Advertisement

ಬೈಪಾಸ್‌ ರಸ್ತೆ ನಿರ್ಮಾಣ ಸಮೀಕ್ಷೆಗಾಗಿ 275 ಕೋಟಿ ರೂ….!

06:35 AM Sep 14, 2017 | |

ಬೆಂಗಳೂರು: ರಾಜ್ಯದ 25 ಜಿಲ್ಲಾ ಕೇಂದ್ರಗಳಲ್ಲಿರುವ ನಗರಗಳಲ್ಲಿ ಬೈಪಾಸ್‌ ರಸ್ತೆ ನಿರ್ಮಾಣ ಕುರಿತಂತೆ ಸಮೀಕ್ಷೆ, ಯೋಜನಾ ಕಾರ್ಯಕ್ರಮ ತಯಾರಿಕೆ ಮತ್ತು ಮೇಲ್ವಿಚಾರಣೆಗಾಗಿ 275 ಕೋಟಿ ರೂ. ವೆಚ್ಚ..!

Advertisement

ಅಚ್ಚರಿಯಾದರೂ ಇದು ನಿಜ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಗರ ಯೋಜನಾ ಕಾರ್ಯವಿಧಾನದ ಮೂಲಕ ವರ್ತುಲ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಕುರಿತು ಸಮೀಕ್ಷೆ, ಯೋಜನಾ ಕಾರ್ಯಕ್ರಮ ತಯಾರಿಕೆ ಮತ್ತು ಮೇಲ್ವಿಚಾರಣೆಗಾಗಿ 275 ಕೋಟಿ ರೂ. ವೆಚ್ಚ ಮಾಡಲು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿಯನ್ನೂ ರಚಿಸಲು ತೀರ್ಮಾನಿಸಲಾಗಿದೆ.

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ಈ ಕೆಲಸಕ್ಕಾಗಿ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ಈ ಸಮಿತಿಯಲ್ಲಿ ಆರ್ಥಿಕ ಇಲಾಖೆ ಕಾರ್ಯದರ್ಶಿ, ನಗರಾಭಿವೃದ್ಧಿ ಮತ್ತು ಯೋಜನಾ ಇಲಾಖೆ ಅಧಿಕಾರಿಗಳು, ಪೌರಾಡಳಿತ ನಿರ್ದೇಶಕರು ಇರುತ್ತಾರೆ. ಇವರೆಲ್ಲರೂ ಸೇರಿ ರಸ್ತೆ ನಿರ್ಮಾಣದ ಕುರಿತು ಅಧ್ಯಯನ ವರದಿ ನೀಡುವುದರೊಂದಿಗೆ ರಸ್ತೆ ನಿರ್ಮಾಣ ಕುರಿತು ಸಮೀಕ್ಷೆ ಮಾಡಿ ಮಾಹಿತಿ ಕ್ರೋಢೀಕರಿಸಲಿದ್ದಾರೆ ಎಂದರು.

