Advertisement

92 ಲಕ್ಷ ರೂ. ಮೌಲ್ಯದ ಅಮಾನ್ಯ ನೋಟು ಜಪ್ತಿ

12:23 PM Mar 31, 2019 | Team Udayavani |

ಬೆಂಗಳೂರು: ಅಮಾನ್ಯಗೊಂಡಿರುವ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಬದಲಾವಣೆ ದಂಧೆಯಲ್ಲಿ ತೊಡಗಿಕೊಂಡಿದ್ದ ಮಹಿಳೆ ಸೇರಿದಂತೆ ಆರುಜನರ ತಂಡ ಪೊಲೀಸರ ಬಲೆಗೆ ಬಿದ್ದಿದೆ.

Advertisement

ಮೆಡಿಕಲ್‌ ಸೀಟು ಆಮಿಷವೊಡ್ಡಿ 13 ಲಕ್ಷ ರೂ. ಕಿತ್ತುಕೊಂಡು ಹೋಗಿದ್ದಾರೆ ಎಂದು ಮಹಿಳೆಯೊಬ್ಬರು ನೀಡಿದ ದೂರಿನ ಜಾಡು ಹಿಡಿದು ತನಿಖೆ ನಡೆಸಿರುವ ಸದಾಶಿವನಗರ ಠಾಣೆ ಪೊಲೀಸರು, ಅಮಾನ್ಯಗೊಂಡ ನೋಟು ಬದಲಾವಣೆಯಲ್ಲಿ ತೊಡಗಿಸಿಕೊಂಡಿದ್ದ ಆರು ಮಂದಿಯನ್ನು ಬಂಧಿಸಿದ್ದಾರೆ.

13 ಲಕ್ಷ ರೂ. ಇರಿಸಿದ್ದ ತನ್ನ ಬ್ಯಾಗ್‌ ಅನ್ನು ದುಷ್ಕರ್ಮಿಗಳಿಬ್ಬರು ಕಿತ್ತೂಯ್ದಿದ್ದಾರೆ ಎಂದು ಸುಳ್ಳು ಮಾಹಿತಿಯ ದೂರು ನೀಡಿದ್ದ ಪಟ್ಟೆಗಾರ್‌ ಪಾಳ್ಯದ ನಿವಾಸಿ ರೇವತಿ, ರಿಯಲ್‌ ಎಸ್ಟೇಟ್‌ ಉದ್ಯಮಿ ರವಿ, ಸಂತೋಷ್‌ಕುಮಾರ್‌, ಬಸವರಾಜು, ವಿನೋದ್‌ ಕುಮಾರ್‌, ರಾಕೇಶ್‌ ಬಂಧಿತ ಆರೋಪಿತರು.

ಆರೋಪಿಗಳಿಂದ ಅಮಾನ್ಯಗೊಂಡಿರುವ 1000 ರೂ. ಹಾಗೂ 500 ರೂ. ಮುಖಬೆಲೆಯ 92 ಲಕ್ಷ ರೂ.ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಈ ಹಣ ಚೆನೈ ಮೂಲದ ಉದ್ಯಮಿಯದ್ದು ಎಂದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಹಿರಿಯ ಪೊಲೀಸ್‌ ಆಧಿಕಾರಿಯೊಬ್ಬರು ಮಾಹಿತಿ ನೀಡಿದರು.

92 ಲಕ್ಷ ರೂ. ರಹಸ್ಯ ಬಯಲಾಗಿದ್ದು ಹೇಗೆ?: ವೈದ್ಯಕೀಯ ಸೀಟು ಕೊಡಿಸುವ ಆಮಿಷವೊಡ್ಡಿದ್ದ ವಿನೋದ್‌ ಕುಮಾರ್‌ ಹಾಗೂ ರಾಕೇಶ್‌ ತಮ್ಮ ಬಳಿ 13 ಲಕ್ಷ ರೂ. ಕಿತ್ತುಕೊಂಡು ಹೋಗಿದ್ದಾರೆ ಎಂದು ರೇವತಿ ದೂರು ನೀಡಿದ್ದರು. ದೂರಿನ ವೇಳೆ ಕೆಲವು ಪ್ರಶ್ನೆಗಳಿಗೆ ಅಸ್ಪಷ್ಟ ಉತ್ತರ ನೀಡುತ್ತಿದ್ದರು.

