Advertisement

ಸಿಟಿ ಲಿಮಿಟ್ಸ್‌ ರಸ್ತೆ ಅಗಲೀಕರಣಕ್ಕೆ 5 ಕೋಟಿ

05:46 PM Aug 31, 2021 | Team Udayavani |

ಮಸ್ಕಿ: ಮಸ್ಕಿ ಕೇಂದ್ರ ಸ್ಥಾನದಲ್ಲಿನ ಹೆದ್ದಾರಿ ಅಗಲೀಕರಣಕ್ಕೆ ಕೊನೆಗೂ ಮುಹೂರ್ತ ಸಿಕ್ಕಿದೆ. ಸಿಟಿ ಲಿಮಿಟ್ಸ್‌ ವ್ಯಾಪ್ತಿಯಲ್ಲಿ ಚತುಷ್ಪಥ ರಸ್ತೆ, ರಸ್ತೆ ವಿಭಜಕ (ಡಿವೈಡರ್‌), ಹೈಮಾಸ್ಟ್‌ ಬೀದಿದೀಪ ಅಳವಡಿಕೆಗೆ 5 ಕೋಟಿ ಹಣ ಮಂಜೂರಾಗಿದ್ದು, ಇದರ ಪ್ರಾಥಮಿಕ ಕಾರ್ಯಕ್ಕೆ ಚಾಲನೆ ಸಿಕ್ಕಿದೆ!.

Advertisement

ಮಸ್ಕಿ ತಾಲೂಕು ಕೇಂದ್ರವಾಗಿದ್ದರೂ ಹಲವು ದೃಷ್ಟಿಯಲ್ಲಿ ಇನ್ನು ಹಿಂದುಳಿದಿದೆ. ಪಟ್ಟಣ ಕೇಂದ್ರ ಸ್ಥಾನದಲ್ಲಿ ರಸ್ತೆ ಅಗಲೀಕರಣವೂ ಇದರಲ್ಲಿ ಒಂದಾಗಿತ್ತು. ಹಲವು ದಿನಗಳಿಂದಲೂ ನನೆಗುದಿಗೆ ಬಿದ್ದಿದ್ದ ಈ ಕಾರ್ಯಕ್ಕೆ ಈಗ ಚಾಲನೆ ಸಿಕ್ಕಿದೆ. ಪಟ್ಟಣದ ಮಧ್ಯ ಭಾಗದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 150(ಎ)ಗೆ ಸರಿಯಾದ ಶೋಲ್ಡರ್, ಫುಟ್‌ ಪಾತ್‌, ರಸ್ತೆ ವಿಭಜಕ ಸೇರಿ ರಾಷ್ಟ್ರೀಯ ಹೆದ್ದಾರಿಗೆ ಅಗತ್ಯವಿರುವಷ್ಟು ಅಗಲೀಕರಣವೂ ಇರಲಿಲ್ಲ. ಪುರಸಭೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಡುವೆ ಈ ಕಾಮಗಾರಿ ಮಾಡಲು ತಿಕ್ಕಾಟ ನಡೆದಿತ್ತು. ಆದರೆ,
ಈಗ ಈ ತಿಕ್ಕಾಟ ಅಂತ್ಯವಾಗಿದ್ದು ರಾಷ್ಟ್ರೀಯ ಪ್ರಾಧಿಕಾರದಿಂದಲೇ ಅನುದಾನ ಬಿಡುಗಡೆಯಾಗಿದೆ. 5 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಕಾಮಗಾರಿ ಆರಂಭಿಸುವುದೊಂದೆ ಬಾಕಿ ಇದೆ.