ಕೇವಲ ಸಮೀಕ್ಷೆ ಯೋಜನಾ ವರದಿ ತಯಾರಿಸಲು ಇಷ್ಟೊಂದು ವೆಚ್ಚ ಏಕೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು,  ಬೈಪಾಸ್‌ ರಸ್ತೆಗೆ ಯಾವ್ಯಾವ ರಸ್ತೆಗಳನ್ನು ತೆಗೆದುಕೊಳ್ಳಬೇಕು, ಅಭಿವೃದ್ಧಿ ವ್ಯಾಪ್ತಿ ಮತ್ತಿತರ ವಿವರಗಳನ್ನು ನೀಡಬೇಕಾಗುತ್ತದೆ. 25 ನಗರಗಳ ಸಮೀಕ್ಷೆ ಮತ್ತು ಮಾಹಿತಿ ಕ್ರೋಢೀಕರಣಕ್ಕೆ 56 ಕೋಟಿ ರೂ., ನಗರ ಯೋಜನಾ ಕಾರ್ಯಕ್ರಮ ತಯಾರಿಕೆಗೆ 169 ಕೋಟಿ ರೂ. ಹಾಗೂ ಯೋಜನಾ ಮೇಲ್ವಿಚಾರಣೆ ಮತ್ತು ಆಡಳಿತಾತ್ಮಕ ಕೆಲಸಗಳಿಗೆ 50 ಕೋಟಿ ರೂ. ವೆಚ್ಚವಾಗುತ್ತದೆ. ಜತೆಗೆ ರಸ್ತೆ ನಿರ್ಮಾಣ ಕುರಿತ ಸಮಗ್ರ ಯೋಜನಾ ವರದಿಯನ್ನೂ ಅವರು ಸಿದ್ಧಪಡಿಸಲಿದ್ದಾರೆ. ಈ ಕಾರ್ಯಕ್ಕೆ ಐದು ವರ್ಷ ನಿಗದಿಪಡಿಸಲಾಗಿದೆ. ರಸ್ತೆ ನಿರ್ಮಾಣ ಯಾವಾಗ ಎಂಬುದನ್ನು ಅಧಿಕಾರಿಗಳ ಸಮಿತಿ ನಿರ್ಧರಿಸುತ್ತದೆ ಎಂದು ತಿಳಿಸಿದರು.

ಸ್ಮಾರ್ಟ್‌ ಸಿಟಿ ಯೋಜನೆ ರೂಪಿಸುವಲ್ಲಿ ರಾಜ್ಯಕ್ಕೂ ಅಧಿಕಾರ:
ರಾಜ್ಯದ ಆರು ನಗರಗಳಲ್ಲಿ ಸ್ಮಾರ್ಟ್‌ ಸಿಟಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ತಲಾ ಶೇ. 50ರಷ್ಟು ಅನುದಾನ ವೆಚ್ಚ ಮಾಡುತ್ತದೆಯಾದರೂ ಎಲ್ಲಾ ಕಡೆ ಯೋಜನೆ ರೂಪಿಸುವ ಕೆಲಸವನ್ನು ಕೇಂದ್ರ ಸರ್ಕಾರದ ಸಮಿತಿಯೇ ಮಾಡುತ್ತಿತ್ತು. ರಾಜ್ಯಕ್ಕೆ ಯಾವುದೇ ಅಧಿಕಾರ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಯೋಜನೆ ರೂಪಿಸುವಾರ ರಾಜ್ಯವೂ ಪಾಲ್ಗೊಳ್ಳಬೇಕು ಎಂಬ ಕಾರಣಕ್ಕಾಗಿ ಸ್ಮಾರ್ಟ್‌ಸಿಟಿ ಅನುಷ್ಠಾನ ಮತ್ತು ಪರಿಶೀಲನಾ ಸಮಿತಿ ರಚಿಸಲು ಸಂಪುಟ ತೀರ್ಮಾನಿಸಿದೆ. ನಗರಾಭಿವೃದ್ಧಿ ಸಚಿವರು ಸಮಿತಿಯ ಅಧ್ಯಕ್ಷರಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಸಹ ಅಧ್ಯಕ್ಷರಾಗಿರುತ್ತಾರೆ. ಉಳಿದಂತೆ ಸ್ಥಳೀಯ ಸಂಸದ, ಶಾಸಕ, ಜಿಲ್ಲಾಧಿಕಾರಿ, ನಹರ ಸ್ಥಳೀಯ ಸಂಸ್ಥೆಯ ಮೇಯರ್‌ ಅಥವಾ ಆಯುಕ್ತರು, ಪ್ರತಿಪಕ್ಷ ನಾಯಕರು,  ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಇರುತ್ತಾರೆ. ಮುಂದಿನ ದಿನಗಳಲ್ಲಿ ಯೋಜನೆಗಳನ್ನು ರೂಪಿಸುವಾಗ ಕೇಂದ್ರ ಮತ್ತು ರಾಜ್ಯದ ಸಮಿತಿಗಳು ಒಟ್ಟಾಗಿ ಕಾರ್ಯನಿರ್ವಹಿಸಲಿವೆ ಎಂದು ವಿವರಿಸಿದರು.