Advertisement

ಪ್ರಕರಣದ ತನಿಖೆ ಚುರುಕುಗೊಳಿಸಿದ ಸದಾಶಿವನಗರ ಠಾಣೆ ಇನ್ಸ್‌ಪೆಕ್ಟರ್‌ ನವೀನ್‌ ಸುಪೇಕರ್‌ ನೇತೃತ್ವದ ತಂಡ, ಆರೋಪಿಗಳಾದ ವಿನೋದ್‌ ಹಾಗೂ ರಾಕೇಶ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಅವರು ರೇವತಿಯಿಂದ ಕಸಿದುಕೊಂಡು ಹೋಗಿದ್ದ ಹಣ ಅಮಾನ್ಯಗೊಂಡ ನೋಟುಗಳು ಎಂಬ ಮಾಹಿತಿ ಹಾಗೂ ನೋಟು ಬದಲಾವಣೆ ದಂಧೆಯ ಬಗ್ಗೆ ಬಾಯ್ಬಿಟ್ಟಿದ್ದಾರೆ. ಈ ಬೆನ್ನಲ್ಲೇ ಎಚ್ಚೆತ್ತ ತನಿಖಾ ತಂಡ, ಉಳಿದ ಆರೋಪಿಗಳನ್ನು ಬಂಧಿಸಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.

ಚೆನ್ನೈ ಉದ್ಯಮಿಯ ಹಣ ಬೆಂಗಳೂರಿಗೆ ಬಂದಿದ್ದು ಹೇಗೆ?: ಚೆನ್ನೈ ಮೂಲದ ಉದ್ಯಮಿ ಪ್ರವೀಣ್‌ ಹಾಗೂ ಆರೋಪಿ ರವಿ ಸ್ನೇಹಿತರು. ಪ್ರವೀಣ್‌ ಬಳಿಯಿದ್ದ ಮಾನ್ಯ ನೋಟುಗಳನ್ನು ಬದಲಾವಣೆ ಮಾಡಿಕೊಡಲು ರವಿ ಒಪ್ಪಿಕೊಂಡಿದ್ದ.

ಬಳಿಕ ರವಿ, ಸ್ನೇಹಿತ ಸಂತೋಷ್‌ನನ್ನು ಸಂಪರ್ಕಿಸಿ ತನ್ನ ಬಳಿಯಿರುವ ಹಳೇ ನೋಟು ಬದಲಾವಣೆ ಮಾಡಿಕೊಟ್ಟರೆ ಪ್ರತಿಯಾಗಿ 25 ಲಕ್ಷ ರೂ. ಮೌಲ್ಯದ ನಿವೇಶನ ಕೊಡಿಸುವುದಾಗಿ ಆಮಿಷವೊಡ್ಡಿದ್ದ. ಹೀಗಾಗಿ ಸಂತೋಷ್‌, ತನಗೆ ಪರಿಚಯ ಇರುವ ರೇವತಿ ಮೂಲಕ ಯಾರಾದರೂ ಹಳೇ ನೋಟಗಳನ್ನು ವಿನಿಮಯ ಮಾಡಿಕೊಡುವರು ಸಿಗುತ್ತಾರಾ ಎಂದು ಹುಡುಕಾಡುತ್ತಿದ್ದ.