ಏನಿದೆ ಯೋಜನೆ?: ಮಸ್ಕಿಯ ಹೃದಯ ಭಾಗದಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ 150(ಎ) ಸದ್ಯ ರಸ್ತೆ ಮಧ್ಯದಿಂದ ಎರಡು ಬದಿ ತಲಾ 10 ಮೀಟರ್‌ನಂತೆ 20 ಮೀಟರ್‌ ಅಗಲವಿದೆ. ಫುಟ್‌ ಪಾತ್‌, ರಸ್ತೆ ಬದಿಗಳು ಅತಿಕ್ರಮಣವಾಗಿದೆ. ಇದನ್ನು ತೆರವು ಮಾಡಿ ರಸ್ತೆ ಮಧ್ಯದಿಂದ 12 ಮೀಟರ್‌ನಷ್ಟು ಎರಡು ಬದಿ 24 ಮೀಟರ್‌ನಷ್ಟು ರಸ್ತೆ ವಿಸ್ತರಣೆಗೆ ಯೋಜನೆ ರೂಪಿಸಲಾಗಿದೆ. ಮಸ್ಕಿ ಹಿರೇ ಹಳ್ಳದ ಸೇತುವೆಯಿಂದ ಹಿಡಿದು ಹೊರ ವಲಯ ವಾಲ್ಮೀಕಿ ವೃತ್ತದವರೆಗೆ 2 ಕಿ.ಮೀ. ರಸ್ತೆ ಅಗಲೀಕರಣ ಮಾಡಿ ಎರಡು ಬದಿಯಲ್ಲೂ ಚರಂಡಿ, ಫುಟ್‌ಪಾತ್‌, ನಡುವೆ ರಸ್ತೆ ವಿಭಜಕ ಹಾಗೂ ಹೈಮಾಸ್ಟ್‌ ದೀಪಗಳನ್ನು ಅಳವಡಿಸಲು ಯೋಜನೆ ರೂಪಿಸಲಾಗಿದೆ.

ಇದನ್ನೂ ಓದಿ:ಟೋಕಿಯೊ ಪ್ಯಾರಾಲಂಪಿಕ್ಸ್: ಹೈಜಂಪ್ ನಲ್ಲಿ ಭಾರತದ ತಂಗವೇಲುಗೆ ಬೆಳ್ಳಿ, ಶರದ್ ಕುಮಾರ್ ಗೆ ಕಂಚು

ತೆರವಿಗೆ ಗಡುವು: 5 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಗಲೀಕರಣಕ್ಕೆ ಯೋಜನೆ ರೂಪಿಸಿದ್ದೇ ತಡ, ಪುರಸಭೆ ಮತ್ತು ಜೆಸ್ಕಾಂ ಇಲಾಖೆಗೆ ಸೇರಿದ ರಸ್ತೆ ಬದಿ ಇರುವ ಆಸ್ತಿಗಳ ತೆರವಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಪತ್ರ ಬರೆಯಲಾಗಿದೆ. ರಸ್ತೆ ಬದಿಯಲ್ಲಿರುವ ಕುಡಿವ ನೀರಿನ ಪೈಪ್‌,ಕೇಬಲ್‌,ವಿದ್ಯುತ್‌ಕಂಬಗಳು,ವಿದ್ಯುತ್‌ ತಂತಿ ಸೇರಿ ರಸ್ತೆಗೆ ಹೊಂದಿಕೊಂಡ ಎಲ್ಲ ಆಸ್ತಿ ತೆರವಿಗೆ ಗಡುವು ವಿಧಿಸಲಾಗಿದೆ. ಎನ್‌ಎಚ್‌ ಪ್ರಾಧಿಕಾರದ ಪತ್ರದ ಆಧಾರದ ಮೇಲೆ ಪುರಸಭೆ ಅಧಿಕಾರಿಗಳು ಇತ್ತೀಚೆಗೆ ರಸ್ತೆಯ ಅಗಲೀಕರಣಗೊಳಿಸುವಷ್ಟು ಅಳತೆಗೆ ಮಾರ್ಕ್‌ ಮಾಡಲಾಗಿದೆ. ಫುಟ್‌ಪಾತ್‌ ತೆರವು ಇತರೆ ಕಾರ್ಯಕ್ಕೆ ಇತ್ತೀಚೆಗೆ ಚಾಲನೆ ನೀಡಲಾಗಿದೆ.

Advertisement

ಕ್ರಿಯಾ ಯೋಜನೆಯದ್ದೇ ತಡೆ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹುನಗುಂದ ವಿಭಾಗದ ಅಧಿಕಾರಿಗಳು 5 ಕೋಟಿ ಮೊತ್ತದ ಈ ಕಾಮಗಾರಿ ಅನುಷ್ಠಾನಕ್ಕೆ ಸಿದ್ದರಿದ್ದಾರೆ. ಆದರೆ, ಈಗ ಪುರಸಭೆ ಮತ್ತು ಜೆಸ್ಕಾಂ ಇಲಾಖೆಯಿಂದ ಕ್ರಿಯಾ ಯೋಜನೆ ತಯಾರಿಕೆಯೇ ಬಾಕಿ ಇದೆ. ಎರಡು ಇಲಾಖೆಯ ಆಸ್ತಿ ತೆರವು, ರಸ್ತೆ ಅಗಲೀಕರಣಕ್ಕೆ ತಕ್ಕಂತೆ ತಮ್ಮ ಸೇವೆಗಳನ್ನು ಸ್ಥಳಾಂತರ ಮಾಡಿಕೊಳ್ಳಬೇಕಿದೆ. ಇದಕ್ಕೆ ತಗಲುವ ವೆಚ್ಚ ಕಾಮಗಾರಿಗೆ ಬೇಕಾದ ಇತರೆ ಪೂರಕ ಅಂಶಗಳ ಕುರಿತು ಕ್ರಿಯಾ ಯೋಜನೆ ತಯಾರಿಸಿ, ಎನ್‌ಎಚ್‌ ಪ್ರಾಧಿಕಾರಕ್ಕೆ ಸಲ್ಲಿಸಬೇಕಿದೆ.

ಮಸ್ಕಿ ಪಟ್ಟಣದಲ್ಲಿ ಹಾದುಹೋದ ಹೆದ್ದಾರಿ ಅಗಲೀಕರಣಕ್ಕೆ ಅಗತ್ಯವಿರುವ ಅನುದಾನ ಕೇಂದ್ರ ಸರಕಾರದಿಂದ ಮಂಜೂರಾಗಿದೆ.ಕ್ರಿಯಾ
ಯೋಜನೆ ತಯಾರಿಸಲು ಪುರಸಭೆ, ಜೆಸ್ಕಾಂ ಇಲಾಖೆಗೆ ಪತ್ರ ಬರೆದಿದ್ದೇವೆ.ಕೆಲವೇ ದಿನಗಳಲ್ಲಿ ಕೆಲಸ ಆರಂಭವಾಗಲಿದೆ.
-ವಿಜಯಕುಮಾರ್‌, ಎಇಇ, ರಾಷ್ಟ್ರೀಯ
ಹೆದ್ದಾರಿ ಪ್ರಾಧಿಕಾರ, ಹುನಗುಂದ ವಿಭಾಗ

ಎನ್‌ಎಚ್‌ ಪ್ರಾಧಿಕಾರದ ಅಧಿಕಾರಿಗಳ ಸೂಚನೆ ಮೇರೆಗೆ ರಸ್ತೆಯ ಅಗಲೀಕರಣಕ್ಕೆ ಮಾರ್ಕ್‌ಔಟ್‌ ಮಾಡಲಾಗಿದೆ. ಫುಟ್‌ಪಾತ್‌ ತೆರವು ಇತರೆಕೆಲಸ ನಡೆಸಿದ್ದೇವೆ. ಇದಕ್ಕೆ ಬೇಕಾದ ಕ್ರಿಯಾಯೋಜನೆಯನ್ನು ಶೀಘ್ರ ತಯಾರಿಸಿ ಪ್ರಾಧಿಕಾರಕ್ಕೆ ಸಲ್ಲಿಸಲಾಗುತ್ತದೆ.
-ಮೀನಾಕ್ಷಿ, ಎಂಜಿನಿಯರ್‌, ಪುರಸಭೆ ಮಸ್ಕಿ

-ಮಲ್ಲಿಕಾರ್ಜುನ ಚಿಲ್ಕರಾಗಿ

 

Advertisement

Udayavani is now on Telegram. Click here to join our channel and stay updated with the latest news.

Next