Advertisement

ಬಡವರಿಗೆ ವಾರ್ಷಿಕ 72,000 ರೂ.

09:35 AM Mar 29, 2019 | mahesh |

ಹೊಸದಿಲ್ಲಿ: ಈ ಬಾರಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ, ದೇಶದ ಶೇ.20ರಷ್ಟು ಬಡವರಿಗೆ (ಅಂದಾಜು 5 ಕೋಟಿ ಕುಟುಂಬ) ವಾರ್ಷಿಕ 72,000 ರೂ.ಗಳ ವರಮಾನ ನೀಡುವ ಯೋಜನೆ ಜಾರಿಗೊಳಿಸುವುದಾಗಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಕಟಿಸಿದ್ದಾರೆ.

Advertisement

ಸೋಮವಾರ, ಹೊಸದಿಲ್ಲಿಯಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕಾರಿಣಿಯ ಅನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ದೇಶದ ಸುಮಾರು 5 ಕೋಟಿ ಕಡು ಬಡ ಕುಟುಂಬಗಳಿಗೆ ಈ ಯೋಜನೆಯ ನೆರವು ಸಿಗಲಿದೆ. ಫ‌ಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಹಣ ಜಮೆಯಾಗಲಿದೆ. ಈ ಆರ್ಥಿಕ ಸವಲತ್ತಿನಿಂದಾಗಿ ಐದು ಕೋಟಿ ಕುಟುಂಬಗಳನ್ನು ಬಡತನದಿಂದ ಮೇಲೆತ್ತಲು ಸಹಾಯವಾಗುತ್ತದೆ’ ಎಂದರು. ಅಲ್ಲದೆ, ತಮ್ಮ ಈ ಹೊಸ ಯೋಜನೆ ದೇಶದ ಬಡತನ ನಿರ್ಮೂಲನೆಗಾಗಿ ರೂಪಿಸಲಾದ ಶಕ್ತಿಶಾಲಿ, ಚಾರಿತ್ರಿಕ ಹಾಗೂ ಅಪೂರ್ವ ಯೋಜನೆ ಎಂದು ಬಣ್ಣಿಸಿದರು.

ಅಂದಹಾಗೆ, ಯೋಜನೆಯ ರೂಪುರೇಷೆಗಳ ವಿವರಣೆಯನ್ನು ರಾಹುಲ್‌ ನೀಡಲಿಲ್ಲ. ಸದ್ಯದಲ್ಲೇ ಸುದ್ದಿಗೋಷ್ಠಿ ನಡೆಸಲಿರುವ ಕೇಂದ್ರದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ, ಯೋಜನೆಯ ವಿವರ ನೀಡುತ್ತಾರೆ ಎಂದು ತಿಳಿಸಿದರು. ಆದರೆ, ಹಲವಾರು ಖ್ಯಾತ ಆರ್ಥಿಕ ತಜ್ಞರ ಸಲಹೆಗಳನ್ನು ಪಡೆದೇ ಈ ಯೋಜನೆ ರೂಪಿಸಿರುವುದಾಗಿ ಸ್ಪಷ್ಟಪಡಿಸಿದರು. ಇದೇ ಯೋಜನೆಯಡಿ, ದೇಶದ ಪ್ರತಿ ಕುಟುಂಬದ ಮಾಸಿಕ ಆದಾಯ ಕನಿಷ್ಠ 12,000 ರೂ.ಗಳಿರುವಂತೆ ನೋಡಿಕೊಳ್ಳಲಾಗುವುದು. ಹಾಗೊಂದು ವೇಳೆ ಮಾಸಿಕ ಆದಾಯ ಕಡಿಮೆ ಇದ್ದಲ್ಲಿ ಅದನ್ನು 12,000 ರೂ.ಗಳ ಮಟ್ಟಕ್ಕೆ ಏರಿಸಲು ಕಾಂಗ್ರೆಸ್‌ ಪ್ರಯತ್ನಿಸುತ್ತದೆ ಎಂದರು.

ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ ಅವರು, “ಮೋದಿಯವರು ಈ ದೇಶದ ಅತಿ ಶ್ರೀಮಂತರಿಗೆ 3,50,000 ಕೋಟಿ ರೂ. ನೀಡಲು ಸಾಧ್ಯವಿದೆಯಾದರೆ ನಾವು ಅದೇ ಹಣವನ್ನು ದೇಶದ ಬಡವರಿಗೆ ನೀಡುತ್ತೇವೆ’ ಎಂದರು. ಇತ್ತೀಚೆಗೆ, ಕೇಂದ್ರ ಸರಕಾರ ರೈತರಿಗೆ ವಾರ್ಷಿಕ 6,000 ರೂ. ನೀಡುವ ಯೋಜನೆ ಜಾರಿಗೊಳಿಸಿದ್ದು, ಇದಕ್ಕೆ ಪ್ರತಿಯಾಗಿ ರಾಹುಲ್‌ ಅವರಿಂದ ಈ ಘೋಷಣೆ ಹೊರಬಿದ್ದಿದೆ.

ಇದೊಂದು ಶುದ್ಧ ಸುಳ್ಳು ಆಶ್ವಾಸನೆ: ಅರುಣ್‌ ಜೇಟ್ಲಿ
ರಾಹುಲ್‌ ಪ್ರಕಟಿಸಿರುವ ಈ ಯೋಜನೆ ಒಂದು ಸುಳ್ಳು ಆಶ್ವಾಸನೆ ಎಂದು ವಿತ್ತ ಸಚಿವ ಅರುಣ್‌ ಜೇಟ್ಲಿ ಟೀಕಿಸಿದ್ದಾರೆ. ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಈಗಾಗಲೇ ಡಿಬಿಟಿ (ಡೈರೆಕ್ಟ್ ಬೆನಿಫಿಟ್‌ ಟ್ರಾನ್ಸ್‌ಫ‌ರ್‌) ಮೂಲಕ ಕೇಂದ್ರದ 55 ಇಲಾಖೆಗಳಿಂದ ವಾರ್ಷಿಕ 5.5 ಲಕ್ಷ ಕೋಟಿ ಆರ್ಥಿಕ ಸವಲತ್ತು ನೀಡಲಾಗುತ್ತಿದೆ. ಇದು ರಾಹುಲ್‌ ಯೋಜನೆಗಿಂತ 1.06 ಲಕ್ಷ ಕೋಟಿಯಷ್ಟು ಅಧಿಕವಾಗಿದೆ. ರಾಹುಲ್‌ ಹೇಳಿರುವ ಲೆಕ್ಕಾಚಾರ ಡಿಬಿಡಿಯ 3ನೇ 2ರಷ್ಟು ಭಾಗಕ್ಕಿಂತ ಕಡಿಮೆಯಿದೆ’ ಎಂದರು. ಇನ್ನು, 7ನೇ ವೇತನ ಆಯೋಗದ ಶಿಫಾರಸುಗಳು ಜಾರಿಗೆ ಬಂದ ಅನಂತರ ಕಾರ್ಮಿಕರ ವೇತನ ಸಹ ತಿಂಗಳಿಗೆ 12,000 ರೂ.ಗಳನ್ನು ದಾಟಿದೆ. ಅವರೀಗ ಮಾಸಿಕ 18,000 ರೂ.ಗಳಷ್ಟು ವೇತನ ಪಡೆಯುತ್ತಿದ್ದಾರೆ. ಹಳ್ಳಿಗಳಲ್ಲಿ ಭೂಮಿ ರಹಿತ ಬಡವರು ನರೇಗಾ ಯೋಜನೆ ಮೂಲಕ ವೇತನ ಪಡೆಯುತ್ತಿದ್ದಾರೆ ಎಂದರು. “ಬಡತನ ತೊಲಗಿಸಲು ಇದು ಕೊನೆಯ ಅಸ್ತ್ರ ಎಂದು ತಮ್ಮ ಯೋಜನೆಯನ್ನು ರಾಹುಲ್‌ ಬಣ್ಣಿಸಿರುವುದು ಶುದ್ಧ ಡಾಂಬಿಕ’ ಎಂದ ಜೇಟಿÉ, “ದಶಕಗಳ ಹಿಂದೆ ಅವರ ಅಜ್ಜಿ (ಇಂದಿರಾ ಗಾಂಧಿ) ಕೂಡ ಗರೀಬಿ ಹಠಾವೊ ಎಂಬ ಕನಸಿನ ಯೋಜನೆ ಪ್ರಕಟಿಸಿದ್ದರು. ಆದರೆ, ಗರೀಬಿ ಹಠಾವೊ ಮೂಲಕ ಬಡತನವನ್ನು ಮರು ಹಂಚಿಕೆ ಮಾಡಲಾಯಿತಷ್ಟೇ’ ಎಂದು ಟೀಕಿಸಿದರು.