ಹೀಗಿರುವಾಗ ಕೆಲ ದಿನಗಳ ಹಿಂದೆ ಕ್ಯಾಬ್‌ ಚಾಲಕ ವಿನೋದ್‌ ಕುಮಾರ್‌ ಎಂಬಾತನ ಪರಿಚಯವಾಗಿತ್ತು. ಆತನ ಬಳಿ ವಿಚಾರಿಸಿದಾಗ ತನ್ನ ಸ್ನೇಹಿತ ರಾಕೇಶ್‌ ಎಂಬಾತ ಅಮಾನ್ಯಗೊಂಡಿರುವ ನೋಟುಗಳನ್ನು ಬದಲಾಯಿಸಿಕೊಡುತ್ತಾನೆ.

ಆತನೊಂದಿಗೆ ಮಾತನಾಡಿ ಹೇಳುತ್ತೇನೆ ಎಂದಿದ್ದ. ಅದಕ್ಕೆ ಸಂತೋಷ್‌ ಮತ್ತು ರೇವತಿ ಒಪ್ಪಿದ್ದರು. ಅದರಂತೆ ರಾಕೇಶ್‌ ಹಾಗೂ ವಿನೋದ್‌ ಯೋಜನೆ ರೂಪಿಸಿ ಈ ಹಣವನ್ನು ತಾವೇ ಪಡೆದುಕೊಂಡು ಮುಂದೆ ಬದಲಾಯಿಸಿಕೊಳ್ಳೋಣ ಎಂದು ನಿರ್ಧರಿಸಿದ್ದರು. ಮೊದಲ ಹಂತದಲ್ಲಿ 13 ಲಕ್ಷ ರೂ. ನೀಡಿ ಎಂದು ಕೇಳಿ ಹಣ ತಂದಿದ್ದ ರೇವತಿಯಿಂದ ಹಣ ಕಿತ್ತುಕೊಂಡು ಹೋಗಿದ್ದರು.

ನೋಟುಗಳ ಬದಲಾವಣೆ ಹೇಗೆ?: ಅಮಾನ್ಯಗೊಂಡ ನೋಟುಗಳನ್ನು ಹೇಗೆ ಬದಲಾವಣೆ ಮಾಡುತ್ತಿದ್ದರು ಎಂಬ ಬಗ್ಗೆ ಆರೋಪಿಗಳು ಮಾಹಿತಿ ನೀಡಿಲ್ಲ. ಈ ಬಾರಿ ಸರ್ಕಾರ ಬದಲಾಗಲಿದ್ದು, ಹಳೇ ನೋಟುಗಳು ಪುನಃ ಚಾಲ್ತಿಗೆ ಬರಲಿವೆ. 1 ಕೋಟಿ ರೂ.ಗಳಿಗೆ 25 ಲಕ್ಷ ರೂ. ಅಸಲಿ ನೋಟು ನೀಡಿದರೆ ಸಾಕು.

ಉಳಿದ 75 ಲಕ್ಷ ರೂ. ನಿಮಗೆ ಲಾಭವಾಗಲಿದೆ ಎಂದು ಹೇಳಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಆದರೆ, ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ಹೀಗಾಗಿ ಆರೋಪಿಗಳಾದ ರವಿ, ಬಸವರಾಜು, ಸಂತೋಷ್‌ಕುಮಾರ್‌ನನ್ನು ಪೊಲೀಸ್‌ ಕಸ್ಟಡಿಗೆ ಪಡೆದು ತನಿಖೆ ಮುಂದುವರಿಸಿದ್ದೇವೆ. ಇನ್ನೂ ಕೆಲವರ ಬಂಧನವಾಗಬೇಕಿದೆ ಎಂದು ಅಧಿಕಾರಿ ಹೇಳಿದರು.

ಸುಳ್ಳು ಮಾಹಿತಿಯನ್ನೊಳಗೊಂಡ ದೂರಿನ ಅನ್ವಯ ರೇವತಿ ವಿರುದ್ಧ ಐಪಿಸಿ ಕಲಂ 203 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಆಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next