ಮಂಗಳೂರು: ದುಷ್ಕರ್ಮಿಗಳಿಂದ ಬುಧವಾರ ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಅವರ ಕುಟುಂಬಕ್ಕೆ ಜಿಲ್ಲಾಡಳಿತ 5 ಲಕ್ಷ ರೂಪಾಯಿ, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 5 ಲಕ್ಷ ಪರಿಹಾರ ಘೋಷಿಸಿದೆ. ಆದರೆ ಈ ಪರಿಹಾರ ಧನ ಸಾಲುವುದಿಲ್ಲ 50 ಲಕ್ಷ ರೂಪಾಯಿ ನೀಡುವಂತೆ ಸಂಬಂಧಿಕರು,ಸಂಘಟನೆಗಳ ಮುಖಂಡರು ಮತ್ತು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಮೃತ ದೀಪಕ್ ಅವರ ಕುಟುಂಬಸ್ಥರನ್ನು ಭೇಟಿ ಮಾಡಿ ಇಂದೇ 5 ಲಕ್ಷ ರೂಪಾಯಿ ಪರಿಹಾರ ಧನ ನೀಡುವ ಬಗ್ಗೆ ತಿಳಿಸಿದರು.
ತಕ್ಷಣ ಜಿಲ್ಲಾಡಳಿತದ ವತಿಯಿಂದ 5 ಲಕ್ಷ ರೂಪಾಯಿ ನೀಡುತ್ತೇವೆ, ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 5 ಲಕ್ಷ ನೀಡಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.
ಈ ವೇಳೆ ಹಿಂದೂ ಪರ ಸಂಘಟನೆಯ ಮುಖಂಡರು ಧಿಕ್ಕಾರಗಳನ್ನು ಕೂಗಿದ್ದು ದನಕಳ್ಳ ಸತ್ತರೆ 10 ಲಕ್ಷ ನೀಡುತ್ತೀರಿ ನಮಗೇಕೆ ನೀಡುವುದಿಲ್ಲ ಎಂದು ಘೋಷಣೆಗಳನ್ನು ಕೂಗಿದರು.
ಜಿಲ್ಲಾಧಿಕಾರಿಗಳು ಪರಿಹಾರ ಧನದ ಬಗ್ಗೆ ಘೋಷಿಸಿ ಸಾಂತ್ವನ ಹೇಳಿದ ಬಳಿಕ ಪೋಷಕರು ದೀಪಕ್ ಅಂತ್ಯಸಂಸ್ಕಾರ ನಡೆಸಲು ಒಪ್ಪಿಗೆ ಸೂಚಿಸಿದರು. ಗ್ರಾಮದಲ್ಲೇ ಮೆರವಣಿಗೆ ನಡೆಸಿ ಬಳಿಕ ಅಂತ್ಯ ಸಂಸ್ಕಾರ ನಡೆಸಲಾಗುತ್ತಿದೆ.
ಮೊಬೈಲ್ ಅಂಗಡಿಯಲ್ಲಿ ಸಿಮ್ ವಿತರಕರಾಗಿ ಕೆಲಸ ಮಾಡುತ್ತಿದ್ದ ದೀಪಕ್ ಬಡ ಕುಟುಂಬಕ್ಕೆ ಆಧಾರ ವಾಗಿದ್ದ.