Advertisement

ಈ ಯೋಜನೆಗೆ ಹಣ ಹೊಂದಾಣಿಕೆ ಹೇಗೆ?
5 ಕೋಟಿ ಕುಟುಂಬಗಳಿಗೆ ತಿಂಗಳಿಗೆ 6,000 ರೂ. ನೀಡಲು ಸರಕಾರಕ್ಕೆ ವಾರ್ಷಿಕ 3.6 ಲಕ್ಷ ಕೋಟಿ ರೂ. ಬೇಕು. ಇದು, ದೇಶದ ಒಟ್ಟಾರೆ ಬಜೆಟ್‌ನ ಶೇ.13ರಷ್ಟು ಮಾತ್ರ. ಆದರೆ, ಪ್ರತಿ ವರ್ಷ 3.6 ಲಕ್ಷ ಕೋಟಿ ರೂ. ಹೊಂದಿಸಬೇಕಾದರೆ ಈಗಿರುವ ಸಬ್ಸಿಡಿಗಳಲ್ಲಿ ಹಲವು ಸಬ್ಸಿಡಿಗಳನ್ನು ಹಿಂದೆಗೆದುಕೊಳ್ಳಲೇಬೇಕಾಗುತ್ತದೆ. ಸದ್ಯಕ್ಕೆ ಆಹಾರ ಮತ್ತು ಕೀಟನಾಶಕಗಳ ಮೇಲಿನ ಸಬ್ಸಿಡಿ ಹಾಗೂ ಕೃಷಿ ಸಾಲದ ಮೇಲಿನ ಕಡಿಮೆ ಬಡ್ಡಿ ದರಗಳನ್ನು ನಿಲ್ಲಿಸಿದರೆ ವಾರ್ಷಿಕ 2.5 ಲಕ್ಷ ಕೋಟಿ ರೂ. ಉಳಿತಾಯವಾಗುತ್ತದೆ. ನರೇಗಾ ಯೋಜನೆ ನಿಲ್ಲಿಸಿದರೆ 50,000 ಕೋಟಿ ರೂ. ಉಳಿಯುತ್ತದೆ. ಜತೆಗೆ, ತೈಲ ಹೊರತುಪಡಿಸಿ ಇತರ ಸಬ್ಸಿಡಿಗಳನ್ನು ನಿಲ್ಲಿಸಿದರೆ ಮಾತ್ರ ವಾರ್ಷಿಕ 3.6 ಲಕ್ಷ ಕೋಟಿ ರೂ.ಗಳಿಗೆ ಹತ್ತಿರಕ್ಕೆ ಹಣ ಸಂಗ್ರಹವಾಗುತ್ತದೆ.

ಎಲ್ಲಿಂದ ಬಂತು ಈ ಐಡಿಯಾ?
ರಾಹುಲ್‌ ಅವರ “ನ್ಯುನಿತಂ ಆಯ್‌ ಯೋಜನೆ’ (ನ್ಯಾಯ್‌) 1938ರಲ್ಲಿ ಮೊದಲ ಬಾರಿ ಚರ್ಚೆಯಾಗಿತ್ತು. 1964ರಲ್ಲಿ ಪುನಃ ಚಾಲ್ತಿಗೆ ಬಂತು. 2011-12ರಲ್ಲಿ ಮಧ್ಯ ಪ್ರದೇಶದ 8 ಹಳ್ಳಿಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿ ಸಲಾಗಿತ್ತು. 2016-17ರಲ್ಲಿ ಶೇ.75ರಷ್ಟು ಬಡವರಿಗೆ ಕನಿಷ್ಠ ಆದಾಯ ಖಾತ್ರಿಗಾಗಿ ಆರ್ಥಿಕ ಸಮೀಕ್ಷೆ ನಡೆಸಲಾ ಗಿತ್ತು. ಅಮೆರಿಕ, ಫಿನ್ಲಂಡ್‌, ಕೀನ್ಯಾ, ಬ್ರೆಜಿಲ್‌, ಯುಕೆ, ಸ್ವಿಜರ್ಲೆಂಡ್‌ಗಳಲ್ಲಿ ಇಂಥ ಯೋಜನೆ ಜಾರಿಗೆ ಬಂದಿದೆ. ಆದರೆ ಎಲ್ಲೂ ಯಶಸ್ವಿಯಾದ ಸಿದ್ಧ ಮಾದರಿ ಇಲ್ಲ.

ಅಂದುಕೊಂಡಷ್ಟು ಸರಳವಲ್ಲ!
ಸಬ್ಸಿಡಿಗಳನ್ನು ಹಿಂಪಡೆದು ಅದನ್ನು ಕನಿಷ್ಠ ಆದಾಯ ಖಾತ್ರಿಗೆ ಹೊಂದಿಸುವ ವಿಚಾರ ಅಂದುಕೊಂಡಷ್ಟು ಸುಲಭವಲ್ಲ. ಕೆಲವು ಸಬ್ಸಿಡಿಗಳನ್ನು ಹಿಂಪಡೆಯುವುದು ಬಹುತೇಕ ಅಸಾಧ್ಯ ಎನ್ನಲಾಗುತ್ತಿದೆ. ಉದಾಹರಣೆಗೆ, ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ, ನಗರಗಳಲ್ಲಿರುವ ಬಡವರಿಗಾಗಿ ಇರುವ ಯೋಜನೆಗಳು ಸೇರಿ ಕೆಲವಾರು ಸಬ್ಸಿಡಿ, ಯೋಜನೆಗಳನ್ನು ಕೈಬಿಡುವುದು ಸುಲಭವಲ್ಲ ಎನ್ನಲಾಗುತ್ತಿದೆ.

ನಿರುಪಮ್‌ಗೆ ಕಾಂಗ್ರೆಸ್‌ ಟಿಕೆಟ್‌
26 ಅಭ್ಯರ್ಥಿಗಳ 10ನೇ ಪಟ್ಟಿಯನ್ನು ಕಾಂಗ್ರೆಸ್‌ ಬಿಡುಗಡೆ ಮಾಡಿದ್ದು, ವಾಯವ್ಯ ಮುಂಬಯಿನಲ್ಲಿ ಸಂಜಯ್‌ ನಿರುಪಮ್‌ಗೆ ಟಿಕೆಟ್‌ ನೀಡಲಾಗಿದೆ. ಮುಂಬಯಿ ಪ್ರಾದೇಶಿಕ ಕಾಂಗ್ರೆಸ್‌ ಕಮಿಟಿ ಮುಖ್ಯಸ್ಥರಾಗಿದ್ದ ನಿರುಪಮ್‌ರನ್ನು ಆ ಸ್ಥಾನದಿಂದ ತೆಗೆದುಹಾಕಿ, ಮಾಜಿ ಸಚಿವ ಮಿಲಿಂದ್‌ ದಿಯೋರಾ ರನ್ನು ನೇಮಕ ಮಾಡಿದ ಮಾರನೇ ದಿನವೇ ಈ ಬೆಳವಣಿಗೆ ನಡೆದಿದೆ.

ಡ್ಯಾನಿಶ್‌ ವಿರುದ್ಧದ ಅಭ್ಯರ್ಥಿ ಬದಲು
ಇತ್ತೀಚೆಗೆ ಜೆಡಿಎಸ್‌ನಿಂದ ಬಿಎಸ್ಪಿಗೆ ಸೇರಿ ಉತ್ತರಪ್ರದೇಶದ ಅನ್ರೋಹಾದಿಂದ ಕಣಕ್ಕಿಳಿದಿರುವ ಡ್ಯಾನಿಷ್‌ ಅಲಿ ವಿರುದ್ಧದ ಅಭ್ಯರ್ಥಿಯನ್ನು ಕಾಂಗ್ರೆಸ್‌ ಏಕಾಏಕಿ ಬದಲಿಸಿದೆ. ಇಲ್ಲಿ ಈ ಮೊದಲು ರಶೀದ್‌ ಅಳ್ವಿ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿತ್ತು. ಆದರೆ, ಸೋಮವಾರ ಇದನ್ನು ಬದಲಿಸಿದ ಕಾಂಗ್ರೆಸ್‌, ಸಚಿನ್‌ ಚೌಧರಿಗೆ ಟಿಕೆಟ್‌ ನೀಡಿದೆ.

ಸುಪ್ರೀಂ ಸೂಚನೆ
ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ವಿವಿಪ್ಯಾಟ್‌ ರಸೀದಿಗಳನ್ನು ಪರಿಶೀಲನೆ ಮಾಡುವ ಪ್ರಮಾಣ ಹೆಚ್ಚಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್‌ ಸೂಚನೆ ನೀಡಿದೆ. ಈ ಬಗ್ಗೆ ಮಾ. 28ರೊಳಗೆ ಉತ್ತರಿಸುವಂತೆಯೂ ಹೇಳಿದೆ. ನ್ಯಾಯಾಂಗವೂ ಸೇರಿದಂತೆ ಯಾವುದೇ ಸಂಸ್ಥೆ ಕೂಡ ಸುಧಾರಣೆಗೆ ಮುಕ್ತವಾಗಿರಬೇಕು ಎಂದು ಸುಪ್ರೀಂಕೋರ್ಟ್‌ ಈ ವೇಳೆ ಹೇಳಿದೆ.

ಟಿಡಿಪಿ ಸ್ಪರ್ಧೆಯಿಲ್ಲ
ತೆಲಂಗಾಣದಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ ಎಂದು ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಘೋಷಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದೀಚೆಗೆ ಭಾರೀ ಸಂಖ್ಯೆಯ ಟಿಡಿಪಿ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿ ಟಿಆರ್‌ಎಸ್‌ಗೆ ಸೇರ್ಪಡೆಯಾಗಿದ್ದು, ತೆಲಂಗಾಣದಲ್ಲಿ ಪಕ್ಷಕ್ಕೆ ನೆಲೆಯಿಲ್ಲದಂತಾಗಿದೆ. ಹೀಗಾಗಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ಪ್ರಿಯಾಂಕಾ ಗಂಗಾಜಲ ಸೇವಿಸುತ್ತಿದ್ದರೇ?
ಅಲಹಾಬಾದ್‌ನಿಂದ ವಾರಾಣಸಿ ವರೆಗೆ ಗಂಗಾ ನದಿಯನ್ನು ಜಲಮಾರ್ಗ ಎಂದು ಘೋಷಣೆ ಮಾಡದೇ ಇರುತ್ತಿದ್ದರೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾ ಅದರಲ್ಲಿ ಪ್ರಯಾಣಿಸುತ್ತಿದ್ದರೇ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಪ್ರಶ್ನಿಸಿದ್ದಾರೆ. ಗಂಗಾ ಶುದ್ಧೀಕರಣ ಯೋಜನೆ ಕೈಗೊಳ್ಳದೇ ಇರುತ್ತಿದ್ದರೆ ಅವರ ಪ್ರವಾಸದ ವೇಳೆ ಗಂಗಾ ಜಲ ಕುಡಿಯುತ್ತಿದ್ದರೇ ಎಂದು ಕೇಳಿದ್ದಾರೆ. ಯುಪಿಎ ಅಧಿಕಾರದಲ್ಲಿದ್ದಾಗ ಅವರೇಕೆ ಗಂಗೆ ಯಲ್ಲಿ ಪ್ರಯಾಣ ಮಾಡಿರಲಿಲ್ಲ? ಸದ್ಯ ಕೈಗೊಂಡಿರುವ ಕಾಮಗಾರಿ 2020ರ ಮಾರ್ಚ್‌ ನಲ್ಲಿ ಮುಕ್ತಾಯವಾಗಲಿದೆ ಎಂದು ಹೇಳಿದ್ದಾರೆ. ಹಾಲಿ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಪುತ್ರಿ ರಾಜಕೀಯ ಪ್ರವೇಶದಿಂದ ಏನೂ ಪರಿಣಾಮ ಬೀರದು ಎಂದಿದ್ದಾರೆ.

ತಿವಾರಿ ಜತೆ ಸಪ್ನಾ!
ಹರ್ಯಾಣದ ಗಾಯಕಿ ಸಪ್ನಾ ಚೌಧರಿ ಕಾಂಗ್ರೆಸ್‌ಸೇರ್ಪಡೆಯಾಗಿ ಅನಂತರ ಯೂಟರ್ನ್ ಹೊಡೆಯಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರವೆಂಬಂತೆ ಸೋಮವಾರ ಫೋಟೋ ವೊಂದು ಹರಿದಾಡಿದೆ. ಅವರು ಯೂಟರ್ನ್ ಹೊಡೆಯುವ ಮುನ್ನ ಬಿಜೆಪಿ ನಾಯಕ ಮನೋಜ್‌ ತಿವಾರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದ ಫೋಟೋ ವೈರಲ್‌ ಆಗಿದೆ. ತಿವಾರಿ ಭೇಟಿ ಬಳಿಕ ಅವರು ಸುದ್ದಿಗೋಷ್ಠಿ ನಡೆಸಿ, “ನಾನು ಕಾಂಗ್ರೆಸ್‌ಗೆ ಸೇರಿಲ್ಲ’ ಎಂದು ಘೋಷಿಸಿದ್ದರು ಎನ್ನಲಾಗಿದೆ.

ಜಯಪ್ರದಾ ಬಿಜೆಪಿಗೆ?
ಬಾಲಿವುಡ್‌ನ‌ ಖ್ಯಾತ ನಟಿ ಜಯಪ್ರದಾ ಅವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಉತ್ತರಪ್ರದೇಶದ ರಾಂಪುರ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್‌ ವಿರುದ್ಧ ಜಯಪ್ರದಾ ಸ್ಪರ್ಧಿಸಲಿದ್ದಾರೆ ಎಂದು ಮೂಲಗಳು ಹೇಳಿವೆ. ಇನ್ನೊಂದೆಡೆ, ಪ್ಯಾರಾಲಿಂಪಿಕ್‌ ಗೇಮ್ಸ್‌ನಲ್ಲಿ ಪದಕ ಗೆದ್ದ ದೇಶದ ಮೊದಲ ಮಹಿಳೆ ಎಂಬ ಖ್ಯಾತಿ ಪಡೆದಿರುವ ದೀಪಾ ಮಲಿಕ್‌ ಸೋಮವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಕಾಂಗ್ರೆಸ್‌ನಿಂದ ಊರ್ಮಿಳಾ?: ಉತ್ತರ ಮುಂಬಯಿ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಚ್ಚರಿಯ ಅಭ್ಯ ರ್ಥಿಯ ಹೆಸರು ಘೋಷಿಸುವ ಸಾಧ್ಯತೆಯಿದೆ. ಇಲ್ಲಿ ನಟಿ ಊರ್ಮಿಳಾ ಮಾತೋಂಡ್ಕರ್‌ರನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆದಿದೆ.

ರಾಜ್ಯಪಾಲರ ವಿವಾದ
ಈ ಬಾರಿಯೂ ಪ್ರಧಾನಿ ಮೋದಿ ಅವರೇ ಮತ್ತೂಮ್ಮೆ ಅಧಿಕಾರಕ್ಕೆ ಬರಬೇಕು ಎನ್ನುವ ಮೂಲಕ ರಾಜಸ್ಥಾನ ರಾಜ್ಯಪಾಲ ಕಲ್ಯಾಣ್‌ ಸಿಂಗ್‌ ವಿವಾದ ಸೃಷ್ಟಿಸಿದ್ದಾರೆ. ನಾವೆಲ್ಲರೂ ಬಿಜೆಪಿ ಕಾರ್ಯಕರ್ತರು ಹಾಗೂ ಬಿಜೆಪಿಯೇ ಗೆಲ್ಲ ಬೇಕೆಂದು ಬಯಸುತ್ತೇವೆ. ಮೋದಿ ಮತ್ತೂಮ್ಮೆ ಪ್ರಧಾನಿಯಾಗಬೇಕು ಎಂದು ಸಿಂಗ್‌ ಹೇಳಿದ್ದಾರೆ. ಸಾಂವಿಧಾನಿಕ ಹುದ್ದೆಯಲ್ಲಿದ್ದು ಕೊಂಡು ಒಂದು ಪಕ್ಷದ ಪರ ಮಾತನಾಡಿ ರುವುದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರಾಹುಲ್‌ ಅವರ ಕನಿಷ್ಠ ಆದಾಯ ಯೋಜನೆ, ಅಂಗೈಗೆ ಚಂದ್ರನನ್ನು ತಂದಿಡುತ್ತೇವೆ ಎಂಬ ತಮ್ಮ ಹಿಂದಿನ ಆಶ್ವಾಸನೆಗಳ ಮುಂದುವರಿದ ಭಾಗವೇ ಆಗಿದೆ. ಈ ಯೋಜನೆ ಜಾರಿಗೆ ಬಂದರೆ ದೇಶದ ಆರ್ಥಿಕ ಶಿಸ್ತು ಧೂಳೀಪಟವಾಗುತ್ತದೆ. ಇದೊಂದು ಪ್ರಾಯೋಗಿಕವಾಗಿ ಅಸಾಧ್ಯ ಯೋಜನೆ.
ರಾಜೀವ್‌ ಕುಮಾರ್‌, ನೀತಿ ಆಯೋಗದ ಉಪಾಧ್ಯಕ್ಷ

ಉ.ಪ್ರದೇಶದಲ್ಲಿ ಶಿಕ್ಷಾ ಮಿತ್ರರು ಉತ್ತಮ ವೇತನವಿಲ್ಲದೆ ಸಂಕಷ್ಟ ದಲ್ಲಿದ್ದರೆ, ಆಡಳಿತ ಪಕ್ಷದ ನಾಯ ಕರು ಟಿಶರ್ಟ್‌ ಮಾರಾಟ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಜನರ ಸಂಕಷ್ಟ ಇವರಿಗೆ ಅರ್ಥವಾಗುವುದೇ ಇಲ್ಲ.
ಪ್ರಿಯಾಂಕಾ ವಾದ್ರಾ, ಕಾಂಗ್ರೆಸ್‌ ನಾಯಕಿ

ರಾಹುಲ್‌ ಅಮೇಠಿ ಹೊರತುಪಡಿಸಿ ಕರ್ನಾಟಕ ಅಥವಾ ಕೇರಳದಲ್ಲಿ ಸ್ಪರ್ಧಿಸುತ್ತಾರೆ ಎಂಬ ಮಾತು ಗಳು ಕೇಳಿಬರುತ್ತಿವೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನ ಸಂಘಟನ ಸಾಮರ್ಥ್ಯ ಎಷ್ಟಿದೆ ಎಂಬುದಕ್ಕೆ ಇದುವೇ ಸಾಕ್ಷಿ.
ಕಿರಣ್ಮಯಿ ನಂದಾ, ಎಸ್‌ಪಿ ಉಪಾಧ್ಯಕ್ಷ

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿಯವರು ನಿಜಕ್ಕೂ ದೇವರಾದ ಶಿವನ ಅವತಾರವೇ ಆಗಿದ್ದಲ್ಲಿ, ಅರ್ಧ ಕೆ.ಜಿ.ಯಷ್ಟು ವಿಷವನ್ನು ಸೇವಿಸಿ, ಬದುಕಿ ಬರಲಿ. ಆಗ ನಾವು ಅವರನ್ನು ಶಿವನ ಅವತಾರವೆಂದು ಒಪ್ಪಿಕೊಳ್ಳುತ್ತೇವೆ.
ಗಣಪತ್‌ ವಸಾವಾ, ಗುಜರಾತ್‌ ಸಚಿವ

ರಾಧಾರವಿ ಸಸ್ಪೆಂಡ್‌
ನಟಿ ನಯನತಾರಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ನಟ ಹಾಗೂ ಡಿಎಂಕೆ ನಾಯಕ ರಾಧಾರವಿ ಅವರನ್ನು ಅಮಾನತು ಮಾಡಿ ಡಿಎಂಕೆ ಕಾರ್ಯಾಧ್ಯಕ್ಷ ಸ್ಟಾಲಿನ್‌ ಆದೇಶ ಹೊರಡಿಸಿದ್ದಾರೆ. ರಾಧಾ ರವಿ ಹೇಳಿಕೆಗೆ ನಟರಾದ ಕಮಲ್‌ ಹಾಸನ್‌, ತಾಪ್ಸಿ ಪನ್ನು ಸೇರಿ ಹಲವರು ಆಕ್ಷೇಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next