Advertisement

ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೆ ಒಂದೇ ಕಾಯ್ದೆ:
ರಾಜ್ಯದ ನಗರಸಭೆಗಳು ಮತ್ತು ಮಹಾನಗರ ಪಾಲಿಕೆಗಳು ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ನಗರಸಭೆ ಅಧಿನಿಯಮ ಮತ್ತು ಮಹಾನಗರ ಪಾಲಿಕೆ ಅಧಿನಿಯಮ ಸೇರಿದಂತೆ ಪ್ರತ್ಯೇಕ ಕಾಯ್ದೆಗಳಿವೆ. ಇವೆಲ್ಲವನ್ನೂ ಸೇರಿಸಿ ಒಂದು ಸಮಗ್ರ ಕಾಯ್ದೆ ರೂಪಿಸಲು ಸರ್ಕಾರ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಕಾಯ್ದೆಗಳಿಗೆ ತಿದ್ದುಪಡಿ ತಂದು ಸಮಗ್ರ ಕಾಯ್ದೆ ರೂಪಿಸಲು ಸಾಧ್ಯವೇ ಎಂಬ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಕಾನೂನು ಶಾಲೆಗೆ ಸೂಚಿಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ವರದಿ ಬಂದ ನಂತರ ಕಾಯ್ದೆ ತಿದ್ದುಪಡಿ ಕುರಿತು ಕ್ರಮ ವಹಿಸಲಾಗುವುದು ಎಂದರು.

ಅರಣ್ಯ ಇಲಾಖೆಯಲ್ಲಿ ಕ್ರೀಡಾ ಕೋಟಾದ 54 ಹುದ್ದೆಗಳ ಭರ್ತಿ
ಅರಣ್ಯ ಇಲಾಖೆಯಲ್ಲಿ ಕ್ರೀಡಾ ಕೋಟಾದಲ್ಲಿ ಬಾಕಿ ಇರುವ 54 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ತೀರ್ಮಾನಿಸಿದ್ದು, ಅದಕ್ಕಾಗಿ ಕಾನೂನು ತಿದ್ದುಪಡಿ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಫಾರೆಸ್ಟ್‌ ಗಾರ್ಡ್‌, ವಾಚರ್ಸ್‌, ಡೆಪ್ಯೂಟಿ ರಿಸರ್ವ್‌ ಫಾರೆಸ್ಟ್‌ ಆಫೀಸರ್ಸ್‌ ಮುಂತಾದ ಸಿ ಮತ್ತು ಡಿ ದರ್ಜೆ ಹುದ್ದೆಗಳಲ್ಲಿ ಅವಕಾಶ ಮಾಡಿಕೊಡಲು ಸರ್ಕಾರ ಈ ಹಿಂದೆಯೇ ಕಾನೂನು ರೂಪಿಸಿತ್ತು. ಆ ಮೂಲಕ 125 ಮಂದಿ ಕ್ರೀಡಾ ಸಾಧಕರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿತ್ತು.

ಅದರಂತೆ 75 ಫಾರೆಸ್ಟ್‌ ಗಾರ್ಡ್‌, ವಾಚರ್ಸ್‌, ಡೆಪ್ಯೂಟಿ ರಿಸರ್ವ್‌ ಫಾರೆಸ್ಟ್‌ ಆಫೀಸರ್ಸ್‌ ಹುದ್ದೆಗಳನ್ನು ಭರ್ತಿ ಮಾಡಲಾಗಿತ್ತಾದರೂ ಇನ್ನೂ 54 ಹುದ್ದೆಗಳು ಬಾಕಿ ಉಳಿದುಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಕರ್ನಾಟಕ ಅರಣ್ಯ ಇಲಾಖೆ ಸೇವೆಗಳು (ಕ್ರೀಡಾ ಸ್ಪರ್ಧೆಯಲ್ಲಿ ಶ್ಲಾಘನೀಯ ಸೇವೆ ಮಾಡಿದ ಉಪ ವಲಯ ಅರಣ್ಯಾಧಿಕಾರಿಗಳು ಮತ್ತು ಅರಣ್ಯ ವೀಕ್ಷಕರ ಹುದ್ದೆಗಳಿಗೆ ನೇಮಕಾತಿ) (ವಿಶೇಷ) ನಿಯಮಗಳು-2017 ಮೂಲಕ ಕಾಯ್ದೆಗೆ ತಿದ್ದುಪಡಿ ತಂದು 54 ಮಂದಿ ಉಪ ವಲಯ ಅರಣ್ಯಾಧಿಕಾರಿ, ಅರಣ್ಯ ರಕ್ಷಕ, ಅರಣ್ಯ ವೀಕ್ಷಕ ಹುದ್ದೆಗಳನ್ನು ಭರ್ತಿ ಮಾಡಲು ಸಂಪುಟ ಅನುಮೋದನೆ ನೀಡಿದೆ.

ನಾಲ್ಕು ಜಿಲ್ಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಸಾರಭರಿತ ಅಕ್ಕಿ
ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ನೀಡುತ್ತಿರುವ ಬಿಸಿಯೂಟ ಯೋಜನೆಗೆ ಸಾರಭರಿತ ಅಕ್ಕಿ ಬಳಕೆ ಮಾಡಲು ನಿರ್ಧರಿಸಿರುವ ರಾಜ್ಯ ಸರ್ಕಾರ ಮೊದಲ ಹಂತವಾಗಿ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಅದನ್ನು ಅನುಷ್ಠಾನಗೊಳಿಸಲು ನಿರ್ಧರಿಸಿದೆ.

ಅದರಂತೆ ಕೋಲಾರ, ಚಾಮರಾಜನಗರ, ಕೊಪ್ಪಳ ಮತ್ತು ಬೆಳಗಾವಿ ಜಿಲ್ಲೆಗಳ 10.50 ಲಕ್ಷ ಮಕ್ಕಳಿಗೆ ಸಾರಭರಿತ ಅಕ್ಕಿ ಬಳಕೆ ಮಾಡಲು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅದಕ್ಕಾಗಿ ವಿಕೇಂದ್ರೀಕೃತ ಅಡುಗೆ ಕೋಣೆ ಸೇರಿದಂತೆ ಮೂಲ ಸೌಕರ್ಯಕ್ಕೆ 25 ಕೋಟಿ ರೂ. ವೆಚ್ಚ ಮಾಡಲು ಅನುಮೋದನೆ ನೀಡಲಾಗಿದೆ. ಕರ್ನಾಟಕ ಫ‌ುಡ್‌ ಕಾರ್ಪೋರೇಷನ್‌ ಮೂಲಕ ಅಕ್ಕಿ ಪೂರೈಸಲು ನಿರ್ಧರಿಸಲಾಗಿದೆ.

ಸಂಪುಟ ಸಭೆಯ ಪ್ರಮುಖ ತೀರ್ಮಾನಗಳು
– ವಿದ್ಯುತ್‌ಚಾಲಿತ ವಾಹನಗಳ ಉತ್ಪಾದನೆ ಮತ್ತು ಬಳಕೆಗೆ ಪ್ರೋತ್ಸಾಹ ನೀಡಲು ಮತ್ತು ಪರಿಸರ ಹಿತ, ಇಂಧನ ವೆಚ್ಚಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ “ನೂತನ ವಿದ್ಯುತ್‌ ವಾಹನ ಮತ್ತು ಇಂಧನ ಸಂಗ್ರಹಣಾ ನೀತಿ-2017’ಕ್ಕೆ ಅನುಮೋದನೆ.
-ಶತಮಾನೋತ್ಸವ ಸಂಭ್ರಮದಲ್ಲಿರುವ ಧಾರವಾಡದ ಕರ್ನಾಟಕ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕಟ್ಟಡಗಳ ದುರಸ್ತಿ, ನವೀಕರಣ, ಹೊಸ ಕಟ್ಟಡ ನಿರ್ಮಾಣ ಮತ್ತಿತರೆ ಮೂಲ ಸೌಕರ್ಯಕ್ಕಾಗಿ 25 ಕೋಟಿ ರೂ. ವೆಚ್ಚದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ.
– ಗದಗದಲ್ಲಿ 100 ಹಾಸಿಗೆಗಳ ಸಾಮರ್ಥ್ಯವುಳ್ಳ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಆಧುನೀಕರಣ ಹಾಗೂ ವಿಸ್ತರಣೆ ಕಾಮಗಾರಿಯ ಗುತ್ತಿಗೆ ಮೊತ್ತವನ್ನು 508.85 ಕೋಟಿ ರೂ.ಗೆ. ಹೆಚ್ಚಿಸಲು ಆಡಳಿತಾತ್ಮಕ ಅನುಮೋದನೆ.
– ಬಳ್ಳಾರಿ ಜಿಲ್ಲೆ ತೋರಣಗಲ್ಲಿನ ಜೆಎಸ್‌ಡಬ್ಲ್ಯು ಸ್ಟೀಲ್ಸ್‌ ಕಾರ್ಖಾನೆಯಲ್ಲಿ ನೀರು ಸಂಗ್ರಹಣಾ ಯೋಜನೆಗಾಗಿ ಹೊಸಪೇಟೆ ತಾಲೂಕು ಗೋನಾಳು ಗ್ರಾಮದಲ್ಲಿ 77.93 ಎಕರೆ ಭೂಮಿಯನ್ನು ಕೆಐಎಡಿಬಿ ಮೂಲಕ ಮಂಜೂರು ಮಾಡುವುದು.
– ಮೆ: ಕೆ.ಬಿ.ಸ್ಟೀಲ್ಸ್‌ಗೆ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕು ಬಸವನದುರ್ಗ ಮತ್ತು ಹಾರುವನಹಳ್ಳಿ ಗ್ರಾಮಗಳ ಮಧ್ಯೆ 27.03 ಎಕರೆ ಭೂಮಿಯನ್ನು ಕೆಐಎಡಿಬಿ ಮೂಲಕ ಮಂಜೂರು ಮಾಡುವುದು.
– ಆಂತರಿಕ ಮತ್ತು ಬಾಹ್ಯ ಆಯವ್ಯಯ ಸಂಪನ್ಮೂಲಗಳು ಅಡಿಯಲ್ಲಿ ಕರ್ನಾಟಕ ನೀರಾವರಿ ನಿಗಮಕ್ಕೆ ಅವಧಿ ಸಾಲಗಳ ಮೂಲಕ 2017-18ನೇ ಸಾಲಿನಲ್ಲಿ 765 ಕೋಟಿ ರೂ. ಸಂಗ್ರಹಿಸಲು ಮತ್ತು ಇದಕ್ಕೆ ಸರ್ಕಾರಿ ಖಾತರಿ ನೀಡಲು ಅನುಮೋದನೆ.
– ಭೀಮಾ ನದಿ ಪಾತ್ರದ ಯಾದಗಿರಿ ಜಿಲ್ಲೆಯ ಜೋಳದಡಗಿ-ಗುಡೂರು ಬ್ಯಾರೇಜ್‌ ಪುನಶ್ಚೇತನಮತ್ತು ಯಾಂತ್ರಿಕ ಕಾರ್ಯಾಚರಣೆ ಗೇಟುಗಳನ್ನು ಅಳವಡಿಸುವ 57 ಕೋಟಿ ರೂ. ವೆಚ್ಚದ ಅಂದಾಜು ಮೊತ್ತ ಮತ್ತು ವಿವರ ಯೋಜನಾ ವರದಿಗೆ ಒಪ್ಪಿಗೆ.
– ಭೀಮಾ ನದಿ ಪಾತ್ರದ ಯಾದಗಿರಿ ಜಿಲ್ಲೆ, ಯಾದಗಿರಿ ಬ್ರಿಡ್ಜ್ ಕಂ ಬ್ಯಾರೇಜ್‌ನ ಪುನಶ್ಚೇತನ ಮತ್ತು ಯಾಂತ್ರಿಕ ಕಾರ್ಯಾಚರಣೆ  ಗೇಟ್‌ಗಳನ್ನು ಅಳವಡಿಸುವ 58 ಕೋಟಿ ರೂ. ವೆಚ್ಚದ ವಿವರ ಯೋಜನಾ ವರದಿಗೆ ಅನುಮೋದನೆ.
– ದಾವಣಗೆರೆ ತಾಲೂಕು ಶಾಮನೂರು ಗ್ರಾಮದ ಎರಡು ಸರ್ವೇ ನಂಬರ್‌ಗಳಲ್ಲಿ 1.05 ಎಕರೆ ಜಮೀನನ್ನು ಮೆ.ಮಾನಸ ಸರೋವರ ಪ್ರೈವೇಟ್‌ ಲಿಮಿಟೆಡ್‌ಗೆ ಕಿರು ಜಲವಿದ್ಯುತ್‌ ಯೋಜನೆ ಸ್ಥಾಪಿಸಲು ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡುವುದು.
– ಬೆಂಗಳೂರಿನ ಬೌರಿಂಗ್‌ ಮತ್ತು ಲೇಡಿ ಕರ್ಜನ್‌ ಆಸ್ಪತ್ರೆಯಲ್ಲಿ ಹೊಸ ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಮತ್ತು ಘೋಷಾ ಆಸ್ಪತ್ರೆ ಆವರಣದಲ್ಲಿ ಬಾಲಕಿಯರ ಹಾಸ್ಟೆಲ್‌ ಕಟ್ಟಡ ನಿರ್ಮಾಣಕ್ಕೆ 197.54 ಕೋಟಿ. ರೂ. ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ.
– ಕಾರವಾರ ಮತ್ತು ಅಂಕೋಲ ಪಟ್ಟಣಗಳು ಮತ್ತು ಮಾರ್ಗ ಮಧ್ಯದ ಹಳ್ಳಿಗಳಲ್ಲಿ ಸೀ-ಬರ್ಡ್‌ ಯೋಜನೆಗಾಗಿ ನೀರು ಸರಬರಾಜಿಗಾಗಿ ಗಂಗಾವಳಿ ನದಿಗೆ ಅಡ್ಡಲಾಗಿ 158.62 ಕೋಟಿ ರೂ. ಅಂದಾಜು ವೆಚ್ಚದಲ್ಲಿ ವೆಂಟೆಡ್‌ ಬ್ಯಾರೇಜ್‌ ನಿರ್ಮಾಣ.
– ಕೊಪ್ಪಳ ಜಿಲ್ಲೆ ಯಲಬುರ್ಗಾ, ಕೊಪ್ಪಳ ತಾಲೂಕುಗಳ ಕೆರೆಗೆ ಏತನೀರಾವರಿ ಮೂಲಕ ತುಂಗಭದ್ರಾ ನದಿಯಿಂದ ನೀರು ಪೂರೈಸಲು 290 ಕೋಟಿ ರೂ. ವೆಚ್ಚದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ.

Advertisement

Udayavani is now on Telegram. Click here to join our channel and stay updated with the latest news.

Next