇಮಿಸಬೇಕು ಎಂಬ ಅಭಿಪ್ರಾಯ ಬಿಜೆಪಿಯಲ್ಲಿ ವ್ಯಕ್ತವಾಗಿರುವಂತೆಯೇ ಆ ಹುದ್ದೆಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೂಕ್ತ ವ್ಯಕ್ತಿ ಎಂದು ಶಿವಸೇನೆ ಹೇಳಿದೆ. ಭಾರತವನ್ನು ‘ಹಿಂದೂ ರಾಷ್ಟ್ರ’ವನ್ನಾಗಿಸಲು ಅವರು ಸಮರ್ಥರು ಎಂದು ಪಕ್ಷದ ವಕ್ತಾರ ಸಂಜಯ ರಾವುತ್ ಹೇಳಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಅವರು ಯಾವುದೇ ಕಳಂಕ ಹೊಂದಿಲ್ಲ. ಅವರ ಅಭ್ಯರ್ಥಿತನಕ್ಕೆ ಬೆಂಬಲ ವ್ಯಕ್ತಪಡಿಸುವುದು ಪಕ್ಷದ ಕಾರ್ಯಾಧ್ಯಕ್ಷ ಉದ್ಧವ್ ಠಾಕ್ರೆ ನಿರ್ಧಾರಕ್ಕೆ ಬಿಟ್ಟದ್ದು ಎಂದಿದ್ದಾರೆ. ಭಾಗವತ್ ಅವರು ಪ್ರಬಲ ನಾಯಕರಾಗಿದ್ದಾರೆ. ಸಂವಿಧಾನದ ಬಗ್ಗೆ ಅವರು ಸಂಪೂರ್ಣ ಅರಿವು ಹೊಂದಿದ್ದಾರೆ. ಭಾರತನ್ನು ಹಿಂದೂ ರಾಷ್ಟ್ರ ಮಾಡಬೇಕು ಎಂಬ ಮಹತ್ವದ ಉದ್ದೇಶ ಹೊಂದಿದ್ದರೆ ಭಾಗವತ್‌ರನ್ನೇ ರಾಷ್ಟ್ರಪತಿ ಹುದ್ದೆಗೆ ನೇಮಿಸಬೇಕು ಎಂದರು. 29ರಂದು ಪ್ರಧಾನಿ ಆಯೋಜಿಸಿರುವ ಔತಣಕೂಟಕ್ಕೆ ಉದ್ಧವ್ ತೆರಳುವರೇ ಎಂಬ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ.