ಹೊಸದಿಲ್ಲಿ : “ಪಶ್ಚಿಮ ದಿಲ್ಲಿ ಲೋಕಸಭಾ ಕ್ಷೇತ್ರದ ಆಪ್ ಟಿಕೆಟ್‌ಗಾಗಿ ನನ್ನ ತಂದೆ, ಆಪ್ ನಾಯಕ, ಬಲಬೀರ್ ಸಿಂಗ್ ಜಾಖಡ್, ಪಕ್ಷದ ಮುಖ್ಯಸ್ಥ ಹಾಗೂ ದಿಲ್ಲಿ ಸಿಎಂ ಆಗಿರುವ ಅರವಿಂದ ಕೇಜ್ರಿವಾಲ್ ಗೆ ಆರು ಕೋಟಿ ರೂ. ಕೊಟ್ಟಿದ್ದಾರೆ’ ಎಂದು ಜಾಖಡ್ ಪುತ್ರ ಉದಯ ಹೇಳಿರುವುದಾಗಿ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದ್ದು ಇದು ಆಮ್ ಆದ್ಮಿ ಪಕ್ಷದ ವರ್ಚಸ್ಸಿಗೆ ಒದಗಿರುವ ಭಾರೀ ದೊಡ್ಡ ಹೊಡೆತವೆಂದು ತಿಳಿಯಲಾಗಿದೆ.
“ನನ್ನ ತಂದೆ ಮೂರು ತಿಂಗಳ ಹಿಂದೆ ರಾಜಕೀಯ ಸೇರಿದ್ದರು. ಆಪ್ ಟಿಕೆಟ್ ಗಾಗಿ ಅವರು ಅರವಿಂದ ಕೇಜ್ರಿವಾಲ್‌ಗೆ 6 ಕೋಟಿ ರೂ. ಪಾವತಿಸಿದ್ದರು. ಈ ಬಗ್ಗೆ ನನ್ನ ಬಳಿ ಬಲವಾದ ಮತ್ತು ವಿಶ್ವಾಸಾರ್ಹ ಸಾಕ್ಷ್ಯವಿದೆ’ ಎಂದು ಜಾಖಡ್ ಪುತ್ರ ಹೇಳಿರುವುದನ್ನು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
“ನನ್ನ ತಂದೆ ಅಣ್ಣಾ ಹಜಾರೆ ಅವರ ಆಂದೋಲನದಲ್ಲಿ ಭಾಗಿಯಾಗಿರಲಿಲ್ಲ. ಆದರೂ ಅವರಿಗೆ ಆಪ್ ಟಿಕೆಟ್ ಸಿಕ್ಕಿತು, ಹೇಗೆ ? ಅರವಿಂದ ಕೇಜ್ರಿವಾಲ್ ಮತ್ತು ಗೋಪಾಲ್ ರಾಯ್ ಅವರಿಗೆ ಪಶ್ಚಿಮ ದಿಲ್ಲಿ ಟಿಕೆಟ್‌ಗಾಗಿ ನನ್ನ ತಂದೆ 6 ಕೋಟಿ ರೂ. ಕೊಡಲು ಒಪ್ಪಿದರು…’
“… ನನ್ನ ತಂದೆ ನನ್ನ ಉನ್ನತ ಶಿಕ್ಷಣಕ್ಕಾಗಿ ನನಗೆ ಹಣ ಕೊಡಲು ತಯಾರಿರಲಿಲ್ಲ. ತಾನು ರಾಜಕೀಯ ಭವಿಷ್ಯ ರೂಪಿಸಿಕೊಳ್ಳಬೇಕಿದೆ ಎಂದು ನನಗೆ ಹೇಳುತ್ತಿದ್ದರು. ಆದರೆ ಅವರು ಅದೇ ಹಣದಿಂದ ಸಿಕ್ಖ್ ವಿರೋಧಿ ಹಿಂಸೆ ಕೇಸಿನ ಆರೋಪಿಗಳಾದ ಯಶ್‌ಪಾಲ್ ಮತ್ತು ಸಜ್ಜನ್ ಕುಮಾರ್ ಅವರಿಗೆ ಬೇಲ್ ಕೊಡಿಸಲು ಸಿದ್ಧರಿದ್ದರು. ಕ್ಲೀನ್ ಇಮೇಜ್ ನ ಕೇಜ್ರಿವಾಲ್ ರೀತಿಯ ನಾಯಕರು ಈ ರೀತಿಯ ಬೇಜವಾಬ್ದಾರಿಯ ಕೃತ್ಯಗಳನ್ನು ಎಸಗುತ್ತಿರುವುದು ದುರದೃಷ್ಟಕರ’ ಎಂದು ಉದಯ್ ಹೇಳಿರುವುದನ್ನು ಎಎನ್‌ಐ ವರದಿ ಮಾಡಿದೆ.
ದಿಲ್ಲಿ ನಾಳೆ ಭಾನುವಾರ ಮೇ 12ರಂದು ಆರನೇ ಹಂತದ ಲೋಕಸಭಾ ಚುನಾವಣೆಗೆ ಮತದಾನಕ್ಕೆ ಸಜ್ಜಾಗಿದೆ.