Advertisement

ನೀಡಿದ್ದು 34 ಕೋಟಿ, ಬಾಕಿ ಇರೋದು 7.50 ಕೋಟಿ

06:30 AM Nov 24, 2018 | Team Udayavani |

ಬೆಂಗಳೂರು : ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಬೋಧನೆ ಮಾಡುತ್ತಿರುವ ಸುಮಾರು 10,000 ಅತಿಥಿ ಉಪನ್ಯಾಸಕರಿಗೆ ಸರ್ಕಾರ ಬಿಡುಗಡೆ ಮಾಡಿರುವ ಗೌರವ ಧನ ಅಧಿಕಾರಿಗಳು, ಪ್ರಾಂಶುಪಾಲರ ಬಳಿಯೇ ಉಳಿದಿದೆ!

Advertisement

ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯ 412 ಸರ್ಕಾರಿ ಪದವಿ ಕಾಲೇಜಿನಲ್ಲಿ ಸುಮಾರು 10 ಸಾವಿರ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಸರ್ಕಾರದಿಂದ ಇವರಿಗೆ ಮಾಸಿಕವಾಗಿ ಗೌರವಧನ ನೀಡಲಾಗುತ್ತದೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಸೌಲಭ್ಯ ಇಲ್ಲ. ಇಷ್ಟಾದರೂ ಅಧಿಕಾರಿಗಳು ಹಾಗೂ ಪ್ರಾಂಶುಪಾಲರು ಅತಿಥಿ ಉಪನ್ಯಾಸಕರಿಗೆ ಗೌರವ ಧನ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರವೇ ಕೋಟ್ಯಂತರ ರೂಪಾಯಿ ಬಿಡುಗಡೆ ಮಾಡಿದರೂ, ಹಣ ಅತಿಥಿ ಉಪನ್ಯಾಸಕರಿಗೆ ಸಮರ್ಪಕವಾಗಿ ಸೇರುತ್ತಿಲ್ಲ.

ಅಧಿಕಾರಿಗಳು ಗೌರವಧನ ಪಾವತಿಸಿರುವ ಬಗ್ಗೆ ವರದಿ ನೀಡದೇ ಸರ್ಕಾರ ಮೂರನೇ ಕಂತಿ ಹಣ ಮಂಜೂರು ಮಾಡಲು ನಿಯಮಾನುಸಾರವಾಗಿ ಸಾಧ್ಯವಾಗುತ್ತಿಲ್ಲ. ಸರ್ಕಾರ 2018ರ ಮೇ ವರೆಗೆ ಪಾವತಿಸಲು ನೀಡಿದ್ದ 34.14 ಕೋಟಿಯಲ್ಲಿ ಸುಮಾರು 7.50 ಕೋಟಿ ರೂ.ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ಪ್ರಾಂಶುಪಾಲರ ಬಳಿ ಉಳಿದೆ ಎಂದು ಇಲಾಖೆಯ ಮೂಲಗಳು ಖಚಿತಪಡಿಸಿವೆ.

ಅನುದಾನದ ಮೊತ್ತ:
ಸರ್ಕಾರಿ ಕಾಲೇಜಿನಲ್ಲಿ ಇರುವ  ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿರುವ ಅತಿಥಿ ಉಪನ್ಯಾಸಕರಿಗೆ ರಾಜ್ಯ ಸರ್ಕಾರವು ಕಾಲೇಜು ಶಿಕ್ಷಣ ಇಲಾಖೆ ಮೂಲಕ 6 ಪ್ರಾದೇಶಿಕ ಕಚೇರಿಗೆ ಅಲ್ಲಿರುವ ಅತಿಥಿ ಉಪನ್ಯಾಸಕರ ಸಂಖ್ಯೆಗೆ  ಅನುಗುಣವಾಗಿ ಅನುದಾನ ಬಿಡುಗಡೆ ಮಾಡಿದೆ.

ಬೆಂಗಳೂರು ಪ್ರಾದೇಶಿಕ ಕಚೇರಿಗೆ 6.83 ಕೋಟಿ ರೂ., ಮೈಸೂರು ಪ್ರಾದೇಶಿಕ ಕಚೇರಿಗೆ 5.66 ಕೋಟಿ ರೂ., ಶಿವಮೊಗ್ಗ ಪ್ರಾದೇಶಿಕ ಕಚೇರಿಗೆ 5.21 ಕೋಟಿ ರೂ., ಮಂಗಳೂರು ಪ್ರದೇಶಿಕ ಕಚೇರಿ 3.14 ಕೋಟಿ ರೂ., ಧಾರವಾಡ ಪ್ರಾದೇಶಿಕ ಕಚೇರಿಗೆ 7.13ಕೋಟಿ ರೂ. ಹಾಗೂ ಕಲಬುರಗಿ ಪ್ರಾದೇಶಿಕ ಕಚೇರಿಗೆ 6.15 ಕೋಟಿ ರೂ. ಸೇರಿದಂತೆ ಒಟ್ಟು 34.14 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.

Advertisement

34.14 ಕೋಟಿ ರೂ.ಗಳಲ್ಲಿ ಪ್ರಾದೇಶಿಕ ಕಚೇರಿಯಿಂದ  ಕಾಲೇಜುಗಳಿಗೆ 30.84 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕಾಲೇಜು ಹಂತದಲ್ಲಿ 26.60 ಕೋಟಿ ರೂ.ಗಳನ್ನು ಗೌರವ ಧನಕ್ಕೆ ವಿನಿಯೋಗಿಸಲಾಗಿದೆ. 4.24 ಕೋಟಿ ರೂ. ಅನುದಾನ ಕಾಲೇಜು ಹಂತದಲ್ಲಿ ಉಳಿದುಕೊಂಡಿದ್ದರೆ, 3.30 ಕೋಟಿ ರೂ. ಅನುದಾನ ಪ್ರಾದೇಶಿಕ ಕಚೇರಿಗಳಲ್ಲೇ ಉಳಿಸಿದೆ.

ಕಂಗಾಲಾದ ಅತಿಥಿ ಉಪನ್ಯಾಸಕರು :
ನಾಲ್ಕೈದು ತಿಂಗಳಿಂದ ಅತಿಥಿ ಉಪನ್ಯಾಸಕರಿಗೆ ವೇತನ ಸಿಗದೇ ಇರುವುದರಿಂದ ರಾಜ್ಯಾದ್ಯಂತ ವಿವಿಧ ಕಾಲೇಜುಗಳಲ್ಲಿ ಇರುವು ಅತಿಥಿ ಉಪನ್ಯಾಸಕರು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ. ಇದು ಪ್ರಸಕ್ತ ಸಾಲಿನ ಸಮಸ್ಯೆ ಮಾತ್ರವಲ್ಲ ಪ್ರತಿ ವರ್ಷವೂ ಅತಿಥಿ ಉಪನ್ಯಾಸಕರು ಈ ಸಮಸ್ಯೆ ಎದುರಿಸುತ್ತಲೇ ಇರುತ್ತಾರೆ. ವಿಧಾನಪರಿಷತ್‌ ಸದಸ್ಯರಿಂದ ಹಿಡಿದು, ಸಚಿವರಿಗೆ ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳಿಗೆ ಎಷ್ಟೇ ಮನವಿ ನೀಡಿದರೂ ಸಮಸ್ಯೆ ಪರಿಹಾರ ಸಿಕ್ಕಿಲ್ಲ. ಮಾಸಿಕವಾಗಿ ನೀಡುವ ಗೌರವ ಧನ ನಿಗದಿತ ಸಮಯಕ್ಕೆ ನೀಡದೇ ಇರುವುದರಿಂದ ಕುಟುಂಬ ನಿರ್ವಹಣೆಗೂ ಸಮಸ್ಯೆಯಾಗುತ್ತಿದೆ ಅತಿಥಿ ಉಪನ್ಯಾಸಕರು ನೋವು ತೋಡಿಕೊಂಡರು.

ಸರ್ಕಾರದ ನೀಡಿರುವ ಅನುದಾನದಲ್ಲಿ ಆಯಾ ಪ್ರಾದೇಶಿಕ ಕಚೇರಿವಾರು ಅತಿಥಿ ಉಪನ್ಯಾಸಕರಿಗೆ ಪ್ರಾಂಶುಪಾಲರ ಮೂಲಕ ಗೌರವ ಧನ ನೀಡಲಾಗುತ್ತದೆ. ಇದರ ಮಾಹಿತಿ ಪ್ರಾಂಶುಪಾಲರ ಮೂಲಕ ಜಂಟಿ ನಿರ್ದೇಸಕರು ಇಲಾಖೆಯ ಕೇಂದ್ರ ಕಚೇರಿಗೆ ಸಲ್ಲಿಸಬೇಕು. ತಾಂತ್ರಿಕ ಕಾರಣದಿಂದ ಇನ್ನು ಕೆಲವು ಉಪನ್ಯಾಸಕರಿಗೆ ವೇತನ ಸಿಕ್ಕಿಲ್ಲ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು.
– ಪ್ರೊ.ಎಸ್‌.ಮಲ್ಲೇಶ್ವರಪ್ಪ, ನಿರ್ದೇಶಕ, ಕಾಲೇಜು ಶಿಕ್ಷಣ ಇಲಾಖೆ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next